ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೀಗ ಟ್ರೀ ಟೈಮ್!

Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಮಗೆ ಲಂಕೇಶರ ‘ಹುಳಿ ಮಾವಿನಮರ’ ಗೊತ್ತು. ಕೇಶವ ಮಳಗಿಯವರ ‘ನೇರಳೆ ಮರ’ ಕೂಡ ಗೊತ್ತು. ಆ ಮರ ಆ ಮರ ಎನ್ನುತ್ತ ಅಮರಕಾವ್ಯ ಬರೆದ ಆದಿಕವಿ ಗೊತ್ತು. ‘ಮಣ್ಣಲ್ಲಿ ಒಂದು ಮರವಾಗಿ ಪುಣ್ಯವಂತರಿಗೆ ನೆರಳಾಗಿ’ ಹುಟ್ಟುವ ಹತಾಶೆ ತೋರಿದ ಮನೆಮಗಳು ಗೊತ್ತು.

ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಸ್ವತಃ ತಾನೊಂದು ಮರವಾಗ ಹೊರಟ ಸುಮನಾ ರಾಯ್ ಬಗ್ಗೆ ಗೊತ್ತೇ? ಅವರ ಹೊಸ, ಮಾತ್ರವಲ್ಲ ಮೊತ್ತಮೊದಲ ಪುಸ್ತಕ ‘ಹೌ ಐ ಬಿಕೇಮ್ ಎ ಟ್ರೀ’ಯ ಚಿಗುರೆಲೆಗಳು ಕಾಣಿಸಿಕೊಳ್ಳುವವರೆಗೆ ಅವರ ಒಂದೂ ಪುಸ್ತಕ ಪ್ರಕಟವಾಗಿರಲಿಲ್ಲ ಎನ್ನುವುದೇ ಗೊತ್ತಾಗದಷ್ಟು ಅವರು ಖ್ಯಾತರು.

ಅಂತರರಾಷ್ಟ್ರೀಯ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಅವರ ಸಮೃದ್ಧ–ಶ್ರೀಮಂತ ಪ್ರಬಂಧಗಳು ಬಹುಜನಪ್ರಿಯ. ಅವರ ಪುಸ್ತಕದ ಅಧ್ಯಾಯಗಳಿಂದ ಆಯ್ದ ಕೆಲವು ಭಾಗಗಳು ಇಲ್ಲಿವೆ. ಈ ಬೇಸಿಗೆಯನ್ನು ರಮಣೀಯವಾಗಿಸುವಷ್ಟು ರಸಪೂರ್ಣವಾಗಿರುವ ‘ಮರ ಸಮಯ’ದ ಅಪೂರ್ವ ಗಳಿಗೆಗಳನ್ನು ಕಥೆಗಾರ–ವಿಮರ್ಶಕ ನರೇಂದ್ರ ಪೈ ಕನ್ನಡಕ್ಕೆ ತಂದಿದ್ದಾರೆ.

ಮೊದಲಿಗೆ ಅದು ಅಂದರ್ ಕ ಬಾತ್. ನಾನು ಒಂದು ಮರವಾಗಲು ಬಯಸಿದ್ದೇಕೆಂದರೆ ಮರಗಳಿಗೆ ಬ್ರಾ ಇಲ್ಲ. ಆಮೇಲೆ ಅದು ಇಲ್ಲೆಲ್ಲ ಚೆಲ್ಲಿರುವ ಈ ಹಿಂಸೆಯ ನೆರಳು ಸುಡುಗಾಡು ಎನಿಸಿದ್ದು. ಸೂರ್ಯನಿಲ್ಲದ ಕಾಲವೆಲ್ಲ ಕರ್ಫ್ಯೂ ಹೇರಿದಂತನಿಸುವ ನನಗೆ ಕತ್ತಲು ಮತ್ತು ಏಕಾಂತದ ಜಾಗದಲ್ಲಿ ಮರಗಳು ಕಂಡುಕೊಳ್ಳುವ ವಿಚಿತ್ರ ನೆಮ್ಮದಿಯ ಕಂಡು ಅವುಗಳ ಮೇಲೆ ಅದೇನೋ ಪ್ರೀತಿ.

ಈಗಿನ್ನೂ ಪುಕ್ಕಟೆಯಾಗೇ ಸಿಗುತ್ತಿರುವ ನೀರು, ಗಾಳಿ ಮತ್ತು ಸೂರ್ಯನ ಬೆಳಕನ್ನೇ ನೆಚ್ಚಿಕೊಂಡು ಬದುಕುವ ಇವುಗಳ ಕೆಚ್ಚು ಕಂಡು ಅದೇನೋ ನೆಚ್ಚು. ಜೀವಮಾನವಿಡೀ ನೆಲಕಚ್ಚಿ ಬದುಕುವ ಹಕ್ಕಿನ ಬೇರಿಳಿಸಿಯೂ ಒಂದು ಮಾರ್ಗೇಜಿಗೆ ರುಜುವಿಲ್ಲ, ಠಸೆಪತ್ರವಿಲ್ಲ, ಕೋರ್ಟು–ಕಟ್ಲೆಯಿಲ್ಲ.

ಗೊತ್ತುಗುರಿಯಿಲ್ಲದ ಈ ಮರಗಳ ಮೇಲಿನ ಮಮಕಾರಕ್ಕೊಂದು ಆಕಾರ ದಕ್ಕಿದ್ದು ನಡುವಯಸ್ಸು ಕಾಲಿಟ್ಟಾಗ. ಖಾತರಿಯಾದ ಸಂಬಳದ ನೌಕರಿಯ ಚಾಕರಿ ಬಿಟ್ಟು ಫ್ರೀಲ್ಯಾನ್ಸರಿನ ಫ್ರೀಡಮ್ಮಿನ ಭಾರ ಹೊತ್ತ ಕಾಲಕ್ಕೆ.

ಬೋಧಿವೃಕ್ಷದ ಕೆಳಗೆ ಬುದ್ಧನಿಗಾದಂತೆ ಯಾವುದೋ ಅರಿವಿನ ಲತೆಯೊಂದು ನನ್ನ ಸುತ್ತಿಕೊಂಡು – ಮರಗಳು ಫ್ರೀಲ್ಯಾನ್ಸರುಗಳೇ ಅಥವಾ ಸಂಬಳದ ಕೆಲಸಗಾರರೇ? ಬಹುಶಃ ದಿನಗೂಲಿ ನೌಕರ. ದಿನಕರನ ಸುತ್ತು ಸಾಗಿದಂತಲ್ಲವೆ ಅದರ ಹೊತ್ತುಗೊತ್ತು ಹೊತ್ತಿಳಿಯುವುದು!? ರಜೆ, ಬಿಡುವು, ವಾರಾಂತ್ಯ, ಸಂಬಳದ ತಾಪತ್ರಯ, ಪೆನ್ಷನ್ನು, ಲೋನು ಎಲ್ಲ ಈಚಿನದು, ನನ್ನಂಥ ನೌಕರಿಗಿರಿಯ ಸಮಾಧಾನಕರ ಪರಿಕರಗಳಷ್ಟೆ.

ಹೀಗೆ. ಸಮಯವೆಂಬ ಬುಲ್‌ಡೋಜರು ನನ್ನ ಮೇಲೇ ಏರಿ ಬರುತ್ತಿರಲು ನನಗೆ ಈ ಮಾನವಜನ್ಮದ ಮೇಲೇ ಒಂದು ಹೇವರಿಕೆ. ಏನು ಹೀಗೆ ಒಂದು ಮರವಾಗುವುದರಲ್ಲಿರುವ ಮೋಹದ ಸೆಳೆತಗಳಿಗೆ ಕಾರಣ ಎಂದು ಕೆದಕಿ ನೋಡಿದರೆ ಇದರ ಬೇರುಗಳೆಲ್ಲ ಅಲ್ಲೇ ಇರುವಂತೆ ಕಾಣುತ್ತಿವೆ. ಮಣಿಕಟ್ಟಿನಿಂದ ಕಟ್ಟಿದ ವಾಚು ಬಿಚ್ಚಿಡುತ್ತೇನೆ. ಗೋಡೆಯ ಮೇಲೆ ತೂಗು ಹಾಕಿದ ಗಡಿಯಾರ ಇಳಿಸಿಡುತ್ತೇನೆ.

ಆಹಾ, ಇದೀಗ ನನ್ನ ಸೋಲುಗಳೆಲ್ಲ ಕಣ್ಣೆದುರು ಬಂದು ನಿಲ್ಲುತ್ತಿವೆ. ಇದನ್ನೆಲ್ಲ ಈಗ ನಾನು ಹಂಚಿಕೊಳ್ಳಬೇಕಿದೆ. ಸಮಯದ ಕಾಲ ಕೆಳಗೆ ಒಬ್ಬ ನಿಷ್ಠ ಗುಲಾಮನಂತಿರಲು ಸೋತಿದ್ದೆ. ಮರದ ಮೇಲೆ ಮುನಿಸು. ಏನಿದರ ಸೊಕ್ಕು, ಮನುಷ್ಯ ಕಟ್ಟಿದ ಕಾಲಪ್ರಜ್ಞೆಯನ್ನು ಕಾಲಕಸವೆಂದು ಕಂಡು ಧಿಕ್ಕರಿಸುವ ನಿಲುವು.

ಒಂದರ ಹಿಂದೊಂದು ಸ್ಕೈಸ್ಕ್ರೇಪರುಗಳನ್ನು ಕಟ್ಟಿ ನಿಲ್ಲಿಸಲು ಬಿಲ್ಡರುಗಳು ಪ್ರತಿನಿತ್ಯ ಕಳಿಸುವ ತಮ್ಮ ನೌಕರರ ಪಡೆಗಳನ್ನು ನೋಡಿ. ಹಗಲು ರಾತ್ರಿ ಎನ್ನದೆ ಟೈಟಾದ ಶೆಡ್ಯೂಲುಗಳ, ಡೆಡ್ ಲೈನುಗಳ ಹಿಂದೆ ಹೂಡಿದ ಓಟದಲ್ಲಿ ಅವರು ಹೈರಾಣಾಗುತ್ತಿದ್ದರೆ ಬಿಲ್ಡಿಂಗ್ ಪ್ಲ್ಯಾನಿನ ಪ್ರಕಾರ ಅವರೇ ನೆಟ್ಟ ಗಿಡಗಳು ಮರವಾಗಿ ಸೆಟೆದುಕೊಳ್ಳುತ್ತ ಅವರನ್ನೇ ಗೇಲಿ ಮಾಡುತ್ತಿವೆ.

ಅವು ತಮ್ಮ ಪಾಡಿಗೆ ತಾವು ಸಹಜವಾಗಿ ಯಾವುದೇ ಅವಸರವಿಲ್ಲದೆ ಬೆಳೆದೇ ಬೆಳೆದವು. ಯಾರೂ ಗಡಿಬಿಡಿ ಮಾಡಲಿಲ್ಲ ಅವುಗಳಿಗೆ. ‘ಬೇಗ ಬೇಗ, ಹೂಂ ಇನ್ನೂ ಸ್ವಲ್ಪ ಬೇಗ’ ಎಂದಿದ್ದಿಲ್ಲ. ಅಷ್ಟಿಷ್ಟು ಸಿಟ್ಟು, ಒಂದಿಷ್ಟು ಮೆಚ್ಚು, ಮತ್ತಿಷ್ಟು ಸಾಧನೆಯ ಕೆಚ್ಚು ಒತ್ತಟ್ಟಿಗಿಟ್ಟು ನಾನೆಂದೆ, ಇದೀಗ ಟ್ರೀಟೈಮ್! (ಸಾಲ್ವಡಾರ್ ಡಾಲಿ ತನ್ನ ಪೇಂಟಿಂಗಿನಲ್ಲಿ ಮರಗಳ ತುಂಬ ಕರಗುತ್ತಿರುವ ಗಡಿಯಾರಗಳನ್ನು ಇಳಿಬಿಟ್ಟ ಉದ್ದೇಶ ಇದನ್ನೇ ನಿಮ್ಮೆದೆಯಲ್ಲೂ ನೆಡುವುದೇ ಇರಬಹುದೆ?)

ಸಾಕಾಗಿತ್ತು ನನಗೆ ಈ ಕಾಲದೊಂದಿಗಿನ ಓಟ. ವೃಕ್ಷವೊಂದರ ಕಾಲಪ್ರಜ್ಞೆಯೊಂದಿಗೆ ಹೆಜ್ಜೆಯಿಡಲು ಬಯಸಿದ್ದೆ. ಪರೀಕ್ಷಾ ಹಾಲ್‌ನಲ್ಲಿ ಪರಿವೀಕ್ಷಕಿಯ ಕೆಲಸ ಮಾಡುತ್ತ, ನನ್ನ ವಿದ್ಯಾರ್ಥಿಗಳ ನಿಸ್ಸಾರಗೊಂಡ ಮೊಗಗಳನ್ನು ಕಾಣುತ್ತ, ಆಗಲೂ ಅವರ ಮೇಲೊಂದು ಕಣ್ಣಿಡುತ್ತ, ಒಂದಿಡೀ ವರ್ಷವನ್ನು ಕೆಲವೇ ಗಂಟೆಗಳಿಗಿಳಿಸಿಬಿಡಲು ಅವರು ಒದ್ದಾಡುವುದನ್ನು ಕಾಣುತ್ತಿದ್ದೆ.

ದಿನದ ಬೇರೆ ಬೇರೆ ಅವಧಿಯಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಅದು ಹೇಗೋ ಪಡೆದ ಜ್ಞಾನ ಇಲ್ಲೀಗ ಕೆಲವೇ ಗಂಟೆಗಳ ಬರೆಯುವ ಅವಧಿಯೊಳಗೆ ಓಡಿ ಗುರಿ ತಲುಪಲಾಗದೆ ಕುಸಿಯುವುದನ್ನು ಕಾಣುತ್ತ ನನ್ನ ಸಂಕಟಗಳು ಹೆಚ್ಚಿದವು; ನಿರ್ಧಾರಗಳು ದೃಢವಾದವು.

ಪರೀಕ್ಷೆಗಳನ್ನು ಪಾಸು ಮಾಡುವುದು ಹೀಗೆ. ಡಿಗ್ರಿಗಳನ್ನು, ನೌಕರಿಗಳನ್ನು ಮತ್ತು ಯಶಸ್ಸು ಎಂದು ಎಲ್ಲರೂ ತಿಳಿದ ಅದನ್ನು ಪಡೆದುಕೊಳ್ಳುವುದು ಹೀಗೆ. ಮರವಂತೂ ಮರುದಿನ ಯಶಸ್ವೀ ಪರೀಕ್ಷಾರ್ಥಿಯಾಗುವುದಕ್ಕೆಂದೇ ರಾತ್ರಿಯಿಡೀ ನಿದ್ದೆಗೆಟ್ಟು ಓದಲಿಕ್ಕಿಲ್ಲಪ್ಪ. ವೈವಿಧ್ಯಮಯ ತಳಿಗಳಿದ್ದೂ, ಋತುಮಾನಕ್ಕೆ ಹೊಂದಿಕೊಂಡು ಹೂವು ಹಣ್ಣು ತಳೆಯುತ್ತ ಬರುವ ಮರಕ್ಕೆ ಕೂಡ ಇದೆಲ್ಲ ಸಾಧ್ಯವೂ ಇಲ್ಲ, ಅದು ಅದನ್ನು ಮಾಡುವುದೂ ಇಲ್ಲ. ಆಕಳಿಸುವ ಸಮಯದಲ್ಲಿ ಉರು ಹೊಡೆಯುವುದು ಸಾಧ್ಯವಿಲ್ಲ, ವೃಕ್ಷಗತಿಯೊಂದಿಗೆ ಆಟವಾಡುವುದು ಸಲ್ಲ.

ನಾನು ಶುರುಮಾಡಿದ್ದು ಹೀಗೆ. ಮೊದಲಿಗೆ ದಿನಪತ್ರಿಕೆಗಳನ್ನು ನಿಷೇಧಿಸಿದೆ. ವಾರ್ತೆಗಳನ್ನು, ವಾರ್ತೆ ನೀಡುವ ಟೆಲಿವಿಷನ್ ಮತ್ತು ಸುದ್ದಿ ಒದಗಿಸುವವರನ್ನು ದೂರವಿಟ್ಟೆ. ಸಂಕಲಿತ ಮಾದರಿಯಲ್ಲಿ ಒದಗಿಸಲ್ಪಡುವ ಈ ಕಡಕ್ ಕಹಿಗುಳಿಗೆಗಳು ನಮ್ಮ ಏಕಾಗ್ರತೆಯನ್ನು ಚಿಂದಿ ಉಡಾಯಿಸುವುದಕ್ಕಾಗಿಯೇ ಇವೆ.

ನಮ್ಮ ಬದುಕನ್ನು ಇವು ಅಸ್ತ್ರ ಮಾಡಿಕೊಂಡು ಬಳಸಿಕೊಳ್ಳುತ್ತಿವೆ. ಮರಗಿಡಗಳೇನೂ ಸುದ್ದಿ ಮಾಡುವುದಿಲ್ಲ. ಅವು ಇದ್ದಕ್ಕಿದ್ದಂತೆ ದೊಂಬಿ ಎಬ್ಬಿಸಲಾರವು, ಯುದ್ಧಕ್ಕೆ ಕಾರಣವಾಗಲಾರವು. ಮರಗಿಡಗಳು ಸುದ್ದಿಯನ್ನು ತಿನ್ನಲಾರವು ಕೂಡ, ನಮ್ಮಂತೆ. ಸರಕಾರಗಳು ಉರುಳಲಿ ಬಿಡಲಿ, ಕ್ರಿಕೆಟ್ ಮ್ಯಾಚು ಯಾರೇ ಗೆಲ್ಲಲಿ ಅವುಗಳ ಜಗತ್ತು ಅದರಿಂದ ಮಿಸುಕಾಡುವುದಿಲ್ಲ.

ಹವಾಮಾನ ವೈಪ್ಯರೀತ್ಯದ ಹೊರತಾಗಿ (ಹಾಂ ನೆನಪಿಡಿ, ಹವಾಮಾನ ವರದಿಯ ಹೆಸರಿನಲ್ಲಿ ಟೀವಿಯಲ್ಲಿ ಬರುವ ಕಾಮಿಡಿ ಷೋ ಇದೆಯಲ್ಲ, ಅದಲ್ಲ ಮತ್ತೆ), ಈ ಜಗತ್ತಿನಲ್ಲಿ ನಡೆಯುವಂಥ, ಅದು ಮನುಷ್ಯನಿರ್ಮಿತವಿರಲಿ ಪ್ರಾಕೃತಿಕವೇ ಆಗಿರಲಿ, ಎಲ್ಲವೂ ಅವುಗಳ  ಓಪನ್‌ರೂಫ್ ರಂಗಭೂಮಿಯ ವ್ಯಾಪ್ತಿಯಾಚೆಗೇ.

ಈ ದೈನಂದಿನ ನನ್ನನ್ನು ಸ್ತಂಭೀಭೂತಗೊಳಿಸಿದೆ; ಮಾನವರೊಂದಿಗೆ, ಅವರ ರೀತಿ ನೀತಿಗಳೊಂದಿಗೂ, ಅಣತಿ ಅಪ್ಪಣೆಗಳೊಂದಿಗೂ ಏಗಲಾರದ ಹಾಗೆ ಮಾಡಿದೆ. ಮಾತು ಮಾತು ಮಾತು. ಓತಪ್ರೋತವಾಗಿ ಇದೀಗ ಏನು ನಡೆಯುತ್ತಿದೆಯೋ ಅದರ ಇಂಚಿಂಚು ವರದಿ. ಇಪ್ಪತ್ತನಾಲ್ಕು ಗಂಟೆ ಇದು ಸಾಗುತ್ತದೆ ಮತ್ತು ಎಲ್ಲವೂ ಮನುಷ್ಯಜಗತ್ತಿಗೆ ಸಂಬಂಧಿಸಿದ್ದು ಇದು. ಭೂ–ಜಲ–ವಾಯು ಎಂಬ ಭೇದಭಾವವಿಲ್ಲದೆ ಸರ್ವವ್ಯಾಪಿಯಾದ ಈ ಭೂತ ನನ್ನನ್ನು ಭಯಭೀತಗೊಳಿಸುತ್ತಿದೆ.

ಇದನ್ನು ವಿವರಿಸುವುದು ಕಷ್ಟ ನನಗೆ. ಸುದ್ದಿಮನೆಯ ವಾರ್ತೆಗಳನ್ನು ಎಡೆಬಿಡದೆ ತಿನ್ನುವ ಮಹಾ ಸುದ್ದಿಬಾಕನೊಬ್ಬನ ಮಗಳು ನಾನು. ಬಂಗಾಳದ ದೂರದರ್ಶನ ಚಾನೆಲ್ಲಿನಲ್ಲಿ ನೋಡಿದ ಅವೇ ಸುದ್ದಿಯ ತುಣುಕುಗಳನ್ನು ಒಮ್ಮೆ ನೋಡಿಯಾದ ಮೇಲೆ ಅವನ್ನೇ ಮತ್ತೆ ಹಿಂದಿಯಲ್ಲಿ, ತದನಂತರ ಉರ್ದುವಿನಲ್ಲಿ ನೋಡಬೇಕು.

ಟೆಲಿಗ್ರಾಮುಗಳಂತೆ ನಿರಂತರ ಬರುತ್ತಲೇ ಇರುವ ಸುದ್ದಿಗಳನ್ನು ಶೇಖರಿಸುವುದೇ ಕೆಲಸವಾಗಿ ಬಿಟ್ಟ ಒಬ್ಬ ಕಾರ್ಯಕರ್ತೆಯ ಹಾಗೆ, ಸ್ವತಃ ಸುದ್ದಿಗಳ ದಾಸ್ತಾನು ಕೋಣೆಯಂತಾಗಿರುವ ನಾನು ಬೇರೆಯೇ ಒಂದು ಜಗತ್ತಿನಲ್ಲಿ ಇದ್ದೇನೋ ಅನಿಸುವುದು. ತಮಾಷೆಯೆಂದರೆ, ಸ್ವಲ್ಪ ಗಮನ ಕೊಡುವಂಥ ಯಾವತ್ತೂ ಸುದ್ದಿಗಳು ಕೆಟ್ಟ ಸುದ್ದಿಯೇ ಆಗಿರುವುದು.

ಇಡೀ ಜಗತ್ತನ್ನೇ ಒಂದು ಪ್ರಳಯಸದೃಶ ಸಿನಿಮಾದಂತೆ ಪರಿವರ್ತಿಸಿ ಬಿಟ್ಟ ಈ ಪ್ರತಿಗಾಮಿ ದುಷ್ಟಶಕ್ತಿಯ ಸೆಳೆತವೇನಿದೆ ಅದೇ ಸುದ್ದಿಮನೆಯ ಜೀವಚೈತನ್ಯವಾಗಿದೆ. ನಮ್ಮೆಲ್ಲರ ಕಾಲೆಳೆದು, ನಮ್ಮನ್ನೆಲ್ಲ ಸುದ್ದಿಯನ್ನಷ್ಟೇ ಆಗಿಸುವ ಉದ್ದೇಶ ಹೊತ್ತು ಇದು ನಮ್ಮನ್ನು ದುರಂತದತ್ತ ಸೆಳೆದೊಯ್ಯುತ್ತಿದೆ. ವಾರ್ತಾಪತ್ರವೇ ಹೊಸ ಪವಿತ್ರಗ್ರಂಥ ಮತ್ತು ವಾರ್ತೆಗಳನ್ನು ಓದುತ್ತಿರುವವರೇ ಹೊಸ ಧರ್ಮಗುರುಗಳು.

ಅಸಹಜವಾದ ಈ ಸುದ್ದಿ ಲಯ, ಉಸಿರುಗಟ್ಟಿಕೊಂಡು ಅದೀಗ ಸಾಗುತ್ತಿರುವ ಓಘ, ನನ್ನ ಉಸಿರುಗಟ್ಟಿಸಿದೆ. ನನಗೆಲ್ಲಾದರೂ ಹೊರಗೆ ಹೋಗಬೇಕನಿಸಿದೆ, ಈ ನೆರೆಹೊರೆಯಂತಾಗಿರುವ ವಾರ್ತೆಗಳಿಂದ ಹೊರಗೆ. ಹಾಗೆ ನನ್ನಲಿ ಮೊಳೆಯುವುದೀ ವೃಕ್ಷಪ್ರೀತಿ, ಸುದ್ದಿಗಳ ಕುರಿತ ವಿಕ್ಷಿಪ್ತ ಮನಸ್ಥಿತಿಯತ್ತ ಅವು ತೋರುವ ದಿವ್ಯನಿರ್ಲಕ್ಷ್ಯದತ್ತ ನನ್ನ ಲಕ್ಷ್ಯ.

ನನಗಂತೂ ವಿಶ್ವಾಸವಿದೆ, ಒಂದಲ್ಲಾ ಒಂದು ಕಾಲದಲ್ಲಿ ಮನುಷ್ಯ ಮತ್ತು ಮರಗಳು ಒಂದೇ ಗತಿಯಲ್ಲಿ ಸಾಗಿರಬೇಕು, ಒಂದೇ ಕಾಲಧರ್ಮದಲ್ಲಿ ಬದುಕಿರಬೇಕು. ಕೇವಲ ನನ್ನ ಮನಸ್ಸಿನಲ್ಲಷ್ಟೇ ಆಕೃತಿ ಪಡೆದುಕೊಳ್ಳುತ್ತಿರುವ ಈ ಒಂದು ಸಿದ್ಧಾಂತವನ್ನು ಹೆಚ್ಚು ಸ್ಪಷ್ಟವಾಗಿ ಕಂಡುಕೊಳ್ಳಲು ನಾನು ಎಳೆಯ ಗಿಡಗಳನ್ನು ನೆಟ್ಟು, ಆಧಾರಕೊಟ್ಟು ಬೆಳೆಸತೊಡಗಿದೆ.

ಅವುಗಳ ಬದುಕಿನ ಆರಂಭ ಮತ್ತು ಬೆಳವಣಿಗೆಯಶುರುವಾತು ಗಮನಿಸತೊಡಗಿದೆ. ಒಂದು ಉದಾಹರಣೆ ಹೇಳುವುದಾದರೆ, ಐದು ವರ್ಷದ ಹಿಂದೆ ನನ್ನ ಸೋದರಳಿಯ ಹುಟ್ಟಿದಾಗ ನಾನು ನಮ್ಮ ಹಿತ್ತಲಲ್ಲಿ ಒಂದು ಬೇವಿನ ಗಿಡ ನೆಟ್ಟೆ. ಈ ಪುಟ್ಟ ಹುಡುಗನೀಗ ಸುಮಾರು ಮೂರು ಅಡಿ ಎತ್ತರವಿದ್ದಾನೆ. ಬೇವಿನ ಮರವಂತೂ ಆರಡಿ ಎತ್ತರವಿರುವ ನನ್ನ ಗಂಡನಿಗಿಂತ ಎತ್ತರಕ್ಕೆ ಬೆಳೆದಿದೆ. ಇದಕ್ಕೂ ಮೊದಲು ನನ್ನ ಮದುವೆಯಷ್ಟೇ ಪ್ರಾಯದ ಮರ ಒಂದಿದೆ. ನಾನೇನೂ ಅದನ್ನು ನೆಟ್ಟಿರಲಿಲ್ಲ.

ನಗರವನ್ನು ಹಸಿರಾಗಿಸುವ ಮುನ್ಸಿಪಲ್ ಕಾರ್ಪೊರೇಶನ್ನಿನ ಕಾರ್ಯಕ್ರಮದಡಿ ಅದನ್ನು ನೆಟ್ಟಿದ್ದರು. ಇನ್ನೂ ಒಂದು ಖುಷಿಕೊಟ್ಟ ಸಂಗತಿಯೆಂದರೆ ನಮ್ಮಿಬ್ಬರ ಕೋಣೆಗೆ ನೇರವಾಗಿ ಕಾಣುವಂತೆ ಬೆಳೆದು ನಿಂತಿರುವ ಒಂದು ಹಳದಿ ವರ್ಣದ ಗುಲ್‌ಮೊಹರ್ ಗಿಡ. ಅದನ್ನು ಮದುವೆಗೆ ಕೆಲವೇ ದಿನಗಳಿರುವಾಗ ನೆಟ್ಟಿದ್ದು, ಅದೀಗ ಹಳದಿ ವರ್ಣದ ಗುಲ್‌ಮೊಹರ್ ಹೂವುಗಳಿಂದ ತುಂಬಿ ಕಂಗೊಳಿಸುವಂತಾಗಿದೆ.

ಅದಂತೂ ಈಗ ನಮ್ಮ ಮೂರಂತಸ್ತಿನ ಮನೆಗಿಂತ ದೊಡ್ಡದಾಗಿ ಬೆಳೆದು ನಿಂತಿದೆ. ಅದನ್ನು ಕಂಡಾಗಲೆಲ್ಲ ನನಗೆ ನಮ್ಮ ಮದುವೆ ಕೂಡ ಹೇಗೆಲ್ಲ ರೂಪುಗೊಳ್ಳುವುದು ಸಾಧ್ಯವಿತ್ತಲ್ಲಾ ಎಂಬ ಕಲ್ಪನೆ ಗರಿಗೆದರುತ್ತದೆ. ಆಗ ನಾನು ಎಂಥಾ ಬದುಕನ್ನು ಪಡೆಯುವುದು ಸಾಧ್ಯವಿತ್ತಲ್ಲಾ, ವೃಕ್ಷದ ಕಾಲಧರ್ಮಕ್ಕನುಗುಣವಾಗಿ ಏನೆಲ್ಲ ಅವಕಾಶಗಳಿದ್ದವಲ್ಲಾ ಎಂದೆಲ್ಲ ಅನಿಸುತ್ತದೆ.

***
ಆದರೆ ಈ ಡೆಡ್‌ಲೈನುಗಳೇ ತುಂಬಿರುವ ಜಗತ್ತಿನಲ್ಲಿ ವೃಕ್ಷವೊಂದರ ಕಾಲಧರ್ಮವನ್ನು ಅನುಸರಿಸುವುದಾದರೂ ಹೇಗೆ? ನಾನು ನನ್ನ ತಲೆಯೊಳಗೆ ತುಂಬಿಕೊಂಡ ಕಾಲಮಾನದ ಕಟ್ಟಡವೇನಿದೆ ಅದರ ಒಂದೊಂದೇ ಘಟಕಗಳನ್ನು ಕಳಚತೊಡಗಿದೆ. ಅದೇನೂ ಒಂದು ಪ್ರಜ್ಞಾಪೂರ್ವಕ ಪ್ರಯತ್ನವೆಂದಲ್ಲ. ಒಂದು ಅರ್ಜಿ ಫಾರ್ಮು ಕೈಗೆ ತೆಗೆದುಕೊಂಡರೆ ಅಥವಾ ನಮ್ಮ ಸಾಮಾನ್ಯ ಸಂಭಾಷಣೆಯನ್ನು ಮರದೊಂದಿಗೆ ನಡೆಸಿದರೆ ನಮ್ಮ ಸಮಯದೊಂದಿಗಿನ ವಿಲಕ್ಷಣ ಸಂಬಂಧ ಅರಿವಿಗೆ ಬರತೊಡಗುತ್ತದೆ. 

‘ನಿಮ್ಮ ಬರ್ತ್‌ಡೇ ಯಾವಾಗ?’ – ನಾನು ಫೇಸ್‌ಬುಕ್ಕಿನಿಂದ ನನ್ನ ಬರ್ತ್‌ಡೇ ಮಾಹಿತಿ ತೆಗೆದು ಹಾಕಿದ್ದೇನೆ. ಮಂದಿ ನನ್ನ ಬಳಿ ಬರ್ತ್‌ಡೇ ಬಗ್ಗೆ ಕೇಳಿದಾಗೆಲ್ಲ ನನಗೆ ಮುಜುಗರವಾಗುತ್ತಿತ್ತು. ನಮ್ಮ ಸಾಮಾಜಿಕ ಮತ್ತು ಆಡಳಿತಾತ್ಮಕ ಸಂಸ್ಕೃತಿಯಲ್ಲಿ ನಾವು ಈ ಜಗತ್ತಿಗೆ ಬಂದ ದಿನಾಂಕಕ್ಕೆ ಯಾಕೆ ಅಷ್ಟೊಂದು ಮಹತ್ವ ನೀಡಲಾಗುತ್ತದೆಯೊ ಗೊತ್ತಿಲ್ಲ. ಯಾರೊಬ್ಬರೂ ಮರಗಳ ಬರ್ತ್‌ಡೇ ಆಚರಿಸಿದ್ದಿಲ್ಲ ಅಲ್ಲವೆ? ಹಾಗೆಯೇ ಮರಗಳು ವೈಕುಂಠ ಸಮಾರಾಧನೆ ಆಚರಿಸುವುದನ್ನೂ ಕಲ್ಪಿಸಲಾರೆವು.

ಮರವೊಂದು ತನ್ನ ಜೀವಿತಾವಧಿಯಲ್ಲಿ ಆಗಬಹುದಾದ ಮದುವೆಗಳ ಲೆಕ್ಕ ತೆಗೆದರೆ ವೆಡ್ಡಿಂಗ್ ಆನಿವರ್ಸರಿ ಎನ್ನುವುದಂತೂ ಒಂದು ಜೋಕ್ ತರ ಕಂಡೀತು. ಹಾಗಾದರೆ ಟ್ರೀ–ಟೈಮ್ ಎಂದರೇನು? ಕಾಲದ ಬಗ್ಗೆ ನಾನು ಗೊತ್ತುಗುರಿಯಿಲ್ಲದಂತೆ ಸಾಕಷ್ಟು ತಾತ್ವಿಕ ಚರ್ಚೆಗಳನ್ನೂ ಗಮನಿಸುತ್ತ ಹೋದೆ. ಒಂದು ರಾತ್ರಿ ನಿದ್ದೆ ಮಂಪರಿನಲ್ಲಿ ಅದು ಹೊಳೆಯಿತು: ಇಲ್ಲಿ ಮತ್ತು ಈಗ. ಈ ಕ್ಷಣವನ್ನು ಅನುಭವಿಸು. ವರ್ತಮಾನದಲ್ಲಿ ಬದುಕುವುದು – ಭವಿಷ್ಯದ ಚಿಂತೆಗಳಿಲ್ಲದ, ಗತದ ವಿಷಾದಗಳಿಲ್ಲದ ವರ್ತಮಾನ. 

ಶಂಖನಾದಕಿಂತ ಕಿಂಚಿದೂನಾ
ಮರವಾಗಬೇಕೆಂಬ ಆಸೆಯ ಹಿಂದಿದ್ದ ಉಳಿದೆಲ್ಲಾ ಆಮಿಷಗಳಿಗಿಂತ ಮುಖ್ಯವಾದದ್ದು ಗದ್ದಲದಿಂದ ಮುಕ್ತವಾಗುವುದು ಎಂದು ಮತ್ತೊಮ್ಮೆ ಹೇಳುತ್ತೇನೆ. ಇದಕ್ಕೆ ಸಂಬಂಧಿಸಿದಂತೆ ಎರಡು ಸಂಗತಿಗಳಿವೆ – ಒಂದು ಮನುಷ್ಯರು ಎಬ್ಬಿಸುವ ಗದ್ದಲ, ಇನ್ನೊಂದು ಮರಗಳು ತಮ್ಮ ದೈನಂದಿನದಲ್ಲಿ ಬಳಸುವ ಮೌನದ ಭಾಷೆ. ವೈರುಧ್ಯವಂತೂ ಕಣ್ಣಿಗೆ ಹೊಡೆದು ಕಾಣುವಂತೆಯೇ ಇತ್ತು.

ಮನುಷ್ಯನ ಕೆಲಸಕಾರ್ಯಗಳಲ್ಲಿ ಕಾಣುವ, ಪರರನ್ನು ದೂರುವ ಒಂದು ಧ್ವನಿ ಮತ್ತು ಸದಾ ದುಡಿಯುತ್ತಲೇ ಇರುವ ಮರಗಳ ಅಗಾಧ ಕಾರ್ಯಕ್ಷಮತೆಯ ಹಿಂದಿನ ಮೌನ. ನನಗೆ ಆ ಕಡೆಗೆ ಸರಿಯುವುದಿತ್ತು. ಸಂಗೀತದಿಂದ ಸಸ್ಯಗಳ ಮೇಲೆ ಪರಿಣಾಮವನ್ನುಂಟು ಮಾಡಬಹುದು ಎನ್ನುವಂಥ ಅರೆವೈಜ್ಞಾನಿಕ ಅಧ್ಯಯನಗಳ ಬಗ್ಗೆಯೂ ನನಗೆ ಅರಿವಿತ್ತು.

ಒಂದು ಉದಾಹರಣೆಗೆ, ನನಗೆ ಸಹಿಸಲಿಕ್ಕೇ ಆಗದ, ಭಾರೀ ಸದ್ದಿನ ಸಂಗೀತ ಹೇಗೆ ಅತ್ಯುತ್ತಮ ಫಲ ನೀಡುವಂತೆ ಮಾಡಿತು ಮತ್ತು ಕ್ಲಿಫ್ ರಿಚರ್ಡ್‌ನ ಪಥ್ಯದಿಂದ ಸಸ್ಯಗಳು ಬಾಡಿದವು ಎನ್ನುವಂಥ ಸಂಶೋಧನೆಗಳು. ಪ್ರಯೋಗಗಳು ವೃಕ್ಷಸಂಕುಲದ ಜೈವಿಕಪ್ರಕ್ರಿಯೆಯನ್ನೇ ಬದಲಿಸಿ ಹೊಸದೊಂದು ಸಂಗೀತ ಪ್ರಕಾರವನ್ನೇ ಸೃಷ್ಟಿಸಿವೆ. ಆದರೆ ನನಗಿದರಲ್ಲೆಲ್ಲ ಆಸಕ್ತಿಯಿಲ್ಲ. ಏಕೆಂದರೆ ಒಂದು ಹೊಸ ಹವ್ಯಾಸ ನನ್ನ ಬದುಕಿನಲ್ಲಿ ಬೇರೂರತೊಡಗಿದೆ. ಪ್ರತಿಸಲ ಗಾಳಿ ಬೀಸಿದ ಸದ್ದು ಕೇಳಿದಾಗಲೆಲ್ಲ ಸೆಲ್‌ಫೋನಿನತ್ತ  ನನ್ನ ಕಣ್ಣುಗಳು ಹೋಗುತ್ತಿವೆ.

ಗಾಳಿ ಬೀಸುವ ಸದ್ದಿಗೆ ಗಿಡಮರಗಳು ಹೇಗೆ ಸ್ಪಂದಿಸುತ್ತವೆ ಎನ್ನುವುದನ್ನು ಕಂಡುಹಿಡಿಯಬೇಕಿದೆ ನನಗೆ. ಈ ಆಸಕ್ತಿ ನನಗೆ ಮೂಡಿದ್ದು ಆಕಸ್ಮಿಕವಾಗಿ. ಹಿಮಾಲಯದ ತಪ್ಪಲಲ್ಲಿರುವ ನನ್ನ ಊರಿನ ಹೊರಭಾಗಕ್ಕೆ ನಾವೆಲ್ಲ ಸಂಸಾರವಂದಿಗರಾಗಿ ಒಂದು ಟ್ರಿಪ್ ಹೋಗಿದ್ದೆವು. ಮನಸ್ಸಿನ ಯೋಚನಾಲಹರಿಯನ್ನು ತುಂಡರಿಸುವ ಮಾನವಧ್ವನಿಗಳಿಲ್ಲದ ಹಳ್ಳಿಗಾಡಿನ ಪರಿಸರದಲ್ಲಿ ಖುಷಿಯಾಗಿ ಸುಸ್ತಾಗುವವರೆಗೂ ಸುತ್ತಾಡಿದೆ.

ವಸಂತಋತುವಿನ ಆರಂಭದ ದಿನಗಳವು. ನಡುಹಗಲ ಸೂರ್ಯರಶ್ಮಿಗಳು ಚುಚ್ಚದಂತೆ ನವಿರಾಗಿ ಬೀಸುತ್ತಿದ್ದ ಸಿಹಿಗಾಳಿ ಹಿತವನ್ನೀಯುತ್ತಿತ್ತು. ಅಲ್ಲಿನ ಸದ್ದುಗದ್ದಲವಿಲ್ಲದ ಪರಿಸರ ನನ್ನನ್ನು ತುಂಬಾ ಸೆಳೆಯಿತು. ಅಲ್ಲಿ ಯಾವುದೇ ಮಾನವನ, ಪ್ರಾಣಿಪಕ್ಷಿಗಳ, ವಾಹನಗಳ ಅಥವಾ ಸೆಲ್ ಫೋನಿನ ಸದ್ದುಗಳೆಲ್ಲ ಒಂದರೊಂದಿಗೆ ಒಂದು ಗುದ್ದಾಡುವ ಸಾಧ್ಯತೆಯೇ ಇರಲಿಲ್ಲ. ಆದರೆ ಇದೇನೂ ಪರೀಕ್ಷಾ ಕೊಠಡಿಯ ಅಥವಾ ಪ್ರಾರ್ಥನಾ ಮಂದಿರದ ವಿಚಿತ್ರ ನಿಶ್ಶಬ್ದವಾಗಿರಲಿಲ್ಲ.

ಕೊಂಚ ಸುಧಾರಿಸಿಕೊಳ್ಳಲೆಂದು ನಾನು ನಿಂತಲ್ಲಿದ್ದ ಬಿದಿರಿನ ಮೆಳೆಯಲ್ಲಿ ಬೀಸುವ ಗಾಳಿ ಆಡತೊಡಗಿದ್ದೇ ಅಲ್ಲಿನ ಆ ನಿಶ್ಶಬ್ದದಲ್ಲಿ ಶಿಸ್ತಿಗೆ ಬದಲಾದ ಒಂದು ಲಾಲಿತ್ಯವಿರುವುದು ನನ್ನ ಗಮನಕ್ಕೆ ಬಂತು. ಈ ಹಿಂದೆಯೂ ನಾನು ಈ ಸದ್ದನ್ನು ಕೇಳಿದ್ದೆ. ಆದರೂ ಅದರಲ್ಲೊಂದು ಹೊಸತನವಿತ್ತು, ಪ್ರೇಮದಂತೆಯೇ ಅದು ಏಕಕಾಲಕ್ಕೆ ಗೊತ್ತಿರುವ ಆದರೂ ಗೊತ್ತಿಲ್ಲದ ಮತ್ತು ಅಪೂರ್ವವೂ ಹೊಚ್ಚ ಹೊಸದೂ ಆಗಿತ್ತು. ನಾನು ಬಿದಿರಮೆಳೆಯ ದನಿಯಾಗಿದ್ದೆ.

ಮೊದಲಿಗೆ ಹೌದೋ ಅಲ್ಲವೊ ಎಂಬಂತೆ, ನಂತರ ಬಲವಾಗಿ ಮತ್ತು ತದನಂತರ ದೃಢವಾಗಿ, ಕ್ರಮೇಣ ಗೊತ್ತುಗುರಿಯಿಲ್ಲದಂತೆ ಹರಿದಾಡಿ ತನ್ನನ್ನು ತಾನು ಕಳೆದುಕೊಳ್ಳುವ ಹಾಗೆ. ಸಂಗೀತಗಾರನ ಶ್ವಾಸಾನುಸಂಧಾನದಿಂದಲೇ ಬಲ ಪಡೆದುಕೊಂಡು ಸೌಂದರ್ಯ ಸೃಷ್ಟಿಯಾಗುವಂಥ ವಾದ್ಯಸಂಗೀತವನ್ನು ನಾನು ಕೇಳಿಯೇ ಇರದಿದ್ದಲ್ಲಿ ಇದನ್ನು ನಾನು ಒಂದು ವಿಶಿಷ್ಟ ಸಂಗೀತದ ನಾದವೆಂದೇ ತಿಳಿದುಕೊಳ್ಳುತ್ತಿದ್ದೆ.

ಹೆಚ್ಚಿನೆಲ್ಲಾ ಸುಂದರ ಸಂಗೀತವಾದ್ಯಗಳೂ ವೃಕ್ಷಸಂಕುಲದ ಬಳುವಳಿಯೇ ಎನ್ನುವುದು ಕೇವಲ ಕಾಕತಾಳೀಯವೇನಲ್ಲ. ಗಾಳಿಯನ್ನು ತನ್ನ ದೇಹಕೋಶದೊಳಗಿರಿಸಿಕೊಂಡು ಕ್ರಮೇಣ ಕಂತುಗಳಲ್ಲಿ ಉಸಿರಾಗಿಸಿಬಿಡುವ ಕೊಳಲು – ಇಲ್ಲಿ ಬಿದಿರಿನ ಮೆಳೆಗಳ ತುಂಬ ನಿಂತ ಮಹಾಕೊಳಲೇ ಎನ್ನುವುದು ನನ್ನರಿವಿಗೆ ಆಗ, ತಕ್ಷಣಕ್ಕೆ ಬರಲಿಲ್ಲ. ಅದೇಕೆಂದರೆ, ಅಲ್ಲಿ ಪಿಸುಗುಡುತ್ತಿದ್ದುದು ಆ ಬಿದಿರುಗಳಾಗಿರದೆ ಅವುಗಳ ಎಲೆಗಳಾಗಿದ್ದವು. ಅವು ಗಾಳಿಯಲ್ಲಿ ಫಡಫಡಿಸಿದವು, ಅದರ ಬಗ್ಗೆ ದೂರಿದವು, ಅದಕ್ಕೆ ಹೊಂದಿಕೊಂಡವು ಮತ್ತು ಅದನ್ನು ನಿರ್ಲಕ್ಷಿಸಿ ತಮ್ಮ ಪಾಡಿಗೆ ತಾವಾದವು.

ಮದುವೆಮನೆಯಲ್ಲಿ ನುಡಿಸುವ ಶಹನಾಯ್ ತರ ನನ್ನ ಮನದಲ್ಲಿ ಈ ಎಲೆಗಳ ದೂರಿನ ಅಹವಾಲು ಅಲೆಯಲೆಯಾಗಿ, ಪ್ರೇಮದ ಶಿಸ್ತುಗಳ ಗೋಜಿಲ್ಲದ, ಹೊತ್ತು ಗೊತ್ತಿಲ್ಲದೆ ಬಂದು ಹೋಗುವ ಅಜ್ಞಾತಪ್ರೇಮಿಯೊಬ್ಬನ ಕುರಿತ ಎದೆಯಳಲ ಹಾಡಿನಂತೆ ಮೊರೆಯುತ್ತಿತ್ತು.
ಬಹುಶಃ ನಾನು ತುಸು ಹೆಚ್ಚೇ ಕಲ್ಪನೆ ಮಾಡಿದೆ. ಆದರದು ಒಂದು ಹವ್ಯಾಸಕ್ಕೆ ಕಾರಣವಾಯಿತು.

ನಾನು ಗಾಳಿಯಲ್ಲಿ ಸರಿದಾಡುವ ಬಿದಿರ ಚುರುಕು ಎಲೆಗಳ ಸದ್ದನ್ನು ರೆಕಾರ್ಡ್ ಮಾಡಿದೆ – ಅವುಗಳ ಆ ಚೈತನ್ಯ ತುಂಬಿದ, ಸಂವೇದನೆಗಳಿಂದ ಪುಟಿಯುವ, ಎಲೆಗಳ ಸರಿದಾಟದ ಸದ್ದಿನಲ್ಲೇ ತುಡಿಯುವಂಥದ್ದೇನೋ ಕರೆಯುವಂಥದ್ದೇನೋ ಇತ್ತು. ಅವು ಹದಕ್ಕೆ ಬರಲು ನಿರಾಕರಿಸುವಂಥ ಪೆಡಸು ಹೊಂದಿದ್ದವು.

ಈ ಗಾಳಿಯೊಂದಿಗೆ ಅಷ್ಟಿಷ್ಟು ಸರಸದ ನಂತರ ಅದನ್ನು ಇನ್ನೊಬ್ಬಳ ಬಳಿಗೆ ಹೋಗಗೊಡುವ ಅದರ ಶೈಲಿಯಲ್ಲೇ ಹತಾಶೆಯಂಥದ್ದೇನೋ ಇದ್ದಂತಿತ್ತು. ನಾನು ಆ ಭೇಟಿ–ಬೇಟದ, ಗಾಳಿ ಮತ್ತು ಎಲೆಗಳ ಸಮಾಗಮದ ಸದ್ದನ್ನು ಸೆರೆಹಿಡಿದೆ. ಆಮೇಲೆ, ಮುಸ್ಸಂಜೆಯ ನೀರವತೆಯಲ್ಲಿ, ದೈನಂದಿನದ ಗದ್ದಲವನ್ನು ಮಬ್ಬುಗತ್ತಲು ನಿಧಾನವಾಗಿ ಹೀರಿಕೊಳ್ಳುತ್ತಿದ್ದ ಹೊತ್ತಲ್ಲಿ, ಮನೆಯಲ್ಲಿ ಕುಳಿತು ಆ ವೀಡಿಯೊ ನೋಡಿದೆ.

ಕಣ್ಣುಮುಚ್ಚಿ ಬರಿಯ ಸದ್ದನ್ನೆ ಆಲಿಸತೊಡಗಿದೆ. ಸ್ವರಲಯದ ತಂತ್ರಜ್ಞರ ಹೊರತಾಗಿ ಬೇರೆ ಯಾರೂ ಗಮನಿಸಲಾರದ ನನ್ನದೇ ಉಸಿರ ಸದ್ದು, ಎರಡು ಕಡೆ, ಆ ಒಂದು ನಿಮಿಷದ ವೀಡಿಯೊದಲ್ಲಿ ಸೇರಿಹೋಗಿತ್ತು. ಏನೋ ನಿರಾಶೆ. ಏನೋ ಸಿಟ್ಟು. ನನಗೇಕೆ ಬಿದಿರಮೆಳೆಯಂತೆ ಅದರ ನಾದದಲ್ಲೇ ಸೇರಿಹೋಗುವುದಾಗಲೇ ಇಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT