ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಧಾನ’ದ ವಿಶಿಷ್ಟ ಧ್ಯಾನಮಂದಿರ

ಕಲಬುರ್ಗಿ ಧಾರ್ಮಿಕ ಪ್ರವಾಸಿ ತಾಣಕ್ಕೆ ಮತ್ತೊಂದು ಸೇರ್ಪಡೆ
Last Updated 13 ಫೆಬ್ರುವರಿ 2017, 7:47 IST
ಅಕ್ಷರ ಗಾತ್ರ

ಕಲಬುರ್ಗಿ: ಸುವಾಸನೆಯ ಜೊತೆಗೆ ನಗೆ ಬೀರುವ ಬಗೆ ಬಗೆಯ ಪುಷ್ಪಗಳೊಂದಿಗೆ ಕಂಗೊಳಿಸುವ ಸುಂದರ ಉದ್ಯಾನ, ಸ್ವಚ್ಛ ಪರಿಸರದ ಮಧ್ಯೆ ತಲೆಎತ್ತಿರುವ  ‘ಸಮಾಧಾನ’ದ ‘ಧ್ಯಾನಮಂದಿರ’ವು ಕಲಬುರ್ಗಿ ನಗರದ ಧಾರ್ಮಿಕ ಪ್ರವಾಸಿ ತಾಣಗಳ ಪಟ್ಟಿಗೆ ಹೊಸ ಸೇರ್ಪಡೆ.

ದೂರದಿಂದ ಪಿರಾಮಿಡ್‌ ಆಕಾರದಲ್ಲಿ ಗೋಚರಿಸುವ ಈ ಧ್ಯಾನಮಂದಿರ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಒಳಹೋದರೆ ವಾಸ್ತುಶಿಲ್ಪದ ಹಲವು ಮಜಲುಗಳ ಪರಿಚಯವಾಗುತ್ತದೆ. ಅಲ್ಲಿಯ ವಿಶಿಷ್ಟ ವಿನ್ಯಾಸ ಬೆರಗುಗೊಳಿಸುತ್ತದೆ.

ಈ ಸಮಾಧಾನ ಆಶ್ರಮವು ವಿರಕ್ತಮಠದ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರ ಕರ್ಮಭೂಮಿ ಇದು. ಅವರ ಸಂಕಲ್ಪ ಮತ್ತು ಪರಿಕಲ್ಪನೆಯಂತೆ ಧ್ಯಾನಮಂದಿರ ನಿರ್ಮಿಸಲಾಗಿದೆ. ಇತ್ತೀಚಿಗಷ್ಟೇ ಇದರ ಲೋಕಾರ್ಪಣೆಯೂ ಜರುಗಿದೆ.

ಧ್ಯಾನಮಂದಿರದ ಒಳಗಡೆ ಹಾನಗಲ್‌ ಕುಮಾರಸ್ವಾಮೀಜಿ ಹಾಗೂ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಅವರ ಪಂಚಲೋಹದ ಪುತ್ಥಳಿ ಸ್ಥಾಪಿಸಲಾಗಿದೆ. ಪ್ರಸಿದ್ಧ ಪುತ್ಥಳಿ ತಯಾರಕ ಮುಂಬೈನ ಅಜಂಕ್ಯ ಚಾಳಕರ ಅವರು ಈ ಪುತ್ಥಳಿಗಳನ್ನು ತಯಾರಿಸಿದ್ದಾರೆ.

ಮಧ್ಯಭಾಗದಲ್ಲಿ ಗದ್ದುಗೆ ಆಕಾರದಲ್ಲಿ ನೆಲಮಹಡಿಯಲ್ಲಿಯೂ ಧ್ಯಾನ ಮಂದಿರ ನಿರ್ಮಿಸಲಾಗಿದೆ. ಶಾಂತಿ ಮತ್ತು ಧ್ಯಾನಕ್ಕೆ ಆದ್ಯತೆ ಇರುವುದರಿಂದ ಇಲ್ಲಿಗೆ ಬರುವವರು ಕೆಲ ನಿಯಮ ಪಾಲಿಸಲೇಬೇಕು. ಸಮಾಧಾನದ ಪರಿಸರದಲ್ಲಿ ಮೌನದಿಂದ ಇರಬೇಕು ಮತ್ತು ಇಲ್ಲಿಗೆ ಬಂದವರು ಮೊದಲು ಧ್ಯಾನಮಂದಿರಕ್ಕೆ ಹೋಗಿ ಕನಿಷ್ಠ 10–15 ನಿಮಿಷ ಧ್ಯಾನ ಮಾಡುವುದು ಕಡ್ಡಾಯ.

‘ಸಮಾಧಾನ ಇಲ್ಲದ್ದಕ್ಕಾಗಿ ಬಂದ ತಾವುಗಳು ಇಲ್ಲಿ ಮಾತನಾಡಿದರೆ ಸಮಾಧಾನ ಸಿಗುವುದಾದರೂ ಹೇಗೆ? ತಮಗೆ ಶಾಂತಿ, ಸಮಾಧಾನ ಸಿಗಬೇಕಾದರೆ ನಿಯಮ ಪಾಲಿಸಿ. ಮಾತನಾಡುವುದು ಅನಿವಾರ್ಯವಾದರೆ ಸಂಜ್ಞೆ (ಸನ್ನೆ) ಮೂಲಕ ಮಾತನಾಡಿ. ಅನವಶ್ಯಕವಾಗಿ ಮಾತನಾಡುವುದಾದರೆ ಇಲ್ಲಿಗೆ ಬರುವುದು ಸರಿಯಲ್ಲ’ ಎಂಬ ಕಟು ಸಂದೇಶ ಇರುವ ಫಲಕವನ್ನು ಪ್ರವೇಶದ್ವಾರದಲ್ಲಿಯೇ ಇಡಲಾಗಿದೆ.

ಧ್ಯಾನಕ್ಕೆ ಸ್ಥಾನ, ತ್ರಿಪದಿಗಳ ಸಾಲು: ಏಕಾಂತದಲ್ಲಿ ಕುಳಿತು ಧ್ಯಾನ ಮಾಡಲು ಅನುಕೂಲವಾಗುವಂತೆ ಮಂದಿರದ ಒಳಗಡೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಮಂದಿರಕ್ಕೆ ಬರುವವರು ಅಲ್ಲಿ ಕುಳಿತು ಧ್ಯಾನ ಮಾಡಬಹುದು. ಇನ್ನು ಮಂದಿರದ ಒಳ ಆವರಣದಲ್ಲಿ ತ್ರಿಪದಿಗಳನ್ನು ಬರೆದಿರುವ ಫಲಕಗಳನ್ನು ಅಳವಡಿಸಲಾಗಿದೆ.

ಧ್ಯಾನ–ಮೌನದಲ್ಲಿ ಅಗಾಧ ಶಕ್ತಿ ಇದೆ. ಇದನ್ನು ಸತ್ಪುರುಷರು ಸಾಧಿಸಿ ತೋರಿಸಿದ್ದಾರೆ. ಧ್ಯಾನ–ಮೌನದ ಮೂಲಕ ಮನಃಶಾಂತಿ ಪಡೆಯಲು ಈ ಧ್ಯಾನಮಂದಿರ ಪ್ರೇರಕಶಕ್ತಿ
ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆಯ ಹಿರೇಮಠ

ಹಸಿರುಮನೆ ಪರಿಕಲ್ಪನೆ

ಹಸಿರು ಮನೆ ಪರಿಕಲ್ಪನೆಯಲ್ಲಿ ಇದು ನಿರ್ಮಾಣಗೊಂಡಿದೆ. ಬಹುತೇಕ ಸ್ಥಳೀಯವಾಗಿ ಲಭ್ಯವಿರುವ ಉಪಕರಣಗಳನ್ನು ಬಳಸಲಾಗಿದೆ. ಚೌಕಾಕಾರದ ಬದಲು ವೃತ್ತಾಕಾರದಲ್ಲಿ ಕಟ್ಟಡ ನಿರ್ಮಿಸಿದ್ದು, ಎಲ್ಲ ಬದಿಯಿಂದಲೂ ಗಾಳಿ, ಬೆಳಕು ಬರುವಂತೆ ಕಿಟಕಿ, ಗಾಜುಗಳ ವ್ಯವಸ್ಥೆ ಮಾಡಲಾಗಿದೆ.

ಹಗಲಿನಲ್ಲಿ ಸೂರ್ಯ ಪಥ ಬದಲಿಸಿದರೂ ಸೂರ್ಯರಶ್ಮಿ ಮಂದಿರದೊಳಗೆ ಸೂಸುತ್ತಿರುತ್ತವೆ. ಇದು ಇಲ್ಲಿಯ ವಿಶೇಷ. ಕಲಬುರ್ಗಿ ನಗರದಲ್ಲಿ ಬೇಸಿಗೆ ಕಾಲದಲ್ಲಿ ಉರಿಬಿಸಿಲು ಹೆಚ್ಚು. ಈ ಮಂದಿರದ ಒಳಗಡೆ 6ರಿಂದ 7 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣತೆ ಕಡಿಮೆ ಮಾಡುವ ತಂತ್ರಜ್ಞಾನವನ್ನು  ಹೊಂದಿರುವುದು ಮತ್ತೊಂದು ವಿಶೇಷತೆ ಎನ್ನುವುದು ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್‌ ಅವರ ವಿವರಣೆ.

ಗುಂಪಾ ಮಾದರಿ: ನಾಲ್ಕು ವರ್ಷ ಅವಧಿಯಲ್ಲಿ ಈ ಧ್ಯಾನಮಂದಿರ ನಿರ್ಮಿಸಲಾಗಿದೆ. ಇದು ಪಿರಾಮಿಡ್‌ ಆಕಾರದ ಗುಂಪಾ (GUMPA) ಮಾದರಿಯಲ್ಲಿ ನಿರ್ಮಾಣಗೊಂಡಿದೆ. ವೃತ್ತಾಕಾರವಾಗಿ ಇದನ್ನು ನಿರ್ಮಿಸಿದ್ದು, ಇದರ ವ್ಯಾಸ ಮತ್ತು ವಿಸ್ತೀರ್ಣವನ್ನು ಹೇಗೆ ಗುಣಿಸಿದರೂ ಶೇಷ 9 ಬರುತ್ತದೆ. ನವಗ್ರಹ ಪರಿಕಲ್ಪನೆಗೆ ಪೂರಕವಾಗಿ ಇದನ್ನು ನಿರ್ಮಿಸಲಾಗಿದೆ ಎನ್ನುವುದು ವಾಸ್ತುಶಿಲ್ಪಿಗಳ ವಿವರಣೆ.

ಧ್ಯಾನಮಂದಿರ ವಿಶೇಷ

2.65 ಎಕರೆ - ವಿಸ್ತೀರ್ಣದಲ್ಲಿ ಹರಡಿಕೊಂಡ ಧ್ಯಾನಮಂದಿರ

₹4 ಕೋಟಿ - ಅಂದಾಜು ವೆಚ್ಚದಲ್ಲಿ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT