ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟಿನ ಪರ್ವದಲ್ಲಿ ರಕ್ಷಣೆಗೆ ಕಿರುಮೊತ್ತ

Last Updated 3 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಪವನ್ ಶ್ರೀನಾಥ್

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದಶಕಗಳಲ್ಲೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷದ ಬಜೆಟ್ ಭಾಷಣದಲ್ಲಿ ರಕ್ಷಣಾ ಕ್ಷೇತ್ರದ ಬಗ್ಗೆ ಉಲ್ಲೇಖವನ್ನೇ ಮಾಡಲಿಲ್ಲ. ಈ ಬಾರಿ ಅವರು ರಕ್ಷಣಾ ವಲಯದ ಬಗ್ಗೆ ಚರ್ಚಿಸಿ, ತುಸು ಉತ್ತಮ ಕೆಲಸ ಮಾಡಿದರು.

ರಕ್ಷಣಾ ಪಡೆಗಳ ಸಿಬ್ಬಂದಿಯ ಪ್ರಯಾಣಕ್ಕೆ ವ್ಯವಸ್ಥೆಯೊಂದನ್ನು ರೂಪಿಸುವುದು ಮತ್ತು ಪಿಂಚಣಿ ನೀಡುವುದನ್ನು ಆನ್‌ಲೈನ್‌ ವ್ಯವಸ್ಥೆಗೆ ತರುವ ಕುರಿತ ಚಿಕ್ಕ ಉಲ್ಲೇಖಗಳನ್ನು ಹೊರತುಪಡಿಸಿದರೆ ರಕ್ಷಣಾ ಕ್ಷೇತ್ರದ ಮೇಲಿನ ವೆಚ್ಚದ ಬಗ್ಗೆ ಅವರು ಒಂದು ವಾಕ್ಯ ಮಾತ್ರ ಹೇಳಿದರು. ಅದು ಶುಭ ಸುದ್ದಿ ಆಗಿರಲಿಲ್ಲ.
ಈ ಬಾರಿ ರಕ್ಷಣಾ ಕ್ಷೇತ್ರಕ್ಕೆ ₹ 3.6 ಲಕ್ಷ ಕೋಟಿ ನಿಗದಿ ಮಾಡಲಾಗಿದೆ. ಇದು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 2.1ರಷ್ಟು.

ಇದು ದೊಡ್ಡ ಮೊತ್ತದಂತೆ ಕಾಣಿಸುತ್ತದೆ. ಈ ಮೊತ್ತ ಕಳೆದ ವರ್ಷಕ್ಕಿಂತ ಹೆಚ್ಚಿನದು. ಆದರೆ ಈ ಸಂಖ್ಯೆ ಎಲ್ಲ ಸಂಗತಿಗಳನ್ನು ಹೇಳುವುದಿಲ್ಲ. ನಿಗದಿ ಮಾಡಿರುವ ಮೊತ್ತದದಲ್ಲಿ ₹ 86,500 ಕೋಟಿ ಪಿಂಚಣಿಗೇ ವಿನಿಯೋಗ ಆಗುತ್ತದೆ. ಒಆರ್‌ಒಪಿ ಅನುಷ್ಠಾನದ ನಂತರ ದೇಶದ ರಕ್ಷಣಾ ಸಿಬ್ಬಂದಿಯ ಪಿಂಚಣಿ ಮೊತ್ತ ಮುಗಿಲು ಮುಟ್ಟಿದೆ. ಪಿಂಚಣಿಗಾಗಿನ ₹ 86,500 ಕೋಟಿ ಹಣ ನರೇಗಾ ಯೋಜನೆಗೆ ಎರಡು ವರ್ಷಗಳಿಗೆ ಸಾಕು.

ದೇಶದ ಸೈನಿಕರಿಗೆ ಒಳ್ಳೆಯ ಸಂಬಳವನ್ನು ಸರ್ಕಾರ ನೀಡಬೇಕು. ಅವರಿಗೆ ಉತ್ತಮ ಪಿಂಚಣಿ ನೀಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಲ್ಲಿ ಎಷ್ಟು ಖರ್ಚು ಮಾಡಲಾಗುತ್ತಿದೆ, ಈ ಖರ್ಚಿನಿಂದ ದೇಶದ ರಕ್ಷಣಾ ಸಿದ್ಧತೆಗಳಿಗೆ ಧಕ್ಕೆಯಾಗುತ್ತಿದೆಯೇ ಎಂಬುದನ್ನು ದೇಶವಾಸಿಗಳಿಗೆ ತಿಳಿಸುವುದು ಸರ್ಕಾರದ ಕರ್ತವ್ಯ.

ಈ ಬಜೆಟ್‌ನಲ್ಲಿ ಅಂದಾಜು ₹ 86 ಸಾವಿರ ಕೋಟಿಯನ್ನು ರಕ್ಷಣಾ ಉಪಕರಣಗಳ (ಯುದ್ಧನೌಕೆ, ವಿಮಾನಗಳು, ಬಂದೂಕು ಇತ್ಯಾದಿ) ಖರೀದಿಗೆ ಮೀಸಲಿಡಲಾಗಿದೆ. ಆದರೆ ಈ ಸಂಖ್ಯೆ ಕೂಡ ಪೂರ್ಣ ಕಥೆಯನ್ನು ಹೇಳುವುದಿಲ್ಲ. ₹ 86 ಸಾವಿರ ಕೋಟಿ ಪೈಕಿ ಶೇಕಡ 85ರಷ್ಟಕ್ಕಿಂತ ಹೆಚ್ಚು ಮೊತ್ತ ಹಿಂದೆ ಮಾಡಿಕೊಂಡಿದ್ದ ಖರೀದಿ ಒಪ್ಪಂದಗಳಿಗೇ ವೆಚ್ಚವಾಗಲಿದೆ. ಐಎನ್‌ಎಸ್‌ ವಿಕ್ರಮಾದಿತ್ಯ, ಭೂಸೇನೆಯ ಕೆಲವು ವಿಮಾನಗಳು, ವಾಯು ಪಡೆಯ ಸುಖೋಯ್‌ ಮತ್ತಿತರ ವಿಮಾನಗಳನ್ನು ಖರೀದಿಸಿದ್ದಕ್ಕೆ ನಾವು ಇಂದಿಗೂ ಕಂತು ಕಟ್ಟುತ್ತಿದ್ದೇವೆ.

ಹಾಗಾಗಿ, ಹೊಸ ಖರೀದಿಗಳಿಗೆ ಉಳಿದಿರುವ ಮೊತ್ತ ₹ 10 ಸಾವಿರ ಕೋಟಿಯಿಂದ ₹ 15 ಸಾವಿರ ಕೋಟಿ ಮಾತ್ರ. ದೇಶದ ರಕ್ಷಣಾ ಪಡೆಗಳನ್ನು ಚೀನಾ ಅಥವಾ ಬೇರೆ ದೇಶಗಳ ಜೊತೆ ಸ್ಪರ್ಧಾತ್ಮವಾಗಿ ಇಡಲು ಈ ಮೊತ್ತ ತೀರಾ ಕಡಿಮೆ. 2017ರಲ್ಲಿ ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟುಗಳು ತೀವ್ರವಾಗುವ ಸಾಧ್ಯತೆ ಹೆಚ್ಚಿದೆ.

ಆಂತರಿಕ ಸಂಗತಿಗಳ ಬಗ್ಗೆ ಹೆಚ್ಚಿನ ಗಮನ ನೀಡಲು ಮುಂದಾಗಿರುವ ವ್ಯಕ್ತಿ ಅಮೆರಿಕದ ಅಧ್ಯಕ್ಷರಾಗಿದ್ದಾರೆ. ಪೂರ್ವ ಏಷ್ಯಾದಲ್ಲಿ ಚೀನಾ ಹೆಚ್ಚು ಅಧಿಕಾರ ಚಲಾಯಿಸುತ್ತಿದೆ. ಇತಿಹಾಸದಲ್ಲಿ ಇದೇ ಮೊದಲಿಗೆ ರಷ್ಯಾ, ಪಾಕಿಸ್ತಾನದ ಜೊತೆ ಮಿಲಿಟರಿ ಸಂಬಂಧ ಬೆಳೆಸಿಕೊಳ್ಳುತ್ತಿದೆ.

ರಕ್ಷಣಾ ಪಡೆಗಳನ್ನು ತಾಂತ್ರಿಕವಾಗಿ ಸನ್ನದ್ಧ ವಾಗಿಡಲು ನಾವು ಇನ್ನೂ ಹೆಚ್ಚು ಹಣ ಖರ್ಚು ಮಾಡಬೇಕು. ಹಿಂದೂ ಮಹಾಸಾಗರದ ಆದ್ಯಂತ ರಕ್ಷಣಾ ವ್ಯವಸ್ಥೆ ಬಲಪಡಿಸಲು ದೇಶಕ್ಕೆ ಮೂರು ಸಕ್ರಿಯ ಯುದ್ಧವಿಮಾನ ವಾಹಕ ನೌಕೆಗಳು ಬೇಕು. ಪಶ್ಚಿಮ ಹಾಗೂ ಪೂರ್ವ ದಿಕ್ಕುಗಳಲ್ಲಿ ತಲಾ ಒಂದು ಬೇಕು.

ದೊಡ್ಡ ನೌಕೆಗಳು ದುರಸ್ತಿಗಾಗಿ ನೌಕಾನೆಲೆ ಗಳಲ್ಲಿ ಹೆಚ್ಚು ಕಾಲ ನಿಲ್ಲಬೇಕಿರುವ ಕಾರಣ, ಮೂರನೆಯ ನೌಕೆಯನ್ನು ಬದಲಿ ವ್ಯವಸ್ಥೆ ರೂಪದಲ್ಲಿ ಸನ್ನದ್ಧವಾಗಿ ಇಟ್ಟುಕೊಳ್ಳಬೇಕು. ವೇಗವಾಗಿ ಸಾಗುವ ಕಿರು ಯುದ್ಧನೌಕೆಗಳ ವಿಚಾರದಲ್ಲೂ ಈ ಮಾತು ಅನ್ವಯವಾಗುತ್ತದೆ. ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಜಲಾಂತರ್ಗಾಮಿಗಳು ಇಲ್ಲದಿದ್ದರೆ, ಭಾರತದ ಅಣ್ವಸ್ತ್ರ ರಕ್ಷಣಾ ಕವಚ ಪರಿಪೂರ್ಣ ಆಗುವುದಿಲ್ಲ.

ಭಾರತೀಯ ವಾಯುಪಡೆಯಲ್ಲಿ ಯೋಧರ ಹಾಗೂ ಯುದ್ಧವಿಮಾನಗಳ ಕೊರತೆ ಇದೆ (ವಾಯುಪಡೆಗೆ ಇನ್ನೂ 7ರಿಂದ 10 ಸ್ಕ್ವಾಡ್ರನ್‌ಗಳು ಬೇಕಿವೆ) ಎಂಬ ಬಗ್ಗೆ ಸಾಕಷ್ಟು ಬರೆದಾಗಿದೆ. 10 ಲಕ್ಷ ಸೈನಿಕರಿಗೆ ವೇತನ ನೀಡಲು ಹೆಣಗುತ್ತಿರುವ ಭೂಸೇನೆಯ ಬಗ್ಗೆ ನಾವಿನ್ನೂ ಚರ್ಚಿಸಿಲ್ಲ. ಭೂಸೇನೆಗೆ ಮಾಡುವ ವೆಚ್ಚ ಕಡಿಮೆಯೇ ಇದೆ.

ಗಡಿ ಕಾಯುವ ನಮ್ಮ ಯೋಧರಿಗೆ ಉತ್ತಮ ಕಾಲುಚೀಲ ಮತ್ತು ಶೂಗಳನ್ನು ಒದಗಿಸಲು ನಮಗೆ ಕೆಲವೊಮ್ಮೆ ಸಾಧ್ಯವಾಗಿಲ್ಲ. ಗಡಿ ಭದ್ರತಾ ಪಡೆಯ ಯೋಧರೊಬ್ಬರು ತಮಗೆ ಪೂರೈಕೆಯಾಗುತ್ತಿರುವ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ದೂರು ನೀಡಿದ್ದು, ಬೆಟ್ಟದಂತಹ ಸಮಸ್ಯೆಯ ಒಂದು ತುಣುಕು ಮಾತ್ರ.

ಇವೆಲ್ಲವೂ ಕೇಂದ್ರ ಸರ್ಕಾರಕ್ಕೆ ಚೆನ್ನಾಗಿಯೇ ತಿಳಿದಿದೆ. ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ಸಾಕು, ಬೇರೆ ದೇಶಗಳು ದುಸ್ಸಾಹಸಕ್ಕೆ ಕೈಹಾಕುವುದನ್ನು ತಡೆಯಬಹುದು.

ರಕ್ಷಣಾ ಉಪಕರಣಗಳ ಖರೀದಿ ಪ್ರಕ್ರಿಯೆ ತೀರಾ ಸಂಕೀರ್ಣವಾಗಿರುವ ಕಾರಣ, ಹೊಸ ಉಪಕರಣಗಳ ಖರೀದಿಗೆ ಮೀಸಲಾದ ಚಿಕ್ಕ ಮೊತ್ತ ಕೂಡ ಪ್ರತಿ ವರ್ಷ ಹಣಕಾಸು ಇಲಾಖೆಗೆ ಮರಳುತ್ತಿದೆ. ತನಗೆ ನೀಡಿದ ಹಣವನ್ನು ರಕ್ಷಣಾ ಇಲಾಖೆ ವಿನಿಯೋಗಿಸಲಿ, ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡಲಿ ಎಂಬುದೇ ನಾವು ಹೊಂದಬಹುದಾದ ಕನಿಷ್ಠ ಆಸೆ.

ರಕ್ಷಣಾ ಪಡೆಗಳಿಗೆ ನೀಡಲಾದ ಚಿಕ್ಕ ಮೊತ್ತದಿಂದ ಏನನ್ನು ನಿಭಾಯಿಸಲು ಸಾಧ್ಯ ಎಂಬ ಪ್ರಶ್ನೆಯನ್ನು ಸಚಿವ ಮನೋಹರ ಪರಿಕ್ಕರ್ ಅವರಲ್ಲಿ ನಾವು ಹೆಚ್ಚೆಚ್ಚು ಕೇಳಬೇಕು.
ಲೇಖಕ ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT