ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಯಲ್ಲೊಂದು ‘ಇ-ಶಾಲೆ’

Last Updated 20 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ನೆರವಾಗುವುದೇ ಇ–ಶಾಲೆ. ರಾಜ್ಯಕ್ಕೇ ಪ್ರಥಮ ಎನ್ನಬಹುದಾದ ಇ–ಶಾಲೆ, ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಶುರುವಾಗಿದೆ.

‘ನಮ್ಮಇ–ಶಾಲೆ’ ಎಂಬ ಹೆಸರಿನಲ್ಲಿ ಮೂರು ತಿಂಗಳಿನಿಂದ ಇಂಥದ್ದೊಂದು ಹೊಸ ಮಾದರಿಯನ್ನು ಅನುಸರಿಸಲಾಗುತ್ತಿದೆ.ತಂತ್ರಜ್ಞಾನದ ಸಹಾಯದಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಪಠ್ಯದ ವಿಷಯಗಳನ್ನು ವಿದ್ಯಾರ್ಥಿಯು ಸ್ವತಃ ಅಭ್ಯಾಸ ಮಾಡಿ ಸಮಗ್ರವಾಗಿ ಅರ್ಥೈಸಿಕೊಳ್ಳುವುದೇ ‘ಇ-ಶಾಲೆ’ಯ ಮೂಲಮಂತ್ರ.

‘ನಮ್ಮ ಇ-ಶಾಲೆ’ ಉಪಕ್ರಮದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಟ್ಯಾಬ್ಲೆಟ್ (ಮೊಬೈಲ್ ಫೋನಿಗಿಂತ ದೊಡ್ಡದಾಗಿರುವ, ಲ್ಯಾಪ್ ಟಾಪ್‌ಗಿಂತ ಚಿಕ್ಕದಾಗಿರುವ ಕಂಪ್ಯೂಟರ್) ನೀಡಲಾಗಿದೆ. ಟ್ಯಾಬ್ಲೆಟ್‌ನಲ್ಲಿ ಸಮಗ್ರ ಪಠ್ಯವನ್ನು ಅಳವಡಿಸಲಾಗಿದೆ. ಪಠ್ಯಕ್ಕೆ ಸಂಬಂಧಿಸಿದ ಚಿತ್ರಗಳು, ವಿವರಣೆಗಳೊಳಗೊಂಡಂತೆ ಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ವಿನ್ಯಾಸಗೊಳಿಸಿದೆ.

(ವಿಶ್ವತೀರ್ಥ ಪ್ರೌಢಶಾಲೆ)

ಇಲ್ಲಿ ಪ್ರೊಜೆಕ್ಟರ್ ಬಳಸಿ ದೊಡ್ಡ ತೆರೆಯ ಮೇಲೆ ಪಠ್ಯದ ದೃಶ್ಯಗಳನ್ನು ತೋರಿಸುತ್ತಾ  ಸ್ಥಳೀಯ ಶಿಕ್ಷಕರೇ ಪಾಠ ಮಾಡುತ್ತಾರೆ. ಹೆಚ್ಚಿನ ವಿವರಣೆ ಬೇಕಿದ್ದರೆ ಅಳವಡಿಸಿದ ವಿಡಿಯೊ ತೋರಿಸಬಹುದು. ಈಗ ಹಲವಾರು ಶಾಲಾ ಕಾಲೇಜುಗಳಲ್ಲಿ ಚಾಲ್ತಿಯಲ್ಲಿರುವ ಕಂಪ್ಯೂಟರ್ ಆಧರಿತ ಸ್ಮಾರ್ಟ್ ಕ್ಲಾಸ್‌ಗಳಿಗೂ ಇಲ್ಲಿನ ಇ-ಕ್ಲಾಸ್‌ಗೂ ತುಂಬಾ ವ್ಯತ್ಯಾಸವಿದೆ. ಸ್ಮಾರ್ಟ್ ಕ್ಲಾಸ್‌ನಲ್ಲಿ ನುರಿತ ಶಿಕ್ಷಕರು ಬೇರೆ ಎಲ್ಲಿಯೋ ಮಾಡಿದ ಪಾಠವನ್ನು ಇಲ್ಲಿನ ಮಕ್ಕಳು ತೆರೆಯ ಮೇಲೆ ನೋಡುತ್ತಾ ಅರ್ಥ ಮಾಡಿಕೊಳ್ಳಬೇಕು. ಒಂದೆಡೆಯ ಪಾಠ ಮಾಡುವ ಶೈಲಿ, ವಿಧಾನ ಮತ್ತೊಂದೆಡೆಯ ಮಕ್ಕಳಿಗೆ ರುಚಿಸದಿರಬಹುದು. ಆದರೆ ನಮ್ಮ ಇ-ಶಾಲೆ ಯೋಜನೆಯಲ್ಲಿ ಶಾಲೆಯ ಶಿಕ್ಷಕರು ಮೊದಲೇ ಅಳವಡಿಸಿದ ಪಠ್ಯದ ಚೌಕಟ್ಟಿನೊಳಗೆ ಸ್ಥಳೀಯ ಸಂದರ್ಭಕ್ಕೆ ಹೊಂದುವಂತೆ, ಮಕ್ಕಳ ಮನಸ್ಥಿತಿಗೆ ಅನುಗುಣವಾಗಿ ಬೋಧನೆ ಮಾಡುವರು. ಇಲ್ಲಿ ಶಿಕ್ಷಕರ ಸೃಜನಶೀಲತೆಗೆ ಮುಕ್ತ ಅವಕಾಶವಿದೆ.

ಶಿಕ್ಷಕರು ತಮ್ಮ ಪಾಠವನ್ನು ಪರಿಣಾಮಕಾರಿಯನ್ನಾಗಿಸುವ ನಿಟ್ಟಿನಲ್ಲಿ ಆಗಾಗ್ಗೆ ದೊರೆಯುವ ಮಾಹಿತಿಗಳು, ಅಂಕಿ ಅಂಶಗಳು, ಚಿತ್ರಗಳು ಅಥವಾ ತಾವೇ ಮುದ್ರಿಸಿಕೊಂಡ ಧ್ವನಿಯ ತುಣುಕುಗಳನ್ನು ಪಠ್ಯದಲ್ಲಿ ಸೇರಿಸಬಹುದು. ಸಂವಾದ ಮಾಡಬಹುದು. ಹಾಗಾಗಿ ಈ ತರಗತಿಯಲ್ಲಿ ಜೀವಂತಿಕೆ ಹೆಚ್ಚು. ಎಲ್ಲವೂ ದೃಶ್ಯ ರೂಪದಲ್ಲಿರುವುದರಿಂದ ಮಕ್ಕಳ ಗ್ರಹಿಕೆಯ ಮಟ್ಟ ಹೆಚ್ಚಿರುವುದು.

ಎರಡು ಅವಧಿಯ ಕ್ಲಾಸ್ ಮುಗಿದ ನಂತರ ವಿದ್ಯಾರ್ಥಿಗಳು ತಮಗೆ ಕೊಟ್ಟಿರುವ ಟ್ಯಾಬ್‌ನಲ್ಲಿ ಅರ್ಧ ಗಂಟೆ ಆ ಪಠ್ಯವನ್ನು ಪುನರ್‌ಮನನ ಮಾಡಿಕೊಳ್ಳುತ್ತಾರೆ. ನಂತರದಲ್ಲಿ ಒಂದು ಪರೀಕ್ಷೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೇ ಆ ಪರೀಕ್ಷೆ ತೆಗೆದುಕೊಳ್ಳುತ್ತಾರೆ. ಪರೀಕ್ಷೆ ಮುಗಿಯುತ್ತಿದ್ದಂತೆ ಕಂಪ್ಯೂಟರ್‌ನಲ್ಲೆ ಮೌಲ್ಯಮಾಪನವಾಗಿ ತಕ್ಷಣ ಫಲಿತಾಂಶವೂ ದೊರೆಯುತ್ತದೆ. ಶಿಕ್ಷಕರ ಲ್ಯಾಪ್‌ಟಾಪಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಗಳಿಸಿದ ಅಂಕ, ಸರಿ/ತಪ್ಪು ಉತ್ತರ ಬರೆದ ಪ್ರಶ್ನೆಗಳು, ಉತ್ತರಿಸದ ಪ್ರಶ್ನೆಗಳು ಎಲ್ಲ ಮಾಹಿತಿಗಳು ವಿವರವಾಗಿ ದೊರೆಯುತ್ತವೆ.

ಯಾವ ವಿದ್ಯಾರ್ಥಿ ಯಾವ ಪಠ್ಯ ಅರ್ಥ ಮಾಡಿಕೊಂಡಿಲ್ಲವೆಂಬುದು ಆ ಕ್ಷಣದಲ್ಲೇ ತಿಳಿಯುತ್ತದೆ. ಅಂಥ ಮಕ್ಕಳ ಮೇಲೆ ಹೆಚ್ಚು ಗಮನಹರಿಸಿ ಅವರನ್ನು ಕಲಿಕೆಯಲ್ಲಿ ಮುಂದೆ ತರುವಂಥ ಎಲ್ಲಾ ತಾಂತ್ರಿಕ ಮಾಹಿತಿಗಳು ಶಿಕ್ಷಕರಿಗೆ ದೊರೆತು ಮತ್ತಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಲು ಸುಲಭವಾಗುತ್ತದೆ.

ಹಾಗಾಗಿ ಈ ವ್ಯವಸ್ಥೆ ಮಕ್ಕಳ ಸ್ನೇಹಿಯಷ್ಟೇ ಅಲ್ಲ ಶಿಕ್ಷಕ ಸ್ನೇಹಿಯೂ ಹೌದು. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಜ್ಞಾನ, ಅರ್ಥಮಾಡಿಕೊಳ್ಳುವಿಕೆ, ಕೌಶಲ ಮತ್ತು ಅನ್ವಯಿಸುವಿಕೆ (ಉಪಯೋಗ) ಅರಿವಾಗುವುದರಿಂದ ಇ-ಕಲಿಕೆ ತುಂಬಾ ಪರಿಣಾಮಕಾರಿ. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದರಿಂದ ಅನುತ್ತೀರ್ಣರಾಗಿ ತಮ್ಮ ಭವಿಷ್ಯ ವ್ಯರ್ಥ ಮಾಡಿಕೊಳ್ಳುವ ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಬಹುದು. ಹಾಗಾಗಿ ಈ ಯೋಜನೆ ನಮ್ಮ ಕನ್ನಡ ಶಾಲೆಗಳಿಗೆ ವರವಾಗಬಲ್ಲದು. 

(ಎನ್.ಟಿ. ಸುರೇಶ್‌)

ಶಿಕ್ಷಣ ಪ್ರೇಮಿ ಬೆಂಗಳೂರಿನ ಎಂಜಿನಿಯರ್ ರಾಘವೇಂದ್ರ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ. ಐಐಎಂ ಬೆಂಗಳೂರಿನ ತಜ್ಞ ಮಾರ್ಗದರ್ಶನದಲ್ಲಿ ಓಪೆಲ್ ಕನ್ಸಲ್ಟಿಂಗ್ ತಂಡವು ಇಂಟೆಲ್, ರ್‍ಯಾಪ್ಪಲ್ಸ್ ಮತ್ತು ಮೇಘಶಾಲಾ ಸಂಸ್ಥೆಗಳ ಸಹಕಾರದಿಂದ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಹೂಡಿಕೆಯೊಂದಿಗೆ ಈ ನವೀನ ಬೋಧನಾ ತರಗತಿಗಳನ್ನು ಪ್ರಾಯೋಗಿಕವಾಗಿ ನಡೆಸುತ್ತಿದೆ.

ಮೈಕ್ರೋ ಹೈಬ್ರಿಡ್ ಲ್ಯಾಬ್ ಎಂದು ಕರೆಸಿಕೊಳ್ಳುವ ಇ-ತರಗತಿ ಕೊಠಡಿಯಲ್ಲಿ ಎಲ್ಲಾ ಪರಿಕರಗಳು ತಂತ್ರಜ್ಞಾನದ ಸುಧಾರಿತ ಉತ್ಪನ್ನಗಳು, ಅತಿ ಶಕ್ತಿಯುತವಾದ ವೈಫೈ ಉಪಕರಣ ಬಳಸಿದ್ದು ಇದು ನೇರವಾಗಿ ಸರ್ವರ್‌ ಅನ್ನು ಸಂಪರ್ಕಿಸುತ್ತದೆ. ಹಾಗಾಗಿ ಇಂಟರ್‌ನೆಟ್ ಅಥವಾ ಬ್ರಾಡ್‌ಬ್ಯಾಂಡಿನ ಅಗತ್ಯವಿಲ್ಲ. ಎಲ್ಲವೂ ವೈರ್‌ಲೆಸ್ ಸಂಪರ್ಕವಾಗಿರುವುದರಿಂದ ಹತ್ತಾರು ಕೇಬಲ್‌ಗಳ ಕಿರಿಕಿರಿಯಿಲ್ಲ. ಅತಿ ಕಡಿಮೆ ವಿದ್ಯುತ್ ಬಳಸುವ ಪರಿಣಾಮಕಾರಿ ಯುಪಿಎಸ್ ಬಳಸಿರುವುದರಿಂದ ಪವರ್‌ಕಟ್ಟಿನ ಚಿಂತೆಯಿಲ್ಲ. ವಿದ್ಯುತ್ ಬಿಲ್ಲೂ ಕಡಿಮೆ. ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳಲ್ಲಿ ಟ್ಯಾಬ್ ಎಜುಕೇಶನ್ ವಿಧಾನದಲ್ಲಿ ಶಿಕ್ಷಣ ನೀಡುತ್ತಿದ್ದರೂ ಈ ರೀತಿ ಸಮಗ್ರವಾಗಿ ಕಲಿಸುವ ಪದ್ಧತಿ ರಾಜ್ಯಕ್ಕೆ ಮೊದಲು. ಇಲ್ಲಿನ ಫಲಿತಾಂಶ ಗಮನಿಸಿ ಮುಂದೆ ರಾಜ್ಯದ ಇತರೆಡೆ ವಿಸ್ತರಿಸುವ ಬಯಕೆಯನ್ನು ವ್ಯಕ್ತಪಡಿಸುತ್ತಾರೆ ರಾಘವೇಂದ್ರ.

ಕಮ್ಮರಡಿಯ ವಿಶ್ವತೀರ್ಥ ಪ್ರೌಢಶಾಲೆ ಈಗ ಇಪ್ಪತ್ತೈದರ ಹರೆಯದಲ್ಲಿದೆ. ಖಾಸಗಿ ಶಾಲೆಯಾದರೂ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ವಿದ್ಯಾರ್ಥಿಗಳಿಂದ ಪಡೆಯಲಾಗುತ್ತದೆ. ಡೊನೇಶನ್ ಮಾತೇ ಇಲ್ಲ. ಈ ಸಣ್ಣ ಮೊತ್ತದ ಶುಲ್ಕವನ್ನು ಕಟ್ಟಲು ಸಾಧ್ಯವಾಗದಿದ್ದರೂ ದಾನಿಗಳ ನೆರವಿನಿಂದ ಆ ಬಾಬ್ತು ಭರಿಸಲಾಗುತ್ತಿದೆ. ಪಠ್ಯಪುಸ್ತಕಗಳು, ನೋಟ್‌ಬುಕ್‌ಗಳು, ಸಮವಸ್ತ್ರ... ಹೀಗೆ ಮಕ್ಕಳ ಎಲ್ಲಾ ಅವಶ್ಯಕತೆಗಳನ್ನು ದಾನಿಗಳ ಸಹಕಾರದಿಂದ ಪೂರೈಸಲಾಗುತ್ತದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಹಲವು ಪ್ರಶಸ್ತಿಗಳು ಮುಡಿಗೇರಿವೆ.

ಶಾಲೆಯ ಆರಂಭದಿಂದಲೂ ಮುಖ್ಯ ಶಿಕ್ಷಕರಾಗಿರುವ ಎನ್.ಟಿ. ಸುರೇಶ್‌ ಅವರು ಇಲ್ಲಿ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಾ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಅಂತಿಮ ಪರೀಕ್ಷೆಯ ಕೊನೆಯ ದಿನ ಮುಂದೆ ಸೇರಬಹುದಾದ ವಿವಿಧ ಕೋರ್ಸುಗಳು, ಆಸಕ್ತಿಯ ಕ್ಷೇತ್ರ ಕಂಡುಕೊಳ್ಳುವ ಬಗ್ಗೆ, ಸರ್ಕಾರಿ, ಖಾಸಗಿ ರಂಗಗಳಲ್ಲಿ ದೊರೆಯುವ ಬಗೆ ಬಗೆಯ ವಿದ್ಯಾರ್ಥಿ ವೇತನಗಳ ಕುರಿತು ಪರಿಣತರಿಂದ ಮಾರ್ಗದರ್ಶನ ಮಾಡಿಸುತ್ತಾರೆ. ಅಷ್ಟೇ ಅಲ್ಲ, ಶಾಲೆ ಬಿಟ್ಟ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಅಡಚಣೆಯಾದರೆ ದಾನಿಗಳ ಸಂಪರ್ಕ ಏರ್ಪಡಿಸಿ ಶಿಕ್ಷಣ ಮುಂದುವರೆಸಲು ಅವಕಾಶ ಮಾಡಿಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT