ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯವೆನ್ನುವ ಬಂದಳಿಕೆ!

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಭಯವಿಲ್ಲದೇ ಇರುವವರು ಯಾರೂ ಇಲ್ಲ!

ನಿಜ. ಭಯವೇ ಇಲ್ಲದ ಮನುಷ್ಯರು ಭೂಮಿಯ ಮೇಲಿಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಭಯ ಇದ್ದೇ ಇರುತ್ತದೆ. ಕೆಲವರು ತಮಗಿರುವ ಭಯವನ್ನು ಒಪ್ಪಿಕೊಳ್ಳುತ್ತಾರೆ. ಬಹಳಷ್ಟು ಜನರು ಹಾಗೆ ಒಪ್ಪಿಕೊಳ್ಳುವುದಿಲ್ಲ. ಕೆಲವರಿಗಂತೂ ಇದೊಂದು ಮಹಾವ್ಯಾಧಿಯಂತೆಯೇ ಉಲ್ಬಣಿಸಿರುತ್ತದೆ. ಕೆಲವರಿಗೆ ಅದರ ತೀವ್ರತೆ ಅಷ್ಟಾಗಿ ಇರುವುದಿಲ್ಲ.

ಆದರೆ, ಭಯವಿಲ್ಲದೇ ಇರುವವರು ಮಾತ್ರ ಯಾರೂ ಇಲ್ಲ!

ಭಯವೇ ಇಲ್ಲ ಎನ್ನುವವರಿಗೂ ಭಯವಿರುತ್ತದೆ. ಭಯ ಅವರೊಳಗೇ ಅವಿತುಕೊಂಡಿರುತ್ತದೆ. ಅದು ಅವರಿಗರಿವಿಲ್ಲದಂತೆಯೇ ಬದುಕಿನ ಬಹುಮುಖ್ಯ ಸಂದರ್ಭಗಳಲ್ಲಿ ಅನರೀಕ್ಷಿತವಾಗಿ ಧುತ್ತನೇ ವ್ಯಕ್ತವಾಗುತ್ತದೆ. ಆಗ ಸಾಕಷ್ಟು ಅನಾಹುತಗಳನ್ನು ಮಾಡಿಬಿಡುತ್ತದೆ. ಭಯವನ್ನು ಮೀರಿದರೆ ಮಾತ್ರ ಬದುಕಿನ ಭವ್ಯತೆಯ ಅನುಭವವಾಗುತ್ತದೆ. ಹೀಗೆಂದು ಬಹಳ ಹಿಂದಿನಿಂದಲೂ ಸಾಧಕರು ಹೇಳುತ್ತಲೇ ಬಂದಿದ್ದಾರೆ. ಭಯವನ್ನು ಬಿಟ್ಟವನು ಭವವನ್ನು ಗೆದ್ದವನು ಎನ್ನುತ್ತಾರೆ. ಇನ್ನು ಭಯವನ್ನು ಬಿಡುವ ಪ್ರಯತ್ನವನ್ನು ಮಾಡಲಿಕ್ಕೂ ಭಯ ಎನ್ನುತ್ತಾರೆ ಬಹಳ ಜನ.

ತಾನು ಯಾರಿಗೂ ಹೆದರುವುದಿಲ್ಲ. ತನಗೆ ಯಾರ ಭಯವೂ ಇಲ್ಲ ಎಂದು ಪದೇ ಪದೇ ಹೇಳುವವರಿಗೆ ನಿಜಕ್ಕೂ ಭಯವಿರುತ್ತದೆ! ತಮ್ಮೊಳಗಿನ ಭಯದ ಭಾವನೆಯನ್ನು ಅದುಮಿಡಲಿಕ್ಕಾಗಿ ಅವರು ಭಯವಿಲ್ಲ ಎನ್ನುವುದನ್ನು ಹೇಳಿಕೊಳ್ಳುತ್ತ ಇರುತ್ತಾರೆ. ಅವರ ಮಾತು ಮತ್ತು ವರ್ತನೆಗಳನ್ನು ನೋಡಿದವರು ಅವರಿಗೆ ಭಯವಿಲ್ಲ ಎನ್ನುವುದನ್ನು ನಂಬುತ್ತಾರೆ. ‘ಅಯ್ಯೋ, ಅವರು, ಬಹಳ ಧೈರ್ಯದ ಮನುಷ್ಯ. ಯಾರಿಗೂ ಹೆದರುವುದಿಲ್ಲ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾರೆ’ ಎಂಬ ಹೊಗಳಿಕೆಯ ಮಾತನ್ನೂ ಹೇಳುತ್ತಾರೆ. ಆದರೆ ಹಾಗೆ ಭಯವಿಲ್ಲದವನಂತಿದ್ದು, ಯಾರನ್ನಾದರೂ ಎದುರು ಹಾಕಿಕೊಳ್ಳುವಂತಹ ವ್ಯಕ್ತಿಗೆ ಅದರಿಂದ ಸಾಕಷ್ಟು ನಷ್ಟ, ನೋವು ಆಗುತ್ತದೆ. ನಿಜಕ್ಕೂ ನಿರ್ಭಯನಾಗಿರುವವರು ಯಾರನ್ನೂ ಹೆದರಿಸುವುದಿಲ್ಲ; ಯಾರನ್ನೂ ಎದುರು ಹಾಕಿಕೊಳ್ಳುವುದಿಲ್ಲ. ಅರ್ಧಜಗತ್ತನ್ನೇ ಅಮಾನುಷವಾಗಿ ಕಾಡಿದ್ದ ಕ್ರೂರಿ ಹಿಟ್ಲರ್ ನಿಜಕ್ಕೂ ಧೈರ್ಯವಂತನಾಗಿರಲಿಲ್ಲವಂತೆ. ಅತನ ಒಳಗೊಳಗೇ ಬೆಟ್ಟದಷ್ಟು ಭಯವಿದ್ದ ಮನುಷ್ಯನಾಗಿದ್ದನಂತೆ! ಕೊನೆಯಲ್ಲಿ ಆತ ಭಯದಿಂದಲೇ ಆತ್ಮಹತ್ಯೆ ಮಾಡಿಕೊಂಡನಂತೆ.

ಪಾಲಕರ ಭಯ, ಶಿಕ್ಷಕರ ಭಯ, ನೀರಿನ ಭಯ, ಎತ್ತರದ ಭಯ, ಸೋಲಿನ ಭಯ, ಕತ್ತಲಿನ ಭಯ, ಪರೀಕ್ಷೆಯ ಭಯ, ಭೂತದ ಭಯ, ನರಕದ ಭಯ, ಕಳೆದುಕೊಳ್ಳುವ ಭಯ, ಹೆಂಗಸರ ಭಯ, ಗಂಡಸರ ಭಯ, ಗಂಡನ ಭಯ, ಹೆಂಡತಿಯ ಭಯ, ಶಬ್ದದ ಭಯ, ಸಾವಿನ ಭಯ, ರೋಗದ ಭಯ, ಇಂಜೆಕ್ಷನ್ನಿನ ಭಯ, ದೇವರ ಭಯ – ಹೀಗೆ ಭಯಗಳ ಪಟ್ಟಿಯೇ ಇದೆ.

ಬೇರೆ ಬೇರೆ ಸಂದರ್ಭಗಳಲ್ಲಿ ಮಗುವಿನಲ್ಲಿ ಬೇರೆ ಬೇರೆ ಭಯಗಳು ಬೇರೆ ಬೇರೆ ರೂಪಗಳಲ್ಲಿ ಸೇರಿಕೊಂಡಿರುತ್ತವೆ. ಸುಪ್ತಮನಸ್ಸಿನಲ್ಲಿ ಪದರು ಪದರುಗಳಾಗಿ ಸೇರಿಕೊಂಡಿರುವ ಭಯ, ಮುಂದೆ ವ್ಯಕ್ತಿಗೆ ಸಾಕಷ್ಟು ಕಷ್ಟಗಳನ್ನು ಕೊಡುವುದಂತೂ ಸತ್ಯ. ಭಯವೆನ್ನುವುದು ಮರಕ್ಕಿರುವ ಬಂದಳಿಕೆಯ ಹಾಗೆ. ಕಾಲಾನುಕ್ರಮದಲ್ಲಿ ಈ ಭಯವೆನ್ನುವ ಬಂದಳಿಕೆ ಮನುಷ್ಯನನ್ನು ನರಳಿಸಿ  ನರಳಿಸಿ ನಾಶಮಾಡುತ್ತದೆ. ಬದುಕನ್ನು ಅಶಾಂತಿ ಮತ್ತು ಅವಘಡಗಳಿಂದ ತುಂಬಿಬಿಡುತ್ತದೆ.

ಭಯದಿಂದ ಬಳಲುತ್ತಿರುವವರು ಅದರ ಬಂಧನದಿಂದ ಹೊರಗೆ ಬರಲಿಕ್ಕೆ  ಹೆಣಗುತ್ತಿರುತ್ತಾರೆ. ಬೀದಿಯ ಕೊನೆಯ ಮನೆಯ ವ್ಯಕ್ತಿಗೆ ಡೆಂಗಿ ಬಂದಿರುವ ವಿಷಯ ತಿಳಿಯುತ್ತಿರುವಂತೆಯೇ ಭಯವಿರುವ ಮನುಷ್ಯ ಅದು ತನಗೂ ಬಂದೇ ಬರುತ್ತದೆ ಎಂದು ಭಯಭೀತನಾಗುತ್ತಾನೆ. ಅದು ಬರದಂತೆ ಅನಗತ್ಯ ಎನ್ನಿಸುವಷ್ಟು ಮುಂಜಾಗ್ರತೆಯನ್ನು ವಹಿಸುತ್ತಾನೆ. ದಿನಗಟ್ಟಲೇ ಗೂಗಲ್ ಮುಂದೆ ಕುಳಿತುಕೊಂಡು ಡೆಂಗಿಯ ಸಾಧಕ – ಬಾಧಕಗಳ ಬಗ್ಗೆ ತಿಳಿದುಕೊಳ್ಳಲಿಕ್ಕೆ ಪ್ರಯತ್ನಿಸುತ್ತಾನೆ. ಪುಣ್ಯಕ್ಕೆ ಮುಂದೆ ಆರು ತಿಂಗಳಲ್ಲಿ ಅವನಿಗೆ ಯಾವ ಜ್ವರವೂ ಬರಲಿಕ್ಕಿಲ್ಲ! ಆದರೂ ಆತ ಡೆಂಗಿ ಮಾರಿ ತನಗೂ ಅಪ್ಪಳಿಸಬಹುದು ಎಂದು ಹೆದರಿ ಸುಸ್ತಾಗಿಹೋಗಿರುತ್ತಾನೆ!

ಭಯವು ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿರುತ್ತದೆ. ಬಿಸಿನೆಸ್ಸಿನಲ್ಲಿ ನಷ್ಟವಾಗಬಹುದು, ಸ್ಕೂಟರಿನಲ್ಲಿ ಹೋದರೆ ಬೇರೆಯವರು ಬಂದು ಡಿಕ್ಕಿ ಹೊಡೆಯಬಹುದು, ತಾನು ಪ್ರಯಾಣ ಮಾಡಲಿರುವ ರೈಲು ಆಕಸ್ಮಾತ್ತಾಗೆ ಹಳಿತಪ್ಪಿ ಬೀಳಬಹುದು –  ಹೀಗೆ ಮನಸ್ಸಿನಲ್ಲಿ ಭಯದ ನರ್ತನ ನಡೆದಿರುತ್ತದೆ. ವ್ಯಕ್ತಿಯನ್ನು ಅದು ಅಯೋಮಯನನ್ನಾಗಿ ಮಾಡುತ್ತದೆ.

ಅವರಿಗೆ ಐವತ್ತರ ವಯಸ್ಸು. ಕೆಲವು ವರ್ಷಗಳಿಂದ ಸಕ್ಕರೆ ಕಾಯಿಲೆ ಇದೆ. ಅವರಿಗೆ ಭಯ ಜಾಸ್ತಿ. ಎಲ್ಲದರಲ್ಲೂ ಹಿಂಜರಿಕೆ. ಈ ಸ್ವಭಾವದಿಂದ ಅವರಿಗೆ ಬದುಕಿನಲ್ಲಿ ನಿರಾಸಕ್ತಿ.  ಆತ್ಮಹತ್ಯೆ ಮಹಾಪಾಪ ಎನ್ನುವುದು ಗೊತ್ತಿರುವುದರಿಂದ ಬದುಕಿದ್ದಾರಂತೆ. ಮನೆಯವರೊಟ್ಟಿಗೆ ಬದುಕುವುದೆಂದರೆ ಅವಮಾನವಂತೆ. ದಿನವೂ ಒಂದಲ್ಲ ಒಂದು ಹಿಂಸೆಯಲ್ಲಿಯೇ ಬದುಕಿದ್ದಾರಂತೆ. ಅವರಿಗೆ ಧೈರ್ಯ ಬೇಕಂತೆ. ಎಷ್ಟು ಧೈರ್ಯ ಬೇಕು ಎಂದು ನಾನು ಸ್ವಲ್ಪ ಲಘುವಾಗಿಯೇ ಕೇಳಿದೆ. ಅದಕ್ಕೆ ಅವರು ಮಾತ್ರ ಬಹಳ ಗಂಭೀರವಾಗಿಯೇ, ‘ಒಂದೇ ಒಂದು ಸಲ ಹೆಂಡತಿಯನ್ನು ಹಿಡಿದುಕೊಂಡು ರಪರಪನೆ ಹೊಡೆಯಬೇಕು ಸಾರ್, ಅಷ್ಟು ಧೈರ್ಯ ಬರುವಂತೆ ಮಾಡಿ ಸಾಕು’ ಎಂದರು!  ಅವರ ಕಣ್ಣಲ್ಲಿ ನೀರಿಳಿಯುತ್ತಿತ್ತು.

ಪಿಯುಸಿ ಓದುತ್ತಿರುವ ಹುಡುಗನ ವ್ಯಥೆಯ ಕಥೆಯಿದು. ಅವನಿಗೆ ಓದುವುದರಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ಆದರೂ ಓದಿ, ಕಲಿತು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂದು ಅವನಿಗೆ ಆಸೆ ಇದೆ. ಹಾಗಾಗಿ ಕಷ್ಟಪಟ್ಟು ಓದುತ್ತಾನೆ. ಇಲ್ಲಿಯವರೆಗೆ ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗುತ್ತ ಬಂದಿದ್ದಾನೆ. ಮುಂದಿನ ವರ್ಷ ಪಿಯುಸಿಯ ಎರಡನೆಯ ವರ್ಷದ ಪರೀಕ್ಷೆ. ಮೊದಲ ವರ್ಷದ ಪರೀಕ್ಷೆಯ ದಿನಗಳಲ್ಲಿ ಅವನಿಗೆ ಬಹಳ ಕಷ್ಟವಾಗುತ್ತಿರುವುದು ಗಮನಕ್ಕೆ ಬಂತು. ಪರೀಕ್ಷಾ ಕೊಠಡಿಯೊಳಗೆ ಹೋಗುತ್ತಿದ್ದ ಹಾಗೆಯೇ ಅವನಿಗೆ ಟೆನ್ಶನ್ ಏರುತ್ತಿತ್ತು. ಮೈ ಬೆವರುತ್ತಿತ್ತು. ಪ್ರಶ್ನಪತ್ರಿಕೆ ಕೈಗೆ ಬರುತ್ತಿದ್ದಂತೆಯೇ ಓದಿಕೊಂಡಿದ್ದೆಲ್ಲವೂ ಮರೆತುಹೋಗುತ್ತಿತ್ತು! ಬಹಳಷ್ಟು ಪ್ರಶ್ನೆಗಳಿಗೆ ಉತ್ತರವನ್ನು ಓದಿ ತಯಾರಿಸಿಕೊಂಡಿದ್ದು ನೆನಪಾಗುತ್ತಿತ್ತಾದರೂ ಆ ಕ್ಷಣದಲ್ಲಿ ಸ್ಪಷ್ಟವಾದ ಉತ್ತರ ಮಾತ್ರ ಹೊಳೆಯುತ್ತಿರಲಿಲ್ಲ. ಇದರಿಂದ ಅವನಿಗೆ ಆಘಾತವಾಗುತ್ತಿತ್ತು.

ಭಯಗಳಿಂದಾಗಿ ಬಹಳಷ್ಟು ಜನರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಕಾಲುಗಳಲ್ಲಿ ಶಕ್ತಿಯೇ ಇಲ್ಲದವರಂತೆ ಒದ್ದಾಡುತ್ತಾರೆ. ಎರಡು ಸಲ ಸ್ಕೂಟರಿನಿಂದ ಬಿದ್ದವರು ಮತ್ತೆಂದೂ ಸ್ಕೂಟರನ್ನು ಓಡಿಸಲಾರದಷ್ಟು ಭಯಭೀತರಾಗುತ್ತಾರೆ. ಊಟದಲ್ಲಿ ಕಿಂಚಿತ್ ಉಪ್ಪು ಜಾಸ್ತಿಯಾದರೆ ಬಿಪಿ ಬರುತ್ತದೆ ಎಂದು ಭಯಪಡುತ್ತಾರೆ. ವಯಸ್ಸು ನಲವತ್ತರ ಹತ್ತಿರ ಬಂತು, ಇನ್ನು ಸಿಹಿ ತಿಂದರೆ ಕಷ್ಟ, ಶುಗರ್ ಬರಬಹುದು ಎಂದು ಭಯಪಡುತ್ತಾರೆ. ದೇಹದ ತೂಕ ಎರಡು–ಮೂರು ಕೆಜಿ ಜಾಸ್ತಿಯಾಗುತ್ತಿರುವಂತೆಯೇ ಹೆದರಿ ಡಯಟ್ ಶುರುಮಾಡುತ್ತಾರೆ.

ರಾಮಾಗಿರುವಾಗಲೇ ಬಹಳಷ್ಟು ಭಯಗಳನ್ನು ಆಹ್ವಾನಿಸಿಕೊಂಡು ನರಳುತ್ತ ಬದುಕುತ್ತಿರುತ್ತಾರೆ. ಜೀವಜಗತ್ತಿನ ಯಾವುದೇ ಪ್ರಾಣಿಗೂ ಇಲ್ಲದ ವೈವಿಧ್ಯಮಯವಾದ ಭಯಗಳಿರುವುದು ಮನುಷ್ಯನಿಗೆ ಮಾತ್ರ.

ಭೂಮಿಯ ಮೇಲಿನ ಬದುಕನ್ನು ಭಯರಹಿತರಾಗಿ ಬದುಕಬೇಕು. ನಿರ್ಭಯರಾಗಿ ಬದುಕಬೇಕು. ಎದೆಯೊಳಗಿನ ಹೆದರಿಕೆಯನ್ನು ಗುರುತಿಸಿಕೊಂಡು ಸಾಧ್ಯವಾದಷ್ಟು ಬೇಗನೇ ಅದರ ನಿವಾರಣೆಗೆ ಸರಿಯಾದ ಚಿಕಿತ್ಸೆಯನ್ನು ತೆಗೆದುಕೊಳ್ಳಬೆಕು. ಶರೀರದ ಆರೋಗ್ಯಕ್ಕಿಂತಲೂ ಜಾಸ್ತಿ ಮನಸ್ಸಿನ ಆರೋಗ್ಯದ ಬಗ್ಗೆ ಗಮನವನ್ನು ಕೊಡಬೇಕು. ಶರೀರದ ಮೂಲಕ ವ್ಯಕ್ತವಾಗುವ ಬಹಳಷ್ಟು ವ್ಯಾಧಿಗಳು ಮೊದಲು ಮನಸ್ಸಿನಲ್ಲಿಯೇ ಹುಟ್ಟುತ್ತವೆ. ಕಾಲಕ್ರಮೇಣ ಅವು ಶರೀರದ ಮೂಲಕ ವ್ಯಕ್ತವಾಗುತ್ತವೆ. ಮೊದಲು ಮನಸ್ಸಿನ ನೆಮ್ಮದಿಗೆ ಮೊದಲ ಪ್ರಾಶಸ್ತ್ಯವನ್ನು ಕೊಡಬೇಕು.

(ಲೇಖಕರು ಆಪ್ತಸಮಾಲೋಚಕ ಮತ್ತು ತರಬೇತುದಾರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT