ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭ ಪಡೆಯಲು ಭೂ ಮಾಲೀಕರಿಗೆ ಅವಕಾಶ

ಸರ್ಕಾರದ ಸಹಭಾಗಿತ್ವದೊಂದಿಗೆ ಪಾಲುದಾರರಾಗಿ: ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಲಹೆ
Last Updated 2 ಫೆಬ್ರುವರಿ 2017, 6:22 IST
ಅಕ್ಷರ ಗಾತ್ರ
ಚಿತ್ರದುರ್ಗ: ‘ಸರ್ಕಾರದ ವಿನೂತನ ಸಹಭಾಗಿತ್ವದ ವಸತಿ ಅಭಿವೃದ್ಧಿ ಯೋಜನೆಯಿಂದ ಭೂ ಮಾಲೀಕರು ಹೆಚ್ಚಿನ ಲಾಭವನ್ನು ನೇರವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ’  ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ತಿಳಿಸಿದರು.
 
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬುಧವಾರ 2017 –18 ನೇ ಸಾಲಿನ ಪ್ರಾಧಿಕಾರದ ಆಯವ್ಯಯ ಮಂಡನೆ ಹಾಗೂ ಕೆಲ ರೈತರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
‘ನಗರ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳ ರೈತರು ಖಾಸಗಿಯವರಿಗೆ ಜಮೀನು ಮಾರಾಟ ಮಾಡಬೇಡಿ. ನಗರಾಭಿವೃದ್ಧಿ ಪ್ರಾಧಿಕಾರದೊಂದಿಗೆ ನಿವೇಶನ ಅಭಿವೃದ್ಧಿ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗಲಿದೆ’ ಎಂದು ಹೇಳಿದರು.
 
‘ರೈತರು ತಮ್ಮ ಜಮೀನನ್ನು ನಿವೇಶನಾಭಿವೃದ್ಧಿ ಮಾಡಲು ಮುಂದಾದರೆ, ಸರ್ಕಾರ ಮತ್ತು ರೈತರಿಗೆ ಶೇ 50: 50ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತದೆ. ರೈತರು ತಮ್ಮ ಪಾಲಿನ ಶೇ 50ರಷ್ಟು ನಿವೇಶನವನ್ನು ಯಾರಿಗೆ ಬೇಕಾದರೂ ಮಾರಾಟ ಮಾಡಿ ಕೊಳ್ಳಬಹುದು. ಆಗ ರೈತರಿಗೆ ಜಮೀನು ಮಾರಾಟ ಮಾಡಿದಕ್ಕಿಂತ ಹೆಚ್ಚಿನ ಲಾಭ ದೊರೆಯಲಿದೆ’ ಎಂದು ತಿಳಿಸಿದರು.
 
‘ನಗರ ವ್ಯಾಪ್ತಿಯಲ್ಲಿ ಸರ್ಕಾರವೇ ಭೂ ಸ್ವಾಧೀನ ಮಾಡಿಕೊಳ್ಳುವ ಅವಕಾಶವಿದೆ. ಆಗ ರೈತರಿಗೆ ಕಡಿಮೆ ಹಣ ದೊರೆಯಲಿದೆ. ಆಗಲೂ ನಷ್ಟವಾಗುತ್ತದೆ. ಆದ್ದರಿಂದ ಜಾಯಿಂಟ್ ವೆಂಚರ್ ಅಡಿ ಭೂ ಅಭಿವೃದ್ಧಿ ಮಾಡಿ ನಿವೇಶನ ವಿಂಗಡಣೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.
 
‘ರೈತರು ತಮ್ಮ ಜಮೀನು ನೀಡಿದರೆ,  ಸರ್ಕಾರದೊಂದಿಗೆ ಪಾಲುದಾರ ರಾಗಿರುತ್ತಾರೆ. ಆಗ ವಸತಿ ವಿನ್ಯಾಸ ಅಭಿವೃದ್ಧಿ ಪಡಿಸುವ ಜವಾಬ್ದಾರಿ ಪ್ರಾಧಿಕಾರದ್ದೇ ಆಗಿರುತ್ತದೆ. ರಸ್ತೆ, ಚರಂಡಿ, ಒಳ ಚರಂಡಿ, ವಿದ್ಯುತ್ ಸಂಪರ್ಕ, ಬೀದಿ ದೀಪ, ಕುಡಿಯುವ ನೀರು, ಉದ್ಯಾನ  ಇತರೆ ಮೂಲ ಸೌಕರ್ಯಗಳನ್ನು ಸರ್ಕಾರವೇ ಒದಗಿಸಲಿದೆ’ ಎಂದು ತಿಳಿಸಿದರು.
 
‘ರೈತರು ತಮ್ಮ ಪಾಲಿನ ನಿವೇಶನ ಮಾರಾಟ ಮಾಡಲು ಪ್ರಾಧಿಕಾರಕ್ಕೆ ನೀಡಿದರೂ ಬಹಿರಂಗ ಹರಾಜಿನಲ್ಲಿ ಮಾರಾಟವಾದ ಮೊತ್ತಕ್ಕೆ ಶೇ 3ರಷ್ಟು ವೆಚ್ಚ ಪಡೆದು ಉಳಿಕೆ ಹಣವನ್ನು ರೈತರಿಗೆ ನೀಡಲಾಗುತ್ತದೆ. ಅಲ್ಲದೆ, ಪ್ರಾಧಿಕಾರ ನಿಗದಿ ಮಾಡಿದ ನಿವೇಶನ ದರಕ್ಕೆ ರೈತರು ತಮ್ಮ ಪಾಲಿನ ನಿವೇಶನ ಮಾರಾಟ ಮಾಡಿಕೊಳ್ಳಬಹುದಾಗಿದೆ’ ಎಂದು ಹೇಳಿದರು.
 
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಂ.ಎಸ್. ಸೋಮಶೇಖರ್ 2017 –18ನೇ ಸಾಲಿನ ₹ 41.69 ಲಕ್ಷದ ಉಳಿತಾಯ ಬಜೆಟ್ ಮಂಡಿಸಿದರು. 
 
‘ಉತ್ತಮತೆ ಶುಲ್ಕ, ನಕಲು, ನಕ್ಷೆ ಮಾರಾಟ, ಪೌರ ಸೌಕರ್ಯ ನಿವೇಶನ, ಮೇಲ್ವಿಚಾರಣಾ ಶುಲ್ಕ, ವಾಸ್ತುಶಿಲ್ಪಿಗಳ ನೋಂದಣಿ, ನವೀಕರಣ, ಟೆಂಡರ್ ನಮೂನೆಗಳ ಮಾರಾಟ, ಬಾಡಿಗೆ, ಠೇವಣಿಗಳ ಮೇಲಿನ ಬ್ಯಾಂಕ್ ಬಡ್ಡಿ, ಕೆರೆ ಅಭಿವೃದ್ಧಿ ಶುಲ್ಕ, ಹಾಪ್ ಕಾಮ್ಸ್, ಅಕ್ರಮ -ಸಕ್ರಮ ಇತರೆ ಮೂಲಗಳಿಂದ ಪ್ರಾಧಿಕಾರವೂ ಆದಾಯ ನಿರೀಕ್ಷಿಸಿದೆ’ ಎಂದರು.
 
ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಲೋಕೋಪಯೋಗಿ ಇಇ ಕುಮಾರ್, ಡಿಎಚ್ಒ ಡಾ.ನೀರಜ್, ನಗರ ನೀರು ಪೂರೈಕೆ ಇಇ ಹನುಮಂತಪ್ಪ, ಸಿಪಿಐ ಒಡೆಯರ್, ನಗರ ಯೋಜನಾಧಿಕಾರಿ ಷರೀಫ್, ಪ್ರಾಧಿಕಾರದ ಎಇಇ ಶಿವಾನಂದಪ್ಪ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 
***
ಪ್ರಾಧಿಕಾರದಿಂದಲೇ ನೂತನ ಬಡಾವಣೆ ನಿರ್ಮಿಸುವುದರಿಂದ ಯಾವುದೇ ಕಾನೂನಿನ ತೊಡಕು, ಮಾಲೀಕತ್ವದ ಹಕ್ಕಿನ ಅಡಚಣೆ ಮತ್ತಿತರ ಸಮಸ್ಯೆಗಳು ಇರುವುದಿಲ್ಲ.
–ಶ್ರೀರಂಗಯ್ಯ, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT