ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಫಿಟ್‌ನೆಸ್‌ಗೆ ‘ದೇವಿ’ ಸ್ಟಾರ್ಟ್‌ಅಪ್‌

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಮಹಿಳೆಯರಲ್ಲಿ ಫಿಟ್‌ನೆಸ್‌ ಕುರಿತು ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗಿರುವ ನಟ, ರೂಪದರ್ಶಿ ಮಿಲಿಂದ್‌ ಸೋಮನ್‌ ಅವರು ‘ದೇವಿ’ ಸ್ಟಾರ್ಟ್‌ಅಪ್‌ ಮೂಲಕ ಮಹಿಳೆಯರಿಗೆ ಫಿಟ್‌ನೆಸ್‌ ಚಟುವಟಿಕೆಗಳಲ್ಲಿ ಧರಿಸುವಂತಹ ಉಡುಪುಗಳನ್ನು ಪರಿಚಯಿಸಿದ್ದಾರೆ.

ಮಹಿಳೆಯರಿಗೆಂದೇ ಪ್ರತ್ಯೇಕವಾಗಿ ಆಯೋಜಿಸಲಾಗುವ ಪಿಂಕಥಾನ್‌ ಅಭಿಯಾನದಲ್ಲಿ ತೊಡಗಿಸಿಕೊಂಡಿರುವುದೇ  ‘ದೇವಿ’ ಸ್ಟಾರ್ಟ್‌ಅಪ್‌ ಸ್ಥಾಪನೆಗೆ ಸ್ಪೂರ್ತಿ ಎಂದು ಮಿಲಿಂದ್ ಹೇಳಿಕೊಂಡಿದ್ದಾರೆ.

‘ಪಿಂಕಥಾನ್ ವೇಳೆ ಬಹುತೇಕ ಮಹಿಳೆಯರು ಓಡಲು ಅಡ್ಡಿ ಮಾಡುವಂತಹ ಸೀರೆ, ಸಲ್ವಾರ್‌ಗಳನ್ನು ಧರಿಸುವುದು ಮಿಲಿಂದ್ ಅವರ ಗಮನಕ್ಕೆ ಬಂದಿತ್ತು. ದೇಹದ ಆಕಾರಕ್ಕೆ ಒಗ್ಗದ ಬ್ರ್ಯಾಂಡೆಡ್ ದಿರಿಸುಗಳಿಗೆ ಬದಲಾಗಿ ಮಹಿಳೆಯರು ಸೀರೆ, ಸಲ್ವಾರ್ ಧರಿಸಿ ಪಿಂಕಥಾನ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂದಿತು.

‘ಭಾರತೀಯ ಮಹಿಳೆಯರಿಗೆ ಓಟದ ವೇಳೆ ಆರಾಮದಾಯಕ ಎನಿಸುವ ರೀತಿಯ ಉಡುಪುಗಳನ್ನು ವಿನ್ಯಾಸಗೊಳಿಸಲು ನಿರ್ಧರಿಸಿದೆವು. ನಾವು ವಿಶ್ವದ ಮೊದಲ ಪರ್ಫಾರ್ಮೆನ್ಸ್ ಕುರ್ತಿ ಅಭಿವೃದ್ಧಿಪಡಿಸಿದ್ದೇವೆ’ ಎನ್ನುವುದು ಮಿಲಿಂದ್ ಅವರ ವಿವರಣೆ.

ಈ ವಿಶೇಷ ಉಡುಪುಗಳ ವಿನ್ಯಾಸ ಓಟ, ವಾಕಿಂಗ್‌, ಯೋಗ, ಈಜುಗಾರಿಕೆ ಹಾಗೂ ಜಿಮ್‌ಗೆ ಬಳಸಲು ಸೂಕ್ತವಾಗುವಂತೆ ಇದೆ. ಜಾಗತಿಕ ಮಟ್ಟದ ಕ್ರೀಡಾ ಉಡುಪುಗಳ ರೀತಿಯಲ್ಲಿ ಆದರೆ ಭಾರತೀಯ ಶೈಲಿ ಗಮನದಲ್ಲಿ ಇರಿಸಿಕೊಂಡು ಇವುಗಳನ್ನು ರೂಪಿಸಲಾಗಿದೆ. ಮಹಿಳೆಯರಿಗೆ ಯೋಗ ಮಾಡಲು ಅನುಕೂಲವಾಗುವ ಮಾದರಿಯ ಶೇ 100ರಷ್ಟು ರಾಸಾಯನಿಕ ಮುಕ್ತ ಹತ್ತಿ ಉಡುಪುಗಳು ‘ದೇವಿ’ಯಲ್ಲಿ ಲಭ್ಯ ಇವೆ.

‘ಮಹಿಳೆಯರಿಗೆಂದೇ ಫಿಟ್‌ನೆಸ್‌ ಉಡುಪುಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಮಾರುಕಟ್ಟೆಯನ್ನು ಬಳಸಿಕೊಂಡು ವಿಶೇಷವಾದ ಉಡುಪುಗಳನ್ನು ಪರಿಚಯಿಸುವ ಮೂಲಕ ವಹಿವಾಟಿನಲ್ಲಿ ಉತ್ತಮ ಪ್ರಗತಿ ಸಾಧಿಸುವ ಗುರಿ ಹೊಂದಿದ್ದೇವೆ’ ಎಂದು ಕಂಪೆನಿ ಮತ್ತೊಬ್ಬ ಸಹ ಸಂಸ್ಥಾಪಕ ದರ್ಶನ್‌ ಎಂ. ಹೇಳುತ್ತಾರೆ.

‘ಮಹಿಳೆಯರು ತಮಗೆ ಒಗ್ಗದ ಅಳತೆಯ ಉಡುಪುಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಬದಲು ದೇವಿ ಬ್ರ್ಯಾಂಡ್‌ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮಗೆ ತಕ್ಕದಾಗುವ ಅಳತೆಯ ಹಾಗೂ ಆರಾಮದಾಯಕ ಎನಿಸುವಂತಹ  ಉಡುಪುಗಳನ್ನೇ ಧರಿಸಬಹುದು’ ಎಂದೂ ಅವರು ತಿಳಿಸಿದರು.

₹32 ಕೋಟಿ ಬಂಡವಾಳ ಸಂಗ್ರಹ ಗುರಿ
ಹೈದರಾಬಾದ್‌ ಮೂಲದ ನಟ ಅಲ್ಲು ಶಿರೀಶ್‌ ಅವರು ‘ದೇವಿ’ಗೆ ಆರಂಭಿಕ ಬಂಡವಾಳ ಹೂಡಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ‘ದೇವಿ’ ₹100 ಕೋಟಿ ಮೌಲ್ಯದ ಬ್ರ್ಯಾಂಡ್‌ ಆಗಲಿದೆ ಎಂದು ಶಿರೀಶ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ವರ್ಷ ₹5ರಿಂದ ₹6 ಕೋಟಿವರೆಗೂ ವಹಿವಾಟು ನಡೆಸುವ ಅಂದಾಜಿದೆ. ಮುಂದಿನ ಎರಡು ವರ್ಷಗಳಲ್ಲಿ ವಿವಿಧೆಡೆಯಿಂದ ಸುಮಾರು ₹32.5 ಕೋಟಿ   ಬಂಡವಾಳ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ದರ್ಶನ್‌.

ಮೈಸೂರು,ಕೊಚ್ಚಿಯಲ್ಲಿ ಮಳಿಗೆ
ಆನ್‌ಲೈನ್ ಸ್ಟೋರ್‌ಗಳಲ್ಲಿ ಹೊರತಾಗಿ ಮೈಸೂರು ಹಾಗೂ ಕೊಚ್ಚಿಯಲ್ಲಿರುವ ಕೆಲವು ಮಳಿಗೆಗಳಲ್ಲಿ ‘ದೇವಿ’ ಉಡುಪುಗಳು ಲಭ್ಯವಿವೆ.

‘ಮಳಿಗೆಗಳನ್ನು ತೆರೆಯುವುದು ಎಂದರೆ ಯೋಗ, ಫಿಟ್‌ನೆಸ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಜಾಗತಿಕವಾಗಿ ಯೋಗಕ್ಕೆ ಸಂಬಂಧಿಸಿದ ಉತ್ಪನ್ನಗಳ ಮಾರುಕಟ್ಟೆಗೆ ಇರುವಷ್ಟು ಬೇಡಿಕೆ ಭಾರತದಲ್ಲಿ  ಇಲ್ಲ. ಹೀಗಾಗಿ, ಸದ್ಯಕ್ಕೆ ಋಷಿಕೇಶ, ಧರ್ಮಶಾಲಾ, ಗೋವಾ ಹಾಗೂ ಪುಣೆಯಲ್ಲಿ ಮಳಿಗೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ದರ್ಶನ್‌ ತಿಳಿಸಿದರು.

‘ಅಮೆರಿಕದಲ್ಲಿ ಯೋಗಾಭ್ಯಾಸಿಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ, ಅಲ್ಲಿನ ಮಾರುಕಟ್ಟೆ ಪ್ರವೇಶಿಸುವ ಯೋಜನೆಯೂ ಇದೆ. ಮೊದಲಿಗೆ ನಾವು ಅರಬ್ ಒಕ್ಕೂಟ ರಾಷ್ಟ್ರಗಳಿಗೆ ನಮ್ಮ ಬ್ರ್ಯಾಂಡ್ ಕೊಂಡೊಯ್ಯಲಿದ್ದೇವೆ’ ಎಂದು ಅವರು ಹೇಳಿದರು.

ವಿನ್ಯಾಸಕರು, ವ್ಯಾಪಾರಿಗಳು, ಅಥ್ಲೀಟ್‌ಗಳು, ಫ್ಯಾಷನ್ ಮಾಡೆಲ್‌ಗಳು, ಫಿಟ್‌ನೆಸ್‌  ತರಬೇತುದಾರರು ಹಾಗೂ ಯೋಗಾಭ್ಯಾಸಿಗಳು ಮಿಲಿಂದ್ ಹಾಗೂ ದರ್ಶನ್ ಅವರ ತಂಡದಲ್ಲಿದ್ದಾರೆ. ಮಹಿಳೆಯರ ಫಿಟ್‌ನೆಸ್‌ ಹಾಗೂ ಯೋಗ ಚಟುವಟಿಕೆಗಳಿಗೆ ಅನುಕೂಲವಾದ ನೂತನ ವಿನ್ಯಾಸಗಳ ಉಡುಪುಗಳನ್ನೂ ಈ ತಂಡ ಸಿದ್ಧಪಡಿಸುತ್ತದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ದೇವಿ ಬ್ರ್ಯಾಂಡ್ ಉಡುಪುಗಳು ಲಭ್ಯ ಇವೆ.

ಜಾಲತಾಣದ ವಿಳಾಸ: www.deivee.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT