ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸಂಜೀವಿನಿ ಅನುಷ್ಠಾನ ಚುರುಕು

ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ
Last Updated 14 ಏಪ್ರಿಲ್ 2017, 9:27 IST
ಅಕ್ಷರ ಗಾತ್ರ

ರಾಯಚೂರು: ಬರ ಪರಿಸ್ಥಿತಿ ನಿಭಾಯಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಅಂತರ್ಜಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರವು ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ‘ಕೆರೆ ಸಂಜೀವಿನಿ’ ಕಾಮಗಾರಿಗಳು ಜಿಲ್ಲೆಯಲ್ಲಿ ಚುರುಕುಗೊಂಡಿವೆ.

ಮುಖ್ಯವಾಗಿ ಕುಡಿಯುವ ನೀರಿನ ಮೂಲಗಳು ಬತ್ತಿ ಹೋಗುತ್ತಿರುವುದರಿಂದ ಸಮಸ್ಯೆ ಜಟೀಲವಾಗುವುದನ್ನು ತಪ್ಪಿಸಬೇಕು ಎನ್ನುವುದು ಸರ್ಕಾರದ ಉದ್ದೇಶ. ಅಲ್ಲದೆ, ಯೋಜನೆ ಅನುಷ್ಠಾನ ಮತ್ತು ಮೇಲ್ವಿಚಾರಣೆ ನಡೆಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರನ್ನು ಅನುಷ್ಠಾನ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಕಳೆದ ವರ್ಷವೂ ರಾಯಚೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಕೆರೆಗಳ ಹೂಳು ತೆಗೆಯಲಾಗಿತ್ತು. ಅದರ ಯಶಸ್ಸು ಪರಿಗಣಿಸಿ ಈ ವರ್ಷ ಎರಡನೇ ಭಾರಿಗೆ ಕೆಲವು ಜಿಲ್ಲೆಗಳಲ್ಲಿ ಕೆರೆಗಳ ಹೂಳು ತೆಗೆಸಲಾಗುತ್ತಿದೆ. ಕೆರೆ ಸಂಜೀವಿನಿ ಮೊದಲ ಭಾಗದಲ್ಲಿ ಪೂರ್ಣಗೊಳ್ಳದ ಯೋಜನೆಗಳನ್ನೂ ಈಗ ಮುಂದುವರಿಸಲಾಗಿದೆ.

ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕು ಮತ್ತು ಕೆಲವು ಷರತ್ತುಗಳನ್ನು ಅನ್ವಯಿಸಿ ಜೆಸಿಬಿ ಯಂತ್ರಗಳ ಬಳಕೆಗೂ ಅವಕಾಶ ನೀಡಲಾಗಿದೆ. ಯೋಜನೆಗೆ ಅನುದಾನ ಬಳಕೆಯಾಗಿದ್ದರ ಬಗ್ಗೆ ಜಿಲ್ಲಾ ಪಂಚಾಯಿತಿಯಿಂದ ಪ್ರಮಾಣಪತ್ರ ಸಲ್ಲಿಸಬೇಕು ಎನ್ನುವ ಷರತ್ತನ್ನು ಸರ್ಕಾರ ವಿಧಿಸಿದೆ.

ತೀವ್ರ ಬರ: ಈ ವರ್ಷ ಪ್ರಮುಖವಾಗಿ ಕೋಲಾರ ಮತ್ತು ರಾಯಚೂರು ಜಿಲ್ಲೆಗಳ ವಿವಿಧ ವಿಧಾನ ಸಭಾ ಕ್ಷೇತ್ರಗಳಿಗೆ ಅನುದಾನ ಒದಗಿಸಲಾಗಿದೆ. ಕೆರೆಗಳ ಹೊಳೆತ್ತುವುದರಿಂದ ಬರ ಪರಿಸ್ಥಿತಿ ನಿಭಾಯಿಸಬಹುದು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ಸರ್ಕಾರವು ಕೆರೆ ಸಂಜೀವಿನಿ ಯೋಜನೆ ಮುಂದುವರಿಸಿದೆ.

ಸ್ಥಳಕ್ಕೆ ಭೇಟಿ: ಮಳೆಗಾಲ ಪೂರ್ವದಲ್ಲೆ ಕೆರೆಗಳ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಬೇಕು. ಸರ್ಕಾರವು ಒದಗಿಸಿದ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕಿದೆ. ಹೀಗಾಗಿ ಕೆರೆಗಳ ಹೂಳೆತ್ತುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ಎಲ್ಲ ಕಡೆಗೂ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಡಿಯುವ ನೀರು ಹಾಗೂ ನೀರಾವರಿ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಹೊಸ ಕೆರೆಗಳನ್ನು ನಿರ್ಮಿಸುವಂತೆ ಜಿಲ್ಲೆಯಲ್ಲಿ ಭಾರಿ ಬೇಡಿಕೆ ಇದೆ. ಈಗಾಗಲೇ ಬಹಳಷ್ಟು ಹೊಸ ಕೆರೆಗಳು ನಿರ್ಮಾಣ ಆಗಿವೆ. ಸರ್ಕಾರದಿಂದ ಮತ್ತೆ ಹೊಸ ಯೋಜನೆ ರೂಪಿಸಿದರೆ, ಮತ್ತಷ್ಟು ಕೆರೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಲಾ ₹18 ಲಕ್ಷ
ಸಿಂಧನೂರು, ದೇವದುರ್ಗ, ಲಿಂಗಸುಗೂರು, ಮಾನ್ವಿ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹18 ಲಕ್ಷ ಅನುದಾನವನ್ನು ಸರ್ಕಾರ ಜನವರಿಯಲ್ಲೆ ಬಿಡುಗಡೆಗೊಳಿಸಿದೆ.

*
ಎರಡು ತಿಂಗಳಲ್ಲಿ ಕೆರೆಗಳ ಹೂಳೆತ್ತುವ ಕೆಲಸ ಮುಗಿಸಬೇಕಿದೆ. ಅದಕ್ಕಾಗಿ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ.
-ಎಂ.ಕೂರ್ಮಾರಾವ್‌,
ಸಿಇಒ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT