ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಣನ್‌ ಬಂಡಾಯದ ಹಾದಿ

ವ್ಯಕ್ತಿ
Last Updated 1 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನ್ಯಾಯಾಂಗದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೆ ಹೆಸರಾಗಿರುವ ನ್ಯಾಯಮೂರ್ತಿ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ (ಸಿ.ಎಸ್‌. ಕರ್ಣನ್‌) ಅವರು ಜನಿಸಿದ್ದು 1955ರಲ್ಲಿ. ತಮಿಳುನಾಡಿನ ಕುದ್ದಲೂರ್ ಜಿಲ್ಲೆಯ ವಿರುಧಾಚಲಂ ತಾಲ್ಲೂಕಿನ ಕರ್ನಾಥಂ ಹಳ್ಳಿಯಲ್ಲಿ.

ಕರ್ಣನ್ ಅವರ ತಂದೆ ಶಿಕ್ಷಕರಾಗಿದ್ದರು. ಕರ್ಣನ್ ಅವರು ಕಾನೂನು ಅಧ್ಯಯನ ಪೂರ್ಣಗೊಳಿಸಿದ್ದು 1983ರಲ್ಲಿ. ಇವರು ಸಾರ್ವಜನಿಕ ಜೀವನದಲ್ಲಿ ಮುನ್ನೆಲೆಗೆ ಬಂದಿದ್ದು 2009ರಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರ. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರು ನ್ಯಾಯಾಂಗವನ್ನು ಬಹಿರಂಗವಾಗಿ ಟೀಕಿಸಲು ಆರಂಭಿಸಿದರು.

ಕರ್ಣನ್ ಅವರು ವಿವಾದಾತ್ಮಕ ಹೆಜ್ಜೆಯನ್ನು ಮೊದಲ ಬಾರಿ ತುಳಿದದ್ದು  2011ರ ನವೆಂಬರ್‌ ತಿಂಗಳಲ್ಲಿ. ‘ನಾನು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವ ಎಂಬ ಕಾರಣಕ್ಕೆ ದೌರ್ಜನ್ಯಕ್ಕೆ ಗುರಿ ಮಾಡಲಾಗಿದೆ’ ಎಂದು ಕರ್ಣನ್ ಅವರು ತಮ್ಮ ಸಹೋದ್ಯೋಗಿ ನ್ಯಾಯಮೂರ್ತಿಗಳ ವಿರುದ್ಧ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗಕ್ಕೆ (ಎನ್‌ಸಿಎಸ್‌ಸಿ) ದೂರು ನೀಡಿದ್ದರು.

‘ನ್ಯಾಯಮೂರ್ತಿಯೊಬ್ಬರು ಉದ್ದೇಶಪೂರ್ವಕವಾಗಿ ನನಗೆ ತಮ್ಮ ಕಾಲು ತಾಗಿಸಿದ್ದರು’ ಎಂದು ಕರ್ಣನ್  ದೂರಿನಲ್ಲಿ ಹೇಳಿದ್ದರು.

ನ್ಯಾಯಮೂರ್ತಿಗಳ ಸ್ಥಾನಕ್ಕೆ ಶಿಫಾರಸು ಮಾಡಿರುವ ಹೆಸರುಗಳಿಗೆ ಸಂಬಂಧಿಸಿದ ಪ್ರಕರಣವನ್ನು 2014ರಲ್ಲಿ ವಿಭಾಗೀಯ ಪೀಠವೊಂದು ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದ ಕೊಠಡಿಗೆ ನುಗ್ಗಿದ ಕರ್ಣನ್ ಅವರು, ‘ನ್ಯಾಯಮೂರ್ತಿಗಳ ಆಯ್ಕೆ ನ್ಯಾಯಬದ್ಧವಾಗಿ ನಡೆದಿಲ್ಲ. ಈ ವಿಚಾರವಾಗಿ ನಾನು ಪ್ರಮಾಣಪತ್ರ ಸಲ್ಲಿಸುವೆ’ ಎಂದು ಹೇಳಿದ್ದರು. ನ್ಯಾಯಮೂರ್ತಿಯೊಬ್ಬರು ಹಿಂದೆಂದೂ ಹೀಗೆ ವರ್ತಿಸಿರಲಿಲ್ಲ.

ಕರ್ಣನ್ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌, ‘ದಿಢೀರ್‌ ವರ್ತನೆಯು ನಮ್ಮಲ್ಲಿ ಕೋಪ ತರಿಸಿದೆ. ಇದು ಸಂಪ್ರದಾಯಗಳಿಗೆ ಅನುಗುಣವಾಗಿರುವ ಪ್ರತಿಭಟನೆ ಅಲ್ಲ. ಇದು ಅನಿರೀಕ್ಷಿತ, ಸಂಕುಚಿತ ಮನಸ್ಸಿನ ವರ್ತನೆ. ಈ ನಡವಳಿಕೆಯು ನ್ಯಾಯಾಲಯದ ಶಿಷ್ಟಾಚಾರಗಳಿಗೆ ಅನುಗುಣವಾಗಿಲ್ಲ’ ಎಂದು 2014ರ ಮಾರ್ಚ್‌ನಲ್ಲಿ ಹೇಳಿತ್ತು.

ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್‌.ಕೆ.ಅಗರ್‌ವಾಲ್ ಅವರು ಕರ್ಣನ್ ಅವರ ವಿವಾದಾತ್ಮಕ ನಡೆಗಳಿಂದ ಅಸಮಾಧಾನಗೊಂಡು, ಕರ್ಣನ್ ವರ್ಗಾವಣೆಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಸದಾಶಿವಂ ಅವರಿಗೆ ಮನವಿ ಮಾಡಿದ್ದರು.

‘ವಕೀಲರು ಕಲಾಪ ಬಹಿಷ್ಕರಿಸಿದ್ದಾಗ ನನ್ನ ಕೊಠಡಿಗೆ ಬಂದ ಕರ್ಣನ್ ಅವರು, ತಮಗೆ ಬೇರೆ ಪ್ರಕರಣಗಳನ್ನು ವಹಿಸುವಂತೆ ಅರಚಿದ್ದರು’ ಎಂದು ನ್ಯಾಯಮೂರ್ತಿ ಅಗರ್‌ವಾಲ್ ಅವರು ಪತ್ರದಲ್ಲಿ ಹೇಳಿದ್ದರು.

‘ಮದ್ರಾಸ್ ಹೈಕೋರ್ಟ್‌ನ ಕೆಲವು ನ್ಯಾಯಮೂರ್ತಿಗಳು ಕರ್ಣನ್ ಅವರ ಬಗ್ಗೆ ಭಯಭೀತರಾಗಿದ್ದಾರೆ. ಕರ್ಣನ್ ಅವರ ವರ್ತನೆಗಳು ನ್ಯಾಯಮೂರ್ತಿಯೊಬ್ಬರಿಗೆ ತಕ್ಕುದಾಗಿಲ್ಲ. ಅಲ್ಲದೆ, ಅವರ ವರ್ತನೆಗಳು ಮುಖ್ಯ ನ್ಯಾಯಮೂರ್ತಿಯ ಘನತೆಗೂ ಧಕ್ಕೆ ತರುತ್ತವೆ, ನ್ಯಾಯಾಂಗಕ್ಕೆ ಕೆಟ್ಟ ಹೆಸರು ತರುತ್ತವೆ’ ಎಂದು ಅಗರ್‌ವಾಲ್ ಹೇಳಿದ್ದರು.

ನ್ಯಾಯಮೂರ್ತಿ ಅಗರ್‌ವಾಲ್ ಅವರ ದೂರಿಗೆ ಪ್ರತಿಕ್ರಿಯೆಯಾಗಿ ಕರ್ಣನ್ ಅವರು, ‘ಅಗರ್‌ವಾಲ್ ಅವರು ಕಾರಣವೇ ಇಲ್ಲದೆ ಒಂದು ರೀತಿಯ ತಾರತಮ್ಯದ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಹೇಳಿದ್ದರು.

ಸಿಜೆಐಗೆ ಪತ್ರ ಬರೆದಿದ್ದ ಕರ್ಣನ್ ‘ನಾನು ಮಾಡಿದ ಆರೋಪಗಳ ಸತ್ಯಾಸತ್ಯತೆಯನ್ನು ಸಾಬೀತು ಮಾಡುವವರೆಗೆ ನನ್ನನ್ನು ವರ್ಗ ಮಾಡಬಾರದು’ ಎಂದು ಕೇಳಿಕೊಂಡಿದ್ದರು.

ಮದ್ರಾಸ್ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರು ತರಬೇತಿನಿರತ ವಿದ್ಯಾರ್ಥಿನಿಯೊಬ್ಬರ ಮೇಲೆ ತಮ್ಮ ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕರ್ಣನ್ 2015ರಲ್ಲಿ ಆರೋಪಿಸಿದ್ದರು.

ಸಿವಿಲ್ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರು ಹೊರಡಿಸಿದ್ದ ಆಡಳಿತಾತ್ಮಕ ಆದೇಶಕ್ಕೆ ಕರ್ಣನ್ ತಡೆ ನೀಡಿದ್ದರು. ಕೌಲ್‌ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕ್ರಮ ಜರುಗಿಸುವಂತೆ ಎನ್‌ಸಿಎಸ್‌ಸಿಯನ್ನು ಒತ್ತಾಯಿಸುವುದಾಗಿ ಹೇಳಿದ್ದರು. ಕೊನೆಯಲ್ಲಿ ಮಧ್ಯಪ್ರವೇಶಿಸಿದ್ದ ಸುಪ್ರೀಂ ಕೋರ್ಟ್‌, ಕರ್ಣನ್ ಅವರ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು.

‘ನನಗೆ ಅಷ್ಟೇನೂ ಮುಖ್ಯವಲ್ಲದ ಪ್ರಕರಣಗಳನ್ನು ವಹಿಸಲಾಗುತ್ತಿದೆ’ ಎಂದು ದೂರಿ ಕರ್ಣನ್ 2015ರ ನವೆಂಬರ್‌ನಲ್ಲಿ ದೀರ್ಘಾವಧಿ ರಜೆ ಹಾಕಿದ್ದರು.

‘ಜಾತಿ ಆಧಾರಿತ ತಾರತಮ್ಯ ಇದೆ. ಜಾತಿ ವ್ಯವಸ್ಥೆ ಇನ್ನೂ ಉಳಿದುಕೊಂಡಿರುವ ದೇಶವೊಂದರಲ್ಲಿ ಜನಿಸಿದ್ದಕ್ಕೆ ನಾಚಿಕೆ ಆಗುತ್ತಿದೆ. ಜಾತಿ ವ್ಯವಸ್ಥೆ ಇಲ್ಲದ ದೇಶವೊಂದಕ್ಕೆ ವಲಸೆ ಹೋಗಲು ಇಚ್ಛಿಸುತ್ತೇನೆ’ ಎಂದು 2016ರ ಫೆಬ್ರುವರಿಯಲ್ಲಿ ಹೇಳುವ ಮೂಲಕ ಕರ್ಣನ್  ಇನ್ನೊಂದು ವಿವಾದಕ್ಕೆ ಕಾರಣರಾಗಿದ್ದರು.
ತಮ್ಮ ವಾದವನ್ನೇ ಆಲಿಸದೆ ಸುಪ್ರೀಂ ಕೋರ್ಟ್‌ ತಮ್ಮನ್ನು ವರ್ಗಾವಣೆ ಮಾಡಿದೆ ಎಂದು ಕರ್ಣನ್ ಆರೋಪಿಸಿದ್ದರು. ವರ್ಗಾವಣೆ ಆದೇಶವು ಸಂವಿಧಾನಕ್ಕೆ ವಿರುದ್ಧ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶಿಸಲಾಗುವುದು ಎಂದೂ ಕರ್ಣನ್ ಹೇಳಿದ್ದರು.

‘ನಾನು ನಿರಪರಾಧಿ. ಕೆಲವು ನ್ಯಾಯಮೂರ್ತಿಗಳ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ನಾನು ಜಾತಿ ತಾರತಮ್ಯದ ಬಲಿಪಶು ಆಗಿದ್ದೇನೆ’ ಎಂದು ಅವರು ನ್ಯಾಯಾಲಯದ ಹೊರಗೆ ಮಾಧ್ಯಮಗಳ ಬಳಿ ದೂರಿದ್ದರು.

ಕರ್ಣನ್ ಅವರು ಪ್ರೌಢ ಶಿಕ್ಷಣ ಪಡೆದಿದ್ದು ಮಂಗಲಂಪೇಟೆ ಪ್ರೌಢಶಾಲೆಯಲ್ಲಿ. ಪದವಿಪೂರ್ವ ಶಿಕ್ಷಣ ಪಡೆದಿದ್ದು ವಿರುಧಾಚಲಂ ಕಲಾ ಕಾಲೇಜಿನಲ್ಲಿ. ಇದಾದ ನಂತರ ಅವರು ಚೆನ್ನೈನ ನ್ಯೂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪೂರ್ಣಗೊಳಿಸಿದರು.

ಪದವಿ ಪಡೆದ ನಂತರ ಅವರು ಮದ್ರಾಸ್‌ ಕಾನೂನು ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. 1983ರಲ್ಲಿ ಕಾನೂನು ಪದವಿ ಪಡೆದರು. ತಮಿಳುನಾಡು ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿಕೊಂಡು ಸಿವಿಲ್ ಪ್ರಕರಣಗಳಲ್ಲಿ ವಕೀಲಿಕೆ ಆರಂಭಿಸಿದರು.

ವಕೀಲಿ ವೃತ್ತಿಯಲ್ಲಿ ತೊಡಗಿದ್ದಾಗ ಕರ್ಣನ್ ಅವರು ಸರ್ಕಾರದ ಪರವಾಗಿಯೂ ವಾದಿಸಿದ್ದರು.

ಮದ್ರಾಸ್ ಹೈಕೋರ್ಟ್‌ನಲ್ಲಿ ಎಂಟು ವರ್ಷ ಕರ್ತವ್ಯ ನಿಭಾಯಿಸಿದ ಅವರನ್ನು 2016ರ ಮಾರ್ಚ್‌ನಲ್ಲಿ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT