ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಲ್ಲಿ ತಲುಪಿಸಿದ ಬಣ್ಣಗಳ ಊರುಗೋಲು!

Last Updated 22 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯ ಇಪ್ಪತ್ತಾರರ ತರುಣ ಕಿರಣ್ ಶೇರ್ಖಾನೆ ಅವರ ಕಾಲುಗಳಲ್ಲಿನ ಶಕ್ತಿಯನ್ನು ಪೋಲಿಯೊ ಕಸಿದುಕೊಂಡಿದೆ. ಅವರ ಪಾಲಿಗೀಗ ಬಣ್ಣಗಳೇ ಊರುಗೋಲುಗಳಾಗಿವೆ. ಕನಸು ಕಂಡರೆ ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವ ನಂಬಿಕೆಯೇ ಅವರ ಕಲಾಕೃತಿಗಳನ್ನು ಈಗ ದೆಹಲಿಯ ಕಲಾವಲಯ ಮುಟ್ಟಿಸಿದೆ. ದೆಹಲಿಯ ‘ಲಲಿತಕಲಾ ಅಕಾಡೆಮಿ’ ಗ್ಯಾಲರಿಯಲ್ಲಿ ಇದೇ 24ರಿಂದ 30ರವರೆಗೆ ಕಿರಣ್‌ರ ‘ಇನ್‌ಸ್ಪೈರ್ಡ್‌ ಬೈ ದಿ ನೇಚರ್’ ಶೀರ್ಷಿಕೆಯ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

**

‘ಭಾಳ ದೊಡ್ಡ ಧೈರ್ಯ ತೊಗೊಂಡು ಈ ಕೆಲಸಕ್ಕೆ ಮುಂದಾಗೀನ್ರೀ. ದೂರದ ದೆಹಲಿಯೊಳಗ ನನ್ನ ಕಲಾಪ್ರದರ್ಶನ ಮಾಡಲೇಬೇಕು ಅಂತ ಕನಸು ಕಂಡಿದ್ದೇರ್ರೀ. ಅದು ಇಷ್ಟು ಬೇಗ ನೆರವೇರ್‍ತದ ಅಂತ ಅಂದ್ಕೊಂಡಿರಲಿಲ್ಲ. ಈಗ ನನ್ನ ಕನಸು ಕೈಗೂಡ್ತು ನೋಡ್ರೀ...’– ಹೀಗೆ ಖುಷಿಯಿಂದ ಹೇಳಿಕೊಂಡ ಯುವ ಕಲಾವಿದನ ಹೆಸರು ಕಿರಣ್ ಶೇರ್ಖಾನೆ.

(ಹುಬ್ಬಳ್ಳಿಯಲ್ಲಿನ ಹಳೆಯ ಮನೆಗಳ ಚೆಲುವು)

ಮೊದಲ ಬಾರಿಗೆ ದೂರದ ನವದೆಹಲಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶ ಪಡೆದುದಕ್ಕೆ ಕಿರಣ್‌ರ ಮುಖದಲ್ಲಿ ಹೊಳಪಿತ್ತು. ತನ್ನ ಕನಸು ನನಸಾಗುತ್ತಿದೆ ಎನ್ನುವ ಉತ್ಸಾಹದ ಅವರ ಮಾತಿನಲ್ಲಿ ಆತ್ಮವಿಶ್ವಾಸವಿತ್ತು. ಕಲಾಪ್ರಿಯರಿಗೆ ದೊಡ್ಡ ಮಟ್ಟದಲ್ಲಿ ಮುಖಾಮುಖಿ ಆಗುತ್ತಿದ್ದೇನೆ ಎನ್ನುವ ತವಕವೂ ಇತ್ತು. ಸ್ನೇಹಿತರಿಗೆ, ಕಲಾವಲಯದವರಿಗೆ ಆಹ್ವಾನಪತ್ರಿಕೆ ನೀಡುವ ಗಡಿಬಿಡಿಗೂ ಅವರು ಒಳಗಾಗಿದ್ದರು. ದೆಹಲಿಗೆ ಹೊರಡಲು ರೈಲುಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಲೇ ಮಾತಿಗಿಳಿದ ಅವರಲ್ಲಿ, ತಾನು ಮಾಡುವ ಕೆಲಸಗಳಿಗೆ ದೇಹ ಅಷ್ಟಾಗಿ ಸಹಕರಿಸದೇ ಇದ್ದರೂ ಮನದಲ್ಲಿ ಆತ್ಮವಿಶ್ವಾಸಕ್ಕೇನೂ ಕೊರತೆ ಇರಲಿಲ್ಲ.

(ಸೋದರನೊಂದಿಗೆ ಕಿರಣ್)

ಕಿರಣ್‌, ಹಳೇ ಹುಬ್ಬಳ್ಳಿಯ ಇಂಡಿ ಪಂಪ್ ವೃತ್ತದ ಸಮೀಪದ ಆಸರ್ ಓಣಿಯಲ್ಲಿಯೇ ಹುಟ್ಟಿ ಬೆಳೆದವರು. 26ರ ಈ ಯುವಕ ನೋಡಲು ಈಗಲೂ ಬಾಲಕ. ಪೋಲಿಯೊ ಪೀಡಿತನಾದುದರಿಂದ ಎಲ್ಲ ಮಕ್ಕಳಂತೆ ಬೆಳವಣಿಗೆ ಸಲೀಸಾಗಿ ಆಗಿಲ್ಲ. ದೇಹ ಸದೃಢವಾಗಿ ಇರದಿದ್ದರೆ ಏನಾಯ್ತು – ‘ಎಲ್ಲ ಸರಿಯಾಗಿರುವ’ ಯುವಕರಿಗಿಂತ ಹೆಚ್ಚು ಕನಸು ಕಾಣಬಲ್ಲ ಶಕ್ತಿ ಆತನದು. ಕುಂಚ ಕೈಗೆತ್ತಿಕೊಂಡರೆ ವರ್ಣಮಯ ಲೋಕ ಸೃಷ್ಟಿಸಬಲ್ಲ. ಬದುಕು ವರ್ಣಮಯವಾಗಿ ಇರದಿದ್ದರೂ ವರ್ಣಮಯ ಲೋಕವನ್ನು ಸೃಷ್ಟಿಸುವ ಈ ಕನಸುಗಾರನನ್ನು ನೋಡಿದವರೆಲ್ಲ ಮೂಗಿನ ಮೇಲೆ ಬೆರಳಿಡದೆ ಇರಲು ಸಾಧ್ಯವಿಲ್ಲ.‘ಮೂರು ವರ್ಷಗಳವರೆಗೆ ಎಲ್ಲವೂ ಸರಿಯಾಗಿತ್ತು. ನಾನೂ ಎಲ್ಲ ಮಕ್ಕಳಂತೆ ಇದ್ದೆ, ಆದರೆ ಅದೆಲ್ಲಿಂದಲೋ

ಪೋಲಿಯೊ ಹೊಡೀತು, ಆಮೇಲಿಂದ ನನ್ನ ಬಾಲ್ಯದ ಚಿತ್ರಣ ಬದಲಾಯ್ತು, ಹೀಗಾಗಿದೆ ಅಂತೇನೂ ಗೋಳಾಡುವುದಿಲ್ಲ. ಚಿತ್ರಕಲೆಯಲ್ಲಿಯೇ ನಾನು ನಿರಂತರವಾಗಿ ತೊಡಗಿಕೊಂಡಿದ್ದರಿಂದ ಬದುಕು ವರ್ಣಮಯವಾಗಿದೆ’ ಎಂದು ಕಿರಣ್‌ ನಕ್ಕರು.

ಕಲೆಯನ್ನು ಉದ್ದೀಪಿಸುವ ಹುಬ್ಬಳ್ಳಿ–ಧಾರವಾಡದ ಮಣ್ಣಿನ ಗುಣವನ್ನು, ಇಲ್ಲಿನ ಸಂಸ್ಕೃತಿ, ಪರಂಪರೆ, ಸುತ್ತಮುತ್ತಲಿನ ಪರಿಸರ –ಇವೆಲ್ಲವನ್ನೂ ಕ್ಯಾನ್ವಾಸ್ ಮೇಲೆ ಕಟ್ಟಿಕೊಡುವ ಆಸೆ ಅವರದ್ದು.

(ವರ್ಣದಲ್ಲಿ ತೆರೆದುಕೊಂಡ ಹಳ್ಳಿ ಮಾರುಕಟ್ಟೆ)

ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಹೋಗುವಾಗಲೇ ಚಿತ್ರ ರಚಿಸುವ ಹವ್ಯಾಸ ಜೊತೆಯಾಗಿತ್ತು. ‘ನನ್ನ ಚಿಕ್ಕಪ್ಪ ರಮೇಶ ಶೇರ್ಖಾನೆ ನಾನು ಈ ಮಟ್ಟಕ್ಕೆ ತಲುಪಲು ಕಾರಣ. ಅವರು ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದರು. ಜೊತೆಗೆ ಬ್ಯಾನರ್ ರಚಿಸುತ್ತಿದ್ದರು. ಪೋರ್ಟ್ರಿಟ್‌ ಮಾಡ್ತಿದ್ರು, ಅವರ ಪ್ರಭಾವ ನನ್ನ ಮೇಲೆ ಆಯ್ತು. ಹೀಗಾಗಿ ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಚಿತ್ರಕಲೆಯತ್ತಲೇ ವಾಲಿದೆ. ಮುಂದೆ ಧಾರವಾಡದ ಸೃಜನಾ ಫೈನ್ ಆರ್ಟ್ಸ್‌ ಕಾಲೇಜು ಸೇರಿ ಬಿಎಫ್‌ಎ ಪದವಿ ಪಡೆದೆ’ ಎನ್ನುವ ಕಿರಣ್ ಈಗ ಪೂರ್ಣಾವಧಿ ಕಲಾವಿದರು.

ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡಿ ನಿವೃತ್ತರಾಗಿರುವ ಅಪ್ಪ ಬದುಕಿಗಾಗಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದಾರೆ. ಅಮ್ಮ, ತಂಗಿ ಹಾಗೂ ಸಹೋದರ ರಾಹುಲ್ – ಇದಿಷ್ಟು ಕಿರಣರ ಕುಟುಂಬ. ರಾಹುಲ್ ಬಹುತೇಕ ಸಂದರ್ಭಗಳಲ್ಲಿ ಸಾಥ್ ನೀಡುತ್ತಾರೆ. ಸ್ವತಂತ್ರವಾಗಿ ಅಡ್ಡಾಡಲು ಸಾಧ್ಯವಾಗದ ಅವರನ್ನು ಹೊತ್ತು ತಿರುಗಿಸುತ್ತಾರೆ. ‘ಮೊದಲೆಲ್ಲ ಸ್ವಲ್ಪ ನಡಿಯೋದಕ್ಕೆ ಆಗ್ತಿತ್ರೀ. ಈಗ ಮೂರು ವರ್ಷ ಆತು – ನಡೀಲಿಕ್ಕೆ ಬರೋದಿಲ್ಲರೀ...’ ಎನ್ನುತ್ತಲೇ ಸಹೋದರನ ಕೈಯಲ್ಲಿ ಮಗುವಾಗುತ್ತಾರೆ. ಮೊದಲೆಲ್ಲ ಹುಬ್ಬಳ್ಳಿ–ಧಾರವಾಡದ ನಡುವೆ ಬಸ್ಸಿನಲ್ಲಿಯೇ ಓಡಾಡಿ ಕಾಲೇಜಿಗೆ ಹೋಗಿಬಂದಿದ್ದಾರೆ. ಆದರೆ ಈಗ ಇನ್ನೊಬ್ಬರ ಸಹಾಯ ಬೇಕು.

ಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಇವರ ಚಿತ್ರಗಳಿಗೆ ಹಿರಿಯ ಕಲಾವಿದರು ಉತ್ತಮ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ‘ಈ ಯುವಕನಿಗೆ ಉತ್ತಮ ಭವಿಷ್ಯವಿದೆ’ ಎಂದಿದ್ದಾರೆ. ಹಿತೈಷಿಗಳು–ಸ್ನೇಹಿತರ ಬೆಂಬಲದಿಂದಲೇ ಅವರ ಪ್ರತಿಭೆ ಈಗ ದೆಹಲಿಯ ಲಲಿತಕಲಾ ಅಕಾಡೆಮಿಯ ಗ್ಯಾಲರಿ ತಲುಪಿದೆ.

(ಹುಬ್ಬಳ್ಳಿ ರಸ್ತೆಯ ಸೊಗಸು)

  ‘ತುಂಬಾ ಯೋಜನೆ ಮಾಡಿ ಕೆಲಸ ಮಾಡುವುದಿಲ್ಲ. ಬದುಕು ಹೇಗೆ ಬರುತ್ತದೆಯೋ ಹಾಗೆ ಸ್ವೀಕರಿಸುತ್ತೇನೆ. ಚಿತ್ರಕಲೆ ಬಹಳ ಖುಷಿ ಕೊಡುತ್ತದೆ. ಅದು ಸೇಲ್ ಆಗುತ್ತದೆಯೋ ಇಲ್ಲವೋ ಅಂತೆಲ್ಲ ಯೋಚನೆ ಮಾಡದೇ ಚಿತ್ರಿಸುತ್ತ ಹೋಗೋದ್ರೀ’ ಎನ್ನುವ ಕಿರಣ್ ಪ್ರತಿದಿನ ಒಂದೆರಡಾದರೂ ಪೇಂಟಿಂಗ್‌ಗಳನ್ನು ಮಾಡುತ್ತಾರೆ. ಕಂಪ್ಯೂಟರ್ ಮುಂದೆ ಕುಳಿತು ಫೋಟೊಶಾಪ್‌ನಲ್ಲಿಯೂ ಚಿತ್ರಿಸುತ್ತಾರೆ.

ಅವರ ಚಿತ್ರಗಳಲ್ಲಿ ಢಾಳಾದ ವರ್ಣ ಸಂಯೋಜನೆಯಿಲ್ಲ. ತಿಳಿಯಾದ ಬಣ್ಣಗಳ ಬಳಕೆ ಅವರ ಕಲಾಕೃತಿಗಳ ವಿಶೇಷ. ಜಲವರ್ಣ ಚಿತ್ರಗಳಲ್ಲಿ ಅಗತ್ಯವಾಗಿ ಅರಿವಿರಬೇಕಾದದ್ದು ಪದರು ಪದರಾಗಿ ಬಣ್ಣಗಳ ಬಳಸುವಿಕೆ, ಭೂದೃಶ್ಯಗಳಲ್ಲಿ ನೆರಳು ಬೆಳಕಿನ ಸಂಯೋಜನೆ, ವೇಗವಾಗಿ ಬಣ್ಣಗಳ ಲೇಪನ, ಕ್ಯಾನ್ವಾಸ್‌ನ ಮೈವಳಿಕೆಗಳನ್ನು ಹಾಗೆಯೇ ಉಳಿಸಿಕೊಂಡು ಮಾಡುವ ಒಂದಿಷ್ಟು ತಂತ್ರಗಾರಿಕೆ... ಅಷ್ಟಕ್ಕೂ ತಿಳಿಯಾದ ಬಣ್ಣಗಳ ಲೇಪನದಿಂದ ಹೆಚ್ಚು ಕಡುವರ್ಣಗಳತ್ತ ಸಾಗುವ ಹಾದಿ ಅಷ್ಟು ಸುಲಭವೂ ಅಲ್ಲ. ಅದು, ಕಲಾವಿದನ ಕಂಠ ಪಳಗಿದಂತೆ ಒಲಿಯುವ ಹಾಡಿದ್ದಂತೆ!
‘ನನಗೆ ತಂಪು ವರ್ಣಗಳೇ ಹೆಚ್ಚು ಇಷ್ಟ. ನಮ್ಮೂರನ್ನು ಅದು ಇದ್ದ ಹಾಗೆಯೇ ಚಿತ್ರಿಸುವುದು ಖುಷಿ. ಚಿತ್ರಿಸಲು ಬಣ್ಣ ಇದ್ದರಾಯಿತು; ದೊಡ್ಡ ಕ್ಯಾನ್ವಾಸು, ಒಳ್ಳೆ ಪೇಪರು ಅಂತೆಲ್ಲ ಕಾಯುವುದಿಲ್ಲ. ಏನೂ ಸಿಗದಿದ್ದರೆ ದಿನ ಪತ್ರಿಕೆ ಇದ್ದೇ ಇರ್ತಾವ್ರೀ, ಚಾರ್‍ಕೋಲು ಇರ್‍ತದ್ರಿ, ಇಲ್ಲವೇ ವೇಸ್ಟ್ ಪೇಪರ್ರು ಇರ್‍ತದ, ಅದರ ಮೇಲೆ ಚಿತ್ರಾ ಮಾಡ್ತಾ ಇರೋದ್ರಿ... ಒಟ್ಟಿನಲ್ಲಿ ಕ್ರಿಯೇಟಿವ್ ಆಗಿ ಕೆಲಸ ಮಾಡಿಕೊಂಡು ಇರೋದ್ರಿ’ ಎನ್ನುತ್ತ ಖುಷಿಯಾಗುತ್ತಾರೆ. ಈ ಯುವಕನಿಗೆ ನಡೆದಾಡಲು ಕಷ್ಟವಾದರೂ ಹುಬ್ಬಳ್ಳಿ–ಧಾರವಾಡದ ಸುತ್ತಮುತ್ತಲ ದೃಶ್ಯಗಳಷ್ಟೇ ಅಲ್ಲದೇ – ರಾಜ್ಯ, ಹೊರರಾಜ್ಯಗಳಲ್ಲಿ ಸಂಚರಿಸಿ ಅಲ್ಲಿನ ದೃಶ್ಯಗಳಿಗೆ ಕೂಡ ಬಣ್ಣ ತುಂಬಿದ್ದಾರೆ.

(ಕುಂಚದಲ್ಲಿ ಚೆಲುವು ಪಡೆದ ಚೆನ್ನಪೇಟ ರಸ್ತೆ)

‘ಸರ್ಕಾರಿ ನೌಕರಿ ಬೇಡ ಅಂತ ಬಿಟ್ಟೀನ್ರಿ... ಅದರಲ್ಲಿ ಆಸಕ್ತಿ ಇಲ್ಲ. ಆ ನೌಕರಿಯಲ್ಲಿ ಖುಷಿ ಇಲ್ಲ. ಹೀಗೆ ಬಿಡುವಾಗಿ ಚಿತ್ರ ಬರೆದುಕೊಂಡು ಇರೋದೇ ಖುಷಿ ವಿಚಾರ್ರಿ... ದುಡ್ಡಿನ ಬಗ್ಗೆ, ಪೇಂಟಿಂಗ್ ಸೇಲ್ ಬಗ್ಗೆ ಎಲ್ಲ ಯೋಚಿಸ್ತಾ ಕುಳಿತ್ರೆ ಪೇಂಟಿಂಗ್ ಮಾಡಾಕ್ ಆಗೋದಿಲ್ರೀ..., ಬದುಕು ಬಂದಂಗ ಸ್ವೀಕರಿಸ್ತಾ ಹೋಗೋದ್ರೀ’ ಎನ್ನುತ್ತ ಹೊಸ ಪೇಂಟಿಂಗ್ ರಚನೆ ಬಗ್ಗೆ ಒಲವು ತೋರುತ್ತಾರೆ. ಒಂದರ್ಥದಲ್ಲಿ ಈಗ ಮಾಡೋ ಪೇಂಟಿಂಗ್‌ಗಳೆಲ್ಲ ಫಿಕ್ಸೆಡ್‌ ಡಿಪಾಸಿಟ್ ಇದ್ದಂಗ... ಮುಂದ ಕಾಲ ಬಂದಾಗ ಯಾವತ್ತಾದ್ರೂ ಸೇಲ್ ಆಗೇ ಆಗ್ತಾವ್ರಿ’ ಎನ್ನುವ ವಿಶ್ವಾಸ ಅವರದು.

‘ದಿಲ್ಲಿಯಲ್ಲಿ ಚಿತ್ರಕಲಾ ಪ್ರದರ್ಶನ ಮಾಡೋದಿಕ್ಕೆ ಅರ್ಜಿ ಹಾಕು ಅಂತ ಚಿಕ್ಕಮಠ ಸರ್ ಹೇಳಿದ್ರು, ಹಾಕಿದೆ. ಈಗ ಅವಕಾಶ ಸಿಕ್ಕಿದೆ. ಮನಸು ಮಾಡಿದ್ರೆ ಏನಾದ್ರೂ ಮಾಡಬಹುದು. ಬರೀ ಕನಸು ಕಾಣ್ತಾ ಇಲ್ಲೇ ಇರ್‍ತಿದ್ದೆ ನೋಡ್ರಿ’ ಎಂದು ಕಿರಣ್ ನಕ್ಕರು. ಅವರ ನಗೆಯಲ್ಲಿ ಜೀವನಪ್ರೀತಿಯ ಸೂತ್ರವೊಂದು ಸುಳಿದುಹೋದಂತೆ ಅನ್ನಿಸಿತು.

ಕಿರಣ್ ಅವರ ಸಂಪರ್ಕ ಸಂಖ್ಯೆ: 74110 71321
ಚಿತ್ರಗಳು: ಎಂ.ಆರ್. ಮಂಜುನಾಥ / ಕಿರಣ್ ಶೇರ್ಖಾನೆ ಸಂಗ್ರಹ

(ಪಟ್ಟದಕಲ್ಲಿನ ಸಂಗಮೇಶ್ವರ ದೇವಾಲಯದ ವೈಭವ)

**

ಕಿರಣ್ ಅವರ ಕಲಾಕೃತಿಗಳ ಏಕವ್ಯಕ್ತಿ ಪ್ರದರ್ಶನ
* ಬೆಂಗಳೂರಿನ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ‘ಹುಬ್ಬಳ್ಳಿ ಚಿತ್ರ ಸಂಗಮ’ ಕಲಾಗ್ಯಾಲರಿ
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧಾರವಾಡದ ಸರ್ಕಾರಿ ಕಲಾ ಗ್ಯಾಲರಿ
* ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ನವದೆಹಲಿಯಲ್ಲಿ
ಸಮೂಹ ಪ್ರದರ್ಶನ
* ಕಿರಿಯ ಕಲಾವಿದನಾಗಿ ಧಾರವಾಡ ಜಿಲ್ಲಾ ಉತ್ಸವ 2007, 2008
* ವಿಶ್ವ ಕಲಾದಿನದ ಅಂಗವಾಗಿ ಧಾರವಾಡ ಸರ್ಕಾರಿ ಕಲಾ ಗ್ಯಾಲರಿ 2011
* ಸಂಸ್ಕೃತಿ ಕಾಲೇಜು ಹುಬ್ಬಳ್ಳಿ 2016
ಬಹುಮಾನಗಳು
* 67ನೇ ಗಣರಾಜ್ಯೋತ್ಸವದಲ್ಲಿ ‘ಬೆಸ್ಟ್ ಆಫ್ ಡಯಾಸ್ಟಿಕ್ ಅವಾರ್ಡ್‘ ಧಾರವಾಡ–2016
* ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಕಾರ್‍ಯಕ್ರಮ ‘ಬೆಸ್ಟ್ ಪೇಂಟಿಂಗ್ ಅವಾರ್ಡ್ 2016’

(ಹುಬ್ಬಳ್ಳಿಯ ಎಂಟಿಎಸ್ ಕಾಲೊನಿ, ಬಣ್ಣದಲ್ಲಿ ಕಂಡಿದ್ದು ಹೀಗೆ...)

**

ಹುಬ್ಬಳ್ಳಿಯ ಇಪ್ಪತ್ತಾರರ ತರುಣ ಕಿರಣ್ ಶೇರ್ಖಾನೆ ಅವರ ಕಾಲುಗಳಲ್ಲಿನ ಶಕ್ತಿಯನ್ನು ಪೋಲಿಯೊ ಕಸಿದುಕೊಂಡಿದೆ. ಅವರ ಪಾಲಿಗೀಗ ಬಣ್ಣಗಳೇ ಊರುಗೋಲುಗಳಾಗಿವೆ. ಕನಸು ಕಂಡರೆ ಏನನ್ನಾದರೂ ಸಾಧಿಸಲು ಸಾಧ್ಯ ಎನ್ನುವ ನಂಬಿಕೆಯೇ ಅವರ ಕಲಾಕೃತಿಗಳನ್ನು ಈಗ ದೆಹಲಿಯ ಕಲಾವಲಯ ಮುಟ್ಟಿಸಿದೆ. ದೆಹಲಿಯ ‘ಲಲಿತಕಲಾ ಅಕಾಡೆಮಿ’ ಗ್ಯಾಲರಿಯಲ್ಲಿ ಇದೇ 24ರಿಂದ 30ರವರೆಗೆ ಕಿರಣ್‌ರ ‘ಇನ್‌ಸ್ಪೈರ್ಡ್‌ ಬೈ ದಿ ನೇಚರ್’ ಶೀರ್ಷಿಕೆಯ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.
–ರಾಮಕೃಷ್ಣ ಸಿದ್ರಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT