ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭೂತಿಯ ಹೂರಣ ನೀಡಿದ ನಮ್ಮ ಪಯಣ...

Last Updated 6 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಚಾರಣವೆಂಬುದು ಯಾತ್ರೆಯಲ್ಲ ಅದೊಂದು ಅನುಭೂತಿಯ ಹೂರಣ. ಅಂಥ ಹೂರಣವನ್ನು ಸವಿದು ಸಂತೋಷಪಡುವ ಕ್ಷಣಗಳಿಗೆ ಯಾವುದೇ ಹೋಲಿಕೆಗಳಿಲ್ಲ. ಅದನ್ನು ವರ್ಣಿಸುವುದಕ್ಕಿಂತ ಅನುಭವಿಸಿಯೇ ತೀರಬೇಕು. ಪ್ರಕೃತಿಯ ಮಡಿಲಲ್ಲಿ ಮಗುವಿನಂತೆ ಭಾಗಿಯಾಗಿ ಸುಮ್ಮನೆ ನಡೆಯಬೇಕು, ನೋಡಬೇಕು ಆಲಿಸಬೇಕು, ಅದರೊಳು ಮೀಯಬೇಕು, ಉಲ್ಲಸಿತವಾದ ನಮ್ಮ ಮನವ ಹಾರಿಬಿಡಬೇಕು. ಆಗ ಆನಂದ ಮಹದಾನಂದ ನಮ್ಮದಾಗುತ್ತದೆ.

ನೋಡನೋಡುತ್ತಾ ಪ್ರಕೃತಿಯಲ್ಲಿ ಎಲ್ಲವೂ ಇದೆ ಎಂದು ಅನಿಸುತ್ತದೆ. ಕೆಲವೊಮ್ಮೆ ದೇವರು ಇಲ್ಲೇ ಇದ್ದಾನೆ ಅಥವಾ ಪ್ರಕೃತಿಯೇ ದೇವರಾಗಿದ್ದಾನೆ ಎಂಬುದಂತೂ ಖಂಡಿತವಾಗಿ ಗೋಚರವಾಗುತ್ತದೆ. ಅದಕ್ಕಾಗೇ ಚಾರಣಗಳಿಗೆ ಹೋಗಿ ಅಂಥ ಅನುಭವಗಳನ್ನು ಪಡೆಯುವುದು ನಮ್ಮ ಬದುಕಿನ ಅಂಗವೆಂದುಕೊಂಡರೆ ತಪ್ಪೇನಿಲ್ಲ.

ಹೀಗೆಂದುಕೊಂಡು ನಾವು ಪ್ರಾಕೃತಿಕ ಸಿರಿಯ ತೊಟ್ಟಿಲು ಎಂದೇ ಬಿಂಬಿತವಾಗಿರುವ ಉತ್ತರಕನ್ನಡ ಜಿಲ್ಲೆಯನ್ನು ಆರಿಸಿ ಅದರಲ್ಲೂ ಕಾರವಾರದ ತಾಲ್ಲೂಕಿನಲ್ಲಿ ಬರುವ ಮಲಗದ್ದೆ ಪರ್ವತವನ್ನು ಹತ್ತುವ ಯೋಜನೆಯನ್ನು ಮಾಡಿ ಸ್ನೇಹಿತರು ಮತ್ತು ಸ್ವಯಂಸೇವಕರೊಡನೆ ಹೊರಟೆವು.

ದಟ್ಟವಾದ ನಿತ್ಯಹರಿದ್ವರ್ಣ ಕಾಡಿನ ನಡುವೆ ಹೆಜ್ಜೆಹಾಕುತ್ತಿದ್ದರೆ ಮತ್ತೇನೂ ಬೇಡವೆನಿಸುತ್ತಿತ್ತು. ಆ ಹಕ್ಕಿಗಳ ಕಲರವ ಝರಿಗಳ ಜುಳುಜುಳು ನಿನಾದವನ್ನು ಆಲಿಸುತ್ತಾ ಮುಂದೆ ದಾರಿಸಾಗುವುದೇ ಗೊತ್ತಾಗುತ್ತಿರಲಿಲ್ಲ. ಅಲ್ಲಲ್ಲಿ ಗಿಡಮರಗಳ ಪೊದೆಗಳನ್ನು ನೋಡಿ ಇಲ್ಲೇನಾದರೂ ಪ್ರಾಣಿಗಳಿವೆಯೇ ಎಂಬ ಸಂದೇಹ ಮೂಡುತ್ತಿತ್ತು ಮತ್ತು ‘ಈಗ ಇದ್ದಕ್ಕಿದ್ದಂತೆ ಚಿರತೆಯೋ ಅಥವಾ ಹುಲಿಯೋ ಅಥವಾ ಕಾಡುಕೋಣವೋ ಬಂದರೆ ಏನ್ಮಾಡೋದು..?’ ಎಂದು ಕೆಲವರು ಎಂದರೆ, ಹೆದರಿದ ಉಳಿದವರು, ‘ಅಯ್ಯೋ..! ಯಾಕೆ ನೆನಪಿಸುತ್ತೀಯಪ್ಪಾ... ಭಯ ಕಾಡುತ್ತದೆ ನಮಗೆ’ ಎಂದರು.

‘ಏನಾಗುತ್ತದೆ ನೋಡೇಬಿಡೋಣ’ ಎಂಬ ಜಂಭದ ಪ್ರದರ್ಶನ ಕೆಲವರದ್ದು, ‘ಪ್ರಪಂಚದ ಅತೀ ಕೆಟ್ಟಪ್ರಾಣಿ ಎಂದರೆ ಮನುಷ್ಯ ಪ್ರಾಣಿ! ನಮ್ಮನ್ನು ಕಂಡರೆ ಅವುಗಳೇ ಹೆದರಿ ಓಡುತ್ತವೆ! ಇನ್ನು ನಮಗೆಲ್ಲಿಯ ಭಯ..?’ಎಂಬುದು ಕೆಲವರ ಅಂಬೋಣ... ಹೀಗೆ ನಮ್ಮನ್ನು ನಾವೇ ಹೆದರಿಸುತ್ತಾ, ಸಮಾಧಾನ ಪಡುತ್ತಾ ಸಾಗಿದೆವು. ಕೆಲವರು ಕೀಟಗಳ ಬಗ್ಗೆ, ಗಿಡಗಳ ಬಗ್ಗೆ, ಹೂಗಳ ಬಗ್ಗೆ ತಮ್ಮ ಬುದ್ಧಿಪ್ರದರ್ಶನ ಮಾಡುವುದೇ ಚೆಂದವೆನಿಸುತ್ತಿತ್ತು.

ಏತನ್ಮಧ್ಯೆ ನಡೆಯಲಾರದೆ, ಮಲಗದ್ದೆ ಗುಡ್ದವನ್ನೇರಲಾರದೇ ಉಸ್... ಉಸ್... ಎನ್ನುವರು ಕಡಿಮೆಯೇನಿರಲಿಲ್ಲ. ಅಲ್ಲಲ್ಲಿ ಕುಳಿತು–ನಿಂತು ಸುಸ್ತಾಗಿ ನೀರುಕುಡಿದು ಹೊಟ್ಟೆಭಾರ ಮಾಡಿಕೊಂಡು ಮಲಗಿಬಿಡುತ್ತಿದ್ದರು.

‘ಬೇಡ್ರಪ್ಪಾ... ಜಾಸ್ತಿ ನೀರ್ ಕುಡೀಬೇಡಿ ಗುಟುಕು ಗುಟುಕಾಗಿ ಕುಡಿಯಿರಿ... ಒಂದೇ ಸಲಕ್ಕೆ ಅಷ್ಟೊಂದು ನೀರು ಕುಡಿಯುವುದು ಸರಿಯಲ್ಲ’ ಎಂದರೂ, ‘ಅಯ್ಯೋ..! ನೀರು ಕುಡಿಯದಿದ್ದರೆ ಅಗೋದೇ ಇಲ್ಲ, ಸತ್ತೇ ಹೋಗ್ತೀನಿ..!’ ಅನ್ನುವವರು ಇದ್ದರು. ಇನ್ನೂ ಎಷ್ಟು ದೂರು...? ನಾವು ತಲುಪುವ ಜಾಗ ಬಂತೇ?’ ಎಂದು ಪದೇ ಪದೇ ಕೇಳುವವರೂ ಇದ್ದರು. ‘ಇನ್ನೇನು ಬಂದೇ ಬಿಡ್ತು...  ಕೇವಲ ನೂರೇ ಮೀಟರು...’

ಅಂತ ಸುಳ್ಳು ಹೇಳಿಕೊಂಡು ಹತ್ತಿ ಸುತ್ತಿದ್ದರು ಹಲವರು. ಕಾರವಾರ ತಾಲ್ಲೂಕಿನ ಎತ್ತರದ ಗುಡ್ಡಗಳಲ್ಲಿ ಇದೂ ಒಂದಾಗಿದ್ದು ಬುಡದಿಂದ ನಾಲ್ಕು ನೂರು ಮೀಟರುಗಳಿರಬಹುದು.

ಇಷ್ಟೆಲ್ಲ ಸುಸ್ತಿನ ನಡುವೆ ಅಲ್ಲಲ್ಲಿ ಹಾರಾಡುವ ಚಿಟ್ಟೆಗಳ ಬಣ್ಣಕ್ಕೆ ಅವುಗಳ ಸೌಂದರ್ಯಕ್ಕೆ ಮಾರುಹೋಗುತ್ತಿದ್ದೆವು. ಝರಿಗಳ ತಣ್ಣನೆಯ ನೀರನ್ನು ಮೈಮೇಲೆ ಹಾಕಿಕೊಂಡು ಕುಣಿಯುವವರೂ ಆ ನೀರನ್ನೂ ಇದು ಆಯುರ್ವೇದಿಕ್ ನೀರು ಏನೂ ಆಗುವುದಿಲ್ಲ! ಕುಡಿಯಿರಿ... ಕುಡಿಯಿರಿ...! ಎಂದು ತಾವೂ ಕುಡಿದು ಬೇರೆಯವರಿಗೂ ಕುಡಿಸುತ್ತಿದ್ದರು ಕೆಲವರು.

ಮಲಗದ್ದೆಗೆ ಹೋಗಲು ಕಾರವಾರದಿಂದ ನಲವತ್ತು ಕಿಲೋಮೀಟರು ದೂರದಲ್ಲಿರುವ ಮಲ್ಲಾಪುರದ ಬಳಿ ಇರುವ ವಿರ್ಜೆ ಗ್ರಾಮದ ಕಡೆಯಿಂದ ಮತ್ತು ಕುಚೆಗಾರ ಗ್ರಾಮದ ಕಡೆಯಿಂದ ಹಾಗೂ ದೇವಳಮಕ್ಕಿ ಗ್ರಾಮದ ಕಡೆಯಿಂದ ದಟ್ಟವಾದ ಕಾಡಿನೊಳಗೆ ಕಾಲುದಾರಿಗಳಿವೆ. ಅವುಗಳಲ್ಲಿ ಹತ್ತಿರ ಮತ್ತು ಚಾರಣಕ್ಕೆ ಸರಿಯಾದ ದಾರಿ ಎಂದರೆ ವಿರ್ಜೆ ಗ್ರಾಮದ ಕಡೆಯಿಂದ ಹೋಗುವುದೇ ಸೂಕ್ತವೆನಿಸಿ, ವಿರ್ಜೆ ಗ್ರಾಮದ ಗಣಪತಿ ಎಂಬುವವರ ಮಾರ್ಗದರ್ಶನದಂತೆ ಹೊರಟಿದ್ದ ನಮಗೆ, ವಿರ್ಜೆ ಗ್ರಾಮದ ಹಿಂದಿನ ಗುಡ್ಡದ ತುತ್ತತುದಿಯನ್ನೇರಿ ಅಲ್ಲಿಂದ ಇಳಿದು ಮಲಗದ್ದೆ ಗ್ರಾಮ ಸೇರುವಷ್ಟರಲ್ಲಿ ರಾತ್ರಿಯಾಗಿತ್ತು.

ಮೈಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಮ್ಮನ್ನು ಆ ಊರಿನ ಹಿರಿಯರು ಸ್ವಾಗತಿಸಿದರು. ಕುಡಿಯಲು ಬಿಸಿನೀರನ್ನು ನೀಡಿದರು. ಕತ್ತಲು ವಾತಾವರಣದಲ್ಲಿ ನಮಗೇನೂ ಕಾಣಿಸುತ್ತಿರಲಿಲ್ಲ. ಅಷ್ಟರಲ್ಲಿ ಮೊಬೈಲ್‌ಗಳು ಬೆಳಕನ್ನು ನೀಡಿದವು.

ಒಟ್ಟಿನಲ್ಲಿ ವಿದ್ಯುತ್ ಇಲ್ಲದ ಆ ಊರಿನಲ್ಲಿ ಆ ಸಮಯಕ್ಕೆ ಹೊಂದಿಕೊಳ್ಳಲು ನಮಗೆ ಸಮಯ ಬೇಕಾಯ್ತು. ಇನ್ನು ಕೆಲವರು ಅಂಗಾತ ಮಲಗಿ ಆಯಾಸವನ್ನು ನೀಗಿದರು. ತದನಂತರ ಊಟ ಮುಗಿಸಿ ಬೆಳಿಗ್ಗೆ ಬೇಗನೇ ಎದ್ದು ಇಲ್ಲಿಂದ ಮಲಗದ್ದೆ ಗುಡ್ಡವನ್ನು ಏರಬೇಕೆಂಬ ಕಾರಣ ನೀಡಿ ಮಲಗಿದರು.

ಅರುಣೋದಯಕ್ಕೆ ಮೊದಲೇ ಎಲ್ಲರೂ ಮಲಗದ್ದೆಯ ಗುಡ್ಡವನ್ನೇರುವ ತವಕದಲ್ಲಿ ಚಳಿಯನ್ನು ಮರೆತೇಬಿಟ್ಟರು. ರಮ್ಯ ಮತ್ತು ದುರ್ಗಮವಾದ ದಾರಿಯನ್ನು ಸಾಗುತ್ತಾ ಸೂರ್ಯೋದಯವನ್ನು ಆ ಗುಡ್ಡದಿಂದಲೇ ನೋಡಬೇಕೆಂಬ ಆಸೆಯಿಂದ ದಾಪುಗಾಲು ಹಾಕಿ ಎತ್ತರದ ಆ ಗುಡ್ಡವನ್ನು ತಲುಪಿದಾಗ ನಮ್ಮ ಸಂತೋಷಕ್ಕೆ ಎಣೆಯೇ ಇಲ್ಲವಾಗಿತ್ತು.

ವ್ಹಾ... ಎಂಥ ಸೀನರಿ..! ಎಷ್ಟೊಂದು ಮನೋಹರ! ಎಂಬ ಹರ್ಷೋದ್ಗಾರ ಗಗನ ಮುಟ್ಟುತ್ತಿತ್ತು. ಕೆಲವರು ಗುಡ್ಡದ ತುದಿಯಲ್ಲಿ ಬಿದ್ದು ಹೊರಳಾಡಿದರು, ಕೆಲವರು ಸೂರ್ಯೋದಯವನ್ನು ನೋಡಿ ಮೂಕವಿಸ್ಮಿತರಾದರು. ಈ ಸುಂದರ ಸೂರ್ಯೋದಯದಲ್ಲಿ ಎಲ್ಲರೂ ಸೇರಿ ಸೂರ್ಯನಮಸ್ಕಾರಗಳನ್ನು ಮಾಡೋಣವೆಂದು ನಮ್ಮೊಡನೆ ಬಂದಿದ್ದ ಯೋಗಗುರುಗಳೊಬ್ಬರು ನೀಡಿದ ಸಲಹೆಗೆ, ಸಹಮತ ವ್ಯಕ್ತಪಡಿಸಿ ಸೂರ್ಯನಮಸ್ಕಾರ, ಪ್ರಾಣಾಯಾಮಗಳನ್ನು ಮಾಡಿ ಕೃತಾರ್ಥರಾದರು.

ಬಿಡಲೊಲ್ಲದ ಮನಸ್ಸಿನಿಂದ ಆ ಸ್ಥಳ ಬಿಟ್ಟಾಗ ಸೂರ್ಯ ಹತ್ತು ಗಂಟೆಯನ್ನೇರಿದ್ದ, ಕೆಳಗೆ ಮಲಗದ್ದೆ ಗ್ರಾಮವನ್ನು ಸೇರಿದಾಗ ಹನ್ನೊಂದು ಗಂಟೆ ಅಲ್ಲಿನ ಗ್ರಾಮದೇವತೆಯ ದೇವಸ್ಥಾನ ದರ್ಶನ ಮಾಡಿ ಕೆಳಗಿಳಿದು ಬಂದಾಗ ಈ ಹಳ್ಳಿ ಇಷ್ಟೊಂದು ರಮ್ಯ ತಾಣದಲ್ಲಿದೆಯೇ...? ಎನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT