ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಪವಿಷಹರ ಮದ್ದು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

-ಉಷಾ ನರಸಿಂಹನ್

*

ಹಳ್ಳಿಯೊಂದರ ಕೃಷಿ ಕುಟುಂಬದ ಕೃಷಿಕನೊಂದಿಗೆ ನನ್ನ ವಿವಾಹವಾಗಿ ನಾಲ್ಕೈದು ವರ್ಷಗಳೇ ಕಳೆದಿರಬೇಕು. ಒಂದು ಯುಗಾದಿ ಹಬ್ಬ. ರೈತಾಪಿವರ್ಗ ಯುಗಾದಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ದನ ತೊಳೆಯುವುದು, ಕೊಟ್ಟಿಗೆ ಸಾರಿಸುವುದು, ಸುಣ್ಣ ಬಳಿಯುವುದು, ಎತ್ತುಗಳನ್ನು ಮೀಯಿಸಿ ಬಣ್ಣ ಬಣ್ಣದ ರಿಬ್ಬನ್ನು ಕೋಡಿಗೆ ಕಟ್ಟಿ, ಕೊರಳಿಗೆ ಕಿರುಗಂಟೆ–ಶಂಖ ಕಟ್ಟಿ, ಇಡೀ ಎತ್ತಿನ ಮೈಯನ್ನು ಅರಿಶಿಣದಿಂದ ತೊಡೆದು ರಂಗೇರಿಸಿ ಬಿಡುತ್ತಾರೆ. ಇಡೀ ಊರಿನ ಯಾವುದೇ ಮನೆಯ ಅಂಗಳವೂ ಸಗಣಿಯಿಂದ ಸಾರಿಸಿಕೊಂಡು ದೊಡ್ಡದೊಡ್ಡ ಹಸೆ ಬರೆಸಿಕೊಳ್ಳುತ್ತದೆ. ತಲೆ ಬಾಗಿಲುಗಳು ಮಾವಿನ ತಳಿರು, ಬೇವಿನ ಜೊಂಪೆಗಳಿಂದ ಅಲಂಕೃತವಾಗಿ, ಹೊಸ್ತಿಲುಗಳು ಅರಿಶಿಣ, ಕುಂಕುಮದಿಂದ ಹೂವುಗಳಿಂದ ಪೂಜೆಕೊಂಡು ಸಂಭ್ರಮಿಸುತ್ತವೆ.

ಎಲ್ಲರ ಮನೆಯಲ್ಲಿ ಹೂರಣದ ಹೋಳಿಗೆಯ ಘಮ–ಘಮ. ಊರಾಚೆ ಹೊಲಗೇರಿಯಲ್ಲೂ ಸಂಭ್ರಮ ಕಡಿಮೆಯೇನಿಲ್ಲ. ಯುಗಾದಿ, ದೀಪಾವಳಿ ಸಂಕ್ರಾಂತಿ, ಮಾರನವಮಿಗೆ ಕರಾರುವಾಕ್ಕಾಗಿ ಸ್ನಾನದ ಪರಿಪಾಠ ಇಟ್ಟುಕೊಂಡಿರುವ ಕೆಲವರು ಇನ್ನೂ ಅಲ್ಲಿದ್ದಾರೆ, ಎಲ್ಲರೂ ಮಿಂದು, ಅವರು ಕೂಲಿಯಾಳಾಗಿ ದುಡಿಯುವ ಮನೆಗಳವರು ತೆಗೆಸಿ ಕೊಟ್ಟ ಪಟಾಪಟಿ ಚೆಡ್ಡಿ, ಚೌಕಳಿ ಅಂಗಿ, ಬಿಳಿ ಬನೀನು, ಮೇಲೊಂದು ಚೌಕವನ್ನು ಹೊದೆದುಕೊಂಡು ಊರ ತುಂಬಾ ತಿರುಗುತ್ತಾರೆ. ಅವರ ಹೆಣ್ಣುಮಕ್ಕಳೂ ಅಂದು ಬಣ್ಣದ ಹೊಸ ಸೀರೆಯುಟ್ಟು ಒಂದುವಾರ ಮುಂಚಿನಿಂದ ಉಳ್ಳವರ ಮನೆಗಳಲ್ಲಿ ಸಂಗ್ರಹಿಸಿದ ಕಾಯಿ ಕೊಬ್ಬರಿ, ಆಲೆಮನೆಗಳ ಬೆಲ್ಲ, ಅಂಗಡಿಗಳಲ್ಲಿ ಕೈಗಡ ತಂದ ಬೇಳೆ, ಎಣ್ಣೆಗಳಿಂದ ಒಬ್ಬಟ್ಟು, ತರಕಾರಿ ಹಾಕಿದ ಬಾತನ್ನು ಮಾಡಿ ಸಂಭ್ರಮಿಸುತ್ತಾರೆ. ಹಗಲಿನ ಹಬ್ಬದ ಗೌಜು ಹೀಗಾದರೆ ಮಧ್ಯಾಹ್ನ ಸಿಂಗರಿಸಿದ ಎತ್ತುಗಳನ್ನು ನೊಗಕ್ಕೆ ಹೂಡಿ ಉಳುಮೆ ಮಾಡಿಸಲು, ಹೊನ್ನಾರು ಕಟ್ಟುತ್ತಾರೆ. ವರ್ಷದ ಮೊದಲ ದಿನದ ಕೃಷಿಯ ಆರಂಭ ವರ್ಷೊಂಬತ್ತು ಕಾಲವೂ ಅದು ಆರಂಭವೇ. ಇವೆಲ್ಲ ಮುಗಿದು ಸಂಜೆಗೆ ಊರ ರಾಮ ದೇವರ ಗುಡಿಯ ಎದುರು ಕೊಂಡ ನಿರ್ಮಿಸಿ ಉಳುಮೆಯ ಎತ್ತು ಕಡಸುಗಳನ್ನು ಕಿಚ್ಚುಹಾಯಿಸಿದರೆ ಯುಗಾದಿ ಮುಂದೋಡಿದಂತೆ. ಮಾರನೆಯ ದಿನ ವರ್ಷತೊಡಕಿಗೆ ಕುರಿ ಕೋಳಿ ಕಡಿಯುವುದು ಅವರ ರಿವಾಜು. ಅಲ್ಲಿರುವ ಒಬ್ಬಿಬ್ಬರು ಬ್ರಾಹ್ಮಣರ ಮನೆಗಳಲ್ಲಿ ಆ ದಿನ ಸತ್ಯನಾರಾಯಣ ಪೂಜೆಯೋ ರಾಮ ಕಥೆಯೋ ಇರುತ್ತದೆ.

ಇಂಥಾ ಯುಗಾದಿಯ ಸಂಭ್ರಮಗಳೆಲ್ಲ ಮುಗಿಯುವುದು ಮಾರನೆಯ ದಿನ ಸಂಜೆಗೆ. ಆ ದಿನ ಯಾರೂ ಕೆಲಸಕ್ಕೆ ಬರುವುದಿಲ್ಲ.

ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಒಂದು ಯುಗಾದಿಯ ನೆನಪು. ನಮ್ಮ ಮನೆಯ ಆಳು ನಾಗೇಂದ್ರ ವರ್ಷತೊಡಕಿನ ಆ ದಿನ ತನ್ನ ಭಾವ ನೆಂಟನ ಮನೆಯ ಬಾಡೂಟಕ್ಕೆ ಹೇಮಾವತಿ ಹೊಳೆಯ ಆಚೆಗಿರುವ ಮೂಡ್ಲಹಿಪ್ಲೆಗೆ ಹೋಗಿದ್ದ. ಬೇಸಿಗೆಯಾದ್ದರಿಂದ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಿತ್ತು. ಎಲ್ಲೋ ಒಂದೆರೆಡು ಕಡೆ ಸೊಂಟದ ಮಟ್ಟಕ್ಕೆ ನೀರಿರುತ್ತಿತ್ತು, ಬಹುತೇಕ ಎಲ್ಲರೂ ಬಳಸು ದಾರಿಯಲ್ಲಿ ಹೋಗದೆ ಹೊಳೆಯಲ್ಲೆ ಹಾದು ಹೋಗುತ್ತಿದ್ದರು. ನಾಗೇಂದ್ರ ನೆಂಟರಮನೆ ಊಟ ಮುಗಿಸಿಕೊಂಡು ಸಂಜೆಗೆ ಹೊಳೆ ದಾಟಿದ ಮೇಲೆ ಮನೆಯ ದಾರಿ ಹಿಡಿದನು. ನೀರಿನಿಂದ ಕಾಲು ಹೊರ ತೆಗೆದ ಮೇಲೆ ಕಣಕಾಲಿನಲ್ಲಿ ಚುರುಚುರು ಉರಿಯಾಯಿತಂತೆ. ಅನುಮಾನವಾಗಿ ಬಾಗಿ ಮಬ್ಬು ಬೆಳಕಲ್ಲಿ ನೋಡಿದಾಗ ಯಾವುದೋ ಜಂತು ಹಲ್ಲೂರಿ ರಕ್ತ ಒಸರುತ್ತಿತ್ತು. ಅವನ ಜೊತೆಗೆ ಬಂದಿದ್ದ ನಂಜುಂಡನೆಂಬುವನನ್ನು ಕರೆದು ಕಾಲು ತೋರಿಸಿ ‘ಓಡಿಹೋಗಿ ರಮೇಶಪ್ನೋರ  ಕರಕೊಂಬಾ. ಯಾವುದೋ ಬಳ್ಳಿ ಮುಟ್ಟಿದೆ. ಬೈಕು ತರಾಕೆ ಹೇಳು’ ಎಂದು ಅಳುತ್ತಾ ಅಂಜುಬುರುಕು ಧ್ವನಿಯಲ್ಲಿ ಹೇಳಿದ. ‘ಹಾವು ಕಡಿದಿದೆ’ ಎನ್ನಲು ‘ಬಳ್ಳಿ ಮುಟ್ಟಿದೆ’ ಎಂತಲೋ, ಕೈಯನ್ನು ಹೆಡೆಯಾಕಾರ ಮಾಡಿ ಸನ್ನೆ ಮಾಡಿ ತೋರಿಸುವುದೋ ಇಲ್ಲ ‘ನಾಗಪ್ಪ ಮುನಿಸಿಕೊಂಡವರೇ’ ಎನ್ನುವಷ್ಟು ಹಾವಿನ ಮೇಲೆ ಭಯ ಅವರಿಗೆಲ್ಲ! ನಂಜುಂಡ ಸುಟಿಯಾದ ಆಳು. ಒಂದೇ ಓಟದಲ್ಲಿ ನಮ್ಮ ಮನೆಗೋಡಿ ಬಂದ. ಊರಿಗೆಲ್ಲ ಒಂದೇ ಇದ್ದ ನಮ್ಮ ಯೆಜ್ಡಿ ಬೈಕೆಂಬ ಐರಾವತವನ್ನು ಗುಡುಗುಡಿಸುತ್ತಾ ರಮೇಶಪ್ಪ ಅವನಿದ್ದಲ್ಲಿಗೆ ಹೋದರು. ಹತ್ತೇ ನಿಮಿಷದಲ್ಲಿ ಊರೆಲ್ಲಾ ಗುಲ್ಲಾಗಿ ತಂಡೋಪ ತಂಡವಾಗಿ ಜನರು ಊರ ಮುಂದಿನ ಗುಡಿಯ ಪೌಳಿಯಲ್ಲಿ ಸೇರಿಬಿಟ್ಟರು. ಅವನ ಕಣಕಾಲಿನ ಮೇಲಕ್ಕೆ ಒಂದು ದಾರವನ್ನು ಬಿಗಿಯಾಗಿ ಕಟ್ಟಿಕೊಂಡು ಅವನ್ನು ಬೈಕಿನಲ್ಲಿ ಅಡ್ಡಗಾಲಲ್ಲಿ ಕೂರಿಸಿಕೊಂಡು ಗುಡಿಯ ಪೌಳಿಗೆ ಕರೆತಂದಾಗಿತ್ತು. ಲಬೋ ಲಬೋ ಎಂದು ಬಡಿದುಕೊಳ್ಳುತ್ತಾ ಅವನ ತಾಯಿ ತಂಗಿಯರು ದೊಡ್ಡ ದನಿಯಲ್ಲಿ ರೋದಿಸುತ್ತಿದ್ದರು. ನಾನು ಮನೆಯಿಂದ ಹೋಗುವಾಗಲೇ ಹರಿತವಾದ ಬ್ಲೇಡೊಂದನ್ನು ತೆಗೆದುಕೊಂಡು ಹೋಗಿದ್ದೆ. ಅವನಿಗೆ ಹಾವು ಕಚ್ಚಿದ ಜಾಗದಲ್ಲಿ ಇಂಗ್ಲಿಷ್‌ನ ‘ಟಿ’ ಆಕಾರದಲ್ಲಿ ಕತ್ತರಿಸಿ ‘ಬಾಯಲ್ಲಿ ಹುಣ್ಣು ಗಾಯವಿಲ್ಲದ ಯಾರಾದರಿದ್ದರೆ ಅಲ್ಲಿಂದ ರಕ್ತ ಹೀರಿ ಉಗಿದು ಬಿಡಿ’ ಎಂದೆ.

ಯಾರೊಬ್ಬರೂ ಮುಂದಾಗಲಿಲ್ಲ. ‘ನಂಗೆ ಹುಳುಕಲ್ಲಾಗ್ಯದ’ ಎಂದು ಒಬ್ಬನೆಂದರೆ, ‘ಬಾಯಿ ಹುಣ್ಣಾಗೈತೆ’ ಎಂದು ಇನ್ನೊಬ್ಬ. ‘ನಂಗೆ ಜ್ವರ ಬಂದೈತೆ’ ಎಂದು ಮಗದೊಬ್ಬ. ಅಷ್ಟರಲ್ಲಿ ನಾಲ್ಕು ಕೋಳಿಗಳನ್ನು ಹಿಡಿದುಕೊಂಡು ಪಟೇಲರು ಓಡುತ್ತಾ ಬಂದರು. ತ್ವರೆಯಿಂದ ‘ಕೋಳಿ ತಿಕ ಕೊಡ್ರಿ. ವಿಸಾನೆಲ್ಲ ಹೀರ್ಕೋತೈತೆ’ ಎಂದರು. ಅವನ ಗಾಯಕ್ಕೆ ಕೋಳಿ ಕುಂಡೆ ಹಿಡಿಸಹೋದರೆ ಅದು ಹಿಡಿಯುವುದೇ ಕಷ್ಟವಾಯ್ತು. ಕಡೆಗೂ ಕೋಳಿಯ ಗುದದ್ವಾರವು ಆಕುಂಚಿಸಿ ಗಾಯವನ್ನು ಹಿಡಿದುಕೊಂಡಿತು. ಆಶ್ಚರ್ಯವೆಂಬಂತೆ ಕೋಳಿಗಳು ಒಂದಾದ ಮೇಲೆ ಒಂದರಂತೆ ಸತ್ತು ಒರಗಿದವು. ಇವೆಲ್ಲಾ ಮುಗಿಯುವ ವೇಳೆಗೆ ಅವನಿಗೆ  ಮಂಪರು ಮಯಕ.
ಯಾರೋ ಒಬ್ಬರು ‘ಏ ಅವ್ನುನ್ನ ಮನಗಾಕ ಬಿಡಬ್ಯಾಡಿ. ವಿಸ ಏರಿ ಬಿಡ್ತೈತೆ’ ಎಂದರು. ಗುಡಿಯ ಪೂಜಾರಿ ತಾಳ ತಂದು ಚಿಟಿಕೆ ಬಾರಿಸುತ್ತಾ ಭಜನೆಗೆ ಶುರುಹಚ್ಚಿಕೊಂಡನು. ಒಂದೆರೆಡು ಸಾಲು ಭಜನೆ ಆಗಿತ್ತೋ ಇಲ್ಲವೋ... ನಾಗೇಂದ್ರನ ಅವ್ವ ಧಿಗ್ಗನೆ ಎದ್ದು ‘ಏ ಪೂಜಾರಪ್ಪ ಭಜನೆ ಯಾಕ್ಲಾ ಮಾಡ್ತಿದ್ದೀಯ? ನನ್ಮಗ ಏನು ಸತ್ತು ಮನಿಕಂಡಿದಾನ? ನಿಲ್ಲಿಸ್ಲಾ ಕಂಡಿದೀನಿ. ಬಂದುಬುಟ್ಟ ಭಜನೆಕುಟ್ಟಾಕೆ’ ಎಂದು ಚಂಡಿಯಂತೆ ಭೋರ್ಗರೆದಳು. ‘ಏನೋ ಅವ್ನುನ್ನ ಎಚ್ಚರಿಸೋಕೆ ಮಾಡುದ್ರೆ ಅದೇಯಾ...’ ಎಂದು ಸುಮ್ಮಗಾದನು. ಊರ ಪಡ್ಡೆ ಹುಡುಗರು ಗುಂಪು ಕೂಡಿ, ‘ಏ ನಾವು ಶನಿಮಾತ್ಮೆ ನಾಟ್ಕ ಆಡ್ತೀವಿ. ನೋಡ್ಲ ನಾಗೇಂದ್ರ ನಿದ್ದೆ ಮಾಡಬ್ಯಾಡ’ ಎಂದು ಅಪಶೃತಿಯಲ್ಲಿ ‘ಜಯ ಜಯ ಜಗದೀಸಾ’ ಎಂದು ನಾಂದಿಗೀತೆಯನ್ನು ಹಾಡತೊಡಗಿದರು. ‘ಜಗವೇ ನಾಟಕರಂಗ... ಜಗದೀಸನಾಡುವ ಜಗವೇ ನಾಟಕರಂಗ...’ ಈ ಅಪಶೃತಿಯು ಅಲೆ ಅಲೆಯಾಗಿ ಅಲ್ಲೆಲ್ಲಾ ಹರಡತೊಡಗಿತ್ತು. ‘ಹಾಪ್ರಿಯ ಹಾಹಾ ಪ್ರಿಯೆ’ ಎಂಬ ಅಪಭ್ರಂಶದ ನುಡಿಗಳು ಎಗ್ಗಿಲ್ಲದಂತೆ ಮಧ್ಯೆ ಮಧ್ಯೆ ತೂರಿಸುತ್ತಾ ಚಿಟ್ಟು ಹಿಡಿಸತೊಡಗಿದರು.

ಅಷ್ಟರಲ್ಲಿ... ಆಗ ಅವಿವಾಹಿತನಾಗಿದ್ದ ನಾಗೇಂದ್ರನಿಗೆ ಗೊತ್ತಾಗಿದ್ದ ಹೆಣ್ಣಿನ ಅಣ್ಣ, ಅಂದರೆ ಅವನ ಭಾವನೆಂಟ ಓಡುತ್ತಾ ಬಂದು ‘ನಾ ಹೇಳಿದೆ, ಹೊಳೆ ದಾಟಬ್ಯಾಡ, ಒಸಿ ದೂರಾದ್ರು ಪರವಾಗಿಲ್ಲ ರಸ್ತೇಲೆ ಹೋಗು ಅಂತ... ನನ್ ಮಾತ್ ಕೇಳ್ದೆನೆ ಹಿಂಗೆ ಮಾಡ್ಕೊಂಬಿಟ್ಟ. ಅಲ್ಲ... ಇವತ್ತೊಂದಿನ ಅಲ್ಲೇ ಇದ್ದು ಬೆಳಿಗ್ಗೆಗೆ ಉಳ್‌ದಿದ್ ಪಳ್‌ದಿದ್ದು ತಿಂನ್ಕಂಡು ಬಂದಿದ್ರೆ ಈ ಎಲ್ಲಾ ತಾಪತ್ರಯವೇ ಇರ್ತಿರ್ಲಿಲ್ಲ. ಉಳಿದಿದ್ದ ಬಾಡೆಲ್ಲ ಅವರಿವರಿಗೆ ಕೊಟ್ಟಿದ್ದಾಯ್ತು’ ಎಂದು ಪರಿತಪಿಸಿದ. ಪದೇ ಪದೇ ಬಾಡಿನ ವಿಷಯವೇ ಮಾತಾಡತೊಡಗಿದಾಗ ಅಲ್ಲಿಯವರೆಗೂ ಸುಮ್ಮನಿದ್ದ ನಾಗೇಂದ್ರನ ಅವ್ವ ಕ್ಯಾಣ ಹತ್ತಿ ‘ಓಯ್ ಸುಮ್ಗೆ ಕುಂತ್ಕೋಳಯ್ಯ. ನಮ್ದು ನಮಗಾಗೈತೆ, ಬಾಡ್ ಮಿಕ್ಕುದ್ರೆ ತಿಪ್ಪೆಗೆ ಸುರಿ’ ಎಂದು ಹರಿಹಾಯ್ದಳು. ‘ಅಲ್ಲ, ಅವನಿಗೆ ಹಾವು ಕಡಿದರೆ ನಾವೆನ್ ಮಾಡಕಾಯ್ತದೆ’ ಎಂದು ಏರು ದನಿಯಲ್ಲಿ ಕಿರುಚಿದಾಗ – ‘ಎಲ್ಲಾ ಬುಟ್ಟು ನಿಮ್ ಸಮ್ಮಂದ ಮಾಡಿದ್ವಲ್ಲ... ಅದ್ಕೆ ಹಿಂಗಾದ್ದು. ಇನ್ನು ಮದ್ವೆನೇ ಆಗಿಲ್ಲ ಈಗ್ಲೆ ಹಿಂಗೆ... ಅದ್ಕೆ ಹೇಳಾದೂ... ಮನ್ಗೆ ಬರ ಮೂದೇವಿರು ಒಳ್ಳೆದು ತರ್ಬೇಕು ಮನೆಗೆ’ ಎಂದು ಅವಳು ರಭಸದಿಂದ ಉತ್ತರಿಸಿದಳು. ಮಾತಿಗೆ ಮಾತು ಏರುತ್ತಿತ್ತೇನೋ. ಪಟೇಲರು ಮಧ್ಯೆ ಪ್ರವೇಶಿಸಿ, ‘ಏ ಸುಮ್ಕಿರಮ್ಮ. ನಾಗೇಂದ್ರನ ಅಪಾಯದಿಂದ ಪಾರು ಮಾಡೋದ್ಬಿಟ್ಟು... ತಲೆಲ್ಲ ಮಾತಾಡ್ತೀಯಲ್ಲ, ನೀನು ಒಸಿ ಸುಮ್ಕೆ ನಿಂತ್ಕಳಯ್ಯ’ ಎಂದು ಗದರಲಾಗಿ ಇಬ್ಬರು ಸುಮ್ಮನಾದರು.

ಅಷ್ಟರಲ್ಲಿ ರಮೇಶಪ್ಪನವರು ‘ಯಾರಾದ್ರೂ ಹಿಡಕೊಂಡು ಹಿಂದೆ ಕೂತ್ಕೊಳ್ರೋ. ಹೊಳೆನರಸೀಪುರದ ಆಸ್ಪತ್ರೆಗೆ ಹೋಗಾಣ’ ಎಂದರು. ಹಿರಿಯ ಕೋಟಿ ಪಟೇಲರು ಹತ್ತಿರ ಬಂದು ನಾಗೇಂದ್ರನ ಮುಖ ನೋಡಿ, ‘ನಾಡಿಹಿಡಿದು ಬ್ಯಾಡಿ ರಮೇಶಪ್ಪೋರೆ. ಅವ್ನು ಬದುಕಕ್ಕುಲ್ಲ. ಅಲ್ಲಿವರ್ಗು ಹೋಗಾಕಾಗದಿಲ್ಲಾ. ಇನ್ನೊಂದು ಮಾಡ್ಬೋದು. ಅವನ ಹೊಟ್ಗೆ ಸೇರ್ಕಂಡಿರೋ ವಿಸ ವಾಂತಿ ಮಾಡಿಸ್ಬೇಕು. ಆಗ ಸರಿಯಾಯ್ತದೆ’ ಎಂದರು. ಯಾರೋ ಒಬ್ಬರು ‘ಹಸಿ ಕೋಳಿ ಮೊಟ್ಟೆ ಕುಡಿಸಿದ್ರೆ ವಾಂತಿ ಆಯ್ತದೆ’ ಎಂದದ್ದೇ ನಿಂಗಾಜಿ ಮನೆಯಿಂದ ನಾಲಕ್ಕು ಮೊಟ್ಟೆಗಳು ಪ್ರತ್ಯಕ್ಷವಾದವು. ಒಡೆದು ಗುಳುಂ ಗುಳುಂ ಎಂದು ನುಂಗಿದನೇ ವಿನಾ ವಾಂತಿಯ ಲವಲೇಷವೂ ಇಲ್ಲ. ಈಗ ಪಟೇಲರು ನಿಜವಾಗಿ ಚಿಂತಿತರಾದರು. ಹರಿಜನ ಕೇರಿಯ ಕುಮಾರಣ್ಣ ಪಟೇಲರಿಗೆ ದೂರದಿಂದಲೇ ‘ಒಂದ್ಕೆಲ್ಸ ಮಾಡ್ಬೈದು.

ಯಾರ್ದಾದ್ರೂ ಹೇಲು ತಂದು ನೀರಲ್ಲಿ ಕರಗಿಸಿ ಕುಡಿಸಿ ಬಿಟ್ರೆ ವಾಂತಿ ಆಯ್ತದೆ’ ಎಂದ. ಹರಿಜನ ಕೇರಿಯ ತಿಪ್ಪ ‘ನಾನು ಈಗ ತಾನೆ ನೀರ್ ಕಡೀಕೆ ಹೋಗ್ಬಂದಿದ್ದೆ. ನಾ ತತ್ತೀನಿ’ ಎಂದು ಎದ್ದೇ ಬಿಟ್ಟ. ಗೌಡರಿಗೆ ಇರುಸುಮುರುಸು ಆಯಿತು. ನಾಗೆಂದ್ರನ ಅವ್ವ ‘ಅಯ್ಯೋ ಗಾಚಾರವೇ. ಹೇಲು ತಿನ್ನಿಸ್ತಾರಲ್ಲಪ್ಪ. ಅದಕ್ಕಿಂತ ನನ್ನ ಮಗ ಸಾಯೊದೇ ವಾಸಿ’ ಎಂದು ಹುಯಿಲೆಬ್ಬಿಸತೊಡಗಿದಳು. ಅಷ್ಟರಲ್ಲಿ ಗೌಡರ ಹಟ್ಟಿಯ ಅಪ್ಪಾಜ್ಜಪ್ಪ – ‘ಐ ಬುಡುರ್ಲಾ. ನಾನು ಈಗ ನೀರ್‌ಕಡೇ ಹೋಗಬೇಕಿತ್ತು. ನಾನೇ ತತ್ತೀನಿ’ ಎಂದು ಅಲ್ಲೇ ಇದ್ದ ಮುತ್ತುಗದ ದೊಡ್ಡೆಲೆಗಳನ್ನು ತೆಗೆದುಕೊಂಡು ಹೋಗಿ ಐದೇ ನಿಮಿಷಗಳಲ್ಲಿ ಒಂದು ಎಲೆಯಲ್ಲಿ ಅಮೇಧ್ಯವನ್ನು, ಮತ್ತೊಂದೆಲೆಯಿಂದ ಮುಚ್ಚಿ ತಂದೇ ಬಿಟ್ಟ. ತೆಂಗಿನ ಕರಟಕ್ಕೆ ನೀರು ಸುರುವಿ ಮುತ್ತುಗದೆಲೆಯ ಅಮೇಧ್ಯವನ್ನು ಅದಕ್ಕೆ ಕಲೆಸಿ ಅವನ ಬಾಯಿಗೆ ಸುರಿಯಲು ಬಾಯ ಹತ್ತಿರಕ್ಕೆ ಕರಟ ಒಯ್ದರೋ... ಇಲ್ಲವೋ... ಒಂದೇ ತೊಟ್ಟು ಅವನ ಬಾಯಿಗೆ ಹೋಗಿದ್ದಿರಬೇಕು. ನಾಗೇಂದ್ರನ ಮೂಗಿಗೆ ವಾಸನೆ ಬಡಿದು ಮುಖ ಕಿವುಚಿಕೊಳ್ಳುತ್ತಾ ‘ಬಢಾರ್ ಬಢಾರ್’ ಎಂದು ಕರುಳು ಕಿತ್ತುಬರುವಂತೆ ಕಾರಿಕೊಂಡ. ಪಟೇಲರು ‘ಇನ್ನು ಯೇಚ್ನೆ ಇಲ್ಲ. ಈಗ ಇವ್ನುನ್ನ ನರಸೀಪುರದ ಆಸ್ಪತ್ರೆಗೆ ಕರಕೊಂಡು ಹೋಗಬೈದು’ ಎಂದು ಅಪ್ಪಣೆ ಕೊಡಿಸಿದರು. ಅವನ ಮೊಕ ತೊಳೆಸಿ, ಕಂಬಳಿ ಸುತ್ತಿ ಆಸ್ಪತ್ರೆಗೆ ಕರೆದೊಯ್ದದ್ದೂ ಆಯ್ತು. ಯಾವ ಔಷಧದಿಂದಲೋ ಗೊತ್ತಿಲ್ಲ, ನಾಗೇಂದ್ರ ಬದುಕುಳಿದುಕೊಂಡ. ಎರಡು ದಿನ ಸುಧಾರಿಸಿಕೊಂಡು ನಮ್ಮ ಮನೆಯ ಬಳಿ ಬಂದ ನಾಗೇಂದ್ರ ‘ರಮೇಶಪ್ಪಾರೆ’ ಎಂದು ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಾ ‘ನಾ ಸತ್ತೋಗಿದ್ರು ಪರ್ವಾಗಿರ್ಲಿಲ್ರಪ್ಪ ಅವನು... ಅದನ್ನ ತಿನ್ನಿಸಿ ಬದುಕಿಸಬಾರದಾಗಿತ್ತು. ಊರೆಲ್ಲಾ ಆಡ್ಕಂಡು ನಗ್ತಾರೆ ಕಣ್ರಪ್ಪ’ ಎಂದು ಹೃದಯವಿದ್ರಾವಕವಾಗಿ ಅಳಹತ್ತಿದ. ‘ಪರ್ವಾಗಿಲ್ಲ ಬಿಡೋ, ಹೆಂಗೋ ಜೀವ ಉಳಿತಲ್ಲ’ ಎಂಬ ಸಮಾಧಾನದ ನುಡಿಗಳನ್ನಾಡಿ ಅವನನ್ನು ಸುಮ್ಮನಾಗಿಸಬೇಕಾಯ್ತು.

ಅಪ್ಪಾಜಪ್ಪ ಮಾತ್ರ ಈಗಲೂ ಗೇಲಿಯಾಗಿಯೂ ಕೋಪದಲ್ಲಿಯೂ ನಾಗೇಂದ್ರನನ್ನು ಲೇವಡಿಯಾಗಿ ಛೇಡಿಸುವುದು ಇನ್ನೂ ನಿಂತಿಲ್ಲ. ಯುಗಾದಿ ಬಂದಾಗಲೆಲ್ಲ ನಾಗೇಂದ್ರನ ಪ್ರಸಂಗವೇ ನೆನಪಾಗಿ ನಗುಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT