ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಮರೀಚಿಕೆ

6.3 ಕೋಟಿ ಜನರಿಗೆ ಜೀವಜಲದ ಕೊರತೆ: ವಾಟರ್‌ಏಡ್‌ ಸಂಸ್ಥೆಯ ವರದಿ
Last Updated 21 ಮಾರ್ಚ್ 2017, 20:09 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ 6.3 ಕೋಟಿ ಜನರಿಗೆ ಶುದ್ಧ ಜೀವಜಲವೇ ಮರೀಚಿಕೆಯಾಗಿದೆ.
ಶುದ್ಧ ನೀರಿನಿಂದ ವಂಚಿತರಾದವರೆಲ್ಲ ಕಡು ಬಡವರು ಮತ್ತು ಸಾಮಾಜಿಕವಾಗಿ ಹಿಂದುಳಿದವರು.

‘ವಿಶ್ವ ಜಲ ದಿನದ’ ಅಂಗವಾಗಿ ಜಾಗತಿಕ ಮಟ್ಟದಲ್ಲಿ ನೀರಿನ ಸ್ಥಿತಿಗತಿ ಕುರಿತಾಗಿ ವಾಟರ್‌ಏಡ್‌ ಸಂಸ್ಥೆ ಬಿಡುಗಡೆ ಮಾಡಿರುವ ‘ವೈಲ್ಡ್‌ ವಾಟರ್‌’ ಎಂಬ ವರದಿಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

ಪ್ರಪಂಚದಾದ್ಯಂತ 66.3 ಕೋಟಿ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಈ ಪೈಕಿ ಗ್ರಾಮೀಣ ಭಾಗದ ಜನರೇ 52.2 ಕೋಟಿಯಷ್ಟಿದ್ದಾರೆ ಎಂದು ವರದಿ ಹೇಳಿದೆ. ಜಾಗತಿಕವಾಗಿ ಲೆಕ್ಕಹಾಕಿದರೆ, ಶುದ್ಧ ನೀರಿನ ಕೊರತೆ ಎದುರಿಸುತ್ತಿರುವವರ ಸಂಖ್ಯೆ ಭಾರತದಲ್ಲೇ ಹೆಚ್ಚಿದೆ. 6.3 ಕೋಟಿ ಎಂದರೆ ಬ್ರಿಟನ್ನಿನ ಜನಸಂಖ್ಯೆಗೆ ಸಮ ಎಂದು ವರದಿ ವಿವರಿಸಿದೆ.

ಸರ್ಕಾರಗಳು ಸರಿಯಾದ ರೀತಿಯಲ್ಲಿ ಯೋಜನೆ ಅನುಷ್ಠಾನ ಗೊಳಿಸದಿರುವುದು,  ನೀರಿಗಾಗಿ ಹೆಚ್ಚುತ್ತಿರುವ ಬೇಡಿಕೆ, ಜನಸಂಖ್ಯೆ ಹೆಚ್ಚಳ ಮತ್ತು ಹೆಚ್ಚು ನೀರು ಬಳಸುವ ಕೃಷಿ ಪದ್ಧತಿಗಳ ಅನುಸರಣೆಯಿಂದ ನೀರಿನ ಮೇಲಿನ ಹೊರೆ ಮತ್ತಷ್ಟು ಹೆಚ್ಚಿದೆ ಎಂದು ವರದಿ ವಿಶ್ಲೇಷಿಸಿದೆ. ಗ್ರಾಮೀಣ ಭಾಗಗಳಲ್ಲಿ ಈ ಸಮಸ್ಯೆ ಇರುವುದರಿಂದ  ಕಾಲರಾ, ಕಣ್ಣಿನ ರವೆ ರೋಗ (ಟ್ರಕೋಮ), ಮಲೇರಿಯಾ ಮತ್ತು ಡೆಂಗಿಯಂತಹ ಕಾಯಿಲೆಗಳು ಜನರನ್ನು ಬಾಧಿಸುವುದು ಸಾಮಾನ್ಯವಾಗಲಿದೆ.

ಅಪೌಷ್ಟಿಕತೆಯ ಭೂತ ಕಾಡುವುದೂ ನಿಚ್ಚಳ ಎಂದು ವರದಿ ಹೇಳಿದೆ.ತಾಪಮಾನದ ಏರಿಕೆ ಮತ್ತು ನೀರಿನ ಕೊರತೆ, ಕೃಷಿಯನ್ನೇ ಅವಲಂಬಿಸಿರುವ ಗ್ರಾಮೀಣ ಸಮುದಾಯಗಳ ಬದುಕನ್ನು ದುಸ್ತರಗೊಳಿಸಲಿವೆ. ಆಹಾರ ಪದಾರ್ಥ ಬೆಳೆಯಲು ಮತ್ತು ಜಾನುವಾರುಗಳ ಹೊಟ್ಟೆತುಂಬಿಸಲು ಗ್ರಾಮೀಣ ಜನ ಹರಸಾಹಸ ಪಡಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದೆ.

ನೀರು  ತರುವ ಹೊಣೆ ಹೊತ್ತಿರುವ ಮಹಿಳೆಯರು ಕಡು ಬೇಸಿಗೆಯಲ್ಲಿ ನೀರು ತರುವುದಕ್ಕಾಗಿ ಇನ್ನಷ್ಟು ದೂರ ನಡೆಯಬೇಕಾಗಿ ಬರಬಹುದು ಎಂದು ಅದು ಎಚ್ಚರಿಸಿದೆ.

ದೊಡ್ಡ ಸವಾಲು: ಆರ್ಥಿಕ ಶಕ್ತಿಯಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ಜಲ ಭದ್ರತೆಯನ್ನು ಖಾತರಿ ಪಡಿಸಿಕೊಳ್ಳುವುದು, ಅದರ ಮುಂದಿರುವ ಸವಾಲು  ಎಂದು ವರದಿ ಪ್ರತಿಪಾದಿಸಿದೆ. ‘ಭಾರತದ ಉತ್ತರ–ಮಧ್ಯ ಭಾಗವಾದ  ಬುಂದೇಲ್‌ಖಂಡದಲ್ಲಿ  ಬರ ಎಂಬುದು  ಈಗ ಜನರ ಜೀವನದ ಅವಿಭಾಜ್ಯ ಅಂಗವಾಗಿ ಬದಲಾಗಿದೆ. ಸತತ ಮೂರು ವರ್ಷಗಳಿಂದ ಅಪ್ಪಳಿಸಿರುವ ಬರಸ್ಥಿತಿಯು ಕೋಟ್ಯಂತರ ಜನರನ್ನು ಹಸಿವು ಮತ್ತು ಬಡತನದ ಕೂಪಕ್ಕೆ ತಳ್ಳಿದೆ’ ಎಂದು ಅದು ಅಭಿಪ್ರಾಯಪಟ್ಟಿದೆ.

ಅಪಾಯದ ಎಚ್ಚರಿಕೆ: ಹವಾಮಾನ ವೈಪರೀತ್ಯದಿಂದ ಸಂಭವಿಸುವ ವಿಪತ್ತುಗಳು ಮತ್ತು ಹವಾಮಾನ ಬದಲಾವಣೆಯಿಂದ ಜಗತ್ತಿನ ಕಡು ಬಡವರ ಮೇಲೆ ಆಗಬಹುದಾದ ಅಪಾಯಗಳ ಬಗ್ಗೆಯೂ ಅಧ್ಯಯನ ಎಚ್ಚರಿಸಿದೆ. ಹವಾಮಾನ ಬದಲಾವಣೆಗೆ ತುತ್ತಾಗುವ ಅಪಾಯ ಎದುರಿಸುತ್ತಿರುವ ಮತ್ತು ಅದಕ್ಕೆ ಹೊಂದಿಕೊಳ್ಳಲು ಅಗತ್ಯ ಸಿದ್ಧತೆ ಮಾಡಿಕೊಳ್ಳದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ನೋಟ್ರೆ ಡೇಮ್‌ ಗ್ಲೋಬಲ್‌ ಅಡಾಪ್ಟೇಷನ್‌ ಇಂಡೆಕ್ಸ್‌ ಹೇಳಿದೆ.

ಶುದ್ಧ ನೀರಿನಿಂದ ವಂಚಿತರಾಗಿರುವ ಗ್ರಾಮೀಣ ಭಾಗದ ಬಡವರು ಪ್ರತಿಕೂಲ ಹವಾಮಾನ ಮತ್ತು ಹವಾಮಾನ ಬದಲಾವಣೆಯ ಅನನುಕೂಲತೆಗಳಿಗೆ ತುತ್ತಾಗುವ ಅಪಾಯ ಹೆಚ್ಚು ಎಂದು ವರದಿ ತಿಳಿಸಿದೆ. ಬಹುತೇಕ ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳು ನೈಸರ್ಗಿಕ ವಿಪತ್ತುಗಳಿಗೆ ಗುರಿಯಾಗುವ ಸಂಭವ ಹೆಚ್ಚು. ದೇಶದಾದ್ಯಂತ ಇರುವ ಕಡು ಬಡವರು ಮತ್ತು ಶೋಷಿತರು ಈ ವಿಪತ್ತುಗಳಿಗೆ ತುತ್ತಾಗಲಿದ್ದಾರೆ ಎಂದು ವಾಟರ್ಏಡ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೆ. ಮಾಧವನ್‌ ಹೇಳಿದ್ದಾರೆ.

***

ಶುದ್ಧ ನೀರು ಸಿಗದಿರಲು ಕಾರಣವೇನು?
l ನೀರಿನ ಸೌಲಭ್ಯ ಇಲ್ಲದಲ್ಲಿ ಜನವಸತಿ
l ಮೂಲಸೌಕರ್ಯದ ಕೊರತೆ
l ಅನುದಾನದ ಕೊರತೆ

ಮಿತಿ ಮೀರಿದ ಬಳಕೆ
ಭಾರತದ ಅಂತರ್ಜಲ ಸಂಪನ್ಮೂಲಗಳ ವಿಶ್ಲೇಷಣೆ ಪ್ರಕಾರ, ದೇಶದಲ್ಲಿ  ಪ್ರಸ್ತುತ ಆರನೇ ಒಂದು ಭಾಗದಷ್ಟು ಅಂತರ್ಜಲವನ್ನು ಮಿತಿಮೀರಿ ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT