ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದಿಂದ ದೂರಸರಿದ ಕಂಚಿಕೇರಿ ಶಿವಣ್ಣ

‘ಭೌಮಾಸುರ’ ನಾಟಕದಲ್ಲಿ ಬಾಲಪಾತ್ರ ಮಾಡುವ ಮೂಲಕ ರಂಗಪ್ರವೇಶ
Last Updated 9 ಮಾರ್ಚ್ 2017, 5:03 IST
ಅಕ್ಷರ ಗಾತ್ರ
ದಾವಣಗೆರೆ: ಹಿರಿಯ ರಂಗಚೇತನ ಕಂಚಿಕೇರಿ ಶಿವಣ್ಣ ಇನ್ನಿಲ್ಲ. ಎರಡು ತಿಂಗಳ ಹಿಂದೆಯಷ್ಟೇ ಕರ್ನಾಟಕ ನಾಟಕ ಅಕಾಡೆಮಿಯು ದಾವಣಗೆರೆಯಲ್ಲಿ ಶಿವಣ್ಣನವರ ಜೀವಮಾನದ ರಂಗಸಾಧನೆಗಳ ಕುರಿತು ಅಭಿನಂದನಾ ಸಮಾರಂಭ ಏರ್ಪಡಿಸಿ  ವಿಚಾರ ಸಂಕಿರಣ, ಅವರ ಕುರಿತು ಪುಸ್ತಕ ಬಿಡುಗಡೆ ಮಾಡಿತ್ತು.
 
ತಮ್ಮ ಶ್ರೀಜಯಲಕ್ಷ್ಮಿ ನಾಟಕ ಸಂಘಕ್ಕೆ ಮುಂದಿನ ವರ್ಷ ನೂರು ತುಂಬುವ ಶತಮಾನದ ಸಂಭ್ರಮ, ಅದಕ್ಕೆ ಮೊದಲು ನನಗೆ ಅಭಿನಂದನೆಯ ಸಂಭ್ರಮ ಎಂದು ಸಂತಸ ತುಂಬಿ ಮಾತನಾಡಿದ ಅಭಿಜಾತ ರಂಗನಟ, ವೃತ್ತಿರಂಗಭೂಮಿಯ ಗಣಕ ಯಂತ್ರವೇ ಆಗಿದ್ದ ಕಂಚಿಕೇರಿ ಶಿವಣ್ಣ ಇಷ್ಟು ಬೇಗ ರಂಗಭೂಮಿಯಿಂದ ದೂರಾಗುತ್ತಾರೆಂದು ಅಂದು ಅನಿಸಿರಲಿಲ್ಲ.
 
ತನ್ನ ತಾತ ಕಟ್ಟಿ ಬೆಳೆಸಿದ (1918) ಶ್ರೀಜಯಲಕ್ಷ್ಮಿ ನಾಟಕ ಕಂಪೆನಿಯಲ್ಲಿ ‘ಭೌಮಾಸುರ’ ನಾಟಕದಲ್ಲಿ ಬಾಲಪಾತ್ರ ಮಾಡುವ ಮೂಲಕ ಶಿವಣ್ಣ ರಂಗಪ್ರವೇಶ ಮಾಡಿದ್ದರು. ‘ನಾನು ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದ ವನೆಂದು ಹೆಮ್ಮೆಯಿಂದ ಹೇಳುತ್ತಿದ್ದರು’ ಶಿವಣ್ಣ. ಆದರೆ, ಅದು ಬಹಳ ಕಾಲ ಉಳಿಯಲಿಲ್ಲ. 1950ರ ಸುಮಾರಿಗೆ ನಾಟಕ ಕಂಪೆನಿ ಅಗ್ನಿಗೆ ಆಹುತಿ ಯಾಯಿತು. ಆಮೇಲೆ ಶಿವಣ್ಣ ಮತ್ತು ಅವರ ತಂದೆ ಬಸವಣ್ಣೆಪ್ಪ (ಶ್ರೇಷ್ಠ ಹಾರ್ಮೋನಿಯಂ ಪಟು) ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದಕ್ಕಾಗಿ ಹೊಲ, ಮನೆ ಮಾರುವಂತಾಯಿತು. 
 
ಜಯಲಕ್ಷ್ಮಿ ನಾಟಕ ಸಂಘ ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಹೆಸರಾದುದು. ಮಹಾರಾಷ್ಟ್ರದ ಅಕ್ಕಲಕೋಟೆ, ಸೊಲ್ಲಾಪುರಗಳಲ್ಲಿ ಜಯಭೇರಿ ಬಾರಿಸಿ ಬೆಳ್ಳಿಹಬ್ಬ ಆಚರಿಸುತ್ತದೆ. ಶಿವಣ್ಣನವರು 1996ರಲ್ಲಿ ಜಯಲಕ್ಷ್ಮಿ ನಾಟಕ ಸಂಘದ ವಜ್ರ ಮಹೋತ್ಸವ ಆಚರಿಸಿ ‘ರಂಗ ಕಂಕಣ’ ಎಂಬ ನೆನಪಿನ ಸಂಚಿಕೆ ಬಿಡುಗಡೆ ಮಾಡಿದಾಗ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ‘ಗುಬ್ಬಿ ಕಂಪೆನಿ ಬಿಟ್ಟರೆ ಜಯಲಕ್ಷ್ಮಿ ನಾಟಕ ಕಂಪೆನಿ ಭಾರತದಲ್ಲೇ ಅತ್ಯಂತ ಹಿರಿದಾದ
ನಾಟಕ ಕಂಪೆನಿ’ ಎಂದು ಕೊಂಡಾಡುತ್ತಾರೆ.
 
ಅಂದು ಶಿವಣ್ಣ ಅವರ ಕುಟುಂಬ ‘ಅಮೋಘವರ್ಷ ನೃಪತುಂಗ’ ನಾಟಕ ಪ್ರದರ್ಶನ ಮಾಡುತ್ತದೆ. ಈ ನಾಟಕದಲ್ಲಿ ಶಿವಣ್ಣ ಅವರ ತಮ್ಮ ಮಂಜುನಾಥ, ಸೊಸೆ ರಾಜೇಶ್ವರಿ, ಮಕ್ಕಳಾದ ನಟರಾಜ, ಕೊಟ್ರೇಶ್‌, ಮಲ್ಲಿಕಾರ್ಜುನ ಹೀಗೆ ಅವರ ಕುಟುಂಬದ ಸದಸ್ಯರೆಲ್ಲರೂ  ನಾಟಕದ ಪಾತ್ರಧಾರಿಗಳು. ಅವರದು ಅಕ್ಷರಶಃ ರಂಗ ಕುಟುಂಬ.
 
ಮೃಢದೇವ ಗವಾಯಿ ಕಂಪೆನಿ, ಏಣಗಿ ಬಾಳಪ್ಪ ಕಂಪೆನಿ, ಓಬಳೇಶ ಕಂಪೆನಿ, ಗುಡಗೇರಿ ಕಂಪೆನಿ, ಹಾಲಸಿದ್ದೇಶ್ವರ ಕಂಪೆನಿ... ಹೀಗೆ ತಮ್ಮ ಸ್ವಂತ ನಾಟಕ  ಕಂಪೆನಿಯೂ ಸೇರಿದಂತ ಅನೇಕ ಕಂಪೆನಿಗಳಲ್ಲಿ ಶಿವಣ್ಣ ತಮ್ಮ ಅಭಿನಯ ಚತುರತೆ ಮೆರೆದವರು. ಭೌಮಾಸುರ, ಶಾಂತಕುಮಾರಿ, ಚನ್ನಮ್ಮನ ದಂಡಿ, ಗಾಳಿಪಟದ ಮಲ್ಲಮ್ಮ, ರಾಮ ಕೊರವಂಜಿ–ಕೃಷ್ಣ ಕೊರವಂಜಿ ಇವು ಶಿವಣ್ಣನವರ ಕಂಪೆನಿಯ ಅಪರೂಪದ ನಾಟಕಗಳು. ಶಿವಣ್ಣ ಅವರು ಅಭಿನಯಿಸಿದ ಪಾತ್ರಗಳು ನೂರಾರು. ‘ಹೆಳವನಕಟ್ಟೆ ಗಿರಿಯಮ್ಮ’ ಇದು ಅವರು ಬರೆದ ಏಕೈಕ ನಾಟಕ.
 
‘ಮುಂಡೇಮಗ’, ‘ಗಾಂಧಿಟೋಪಿ’, ‘ಖಾದಿಸೀರೆ’, ‘ಹರಗಿರಿಜೆ’, ‘ಶರಣ ಬಸವೇಶ್ವರ ಮಹಾತ್ಮೆ ’ ಈ ನಾಟಕಗಳ ಅವರ ಪಾತ್ರ ಅವರಿಗೆ ಅಕ್ಷರಶಃ ತಾರಾಪಟ್ಟ ತಂದುಕೊಟ್ಟವು. ಕಂಪೆನಿಯಲ್ಲಿ ಕಲೆಕ್ಷನ್ ಕಮ್ಮಿಯಾದಾಗ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಸಿದ ಹೆಗ್ಗಳಿಕೆ ಶಿವಣ್ಣನವರದು.  
 
ರಂಗಭೂಮಿಯ ದೈತ್ಯ ಪ್ರತಿಭೆ ಎಲಿವಾಳ ಸಿದ್ದಯ್ಯ ಅವರ ಮಗಳು ಕಮಲಮ್ಮ ಅವರನ್ನು ಪ್ರೀತಿಸಿದ ಶಿವಣ್ಣ ಅವರನ್ನೇ ಬಾಳಸಂಗಾತಿ ಮಾಡಿಕೊಂಡರು. ಶಿವಣ್ಣ ಅವರ ರಂಗಸಾಧನೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಸರ್ಕಾರ ವೃತ್ತಿರಂಗಭೂಮಿಗೆ ಮೀಸಲಾದ ರೆಪರ್ಟರಿ ಸ್ಥಾಪಿಸಬೇಕು ಎಂಬುದು ಶಿವಣ್ಣನವರ ಸದಿಚ್ಛೆಯಾಗಿತ್ತು. 
 
ಕಂಚಿಕೇರಿ ಶಿವಣ್ಣ ಇನ್ನಿಲ್ಲ
ದಾವಣಗೆರೆ:
ಹಿರಿಯ ರಂಗಕರ್ಮಿ, ನಗರದ ಕೊಂಡಜ್ಜಿ ರಸ್ತೆಯ ಎಸ್‌.ಎಂ.ಕೃಷ್ಣ ನಗರದ ನಿವಾಸಿ ಕಂಚಿಕೇರಿ ಶಿವಣ್ಣ (82) ಬುಧವಾರ ಬೆಳಿಗ್ಗೆ ನಿಧನರಾದರು.
ಅವರಿಗೆ ಪುತ್ರಿ, ಮೂವರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ನೆರವೇರಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT