ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏನೇ ಆಗ್ಲಿ, ಮೊದ್ಲು ಮದ್ವೆ ಆಗ್ಬಿಡ್ತೀನಿ...’

ಸಕಾರ
Last Updated 16 ಮಾರ್ಚ್ 2017, 19:30 IST
ಅಕ್ಷರ ಗಾತ್ರ

‘ಬೆಂಗಳೂರಿನಿಂದ ಸೊಲ್ಲಾಪುರಕ್ಕೆ ಹೊರಡಲಿರುವ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌ ಪ್ಲಾಟ್‌ಫಾರಂಗೆ ಬರಲಿದೆ...’ರೈಲು ನಿಲ್ದಾಣದ ಧ್ವನಿವರ್ಧಕದಲ್ಲಿ ಇಷ್ಟು ಮೊಳಗಿದ್ದೇ ತಡ ಕಾಂಕ್ರಿಟ್‌ ಕಟ್ಟೆಗಳಿಗೆ ಜೀವ ಸಂಚಾರವಾದಂತೆ ಆಯಿತು. ಲಗುಬುಗೆಯ ಓಡಾಟ, ನೀರಿನ ಬಾಟಲಿ– ಹಣ್ಣು– ಬಿಸ್ಕತ್ತು ಖರೀದಿಸುವವರ ದಾಪು ಹೆಜ್ಜೆಗಳು.

ಗಾಡಿ ಪ್ಲಾಟ್‌ಫಾರಂಗೆ ಬಂದಾಗ ಮೊದಲೇ ಸ್ಲೀಪರ್ ಬರ್ತ್ ಕನ್‌ಫರ್ಮ್ ಆಗಿದ್ದವರು ಎಂದಿನಂತೆ ನಿಧಾನಗತಿಯಲ್ಲಿ ಕೋಚ್ ಹೆಸರು ಹುಡುಕುತ್ತಿದ್ದರು. ಆದರೆ ಜನರಲ್ ಕಂಪಾರ್ಟ್‌ಮೆಂಟ್‌ ಎಂಬ ಮತ್ತೊಂದು ಲೋಕದಲ್ಲಿ ಅಲ್ಲೋಲಕಲ್ಲೋಲ. ಯಾರದೋ ಕೈ, ಯಾರದೋ ಕಾಲು ಬೋಗಿಗೆ ನುಗ್ಗಲು ನೂಕುನುಗ್ಗಲು.

ಇಂಥ ಬೋಗಿಗಳ ಲಗೇಜ್ ಇಡುವ ಅಟ್ಟಣಿಗೆಗಳಲ್ಲಿ ಪ್ರಯಾಣಿಕರು ಕುಳಿತು– ಮಲಗಿ ಪ್ರಯಾಣಿಸುವುದು ಮಾಮೂಲು. ಸಾಹಿತ್ಯ ಸಂಭ್ರಮಕ್ಕೆಂದು ಧಾರವಾಡಕ್ಕೆ ಹೊರಟಿದ್ದ ರಾಜೀವನಿಗೂ ಒಂದು ಅಟ್ಟಣಿಗೆಯಲ್ಲಿ ಕುಳಿತುಕೊಳ್ಳಲು ಇಷ್ಟೇಇಷ್ಟು ಜಾಗ ಸಿಕ್ಕಿತ್ತು.

ಆದರೆ, ಅಟ್ಟಣಿಗೆ ಅಡಿಯ ಹಲಗೆಯೊಂದು ಕಿತ್ತು ಹೋಗಿದ್ದ ಕಾರಣ ಚುಚ್ಚಿದಂತಾಗಿ ಕಿರಿಕಿರಿಯಾಗುತ್ತಿತ್ತು. ಉಸಿರುಗಟ್ಟಿಸುವ ವಾತಾವರಣದಲ್ಲಿ ರಾತ್ರಿಯಿಡಿ ನಿಲ್ಲುವ ಹಿಂಸೆಗೆ ಹೋಲಿಸಿದರೆ ಅಡಿ ಚುಚ್ಚುವ ಹಲಗೆಯೇ ಅವನಿಗೆ ಆಪ್ಯಾಯಮಾನ ಎನಿಸಿತ್ತು.
***
‘ಅಣ್ಣಾ ಸ್ವಲ್ಪ ಮಗು ನೋಡ್ಕೊಳಿ...’ ಲಂಬಾಣಿ ಹೆಂಗಸೊಬ್ಬರು ದುಂಡುದುಂಡಗಿದ್ದ ಸುಮಾರು ಎರಡು ವರ್ಷದ ಹೆಣ್ಣು ಮಗುವನ್ನು ಅಟ್ಟಕ್ಕೆ ಚಾಚಿ ಹಿಡಿದಿದ್ದರು. ರಾಜೀವ ಮಗುವಿನ ಕಂಕುಳಿಗೆ ಕೈ ಹಾಕಿ ಮೇಲೆತ್ತಿಕೊಂಡ. ರೈಲು ಯಶವಂತಪುರ ದಾಟುವ ಹೊತ್ತಿಗೆ ಅದು ಅವನಿಗೆ ಹೊಂದಿಕೊಂಡು, ಲಲ್ಲೆಗರೆಯಲು ಆರಂಭಿಸಿತ್ತು. ಅವನು ಕೊಟ್ಟ ಚಕ್ಕುಲಿ– ಕೋಡುಬಳೆಗಳೂ ಕೆಲಸ ಮಾಡಿದ್ದವು ಎನ್ನಿ.

ರೈಲು ತುಮಕೂರು ಸಮೀಪಿಸುವ ಹೊತ್ತಿಗೆಲ್ಲಾ ಮಗುವಿಗೆ ಜೊಂಪು. ಕೈಲಿ ಮಗು ಇದ್ದ ಕಾರಣ ರಾಜೀವನಿಗೂ ಕೋಚ್‌ನಲ್ಲಿ ಒಂದು ಮಟ್ಟಿಗಿನ ಗೌರವ ಪ್ರಾಪ್ತವಾಗಿತ್ತು. ಪಕ್ಕದಲ್ಲಿದ್ದವರು ತುಸು ಸರಿದು, ‘ಮಗೀನ ಮಲಗಿಸಿ’ ಎಂದು ಎದ್ದು ಕುಳಿತರು.

ಹಲಗೆಯ ಮೇಲೆ ಕೆಂಪು ಟವೆಲ್‌ ಹಾಸಿದ ರಾಜೀವ ಮಗುವನ್ನು ಜತನದಿಂದ ಮಲಗಿಸಿದ. ಅದು ಹೊರಳಿದರೆ, ಕೆಳಗೆ ಬಿದ್ದರೆ ಎಂಬ ಆತಂಕದಲ್ಲಿ ಅವನಿಗೆ ತೂಕಡಿಕೆಯೂ ಬರಲಿಲ್ಲ.

ಮಗುವಿನ ಅಮ್ಮ ಎಲ್ಲಿ ಎಂದು ಹುಡುಕಿದರೆ ಇಡಿಕಿರಿದು ತುಂಬಿದ್ದ ಬೋಗಿಯಲ್ಲಿ ಆಕೆ ಕಾಣಿಸುತ್ತಲೇ ಇರಲಿಲ್ಲ. ಸಾಲದ್ದಕ್ಕೆ ಕೋಚ್‌ನ ಲೈಟ್ ಹೊತ್ತಿಕೊಳ್ಳುವ ಮೊದಲೇ ಮಗು ಕೈಗೆ ಬಂದಿದ್ದರಿಂದ ರಾಜೀವನಿಗೆ ಆಕೆಯ ಮುಖವೂ ನೆನಪಿರಲಿಲ್ಲ.
***
ಹಾವೇರಿ ಸ್ಟೇಷನ್‌ನಲ್ಲಿ ಒಂದಷ್ಟು ಜನರು ಇಳಿದರು. ಬೋಗಿಯ ಸಂದಣಿ ತುಸು ಕಡಿಮೆಯಾಯಿತು. ಪಕ್ಕದಲ್ಲಿದ್ದವರಿಗೆ ಮಗುವನ್ನು ನೋಡಿಕೊಳ್ಳಲು ಹೇಳಿ ತಾನು ಕೆಳಗಿಳಿದು ಮಗುವಿನ ತಾಯಿಯ ಪತ್ತೆದಾರಿಕೆ ಆರಂಭಿಸಿದ.

ಬಾಗಿಲು ಮುಂದಿನ ಹಜಾರದಂಥ ಜಾಗದಲ್ಲಿ ಮಧ್ಯವಯಸಿನ ತಾಯಿಯೊಬ್ಬರು ಮಗುವಿಗೆ ಮೊಲೆಯೂಡಿಸುತ್ತಿದ್ದರು. ‘ಅಣ್ಣಾ, ಮಗು ಮಲಗೈತಾ?’ ಎಂಬ ಅವರ ಮಾತು ಕೇಳಿ ರಾಜೀವನಿಗೆ ಹೋದ ಜೀವ ಬಂದಂತೆ ಆಯಿತು.

ಬೆಳಿಗ್ಗೆ 6ರ ಸುಮಾರಿಗೆ ರಾಣಿ ಚೆನ್ನಮ್ಮ ಹುಬ್ಬಳ್ಳಿಯಲ್ಲಿತ್ತು. ಪ್ರಯಾಣಿಕರು ಕೆಳಗಿಳಿದರೂ ಮಗುವಿನ ವಾರಸುದಾರರು ಬರಲಿಲ್ಲ. ಹಾವೇರಿಯಲ್ಲಿ ಕಾಣಿಸಿದ್ದ ತಾಯಿ ಹಜಾರದಲ್ಲಿ ಇರಲಿಲ್ಲ. ರಾಜೀವನ ಹೆಗಲೇರಿದ್ದ ಮಗುವಿಗೆ ಎಚ್ಚರವಾಗಿತ್ತು. ಆದರೂ ಅದು ಅಳದೆ ಜೊಲ್ಲು ಮೆತ್ತಿಕೊಂಡಿದ್ದ ಮೋರೆಯನ್ನು ಅವನ ಭುಜಕ್ಕೆ ಒರೆಸುತ್ತಿತ್ತು.

‘ಅಯ್ಯೋ ದೇವರೇ, ಇದೇನು ಹೀಗಾಯ್ತಲ್ಲ? ಇದ್ಯಾರ ಮಗುವೋ? ಮಗುವನ್ನು ನನಗೆ ಕೊಟ್ಟವರು ಯಾರೋ? ಸಾಹಿತ್ಯ ಸಂಭ್ರಮಕ್ಕೆಂದು ಬಂದ ನಾನು ಇದನ್ನು ಹೊತ್ತುಕೊಂಡು ಎಲ್ಲಿ ಓಡಾಡಲಿ? ಇದನ್ನು ಹೇಗೆ ಸಾಕಲಿ? ಸಾಲದ್ದಕ್ಕೆ ಹೆಣ್ಣುಮಗು ಬೇರೆ? ಇಲ್ಲದ ಜವಾಬ್ದಾರಿ...’

ಹೀಗೆ ರಾಜೀವನ ಆಲೋಚನೆಗಳು ಮೇರೆ ಮೀರಿದವು. ಅಷ್ಟರಲ್ಲಿ ಲಂಬಾಣಿ ಹೆಂಗಸು ರಾಜೀವನ ಮುಂದೆ ಕಾಣಿಸಿಕೊಂಡರು. ‘ಮಗು ಕೊಡಿ ಅಣ್ಣಾ, ತುಂಬಾ ಒಳ್ಳೇ ಮಗು ಅಲ್ವಾ...?’ ಎಂದು ಕೈ ಮುಂಚಾಚಿದರು. ಅದು ರಾಜೀವನಿಗೆ ಪಪ್ಪಿ ಕೊಟ್ಟು ಅಮ್ಮನ ಕೈ ಹಿಡಿಯಲೆಂದು ಕೆಳಗಿಳಿಯಿತು. ಆಕೆ ತನಗೆ ಥ್ಯಾಂಕ್ಸ್ ಹೇಳಬೇಕಿತ್ತು ಎಂದು ರಾಜೀವನಿಗೂ ಅನ್ನಿಸಲಿಲ್ಲ.
***
‘ಮದುವೆಯಾಗೋದು ಅಂದರೆ ಕಂಡಕಂಡ ಚಂದದ ಹುಡುಗಿಯರನ್ನು ಪ್ರೀತಿಸುವ ಕನಸು ಕಾಣಲು ಕಡಿವಾಣ ಹಾಕಿದಂತೆ’ ಎಂದು ತನ್ನದೇ ಒಂದು ಸಿದ್ಧಾಂತ ರೂಪಿಸಿಕೊಂಡು ಅದಕ್ಕೆ ಬದ್ಧನಾಗಿದ್ದ ರಾಜೀವನ ಮನಸಿನಲ್ಲಿ ರೈಲು ಪ್ರಯಾಣದಲ್ಲಿ ಜತೆಯಾಗಿದ್ದ ಮಗು  ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತ್ತು. ಅವನಲ್ಲಿ ಹುದುಗಿದ್ದ ಅಪ್ಪನನ್ನು ಜಾಗೃತಗೊಳಿಸಿತ್ತು.

ಎದೆಯ ಮೇಲೆ ಮಲಗಿದ್ದ ಮಗು ಅವನ ತುಟಿಗಳನ್ನು ತನ್ನ ಪುಟಾಣಿ ಬೆರಳುಗಳಿಂದ ಅಮುಕಿ ಹಿಡಿದಾಗ ಸರಿಯಾಗಿ ಉಸಿರಾಡಲೂ ಆಗುತ್ತಿರಲಿಲ್ಲ. ಹಾಗೆಂದು ಆ ಬೆರಳುಗಳನ್ನು ಬದಿಗೆ ಸರಿಸಲೂ ಮನಸು ಒಪ್ಪುತ್ತಿರಲಿಲ್ಲ.

ಯಾವುದೋ ಹೊತ್ತಿನಲ್ಲಿ ಮಗು ಬೆಚ್ಚಿ ಬಿದ್ದಾಗ ಇವನು ಧಿಗ್ಗನೆದ್ದು ಸಮಾಧಾನ ಮಾಡಿದ್ದ, ಬಹುಕಾಲ ತೊಡೆಯ ಮೇಲೆ ಮಲಗಿಸಿಕೊಂಡಿದ್ದಕ್ಕೆ ಕಾಲು ಜೋಮು ಬಂದಿದ್ದರೂ ಅಲುಗಿದರೆ ಮಗು ಎದ್ದೀತು ಎಂದು ಮನಸು ಆತಂಕಪಡುತ್ತಿತ್ತು.

ಮಾರನೇ ದಿನದ ರಾತ್ರಿಯಲ್ಲೂ ಅದೇ ಮಗುವಿನ ಅಸ್ಪಷ್ಟ ಮುಖ. ಎದೆಯ ಮೇಲೆ ಮಗು ಮಲಗಿದಂತೆ, ತಾನು ಮಗುವನ್ನು ಹೆಗಲ ಮೇಲೆ ಕೂಡಿಸಿಕೊಂಡು ಜಾತ್ರೆ ತೋರಿಸುತ್ತಿರುವಂತೆ, ಅದು ಅಂಬೆಗಾಲಿಡುತ್ತಾ ಮನೆಯೆಲ್ಲಾ ಓಡಾಡುತ್ತಿರುವಂತೆ ಹೀಗೇ ಏನೇನೋ ಕನಸುಗಳು.

‘ಕಂಡಕಂಡ ಹುಡುಗಿಯರನ್ನು ಪ್ರೀತಿಸುವ ಸ್ವಾತಂತ್ರ್ಯಕ್ಕಿಂತ ಮಗುವನ್ನು ಎತ್ತಿ ಮುದ್ದಾಡುವ ಸುಖವೇ ದೊಡ್ಡದು. ಏನಾದ್ರೂ ಆಗ್ಲಿ, ಮದ್ವೆ ಆಗಿ ಬಿಡ್ತೀನಿ...’ ಎಂದು ನಿರ್ಧರಿಸುವಷ್ಟರ ಮಟ್ಟಿಗೆ ಹುಬ್ಬಳ್ಳಿಯಲ್ಲಿ ರಾಣಿ ಚೆನ್ನಮ್ಮ ಹತ್ತಿದ ರಾಜೀವ ಬದಲಾಗಿದ್ದ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT