ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿಕಲಾ: ಹಿಡಿತ ಉಳಿಸಿಕೊಳ್ಳುವರೇ?

Last Updated 22 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ವಿಧಾನಸಭೆಯಲ್ಲಿ ‘ವಿಶ್ವಾಸ ಮತ ಗೆಲ್ಲುವ’ ಮೂಲಕ ತಮಿಳುನಾಡಿನ ರಾಜಕೀಯದ ಬಹು ತಾರಾಗಣದ ನಾಟಕವೊಂದರ ಪ್ರದರ್ಶನಕ್ಕೆ ತಾತ್ಕಾಲಿಕವಾಗಿ ಪರದೆ ಬಿದ್ದಿದೆ. ನಿರೀಕ್ಷೆಗಿಂತ ಮುಂಚೆಯೇ ಇನ್ನೊಂದು ನಾಟಕ ನೋಡಲು ಉಸಿರು ಬಿಗಿ ಹಿಡಿದು ಎದುರು ನೋಡಬೇಕಾಗಬಹುದು. ಹೊಸ ನಾಟಕದಲ್ಲಿ ರಾಜ್ಯಪಾಲರ ವಿರುದ್ಧವೇ ದೂರು, ಸಾರ್ವಜನಿಕರ ಪ್ರತಿಭಟನೆ ಮತ್ತು ಕೋರ್ಟ್‌ ಪ್ರಕರಣ ದಾಖಲಿಸುವ ಬೆದರಿಕೆಯೂ ಇರಬಹುದು.

ಶಶಿಕಲಾ ತಮ್ಮನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಪ್ರತಿಷ್ಠಾಪಿಸಿಕೊಂಡ ಬೆನ್ನಲ್ಲೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ತೋರಿದ ಅವಸರವು ಹಲವಾರು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡಿತು. ನಿರೀಕ್ಷೆಗಳನ್ನೆಲ್ಲ ತಲೆಕೆಳಗಾಗಿಸಿತು. ಪಕ್ಷದ ಮುಖ್ಯಸ್ಥೆ ಜಯಲಲಿತಾ ಅವರ ಜತೆಗಿನ ಆತ್ಮೀಯ ಬಾಂಧವ್ಯ ಒಂದರಿಂದಷ್ಟೇ ಅವರ ಉತ್ತರಾಧಿಕಾರಿಯಾಗುವ ಅರ್ಹತೆ ಗಿಟ್ಟಿಸಲು ಸಾಧ್ಯವಿಲ್ಲ ಎನ್ನುವ ಕಟು ಸತ್ಯವು 15 ದಿನಗಳ ರಾಜಕೀಯ ಬೆಳವಣಿಗೆಗಳಿಂದ ಶಶಿಕಲಾ ಅವರಿಗೆ ಕೊನೆಗೂ ಮನದಟ್ಟಾಗಿರಬಹುದು.

ಯಾವುದೇ ಮುಖಂಡನಿಗೆ  ರಾಜಕೀಯದ ವಾಸ್ತವದ ನಾಡಿಮಿಡಿತ ಚೆನ್ನಾಗಿ ಗೊತ್ತಿರಬೇಕು. ಚುನಾವಣಾ ರಾಜಕೀಯದ ಅವ್ಯವಸ್ಥೆ, ಕಾಠಿಣ್ಯ,  ಜತೆಯಲ್ಲಿ ಇದ್ದವರ ಕುಟಿಲ ತಂತ್ರಗಳ ಅರಿವು ಇದ್ದರೆ ಮಾತ್ರ ಅಧಿಕಾರದ ಗದ್ದುಗೆ ಏರಲು ಅಗತ್ಯವಾದ ಕಸರತ್ತು ಮಾಡಲು ಸಾಧ್ಯ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ತಮಿಳುನಾಡಿನ ರಾಜ್ಯಪಾಲರು ನಿರ್ವಹಿಸಿದ ಪಾತ್ರ ಹೆಚ್ಚು ಗಮನ ಸೆಳೆಯಿತು. ನಿರ್ಧಾರ ಕೈಗೊಳ್ಳಲು ವಿಳಂಬ ಮಾಡಿದ್ದಕ್ಕೆ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ರಾಜ್ಯಪಾಲ ವಿದ್ಯಾಸಾಗರ ರಾವ್‌ ಈ ಸಂದರ್ಭದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿರುವುದು ವೇದ್ಯವಾಗುತ್ತದೆ. ಉಸ್ತುವಾರಿ ಮುಖ್ಯಮಂತ್ರಿಯಾಗಿದ್ದ ಪನ್ನೀರ್‌ಸೆಲ್ವಂ ಅವರು ಬಂಡಾಯವೆದ್ದು, ಅಧಿಕಾರದಲ್ಲಿ ಮುಂದುವರೆಯಲು ನಡೆಸಿದ ಇನ್ನಿಲ್ಲದ ಕಸರತ್ತುಗಳ ಕಾರಣಕ್ಕೆ ರಾಜ್ಯಪಾಲರು ತಳೆದ ನಿಲುವು ಸಮಂಜಸವಾಗಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪು ಎದುರು ನೋಡುತ್ತ, ಶಶಿಕಲಾ ಅವರಿಗೆ ಆಹ್ವಾನ ನೀಡಲು ವಿಳಂಬ ಮಾಡಿದ ರಾವ್‌, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿಯೇ ನಡೆದುಕೊಂಡಿದ್ದರು. ಮುಖ್ಯಮಂತ್ರಿಯಾಗುವ ಶಶಿಕಲಾ ಅವರ ಆಸೆಗೆ ಕೋರ್ಟ್‌ ತೀರ್ಪು ತೊಡರಾಗುವ ಸಾಧ್ಯತೆ ಇತ್ತು. ಅಂಥವರಿಗೆ ಪ್ರಮಾಣ ವಚನ ಬೋಧಿಸುವುದರಿಂದ ರಾಜ್ಯಪಾಲ ಅಥವಾ ಮುಖ್ಯಮಂತ್ರಿ ಹುದ್ದೆಗೆ ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ ಎಂದು ರಾವ್‌ ಗ್ರಹಿಸಿದ್ದು ಸರಿಯಾಗಿಯೇ ಇದೆ.

ಶಶಿಕಲಾ ಅವರು ತಪ್ಪಿತಸ್ಥೆ ಎಂದು ಕೋರ್ಟ್‌  ತೀರ್ಪು ಹೊರಬಿದ್ದು, ಅವರು ಮುಖ್ಯಮಂತ್ರಿಯಾಗಲು ಅನರ್ಹರಾದ ನಂತರ, ಪನ್ನೀರ್‌ಸೆಲ್ವಂ ಬಣವು ನಿರೀಕ್ಷಿಸಿದ ರೀತಿಯಲ್ಲಿ ಎಐಎಡಿಎಂಕೆಯಲ್ಲಿ ಒಡಕು ಕಂಡು ಬರಲಿಲ್ಲ.  ಪಕ್ಷವು ತಕ್ಷಣಕ್ಕೆ ಹೊಸ ನಾಯಕನನ್ನು ಚುನಾಯಿಸಿತು. ಯಾವುದೇ ಬೆದರಿಕೆಗೆ ಒಳಗಾಗದೇ ಸ್ವಇಚ್ಛೆಯಿಂದ ತಾವೆಲ್ಲ ರೆಸಾರ್ಟ್‌ನಲ್ಲಿ ಇರುವುದಾಗಿ ಶಾಸಕರು ನೀಡಿದ ಹೇಳಿಕೆ ಆಧರಿಸಿದ ಪೊಲೀಸ್‌ ವರದಿಯೂ ರಾಜ್ಯಪಾಲರ ಎದುರಿಗೆ ಇದ್ದ ಆಯ್ಕೆಗಳನ್ನು ಸೀಮಿತಗೊಳಿಸಿತು.

ಹೊಸ ಸರ್ಕಾರ ರಚಿಸಲು ಪಳನಿಸ್ವಾಮಿಗೆ ಆಹ್ವಾನ ನೀಡುವುದೊಂದೇ ಕೊನೆಯ ತಾರ್ಕಿಕ ಕ್ರಮವಾಗಿತ್ತು. ಈ ಹಂತದಲ್ಲಿಯೂ ವಿಳಂಬವಾಗಿದ್ದರೆ, ರಾಜ್ಯಪಾಲರು ಕೇಂದ್ರ ಸರ್ಕಾರದ ಏಜೆಂಟ್‌ನಂತೆ ಕಾರ್ಯನಿರ್ವಹಿಸಿದ್ದಾರೆ ಎನ್ನುವ ಟೀಕೆಗೆ ಬಲ ಬರುತ್ತಿತ್ತು.

ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿರುವುದು ತಮಿಳುನಾಡಿನಲ್ಲಿ ಸದ್ಯಕ್ಕೆ ನಡೆಯುತ್ತಿರುವ ರಾಜಕೀಯ ನಾಟಕದ ಅಂತ್ಯವಲ್ಲ. ಅದೊಂದು ಹೊಸ ಆರಂಭವಷ್ಟೆ. ಮುಂಬರುವ ದಿನಗಳಲ್ಲಿ ತಮ್ಮೆಲ್ಲ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯಮಂತ್ರಿ ಮತ್ತು ಎಐಎಡಿಎಂಕೆಯ ಹೊಸ ಉಪ ಪ್ರಧಾನ ಕಾರ್ಯದರ್ಶಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. 

ಶಶಿಕಲಾ ಅವರು ತಮ್ಮ ಇಬ್ಬರು ಸಂಬಂಧಿಕರಿಗೆ ಪಕ್ಷದ ಹೊಣೆಗಾರಿಕೆ ಒಪ್ಪಿಸಿರುವುದು ಮತ್ತು ಅವರಿಬ್ಬರ ಪೈಕಿ ದಿನಕರನ್‌ ಅವರನ್ನು ಉಪ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ರಾಜಕೀಯ ನಡೆಯು  ಪರಿಣಾಮ ಬೀರಲಿದೆ. ಶಶಿಕಲಾ ನಿರ್ದೇಶನದಂತೆಯೇ ದಿನಕರನ್‌ ಅವರು ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎನ್ನುವುದರಲ್ಲಿ ಕಿಂಚಿತ್ತೂ ಅನುಮಾನ ಇಲ್ಲ. ದಿನಕರನ್‌ ಮತ್ತು ಪಳನಿಸ್ವಾಮಿ ನಡುವಣ ಬಾಂಧವ್ಯ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದೂ ಕುತೂಹಲಕರ ವಿದ್ಯಮಾನವಾಗಿರಲಿದೆ.

‘ಮನ್ನಾರಗುಡಿ ಕೂಟ’ವು ಪಕ್ಷದ ಮೇಲೆ ನಿಯಂತ್ರಣ ಸಾಧಿಸುವ ಪ್ರಕ್ರಿಯೆಗೆ  ಎಐಎಡಿಎಂಕೆ ಮುಖಂಡರು ಮತ್ತು  ಪಕ್ಷದ ಕಾರ್ಯಕರ್ತರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದ್ದಾರೆ ಎನ್ನುವುದನ್ನೂ ಕಾದು ನೋಡಬೇಕಾಗಿದೆ. ಸದ್ಯಕ್ಕಂತೂ ಆಡಳಿತಾರೂಢ ಪಕ್ಷದ ಶಾಸಕರು ಮತ್ತೆ ಚುನಾವಣೆಗೆ  ಹೋಗಲು ಹಿಂದೇಟು ಹಾಕಿ ಮೌನಕ್ಕೆ ಶರಣಾಗಿದ್ದಾರೆ.

ದಿನಗಳು ಉರುಳಿದಂತೆ ರಾಜಕೀಯ ಭವಿಷ್ಯಕ್ಕಾಗಿ ಅವರು ತಮ್ಮ ನಿಲುವನ್ನು ಬದಲಿಸಬೇಕಾದ ಅನಿವಾರ್ಯ ಎದುರಾಗಲೂಬಹುದು. ಪಕ್ಷದ ಒಳಗೆ ಸೃಷ್ಟಿಯಾಗಿರುವ ಹೊಸ ‘ಪಿತೂರಿ ಕೂಟ’ದ ಒಲವು–ನಿಲುವುಗಳನ್ನು ನೋಡಿಕೊಂಡು ಶಾಸಕರು ತಮಗೆ ಅನುಕೂಲವೆನಿಸುವ ತೀರ್ಮಾನ ತೆಗೆದುಕೊಳ್ಳಬಹುದು. ಈ ಕೂಟವು ತನ್ನ ಸ್ವಾರ್ಥಕ್ಕಾಗಿ  ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಅಸ್ಥಿರಗೊಳಿಸಲು ಹವಣಿಸಬಹುದು. ಇದು ಕೂಡ ಪಕ್ಷದ ಶಾಸಕರ ನಿಲುವಿನ ಮೇಲೆ ಪ್ರಭಾವ ಬೀರಲಿದೆ.

ಇಂಥ ಸಂಭವನೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ಮುಖಂಡರು ಸೂಕ್ತವಾಗಿ ಸ್ಪಂದಿಸದಿದ್ದರೆ, ರಾಜ್ಯದ ಮತದಾರರು ಮಾತ್ರ ತಕ್ಕ ಪಾಠ ಕಲಿಸುತ್ತಾರೆ. ‘ಪಿತೂರಿ ಕೂಟ’ದ ಹಿಡಿತವನ್ನು ಮತದಾರರು ಹಗುರವಾಗಿ ಪರಿಗಣಿಸಲಾರರು. ಡಿಎಂಕೆಯು ನೇಪಥ್ಯದಲ್ಲಿ ಕಾದು ನಿಂತಿದೆ. ರಾಜ್ಯದಲ್ಲಿ ಉಂಟಾಗುವ ರಾಜಕೀಯ ನಿರ್ವಾತವನ್ನು ತುಂಬಲು ಬಿಜೆಪಿಯೂ ತುದಿಗಾಲಲ್ಲಿ ನಿಂತಿರುವಾಗ, ಮುಂಬರುವ ದಿನಗಳಲ್ಲಿ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ಖಂಡಿತವಾಗಿಯೂ ತುಂಬ ಕುತೂಹಲಕಾರಿಯಾಗಿ ಇರಲಿವೆ.

ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಡೆದ ಘಟನಾವಳಿಗಳನ್ನೇ ಆಧರಿಸಿ ಹೇಳುವುದಾದರೆ, ಎಐಎಡಿಎಂಕೆ, ಡಿಎಂಕೆ ಹಾಗೂ ಪನ್ನೀರ್‌ಸೆಲ್ವಂ ಬಣದ ನಡುವಣ ರಾಜಕೀಯ ಸಂಘರ್ಷ ಇನ್ನಷ್ಟು  ತೀವ್ರಗೊಳ್ಳಲಿದೆ. ಕೆಲವರು ತಕ್ಷಣದ ಬೆಳವಣಿಗೆ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.  ರಾಜ್ಯದ ರಾಜಕೀಯದ ಮೇಲೆ ದೀರ್ಘಾವಧಿಯಲ್ಲಿ ಹಿಡಿತ ಸಾಧಿಸಲು ಪ್ರಮುಖ ಪಕ್ಷಗಳು ತಮ್ಮೆಲ್ಲ ರಾಜಕೀಯ ಚಾಣಾಕ್ಷತೆಯನ್ನು ಪಣಕ್ಕೆ ಒಡ್ಡಿರುವುದು ಸುಳ್ಳಲ್ಲ.

ಆದಷ್ಟು ಬೇಗ ಚುನಾವಣೆ ನಡೆಸಲು ಡಿಎಂಕೆಯು ತನ್ನ ಕಾರ್ಯಾಧ್ಯಕ್ಷ ಸ್ಟಾಲಿನ್‌ ನೇತೃತ್ವದಲ್ಲಿ ರಾಜಕೀಯ ಒತ್ತಡ ಹೇರುತ್ತಿದೆ. ಇನ್ನೊಂದೆಡೆ, ಎಐಎಡಿಎಂಕೆಯು ಉಳಿದ ಅವಧಿಯನ್ನು ಪೂರ್ಣಗೊಳಿಸಲು ಮತ್ತು ಪಕ್ಷದ ಒಳಗೆ ಅಸ್ಥಿರತೆ ಮೂಡದಂತೆ ನೋಡಿಕೊಳ್ಳಲು ಪ್ರಯತ್ನ ನಡೆಸಿದೆ.  ತಕ್ಷಣಕ್ಕೆ ಮತ್ತೆ ಚುನಾವಣೆ ಎದುರಿಸಲು ಇಷ್ಟಪಡದ ಶಾಸಕರು ಅನಿವಾರ್ಯವಾಗಿ ಒಗ್ಗಟ್ಟು ಪ್ರದರ್ಶಿಸಬಹುದು.

ಪನ್ನೀರ್‌ಸೆಲ್ವಂ ಅವರು ದಿನಗಳೆದಂತೆ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುವರೇ. ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಶಶಿಕಲಾ ಮತ್ತು ಅವರ ಪ್ರತಿನಿಧಿ ದಿನಕರನ್‌ ಅವರ ನೆರಳಾಗಿಯೇ ಮುನ್ನಡೆಯುವರೇ ಎನ್ನುವ ಪ್ರಶ್ನೆಗಳಿಗೆ ಕಾಲವೇ ಉತ್ತರ ಹೇಳಲಿದೆ.  ಪಕ್ಷದ ಒಳಗೆ ನಡೆಯಲಿರುವ ಅಧಿಕಾರಕ್ಕಾಗಿ ಹೋರಾಟ ಯಾವ ತಿರುವು ಪಡೆಯಬಹುದು  ಎಂಬುದನ್ನು ಕಾದು ನೋಡಬೇಕು.

‘ಅಮ್ಮ’ನ ವರ್ಚಸ್ಸನ್ನೇ ಬಂಡವಾಳ ಮಾಡಿಕೊಂಡು ಪಕ್ಷದ ಮೇಲೆ ಹಿಡಿತ ಸಾಧಿಸಲು ಹೊರಟ ಶಶಿಕಲಾ ಅವರ ರಾಜಕೀಯ ಬಂಡವಾಳ ಸೀಮಿತವಾಗಿದೆ. ಜೈಲಿನಲ್ಲಿದ್ದುಕೊಂಡು ಪಕ್ಷದ ಮೇಲೆ ನಿಯಂತ್ರಣ ಸಾಧಿಸುತ್ತಲೇ ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವುದು ಶಶಿಕಲಾ ಅವರಿಗೆ ಸವಾಲಾಗಲಿದೆ. ತಮಿಳುನಾಡಿನ ರಾಜಕೀಯದಲ್ಲಿ ಸದ್ಯಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT