ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ತಗ್ಗಿದ ಅವಕಾಶ...

Last Updated 16 ಏಪ್ರಿಲ್ 2017, 6:20 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿ.ವಿ.ಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಮಾರ್ಗದರ್ಶನ ನೀಡುವ ಮಾರ್ಗ­ದರ್ಶಕರ ಕೊರತೆ ಎದುರಾಗಿದೆ.ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) 2017ರ ಸಂಶೋಧನೆ ಕುರಿತ ನಿಯಮಾವಳಿಯ ಪ್ರಕಾರ ಪ್ರಾಧ್ಯಾಪಕರೊಬ್ಬರು 8, ಸಹ ಪ್ರಾಧ್ಯಾಪಕರು 6, ಸಹಾಯಕ ಪ್ರಾಧ್ಯಾಪಕರು 4 ಮಂದಿಗೆ ಸಂಶೋಧ­ನೆಗೆ ಮಾರ್ಗದರ್ಶನ ನೀಡಬಹುದು ಎಂದಿದೆ. ಇವರ ಪೈಕಿ ಪ್ರಾಧ್ಯಾಪಕರು 8 ಸಂಶೋಧಕರಲ್ಲಿ ಇಬ್ಬರು ವಿದೇಶಿಯರಿಗೆ ಮಾರ್ಗದರ್ಶನ ನೀಡಬಹುದು ಎಂದು ಸೂಚಿಸಲಾಗಿದೆ. ಇದು ವಿದೇಶಿ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ತೊಡಕಾಗಲಿದೆ ಎಂದು ಮೈಸೂರು ವಿ.ವಿ ಕುಲಪತಿ ಪ್ರೊ.ದಯಾನಂದ ಮಾನೆ ‘ಪ್ರಜಾವಾಣಿ’ಗೆ ತಿಳಿಸಿದರು.

ಹೇಗೆ ತೊಂದರೆ: ಕನ್ನಡ, ಜಾನಪದ­ದಂತಹ ವಿಭಾಗಗಳಲ್ಲಿ ವಿದೇಶಿ ವಿದ್ಯಾರ್ಥಿ­ಗಳು ಸಂಶೋಧನೆಗಾಗಿ ಇರುವುದೇ ಇಲ್ಲ. ಬೇಡಿಕೆ ಇಲ್ಲದಂತಹ ಸಂದರ್ಭಗಳಲ್ಲಿ ವಿದೇಶಿಯರಿಗೆ ಮೀಸಲಿಟ್ಟಿರುವ ಸ್ಥಾನಗಳನ್ನು ಭಾರತೀ­ಯರಿಗೇ ಕೊಡಬಹುದು. ಆದರೆ ಹೆಚ್ಚು ಬೇಡಿಕೆ ಇರುವ ಇತರ ವಿಭಾಗಗಳಲ್ಲಿ ಸಮಸ್ಯೆಯಾಗಿದೆ.

ಕೆಲವು ವಿಭಾಗಗಳಲ್ಲಿ ಮಾರ್ಗ­ದರ್ಶಕ­ರೊಬ್ಬರಿಗೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬೇಡಿಕೆ ಇದೆ. ಇಬ್ಬರು ವಿದೇಶಿ ವಿದ್ಯಾರ್ಥಿಗಳಿಗೇ ಅವಕಾಶ ನೀಡ­ಬೇಕು ಎಂಬ ನಿಯಮ ಸಡಿಲ­­ಗೊಳಿಸಿದರೆ, ಅವರಿಗೆ ಅವಕಾಶ ಕೊಡಲು ಸಾಧ್ಯ ಎಂದರು.ಈಗಾಗಲೇ ಹಲವು ಮಾರ್ಗ­ದರ್ಶಕರು 14ಕ್ಕೂ ಹೆಚ್ಚು ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಹಳಬರು ಖಾಲಿಯಾ­ಗುವ­ವರೆಗೂ ಹೊಸ ಸಂಶೋಧಕರು ಕಾಯಬೇಕಾಗುತ್ತದೆ ಎಂದು ತಿಳಿಸಿದರು.

ಯಾರು ಎಷ್ಟೆಷ್ಟು?: ಮೈಸೂರು ವಿ.ವಿ.ಯಲ್ಲಿ ಹಾಲಿ 50 ರಾಷ್ಟ್ರಗಳಿಂದ 979 ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಳೆಯ ನಿಯಮಾವಳಿಯ ಪ್ರಕಾರ, ಈಗ 242 ವಿದೇಶಿಯರು ಸಂಶೋಧನೆಯಲ್ಲಿ ತೊಡಗಿಸಿ­ಕೊಂಡಿದ್ದಾರೆ. ವಿ.ವಿ ವ್ಯಾಪ್ತಿಯಲ್ಲಿ ಈಗ ಇರುವ ಮಾರ್ಗ­ದರ್ಶಕರ ಸಂಖ್ಯೆ 741. ಇವರು ವಿ.ವಿ ಕ್ಯಾಂಪಸ್‌ ಮಾತ್ರವೇ ಅಲ್ಲದೇ, ಮಂಡ್ಯ, ಚಾಮರಾಜನಗರ, ಹಾಸನ ಸ್ಯಾಟಲೈಟ್‌ ಕೇಂದ್ರಗಳಲ್ಲೂ ಹಂಚಿಹೋಗಿದ್ದಾರೆ.

‘ವಿವಿಧ ಯೋಜನೆಗಳ ಅಡಿಯಲ್ಲಿ ಈಗ 2 ಸಾವಿರಕ್ಕೂ ಹೆಚ್ಚು ಸಂಶೋಧಕರು ಇದ್ದಾರೆ. ಆದರೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳು­ವವರ ಸಂಖ್ಯೆ ಸಾಕಷ್ಟು ಇದ್ದರೂ ಅವಕಾಶಗಳು ಸಿಗದಾಗಿವೆ. ಹೊಸ ನಿಯಮಾವಳಿಯನ್ನು ಜಾರಿಗೊಳಿಸಿದ ಕೂಡಲೇ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆ ಆಗುತ್ತದೆ. ಕೆಲವು ವಿಭಾಗಗಳಲ್ಲಿ ಅವಕಾಶಗಳು ಸಿಗದಂತೆಯೇ ಆಗಲಿವೆ’ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.­ಸೋಮಶೇಖರ ತಿಳಿಸಿದರು.

‘ಹತ್ತು ವರ್ಷಗಳಲ್ಲಿ ಉಪನ್ಯಾಸಕರ ನೇಮಕಾತಿ ಆಗದೇ ಇರುವುದು ಸಂಶೋಧನಾ ಮಾರ್ಗದರ್ಶಕರ ಕೊರತೆಗೆ ಕಾರಣ. ಸದ್ಯಕ್ಕೆ, ‘ಯುಜಿಸಿ’ಯ ‘ರಾಷ್ಟ್ರೀಯ ಅರ್ಹತಾ ಪರೀಕ್ಷೆ’ (ಎನ್‌ಇಟಿ) ಮೂಲಕ ಕಿರಿಯ ಸಂಶೋಧನಾ ಫೆಲೊಶಿಪ್‌ (ಜೆಆರ್‌ಎಫ್‌) ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ‘ಜೆಆರ್‌ಎಫ್‌’ ಪಡೆದ ಅನೇಕರು ಮಾರ್ಗದರ್ಶಕರು ಸಿಗದೇ ಅವಕಾಶ ವಂಚಿತಾಗಿರುವ ಉದಾಹರಣೆ ವಿ.ವಿ.ಯಲ್ಲಿ ಸಾಕಷ್ಟಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT