ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಆಧಾರಿತ ಶಿಕ್ಷಣ

ಮೂವತ್ತೈದು ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರ ಡಿಪ್ಲೊಮಾ ಕೋರ್ಸ್‌
Last Updated 13 ಮಾರ್ಚ್ 2017, 4:55 IST
ಅಕ್ಷರ ಗಾತ್ರ
ತಾಂತ್ರಿಕ ಶಿಕ್ಷಣ
ಕರ್ನಾಟಕ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕರ್ನಾಟಕ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ (ಡೈರೆಕ್ಟೊರೇಟ್ ಆಫ್ ಟೆಕ್ನಿಕಲ್ ಎಜುಕೇಷನ್-ಡಿಟಿಇ) ಸುಮಾರು ಮೂವತ್ತೈದು ವಿವಿಧ ಕ್ಷೇತ್ರಗಳಲ್ಲಿ ವೃತ್ತಿಪರ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುತ್ತದೆ. ಈ ಕೋರ್ಸ್‌ಗಳ ಪಟ್ಟಿಯನ್ನು ಹಾಗೂ ಶಿಕ್ಷಣ ಸಂಸ್ಥೆಗಳ ಹೆಸರನ್ನು ಡಿಟಿಇ ಜಾಲತಾಣದಲ್ಲಿ ನೋಡಬಹುದು (www.dte.kar.nic.in).  

ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರ, ಸುಮಾರಾಗಿ ಏಪ್ರಿಲ್ ಕೊನೆಯ ಅಥವಾ ಮೇ ಮೊದಲ ವಾರದಲ್ಲಿ ಪ್ರವೇಶಕ್ಕೆ ಅರ್ಜಿಗಳನ್ನು ನೀಡಲಾಗುತ್ತದೆ. ಈ ಕೋರ್ಸ್‌ಗಳನ್ನು ಮುಗಿಸಿದ ವಿದ್ಯಾರ್ಥಿಗಳು ನೇರವಾಗಿ ಉದ್ಯೋಗಕ್ಕೆ ಸೇರಬಹುದು ಇಲ್ಲವೇ, ಗಳಿಸಿದ ಕೌಶಲಗಳನ್ನು ಬಳಸಿಕೊಂಡು ಸ್ವಂತ ಉದ್ದಿಮೆಯನ್ನು ಸ್ಥಾಪಿಸಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಯೋಚಿಸಬಹುದು.   
 
ಕೈಗಾರಿಕಾ ತರಬೇತಿ
ರಾಜ್ಯ ಸರ್ಕಾರದ ಉದ್ಯೋಗ ಮತ್ತು ತರಬೇತಿ ನಿರ್ದೇಶನಾಲಯದ ವತಿಯಿಂದ ನಡೆಸಲಾಗುತ್ತಿರುವ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ (ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್- ಐಟಿಐ) ಒಂದು ಅಥವಾ ಎರಡು ವರ್ಷದ ವೃತ್ತಿ ತರಬೇತಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಡ್ರಾಫ್ಟ್ಸಮನ್ (ಸಿವಿಲ್ ಅಥವಾ ಮೆಕ್ಯಾನಿಕಲ್), ಫೌಂಡ್ರಿಮನ್, ಮೇಸನ್, ಪ್ಲಂಬರ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಫಿಟ್ಟರ್, ಫೈರ್‌ಮನ್, ಎಲೆಕ್ಟ್ರೀಷಿಯನ್, ಎಲೆಕ್ಟ್ರೋ ಪ್ಲೇಟರ್, ಮುಂತಾದ ಹಲವಾರು ವೃತ್ತಿಗಳಿಗೆ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಕುಶಲಕರ್ಮಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ.

ಸರ್ಕಾರದ ಎಲ್ಲ ತಾಂತ್ರಿಕ ಇಲಾಖೆಗಳಲ್ಲಿ ಖಾಲಿಯಾಗುವ ಬಹುತೇಕ ಹುದ್ದೆಗಳಿಗೆ ಐಟಿಐ ತರಬೇತಿ ಪಡೆದವರಿಗೇ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ, ರೈಲ್ವೇ ಇಲಾಖೆ, ಸಾರಿಗೆ ಇಲಾಖೆ, ರಕ್ಷಣಾ ಇಲಾಖೆಗಳಲ್ಲಿ ಇಂಥ ಉದ್ಯೋಗಾವಕಾಶಗಳು ಹೆಚ್ಚು. ಖಾಸಗಿ ವಲಯದಲ್ಲಿ ಕಟ್ಟಡ ನಿರ್ಮಾಣ, ಆಟೋಮೊಬೈಲ್, ಟೆಲಿಕಾಮ್ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗದ ಅವಕಾಶಗಳು ಕಂಡು ಬರುತ್ತವೆ. ಕೆಲವು ಹೊರದೇಶಗಳಲ್ಲಿಯೂ ಇಂಥ ಕುಶಲಕರ್ಮಿಗಳಿಗೆ ಉದ್ಯೋಗದ ವಿಪುಲ ಅವಕಾಶಗಳಿವೆ.
 
ಪ್ಯಾರಾ ವೈದ್ಯಕೀಯ ಕೋರ್ಸ್‌ಗಳು
ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳಾಗಿದ್ದು, ಅಲ್ಲಿ ವೈದ್ಯರಿಗೆ ಮತ್ತು ನರ್ಸ್‌ಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೆರವಾಗುವಂಥ ಹಲವು ಬಗೆಯ ಕುಶಲಕರ್ಮಿಗಳ ಅಗತ್ಯವಿದೆ. ರೋಗಗಳನ್ನು ಪತ್ತೆ ಮಾಡುವ ವಿಧಾನ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಆಧುನಿಕ ಉಪಕರಣಗಳ ಬಳಕೆ, ಮುಂತಾದ ಕ್ಷೇತ್ರಗಳಲ್ಲಿ ನುರಿತ ಕುಶಲಕರ್ಮಿಗಳಿಗೆ ಹೆಚ್ಚು ಬೇಡಿಕೆ ಇದೆ. ಈ ರೀತಿಯ ಕುಶಲಕರ್ಮಿಗಳಿಗೆ ತರಬೇತಿ ನೀಡುವ ವೃತ್ತಿಪರ ಕೋರ್ಸ್‌ಗಳಿಗೆ ಪ್ಯಾರಾ ಮೆಡಿಕಲ್ ಕೋರ್ಸ್‌ಗಳು ಎಂದು ಕರೆಯಲಾಗುತ್ತದೆ.

ಹತ್ತನೇ ತರಗತಿಯ ನಂತರ ಎರಡು ಅಥವಾ ಮೂರು ವರ್ಷಗಳ ಅಧ್ಯಯನ ಮತ್ತು ತರಬೇತಿ ಪಡೆದು ನಿರ್ದಿಷ್ಟ ಕ್ಷೇತ್ರದಲ್ಲಿ ಟೆಕ್ನೀಷಿಯನ್ ಆಗಿ ಉದ್ಯೋಗಕ್ಕೆ ಸೇರಬಹುದು. ರಾಜ್ಯದ ನೂರೈವತ್ತಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಸಲಾಗುವ ಈ ವೃತ್ತಿಪರ ಕೋರ್ಸ್‌ಗಳನ್ನು ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್ ನಿಯಂತ್ರಿಸುತ್ತದೆ. 
 
ಹತ್ತನೇ ತರಗತಿಯ ನಂತರ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ಗಳಲ್ಲಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಮೆಡಿಕಲ್‌ರೆಕಾರ್ಡ್ಸ್ ಟೆಕ್ನಾಲಜಿ, ಎಕ್ಸ್‌ರೇ ಟೆಕ್ನಾಲಜಿ, ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಡಯಾಲಿಸಿಸ್ ಟೆಕ್ನಾಲಜಿ, ಡೆಂಟಲ್ ಮೆಕ್ಯಾನಿಕ್, ಡೆಂಟಲ್ ಮೆಕ್ಯಾನಿಕ್, ಹೆಲ್ತ್ ಇನ್ಸ್‌ಪೆಕ್ಟರ್ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುತ್ತದೆ.
 
ಒಂದು ವೇಳೆ ಪದವಿಪೂರ್ವ ಶಿಕ್ಷಣದ ನಂತರ ಪ್ರವೇಶ ಪಡೆಯುವುದಾದರೆ, ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಬಹುದು. ಸಾಮಾನ್ಯವಾಗಿ, ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಪ್ರವೇಶದ ಪ್ರಕಟಣೆ ಹೊರಡಿಸಲಾಗುತ್ತದೆ. ಹತ್ತನೇ ಅಥವಾ ಹನ್ನೆರಡನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರ್‍್ಯಾಂಕ್‌ ಪಟ್ಟಿ ಪ್ರಕಟಿಸಲಾಗುತ್ತದೆ. ಕೌನ್ಸಿಲಿಂಗ್‌ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೀಸಲಾತಿಯ ಅವಕಾಶವೂ ಇದೆ. 
 
ಇವುಗಳಲ್ಲದೆ ನರ್ಸಿಂಗ್ ಸಹಾಯಕ, ಪ್ಲಾಸ್ಟರ್ ಟೆಕ್ನೀಷಿಯನ್, ಇಸಿಜಿ/ಇಇಜಿ ಟೆಕ್ನೀಷಿಯನ್ ಮುಂತಾದ ಡಿಪ್ಲೊಮಾ  ಕೋರ್ಸ್‌ಗಳನ್ನು ಕೆಲವು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಬೆಂಗಳೂರಿನ ಹಾಸ್ಮಟ್ ಆಸ್ಪತ್ರೆಯಲ್ಲಿ ಪ್ಲಾಸ್ಟರ್ ಟೆಕ್ನೀಷಿಯನ್ ಕೋರ್ಸ್ ಲಭ್ಯವಿದೆ. ಹಾಗೆಯೇ, ಲಯನ್ಸ್ ಕಣ್ಣಾಸ್ಪತ್ರೆಯಲ್ಲಿ ಆಫ್ತಾಲ್‌ಮಿಕ್ ಟೆಕ್ನೀಷಿಯನ್ ಕೋರ್ಸ್ ಲಭ್ಯವಿದೆ.
 
ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಡಯಾಲಿಸಿಸ್ ಕೇಂದ್ರಗಳಲ್ಲಿ, ಬ್ಲಡ್ ಬ್ಯಾಂಕ್‌ಗಳಲ್ಲಿ ಇಂಥ ನುರಿತ ಕುಶಲಕರ್ಮಿಗಳಿಗೆ ಉದ್ಯೋಗದ ವಿಪುಲ ಅವಕಾಶಗಳಿವೆ. 
 
ಈ ರೀತಿಯ ಕೋರ್ಸ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕರ್ನಾಟಕ ರಾಜ್ಯ ಪ್ಯಾರಾಮೆಡಿಕಲ್ ಬೋರ್ಡ್‌ನ ಜಾಲತಾಣದಿಂದ (www.pmbkarnataka.org) ಪಡೆಯಬಹುದು. ಈ ರೀತಿಯ ಡಿಪ್ಲೊಮಾ  ತರಬೇತಿಯ ನಂತರವೂ ಸಂಬಂಧಿಸಿದ ಕ್ಷೇತ್ರಗಳಲ್ಲಿ ಪದವಿ ಅಧ್ಯಯನವನ್ನು ಮುಂದುವರೆಸುವ ಸಾಧ್ಯತೆಗಳೂ ಇವೆ. ಇಚ್ಛಿಸಿದಲ್ಲಿ, ಆ ಆಯ್ಕೆಯನ್ನೂ ಮುಕ್ತವಾಗಿ ಇಟ್ಟುಕೊಳ್ಳಬಹುದು.
 
ಇತರ ಉದ್ಯೋಗಾವಕಾಶಗಳು
ಹತ್ತನೇ ತರಗತಿ ಅಥವಾ ತತ್ಸಮಾನ ಕನಿಷ್ಟ ಅರ್ಹತೆ ಇರುವ ಹಲವಾರು ವೃತ್ತಿ ಅವಕಾಶಗಳು ವಿದ್ಯಾರ್ಥಿಗಳ ಎದುರಿಗೆ ಇವೆ. ಇಂಗ್ಲಿಷ್ ಮತ್ತು ಮೆಂಟಲ್ ಎಬಿಲಿಟಿ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಜ್ಯದ ಎಂಪ್ಲಾಯಿಮೆಂಟ್‌ ಎಕ್ಸ್‌ಚೇಂಜ್ ಇಲಾಖೆಯಲ್ಲಿ ನಿಮಗೆ ಇಂಥ ಮಾಹಿತಿ ದೊರಕುವ ಸಾಧ್ಯತೆ ಇದೆ. ಇಲ್ಲವೆ, ಸರ್ಕಾರಿ ಸಂಸ್ಥೆಗಳ ಜಾಲತಾಣಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.
 
ಮಹಿಳೆಯರಿಗಿರುವ ವೃತ್ತಿ ತರಬೇತಿಗಳು
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಪ್ರಾದೇಶಿಕ ಮಹಿಳಾ ವೃತ್ತಿ ತರಬೇತಿ ಸಂಸ್ಥೆ (ರೀಜನಲ್ ವೊಕೇಶನಲ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್‌್ ಫಾರ್ ವಿಮೆನ್) ಮಹಿಳೆಯರಿಗಾಗಿಯೇ ವಿಶಿಷ್ಟ ತರಬೇತಿ ಕೋರ್ಸ್‌ಗಳನ್ನು ನಡೆಸುತ್ತದೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಕಿದ್ವಾಯ್ ಆಸ್ಪತ್ರೆಯ ಬಳಿ ಈ ಸಂಸ್ಥೆಯ ಕಚೇರಿ ಇದೆ. ಹದಿನೈದು ವಯಸ್ಸು ದಾಟಿದ ವಿದ್ಯಾರ್ಥಿನಿಯರು ಇಲ್ಲಿ ತರಬೇತಿ ಪಡೆಯಬಹುದು. ಕೋರ್ಸ್‌ಗಳಿಗೆ ಅನುಗುಣವಾಗಿ ಯಾವುದೇ ವಯಸ್ಸಿನ ಮಹಿಳೆಯರು ಇಲ್ಲಿ ತರಬೇತಿಗೆ ನೋಂದಾಯಿಸಿಕೊಳ್ಳಬಹುದು.
 
ಹತ್ತನೇ ತರಗತಿ ಪಾಸಾದವರಿಗೆ ಇಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್, ಸೆಕ್ರೆಟೇರಿಯಲ್ ಪ್ರಾಕ್ಟೀಸ್, ಡಿಟಿಪಿ ಆಪರೇಟರ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಆರ್ಕಿಟೆಕ್ಚುರಲ್ ಡ್ರಾಫ್ಟ್ಸ್‌ಮನ್‌ಶಿಪ್, ಡ್ರೆಸ್ ಮೇಕಿಂಗ್, ಇಂಟೀರಿಯರ್ ಡಿಸೈನ್ ಅಂಡ್ ಡೆಕೊರೇಷನ್, ಹಾಗೂ ಫ್ಯಾಷನ್ ಡಿಸೈನ್ ಅಂಡ್ ಟೆಕ್ನಾಲಜಿ, ಈ ಎಂಟು ವಿವಿಧ ಕೋರ್ಸ್‌ಗಳಲ್ಲಿ ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತದೆ. ಇವೆಲ್ಲವೂ ಕೇವಲ ಒಂದು ವರ್ಷದ ಅವಧಿಯ ಕೋರ್ಸ್‌ಗಳು.

ಪರಿಶಿಷ್ಟರಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ. ಈ ಕೋರ್ಸ್‌ಗಳು ಪ್ರಸ್ತುತ ಕೇಂದ್ರ ಸರ್ಕಾರದ ಸ್ಕಿಲ್ ಇಂಡಿಯಾ ಕಾರ್ಯಕ್ರಮದ ವ್ಯಾಪ್ತಿಯನ್ನು ಹೊಂದಿದ್ದು, ಸಿಟಿಎಸ್ (ಕ್ರಾಫ್ಟ್ಸ್‌ಮನ್ ಟ್ರೈನಿಂಗ್ ಸ್ಕೀಮ್) ಯೋಜನೆಯ ಅಡಿಯಲ್ಲಿ ಬಡತನ ಹಾಗೂ ಅರ್ಹತೆ ಆಧಾರದ ಮೇಲೆ ಸ್ಟೈಪೆಂಡ್ ಹಾಗೂ ಸ್ಕಾಲರ್‌ಶಿಪ್ ಸೌಲಭ್ಯವನ್ನು ಹೊಂದಿವೆ.

ಸಂಸ್ಥೆಯು ಹಲವಾರು ಉದ್ದಿಮೆಗಳ ಜೊತೆ ಸಂಪರ್ಕ ಹೊಂದಿರುವುದರಿಂದ ಕೋರ್ಸ್ ಮುಗಿಯುತ್ತಿದ್ದಂತೆ ಅರ್ಹ ವಿದ್ಯಾರ್ಥಿನಿಯರಿಗೆ ನೇರವಾಗಿ ಉದ್ಯೋಗ ಅವಕಾಶ ಪಡೆಯಲು ನೆರವಾಗುತ್ತದೆ. ಇಚ್ಛಿಸಿದಲ್ಲಿ, ಸ್ವಂತ ಉದ್ಯೋಗ ಸ್ಥಾಪಿಸಿ ಸ್ವಾವಲಂಬಿಯಾಗಲೂ ಈ ಕೋರ್ಸ್‌ಗಳು ದಾರಿ ಮಾಡಿಕೊಡಬಲ್ಲವು.
 
ಇದಲ್ಲದೆ, ಪ್ರಾದೇಶಿಕ ವೃತ್ತಿ ಮಹಿಳಾ ತರಬೇತಿ ಸಂಸ್ಥೆ ಅನೇಕ ಅಲ್ಪಾವಧಿ ಕೋರ್ಸ್‌ಗಳನ್ನೂ ಸಹ ನಡೆಸುತ್ತಿದೆ. ಇವು ನೇರವಾಗಿ ಉದ್ಯೋಗಕ್ಕೆ ಪೂರಕವಾದ ಕೋರ್ಸ್‌ಗಳು. ಇದರಲ್ಲಿ ಕೆಲವನ್ನು ಹತ್ತನೇ ತರಗತಿಯಲ್ಲಿ ನಪಾಸಾದವರೂ ಆಯ್ಕೆ ಮಾಡಿಕೊಳ್ಳಬಹುದು.

ಉದಾಹರಣೆಗೆ, ಹೊಲಿಗೆ ಗೊತ್ತಿರುವವರು ಅಥವಾ ಬ್ಯೂಟೀಷಿಯನ್ ಕೆಲಸ ಮಾಡುತ್ತಿರುವವರು ತಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಾವೀಣ್ಯ ಪಡೆಯಲು ಇಲ್ಲಿ ಅಲ್ಪಾವಧಿ ಕೋರ್ಸ್‌ಗಳಿವೆ. ಹಾಗೆಯೇ, ಇಲೆಕ್ಟ್ರಾನಿಕ್ಸ್, ಆರ್ಕಿಟೆಕ್ಚರ್, ಟ್ಯಾಲಿ ಮತ್ತಿತರ ವಿಷಯಗಳಲ್ಲಿ ಅಲ್ಪಾವಧಿ ಕೋರ್ಸ್ ಮಾಡುವ ಮೂಲಕ ತಮ್ಮ ಕೌಶಲವನ್ನು ಹೆಚ್ಚಿಸಿಕೊಳ್ಳಬಹುದು.
 
ಮೇಲಿನ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿಯನ್ನು ಸಂಸ್ಥೆಯ ಜಾಲತಾಣ (www.rvtibangalore.in) ದಲ್ಲಿ ಪಡೆಯಬಹುದು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಪ್ರವೇಶದ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ.
 
ರಾಜ್ಯ ಸರ್ಕಾರದ ಐಟಿಐಗಳಲ್ಲಿ ವಿವಿಧ ವಿಷಯಗಳಲ್ಲಿ ವೃತ್ತಿ ತರಬೇತಿ ಪಡೆದಿರುವ ಮಹಿಳೆಯರೂ ಸಹ ಈ ಸಂಸ್ಥೆ ನಡೆಸುವ ಒಂದು ವರ್ಷದ ಕೋರ್ಸ್‌ಗಳಲ್ಲಿ ಅಧ್ಯಯನ ನಡೆಸಿ ಹೆಚ್ಚಿನ ಪರಿಣತಿ ಪಡೆದುಕೊಳ್ಳಬಹುದು. ಇಂದು ಹಲವಾರು ಕ್ಷೇತ್ರಗಳಲ್ಲಿ ವೃತ್ತಿ ತರಬೇತಿ ಹಾಗೂ ಉದ್ಯೋಗದ ಅವಕಾಶಗಳು ಕಂಡುಬರುತ್ತಿವೆ. ಸರಿಯಾದ ಮಾಹಿತಿ ಸಂಗ್ರಹಿಸಿ, ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಿ. ಹಿರಿಯರೊಡನೆ ಚರ್ಚಿಸಿ, ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಅಂತಿಮ ನಿರ್ಧಾರಕ್ಕೆ ಬನ್ನಿ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT