ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜರು ನೆಲದಲ್ಲರಳಿತು ಜರ್ಬೇರಾ

ಇದೇ ಮೊದಲ ಬಾರಿಗೆ ಜರ್ಬೇರಾ ಹೂವಿನ ಬೇಸಾಯ
Last Updated 13 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಬಂಜರು ಭೂಮಿ, ಉರಿ ಬಿಸಿಲು ಪ್ರದೇಶ ಎಂದು ಗುರುತಿಸಿಕೊಂಡಿರುವ ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮ್ಮಡಾಪುರ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಜರ್ಬೇರಾ ಹೂವಿನ ಬೇಸಾಯ ಯಶಸ್ವಿಯಾಗಿ ಕೈಗೊಂಡಿದ್ದಾರೆ ಸಂಧ್ಯಾ ಶ್ರೀನಿವಾಸರಾವ್‌ ದೇಶಪಾಂಡೆ.
 
ತಮ್ಮಲ್ಲಿರುವ 19 ಎಕರೆ ಜಮೀನಿನ ಪೈಕಿ 20 ಗುಂಟೆ ಭೂಮಿಯಲ್ಲೇ ಪಾಲಿಹೌಸ್ ನಿರ್ಮಿಸಿ ಜರ್ಬೇರಾ ಹೂ ಬೆಳೆದು ದಿನಗೂಲಿ ಹೊರತುಪಡಿಸಿ ಪ್ರತಿ ದಿನ 3ಸಾವಿರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಸ್ವಲ್ಪ ಜಮೀನಿನಲ್ಲಿ ತೊಗರಿ ಬೆಳೆದಿದ್ದರೆ 13 ಎಕರೆ ಬಂಜರು ಭೂಮಿಯಾಗಿದೆ.

ಇದರಿಂದ ಆರ್ಥಿಕ ಸಂಕಷ್ಟ ಪರಿಸ್ಥಿತಿ ತಲೆದೋರಿತ್ತು. ತೋಟಗಾರಿಕೆ ಇಲಾಖೆಯ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಯಂತೆ ಹೊರ ರಾಜ್ಯಗಳಲ್ಲಿರುವ ವಿವಿಧ ರೈತರ ಪಾಲಿಹೌಸ್ ಮತ್ತು ಹಸಿರು ಮನೆಗಳಿಗೆ ಭೇಟಿ ಕೊಟ್ಟು ಜರ್ಬೇರಾ ಬೇಸಾಯದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಜರ್ಬೇರಾ ಹೂ ಬೇಸಾಯ ಕೈಗೊಳ್ಳಲು ನಿರ್ಧರಿಸಿದರು. 
 
ಇದಕ್ಕಾಗಿ 2015–16ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ 20 ಗುಂಟೆ ಬಂಜರು ಭೂಮಿಯಲ್ಲಿ ಜರ್ಬೇರಾ ಬೆಳೆಯಲು ಸೇಡಂ ವಿಜಯ ಬ್ಯಾಂಕ್ ಶಾಖೆಯಿಂದ 28 ಲಕ್ಷ ರೂಪಾಯಿ ಸಾಲ ಪಡೆದರು. ಇಲಾಖೆಯಿಂದ 8.90 ಲಕ್ಷ ರೂಪಾಯಿ ಸಹಾಯಧನ ನೀಡಲಾಯಿತು. 
 
ಮೊದಲಿಗೆ ಪಾಲಿಹೌಸ್ ಮತ್ತು ಒಳಸುರಿಗಳನ್ನು ನಿರ್ಮಿಸಿಕೊಂಡು ನಂತರ ಜರ್ಬೇರಾ ಸಸಿಗಳನ್ನು ಕಳೆದ ಆಗಸ್ಟ್‌ನಲ್ಲಿ ನಾಟಿ ಮಾಡಿದರು. ತೋಟಗಾರಿಕೆ ಇಲಾಖೆಯ ಸಹಾಯದಿಂದ ಬೆಳೆಗೆ ಬೇಕಾದ ಅಗತ್ಯ ಪೋಷಕಾಂಶ ನೀಡಿದರು.

ಬೆಳೆಯ ಸಂರಕ್ಷಣೆಗಾಗಿ ರೋಗಪೀಡೆಯನ್ನು ಸರಿಯಾಗಿ ನಿರ್ವಹಣೆ ಮಾಡಿದ ಪ್ರಯುಕ್ತ ಹೆಚ್ಚಿನ ಇಳುವರಿ ಪಡೆಯುತ್ತಿದ್ದಾರೆ. ಕೇವಲ ಮೂರೇ ತಿಂಗಳಲ್ಲಿ, ಅಂದರೆ ನವೆಂಬರ್ ತಿಂಗಳಿನಿಂದ ದಂಟು ಸಹಿತ ಕೊಯ್ಲು ಮಾಡಿದ ಜರ್ಬೇರಾ ಹೂಗಳನ್ನು ಸ್ವತಃ ಪ್ಯಾಕ್ ಮಾಡಿ ಹೈದರಾಬಾದಿನ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಪ್ರತಿ ಚದರ ಮೀಟರ್‌ಗೆ ವಾರ್ಷಿಕ 180–200 ಹೂವು ಪಡೆಯುತ್ತಿದ್ದಾರೆ.
 
ಸೇಡಂ ತಾಲ್ಲೂಕಿನ ಯಾವ ರೈತರೂ ಪಾಲಿಹೌಸ್ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಅದರೆ ಸಂಧ್ಯಾ ಧೃತಿಗೆಡದೆ ಮುನ್ನುಗ್ಗಿದ್ದರ ಫಲವಾಗಿ ಇಂದು  ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯಕವಾಗಿದೆ.

ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಹಾಯವಿಲ್ಲದೆ ತಾವೇ ಹೂಗಳನ್ನು ಮಾರಾಟ ಮಾಡುವುದರಿಂದ ಹೆಚ್ಚಿನ ಹಣ ಕೈ ಸೇರುತ್ತಿದೆ. 
‘ಮುಂಬರುವ ದಿನಗಳಲ್ಲಿ ಇನ್ನೂ ಅರ್ಧ ಎಕರೆ ಭೂಮಿಯಲ್ಲಿ ಕಾರ್ನೇಷನ್ ಹೂ ಬೇಸಾಯ ಕೈಗೊಳ್ಳಲು ನಿರ್ಧರಿಸಿದ್ದು, ಹೂ ಬೇಸಾಯವು ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಹೆಚ್ಚು ಅನುಕೂಲವಾಗಿದೆ’ ಎನ್ನುತ್ತಾರೆ ಸಂಧ್ಯಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT