ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ, ಚರ್ಮಕ್ಕಾಗಿ ವನ್ಯಜೀವಿಗಳ ಹತ್ಯೆ

ಮಲೆನಾಡಿನ ಅರಣ್ಯದಲ್ಲಿ ಅವ್ಯಾಹತವಾಗಿ ಸಾಗಿದ ಕಳ್ಳಬೇಟೆ l ಹುಲಿ, ಚಿರತೆಗಳ ಜೀವಕ್ಕೂ ಕುತ್ತು
Last Updated 11 ಮಾರ್ಚ್ 2017, 5:10 IST
ಅಕ್ಷರ ಗಾತ್ರ
ಶಿವಮೊಗ್ಗ: ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು ಜಾರಿಯಲ್ಲಿ ಇದ್ದರೂ, ಮಲೆನಾಡಿನ ದಟ್ಟ ಕಾಡು ಹಾಗೂ ಕಾಡಿನಂಚಿನ ಪ್ರದೇಶಗಳಲ್ಲಿ ಪ್ರಾಣಿಗಳ ಹತ್ಯೆ ಅವ್ಯಾಹತವಾಗಿ ಸಾಗಿದೆ.
 
ಕೆಲವು ವರ್ಷಗಳ ಹಿಂದೆ ಶಿವಮೊಗ್ಗ ವಿಭಾಗ ವ್ಯಾಪ್ತಿಯಲ್ಲಿ 3,57,250 ಹೆಕ್ಟೇರ್‌ ಅರಣ್ಯ ಪ್ರದೇಶವಿತ್ತು. ಜನವಸತಿ, ಜಲಾಶಯಗಳು, ಪುನರ್‌ವಸತಿ, ಅರಣ್ಯ ಸಾಗುವಳಿ, ಬಗರ್‌ಹುಕುಂ ಕೃಷಿ, ಗಣಿಗಾರಿಕೆ ಮತ್ತಿತರ ಕಾರಣಗಳಿಗಾಗಿ ಶೇ 50ರಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಒತ್ತುವರಿಗೆ ಸಂಬಂಧಿಸಿದಂತೆ ಇದುವರೆಗೂ 55 ಸಾವಿರ ಪ್ರಕರಣಗಳು ದಾಖಲಾಗಿವೆ. ಕಾಡು ನಾಶದ ಪರಿಣಾಮ ಹಲವು ಪ್ರಾಣಿ, ಪಕ್ಷಿಗಳ ಜೀವಕ್ಕೂ ಕುತ್ತು ಬಂದಿದೆ.
 
ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯ, ಭದ್ರಾ ಅಭಯಾರಣ್ಯ, ಮೂಕಾಂಬಿಕಾ, ಕೊಡಚಾದ್ರಿ, ವರಾಹಿ, ಸೋಮೇಶ್ವರ ಅರಣ್ಯ, ಉಂಬ್ಳೇಬೈಲ್, ಜೋಗ ಅರಣ್ಯ ವ್ಯಾಪ್ತಿಯಲ್ಲಿ ಇಂದಿಗೂ ಸಾಕಷ್ಟು ಪ್ರಾಣಿ, ಪಕ್ಷಿಗಳು ನೆಲೆಸಿವೆ. ಹುಲಿ, ಚಿರತೆ, ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ, ಕಾಳಿಂಗ ಸರ್ಪ, ನರಿ, ತೋಳ, ಕಾಡುಹಂದಿ ಮತ್ತಿತರ ಪ್ರಾಣಿಗಳು ವಾಸಿಸುತ್ತಿವೆ. 
 
ಪಶ್ಚಿಮಘಟ್ಟದ ದಟ್ಟ ಕಾನನ 325 ತಳಿಯ ಪ್ರಾಣಿಗಳು, 129 ಪ್ರಕಾರದ ಉಭಯವಾಸಿಗಳು, 39 ತಳಿಯ ಸಸ್ತನಿಗಳು, ವಿನಾಶದ ಹಂಚಿನ ಹಲವು ಪ್ರಾಣಿ, ಪಕ್ಷಿಗಳ ತಾಣವಾಗಿದೆ. ಕಾಡಿನ ನಾಶ, ಕಳ್ಳಬೇಟೆಯ ಪರಿಣಾಮ ಪ್ರಾಣಿ, ಪಕ್ಷಿಗಳ ಸಂಕುಲ ಸಂಕಷ್ಟಕ್ಕೆ ಸಿಲುಕಿವೆ.
 
ನಡೆಯದ ವನ್ಯಜೀವಿಗಳ ಸಮೀಕ್ಷೆ: ಇದುವರೆಗೂ ಜಿಲ್ಲೆಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಇರುವ ಪ್ರಾಣಿ ಪಕ್ಷಿಗಳ ಗಣತಿ ಕಾರ್ಯ ನಡೆದಿಲ್ಲ. ಭದ್ರಾ ಅಭಯಾರಣ್ಯದಲ್ಲಿ ಮಾತ್ರ ಇದುವರೆಗೆ 28 ಹುಲಿ, 300ಕ್ಕೂ ಹೆಚ್ಚು ಆನೆ, ಸಾವಿರಾರು ಜಿಂಕೆಗಳಿವೆ ಎಂದು ಲೆಕ್ಕ ಹಾಕಲಾಗಿದೆ. ಉಳಿದ ಅರಣ್ಯ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ. 
 
ಪ್ರಾಣಿಗಳ ಹತ್ಯೆ ಅವ್ಯಾಹತ: ಜಿಲ್ಲೆಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಾಣಿ, ಪಕ್ಷಿಗಳ ಹತ್ಯೆ ಅವ್ಯಾಹತವಾಗಿ ಸಾಗಿದೆ. ಕಾಡುಹಂದಿ, ಜಿಂಕೆ, ಕಡವೆಗಳನ್ನು ಮಾಂಸ, ಚರ್ಮಕ್ಕಾಗಿ ನಿರಂತರ ಹತ್ಯೆ ಮಾಡಲಾಗುತ್ತಿದೆ. ಗ್ರಾಮಗಳ ಸಮೀಪ ನುಗ್ಗಿ ಜಾನುವಾರು ತಿನ್ನುತ್ತವೆ. ಕಳ್ಳಬೇಟೆಗೆ ಅಡ್ಡಿಯಾಗಿವೆ ಎನ್ನುವ ಕಾರಣಕ್ಕಾಗಿ ಹುಲಿ, ಚಿರತೆಗಳನ್ನು ವಿಷ ಇಕ್ಕಿ, ಉರುಳು ಹಾಕಿ ಕೊಲ್ಲಲಾಗುತ್ತಿದೆ. ಈಚೆಗೆ ಉಂಬ್ಳೇಬೈಲು ಸಮೀಪ ಎರಡು ಹುಲಿಗಳನ್ನು ಒಂದೇ ಸ್ಥಳದಲ್ಲಿ ಕೊಂದು ಹಾಕಲಾಗಿತ್ತು. ಚರ್ಮ, ಮಾಂಸಕ್ಕಾಗಿ ಜಿಂಕೆ, ಕಡವೆಗಳ ಬೇಟೆ ನಡೆಯುತ್ತಿದೆ. ಆದರೆ, ವರ್ಷಕ್ಕೆ ಒಂದು ಅಥವಾ ಎರಡು ಪ್ರಕರಣ ಮಾತ್ರ ಬಯಲಿಗೆ ಬರುತ್ತಿವೆ. 
 
ಕಲ್ಲುಗಣಿಗಾರಿಕೆ ತಂದ ಕುತ್ತು:  ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಬಾರದು. ಸ್ಫೋಟಕ ಬಳಸುವ ಕಾರಣ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತದೆ ಎಂದು ಪರಿಸರ ತಜ್ಞರು ಎಚ್ಚರಿಸಿದ್ದರೂ, ಹೊಸನಗರ, ತೀರ್ಥಹಳ್ಳಿ ಭಾಗಗಳ ದಟ್ಟ ಅರಣ್ಯ ವ್ಯಾಪ್ತಿಯಲ್ಲೂ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಪರಿಣಾಮ ಪ್ರಾಣಿಗಳು ಸ್ಫೋಟದ ಶಬ್ದಕ್ಕೆ ಬೆದರಿ ಪಲಾಯನ ಮಾಡುತ್ತಿವೆ. ಸೂಕ್ಷ್ಮ ಜೀವಿಗಳು ವಿನಾಶವಾಗುತ್ತಿವೆ.
 
ದಾಖಲಾದ ಪ್ರಕರಣ ಕೇವಲ ಎಂಟು: ವನ್ಯ ಜೀವಿಗಳ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಹತ್ಯೆಗೆ ಸಂಬಂಧಿಸಿದಂತೆ 2010ರಿಂದ ಇಲ್ಲಿಯವರೆಗೆ ದಾಖಲಾದ ಪ್ರಕರಣಗಳು ಕೇವಲ ಎಂಟು. 2010–11ನೇ ಸಾಲಿನಲ್ಲಿ ಒಂದು ಪ್ರಕರಣ ದಾಖಲಾದರೆ, ಮರು ವರ್ಷ ಒಂದೂ ಪ್ರಕರಣ ದಾಖಲಾಗಿರಲಿಲ್ಲ. 2012–13ರಲ್ಲಿ ಒಂದೇ ವರ್ಷ ಮೂರು ಪ್ರಕರಣ ದಾಖಲಾಗಿದ್ದವು.  2014–15ರಲ್ಲಿ ಎರಡು ಪ್ರಕರಣ ನಂತರ ಎರಡು ವರ್ಷ ತಲಾ ಒಂದು ಪ್ರಕರಣ ಮಾತ್ರ ದಾಖಲಾಗಿವೆ.
 
‘ಮಾಂಸಕ್ಕಾಗಿ ಜಿಂಕೆ, ಕಡವೆಗಳನ್ನು ಕೊಲ್ಲುತ್ತಿದ್ದಾರೆ. ಉಂಬ್ಳೇಬೈಲ್‌ ಬಳಿ ಕಂಡು ಬಂದ ಎರಡು ಹುಲಿಗಳನ್ನು ಜನರು ಊರಿಗೆ ನುಗ್ಗುವ ಭಯದಿಂದ ಕೊಂದಿರುವ ಸಾಧ್ಯತೆ ಇದೆ. ಹುಲಿಗಳ ಮೃತದೇಹದ ಭಾಗವನ್ನು ಡೆಹರಾಡೂನ್‌ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಹತ್ಯೆಯ ಕುರಿತು ಮಾಹಿತಿ ದೊರೆಯಲಿದೆ’ ಎನ್ನುತ್ತಾರೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಾಗರಾಜ್.
 
ಐವರ ವಿರುದ್ಧ ಪ್ರಕರಣ ದಾಖಲು
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯ ಗಾಜನೂರು ಬಳಿ ಜಿಂಕೆ ಕೊಂದು ಮಾಂಸ ಪಾಲು ಮಾಡಿಕೊಳ್ಳುತ್ತಿದ್ದ ಗುಂಪಿನ ಮೇಲೆ ಎರಡು ದಿನಗಳ ಹಿಂದೆ ದಾಳಿ ನಡೆಸಿದ  ಸಕ್ರೆಬೈಲು ವನ್ಯಜೀವಿ ವಲಯದ ಸಿಬ್ಬಂದಿ ಇಬ್ಬರನ್ನು ಬಂಧಿಸಿ, ಐದು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿದ್ದಾರೆ.
ಗಾಜನೂರಿನ ಚಂದ್ರು ಜವರಪ್ಪ (40), ವಿನಯಕುಮಾರ್ (30) ಬಂಧಿತ ಆರೋಪಿಗಳು. ರಾಘು, ಶ್ರೀನಿವಾಸ, ಕುಮಾರಪ್ಪ ತಲೆ ಮರೆಸಿಕೊಂಡಿದ್ದಾರೆ.
 
* ಕಾಡಂಚಿನ ಗ್ರಾಮಗಳ ಹತ್ತಿರ ಬರುವ ಜಿಂಕೆಗಳನ್ನು ಗ್ರಾಮಸ್ಥರು ಮಾಂಸದ ಆಸೆಗೆ ಕೊಲ್ಲುತ್ತಾರೆ. ಅವರಿಗೆ ಹತ್ಯೆಯ ಪರಿಣಾಮದ ಅರಿವು ಮೂಡಿಸಲಾಗುತ್ತಿದೆ.
ಕೆ.ಎಚ್‌.ನಾಗರಾಜ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT