ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ಒತ್ತುವರಿ: ಕೃಷಿ ಸಚಿವರ ವಿರುದ್ಧ ಆರೋಪ

ಕೊಡಗಲಹಟ್ಟಿ ಗ್ರಾಮದಲ್ಲಿರುವ ₹250 ಕೋಟಿ ಮೌಲ್ಯದ ಜಮೀನು: ನಕಲಿ ದಾಖಲೆ ಸೃಷ್ಟಿ
Last Updated 4 ಮಾರ್ಚ್ 2017, 19:57 IST
ಅಕ್ಷರ ಗಾತ್ರ
ಬೆಂಗಳೂರು: ‘ಬೆಂಗಳೂರು ಉತ್ತರ ತಾಲ್ಲೂಕಿನ ಕೊಡಗಲಹಟ್ಟಿ ಗ್ರಾಮದ ಸರ್ವೆ ಸಂಖ್ಯೆ 103 ರ 22 ಎಕರೆ 35 ಗುಂಟೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲು ಕೃಷಿ ಸಚಿವ ಕೃಷ್ಣಬೈರೇಗೌಡ ಅವರು ಮುಂದಾಗಿದ್ದಾರೆ’ ಎಂದು ಬಿಜೆಪಿಯ ನಗರ ಜಿಲ್ಲಾ ಘಟಕದ  ವಕ್ತಾರ ಎನ್‌.ಆರ್‌.ರಮೇಶ್‌ ಆರೋಪಿಸಿದರು.
 
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜಕ್ಕೂರು ವಾರ್ಡ್‌ಗೆ ಹೊಂದಿಕೊಂಡಂತೆ ಇರುವ ₹250 ಕೋಟಿ ಮೌಲ್ಯದ ಈ ಜಮೀನನ್ನು ಸಚಿವರ ಹಿಂಬಾಲಕರಾದ ಶ್ರೀನಿವಾಸ್‌ ಮತ್ತು ಕೊಡಗಲಹಟ್ಟಿ ಶ್ರೀನಿವಾಸ್‌ ಎಂಬುವರು ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿ ಪ್ರದೇಶದಲ್ಲಿ ವಾಸವಿರುವ  ಜನರಿಗೆ ನೀಡಿದ್ದಾರೆ. ಮುಂಬರುವ ದಿನ ಗಳಲ್ಲಿ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಜಮೀನನ್ನು ಒತ್ತುವರಿ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ದೂರಿದರು.
 
‘1999ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಚಂದ್ರಣ್ಣ ಅವರು ಮಾನವೀಯತೆಯ ಆಧಾರದ ಮೇಲೆ 29 ಕುಟುಂಬಗಳಿಗೆ ಇಲ್ಲಿ ಸಣ್ಣ ನಿವೇಶನಗಳನ್ನು ಹಂಚಿಕೆ ಮಾಡಿದ್ದರು. ಅಂದಿನ ಆಶ್ರಯ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕರು ಸಹಿ ಮಾಡಿದ ಹಕ್ಕುಪತ್ರಗಳು ಮಾತ್ರ ಸಿಂಧುವಾಗಿವೆ. 2008ರಲ್ಲಿ ಶಾಸಕರಾಗಿ ಆಯ್ಕೆಯಾದ ಕೃಷ್ಣಬೈರೇಗೌಡರು ಈ ಹಿಂದೆ 29 ಕುಟುಂಬಗಳಿಗೆ ನೀಡಿದ್ದ ಹಕ್ಕುಪತ್ರಗಳನ್ನು ಯಥಾವತ್ತಾಗಿ ನಕಲು ಮಾಡಿ,  ಜಮೀನಿನ ಸಣ್ಣ ಶೆಡ್‌ಗಳಲ್ಲಿ ವಾಸವಿರುವ 300 ಕ್ಕೂ ಹೆಚ್ಚು  ಜನರಿಗೆ ನಕಲಿ ಹಕ್ಕುಪತ್ರಗಳನ್ನು ಸೃಷ್ಟಿಸಿದ್ದಾರೆ’ ಎಂದು ಆರೋಪಿಸಿದರು.
 
‘ಈ ಜಮೀನಿಗೆ ಹೊಂದಿಕೊಂಡಂತೆ ಸುಮಾರು 42 ಎಕರೆ ವಿಸ್ತೀರ್ಣದಲ್ಲಿ ಎಂಬಸಿ ಗ್ರೂಪ್‌ನವರು ಬೃಹತ್‌ ವಸತಿ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ಅದಲ್ಲದೇ ಸನಿಹದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಇಲ್ಲಿನ ಜಮೀನಿಗೆ ಚಿನ್ನದ ಬೆಲೆಯಿದೆ’ ಎಂದರು.
 
‘ಜಮೀನನ್ನು ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದವರ ಮೇಲೆ ಎಸಿಎಂಎಂ ನ್ಯಾಯಾಲಯ ಮತ್ತು ಬಿಎಂಟಿಎಫ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಮೀನನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗೆ ದೂರನ್ನು ನೀಡಲಾಗಿದೆ’ ಎಂದು ಅವರು ತಿಳಿಸಿದರು.
ಈ ಆರೋಪದ ಕುರಿತು ಕೃಷ್ಣಬೈರೇಗೌಡರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಆದರೆ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT