ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಚ್ಚರ್ ನೋಡಿ

Last Updated 1 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಗೀತಾಂಜಲಿ: ಮಣಿ ರತ್ನಮ್‌ ನಿರ್ದೇಶನದ ತೆಲುಗು ಭಾಷೆಯ ‘ಗೀತಾಂಜಲಿ’ ತೆರೆಕಂಡಿದ್ದು 1989ರಲ್ಲಿ. ಅಕ್ಕಿನೇನಿ ನಾಗಾರ್ಜುನ್‌ ಮತ್ತು ಗಿರಿಜಾ ಶೆಟ್ಟರ್‌ ನಾಯಕ–ನಾಯಕಿಯಾಗಿ ನಟಿಸಿದ್ದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಯಶಸ್ಸು ಗಳಿಸಿದ್ದಲ್ಲದೇ ಸಿನಿವಿಮರ್ಶಕರ ಮನಸನ್ನೂ ಗೆದ್ದಿದೆ. ಜತೆಗೆ ರಾಷ್ಟ್ರಪ್ರಶಸ್ತಿಯ ಗರಿಯೂ ಅದರ ಕಿರೀಟದಲ್ಲಿದೆ.

ಮಾರಣಾಂತಿಕ ಕಾಯಿಲೆಗೆ ಒಳಗಾಗಿ ಸಾವನ್ನು ಎದುರು ನೋಡುತ್ತಲೇ ಈ ಕ್ಷಣದ ಬದುಕನ್ನು ಉತ್ಕಟವಾಗಿ ಬದುಕುವ ಈ ಸಿನಿಮಾದ ನಾಯಕಿಯ ‘ಮಾದರಿ’ ನಂತರದ ಹಲವು ಭಾಷೆಗಳ ಸಿನಿಮಾಗಳನ್ನು ತೀವ್ರವಾಗಿ ಪ್ರಭಾವಿಸಿದೆ. ಇಳಯರಾಜ ಅವರ ಸಂಗೀತ ಸಂಯೋಜನೆಯ ಮಧುರ ಗೀತೆಗಳೂ ಈ ಸಿನಿಮಾದ ಮುಖ್ಯ ಧನಾತ್ಮಕ ಅಂಶ.

ರಸ್ತೆ ಅಪಘಾತದಲ್ಲಿ ಸಣ್ಣ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಸೇರುವ ನಾಯಕ ಪ್ರಕಾಶ್‌ಗೆ ತನ್ನ ಜೀವವನ್ನು ಕ್ಯಾನ್ಸರ್‌ ಎಂಬ ಮಹಾಮಾರಿ ಅಮರಿಕೊಂಡಿರುವುದು ತಿಳಿಯುತ್ತದೆ. ತನ್ನ ಬದುಕಿನ ಅವಧಿ ಇನ್ನು ಕೆಲವೇ ದಿನ ಎಂಬುದನ್ನು ತಿಳಿದ ಅವನು ತನ್ನನ್ನು ಕಾಡುವ ಸಾವಿನ ನೆನಪು ಮತ್ತು ಎಲ್ಲರ ಅನುಕಂಪದಿಂದ ದೂರವಾಗಲು ಬಯಸಿ ಮನೆಬಿಟ್ಟು ಬೇರೊಂದು ಊರಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಜೀವಂತಿಕೆಯೇ ಮೈವೆತ್ತಂಥ ಮುದ್ದು ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಅವಳೂ ಹೃದಯಸಂಬಂಧಿ ಕಾಯಿಲೆಯ ಕಾರಣಕ್ಕೆ ಸಾವನ್ನು ಬೆನ್ನ ಹಿಂದೆಯೇ ಕಟ್ಟಿಕೊಂಡು ಬದುಕುತ್ತಿರುವವಳು. ಆದರೆ ಅದರ ಕರಾಳತೆ ತನ್ನ ಹತ್ತಿರವೂ ಬರಗೊಡದಂತೇ ಈ ಕ್ಷಣದ ಬದುಕನ್ನು ಇನ್ನಿಲ್ಲದಂತೇ ಉತ್ಕಟವಾಗಿ ಅನುಭವಿಸುತ್ತಿರುವವಳು.

ಹೀಗೆ ಭಾವುಕ ನೆಲೆಯಲ್ಲಿಯೇ ಮುಗ್ಧ ಪ್ರೇಮ ಕಥನವನ್ನು ನಿರ್ದೇಶಕರು ಕಟ್ಟಿದ್ದಾರೆ. ಇಲ್ಲಿ ಯಾರೂ ಖಳರಿಲ್ಲ. ವಿಧಿಯ ಬೀಸುಗಾಳಿಗೆ ಛಿದ್ರಗೊಳ್ಳುವ ಬದುಕಿನಲ್ಲಿ ಉಳಿಯುವ ಗುರುತುಗಳು ಅವರನ್ನು ಮತ್ತೆ ಜೀವನೋತ್ಸಾಹಿಗಳನ್ನಾಗಿಸುತ್ತದೆ.

ಮುದ್ದುಮುಖದ ನಾಯಕಿ ಗಿರಿಜಾ ಶೆಟ್ಟರ್‌ ಅವರು ಭಾವಕೋಶಗಳಲ್ಲಿ ಶಾಶ್ವತ ಅಚ್ಚೊತ್ತುವಷ್ಟು ಪ್ರಭಾವಿಯಾಗಿ ನಟಿಸಿದ್ದಾರೆ. ವೃತ್ತಿಜೀವನದ ಆರಂಭಕಾಲದ ಅಕ್ಕಿನೇನಿ ನಾಗಾರ್ಜುನ್‌ ಅವರನ್ನು ಈ ಸಿನಿಮಾದಲ್ಲಿ ನೋಡಬಹುದು.

ವ್ಯಾಪಾರೀ ಚೌಕಟ್ಟಿನಲ್ಲಿಯೇ ನೆನಪಿನಲ್ಲಿ ಉಳಿಯುವಂಥ ಸಿನಿಮಾ ಮಾಡುವುದರಲ್ಲಿ ಮಣಿ ರತ್ನಮ್‌ ಸಿದ್ಧಹಸ್ತರು. ಸಾವಿನ ತುದಿಯಿಂದ ಬದುಕನ್ನು ನೋಡುವ ‘ಗೀತಾಂಜಲಿ’ ಅವರ ಸೃಜನಶೀಲ ಶಕ್ತಿಗೆ ಒಂದು ನಿದರ್ಶನದಂತಿದೆ. ಯೂಟ್ಯೂಬ್‌ನಲ್ಲಿ goo.gl/15EjIc ಕೊಂಡಿ ಬಳಸಿ ಸಿನಿಮಾ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT