ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಕ್ಕೊಮ್ಮೆ ಬರುವ ನೀರೂ ಕಲುಷಿತ

ಕುಡಿಯುವ ನೀರಿಗಾಗಿ ಸಾರ್ವಜನಿಕರ ಪರದಾಟ; ನೀರಿನ ಬವಣೆ ತಪ್ಪಿಸಲು ಒತ್ತಾಯ
Last Updated 18 ಏಪ್ರಿಲ್ 2017, 4:34 IST
ಅಕ್ಷರ ಗಾತ್ರ
ಕಲಬುರ್ಗಿ:  ನಗರದಲ್ಲಿ ಮೂರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿರುವ ಕುಡಿಯುವ ನೀರು ಕಲುಷಿತವಾಗಿದೆ. ಚರಂಡಿಯ ಗಲೀಜು, ಮಣ್ಣು ಮಿಶ್ರಿತ ಮತ್ತು ಕಂದು ಬಣ್ಣದ ನೀರು ಬರುತ್ತಿದೆ.
 
ಆದರೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರಬರಾಜು ಮಾಡುವ ನೀರನ್ನೇ ಕುಡಿಯುವುದು ಅನಿವಾರ್ಯತೆ ಇದೆ.
ನಗರದ 52ನೇ ವಾರ್ಡ್‌ನ ಸ್ಟೇಷನ್‌ ಬಜಾರ್‌, 50ನೇ ವಾರ್ಡ್‌ನ ಸಿದ್ಧಾರ್ಥ ನಗರ, 44ನೇ ವಾರ್ಡ್‌ನ ಸುಂದರ ನಗರ, 38ನೇ ವಾರ್ಡ್‌ನ ಹೀರಾನಗರ ಹಾಗೂ ಬ್ರಹ್ಮಪುರ ಬಡಾವಣೆ, ಸಂಗಮೇಶ ಕಾಲೊನಿ, ವೆಂಕಟೇಶ ನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದೆ. 
ಕೆಲವರು ಶುದ್ಧೀಕರಿಸಿದ ನೀರನ್ನು ಖರೀದಿಸುತ್ತಿದ್ದಾರೆ.
 
ಬೇಸಿಗೆಯಾದ್ದರಿಂದ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರಿಲ್ಲ. ಕೆಲವರು ನಲ್ಲಿ ನೀರನ್ನು ಎರಡು–ಮೂರು ದಿನ ಸಂಗ್ರಹಿಸಿ ಮಣ್ಣು, ಕಸ ತಳದಲ್ಲಿ ಕೂತಾಗ ಬಳಸುತ್ತಾರೆ. ಆದರೆ, ವಾಸನೆ ಮಾತ್ರ ಹಾಗೆ ಇರುತ್ತದೆ ಎಂದು ನಿವಾಸಿಗಳು ದೂರುತ್ತಾರೆ.
 
‘ನಲ್ಲಿಯಲ್ಲಿ ಮೊದಲ ಬರುವ ನೀರಿನಿಂದ ಬಟ್ಟೆ ತೊಳೆಯುವುದಕ್ಕೂ ಬರುವುದಿಲ್ಲ. ಹುಳು, ಕಸ, ವಾಸನೆ ಇರುತ್ತದೆ. ಅರ್ಧ ಗಂಟೆ ನಂತರ ಕುಡಿಯುವ ನೀರು ತುಂಬುತ್ತೇವೆ. ಆಗಲೂ ಕಸ ಇರುತ್ತದೆ. ವಾಸನೆ ಹೋಗಿರುವುದಿಲ್ಲ. ಅನಿವಾರ್ಯವಾಗಿ ಬಟ್ಟೆಯಿಂದ ಸೋಸಿ ಕುಡಿಯುತ್ತೇವೆ’ ಎಂದು 52ನೇ ವಾರ್ಡ್‌ನ ಸ್ಟೇಷನ್‌ ಏರಿಯಾದ ಆನಂದ ಬಾಬುರಾವ್‌ ಗೌಳಿ ತಿಳಿಸಿದರು.
 
‘ಪೈಪ್‌ಗಳು ಅಲ್ಲಲ್ಲಿ ಒಡೆದಿರುವುದರಿಂದ ಚರಂಡಿ ನೀರು ಸೇರಿಕೊಳ್ಳುತ್ತಿದೆ. ಜೊತೆಗೆ ಮಣ್ಣು, ಕಸ ಸೇರಿ ನೀರು ಬರುತ್ತಿದೆ. 88ಈ ನೀರು ಮಕ್ಕಳು ಸೇವಿಸುವುದರಿಂದ ಅವರ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ನಮಗೆ ಹಣ ಕೊಟ್ಟು ಶುದ್ಧೀಕರಿಸಿದ ನೀರು ಖರೀದಿಸುವ ಶಕ್ತಿ ಇಲ್ಲ’ ಎಂದು ಅಳಲು ತೋಡಿಕೊಳ್ಳುತ್ತಾರೆ ಮೊಹ್ಮದ್‌ ಇಸಾಕ್‌ ಶೇಖ್‌.
 
‘ಶುದ್ಧ ನೀರು ಪೂರೈಕೆಗೆ ಫಿಲ್ಟರ್‌ ಬೆಡ್‌, ಆಶ್ರಯ ಕಾಲೊನಿ ಹಾಗೂ ಕೋಟನೂರು(ಡಿ)ಯಲ್ಲಿನ ಜಲ ಸಂಗ್ರಹಗಾರಗಳನ್ನು ₹1.35 ಕೋಟಿ ವೆಚ್ಚದಲ್ಲಿ ಶುಚಿಗೊಳಿಸಲಾಗಿದೆ. ಇದರಿಂದ ಪಾಚಿಕಟ್ಟಿದ, ಮಣ್ಣು ಮಿಶ್ರಿತ ಹಾಗೂ ಮಲಿನ ನೀರು ಪೂರೈಕೆ ತಪ್ಪಲಿದೆ’ ಎಂದು ಮಹಾನಗರ ಪಾಲಿಕೆ ಮೂಲಗಳು ತಿಳಿಸಿವೆ.
***
ಮಂಡಳಿ ಸರಬರಾಜು ಮಾಡುವ ನಲ್ಲಿ ನೀರು ಕುಡಿಯುವುದಿಲ್ಲ.ಎರಡು ದಿನ ಸಂಗ್ರಹಿಸಿ ಮಣ್ಣು, ಕಸ ತಳಕ್ಕೆ ಕೂತಾಗ ಬಟ್ಟೆ ತೊಳೆಯಲು, ಇನ್ನಿತರ ಕಾರ್ಯಗಳಿಗೆ ಬಳಸುತ್ತೇವೆ
ರವಿಕುಮಾರ ಎಸ್‌.ಅಳ್ಳೊಳ್ಳಿ, ಸುಂದರ ನಗರ, 44ನೇ ವಾರ್ಡ್‌
***
ನಲ್ಲಿಗಳಿಗೆ  ನೀರು ಬಿಟ್ಟಾಗ ತುಂಡು ಪೈಪ್‌ ಹಚ್ಚಿ ನೀರು ಪಡೆಯುತ್ತಾರೆ. ನಂತರ ಮುಚ್ಚುವುದಿಲ್ಲ. ಮಣ್ಣು, ಚರಂಡಿ ನೀರು ಸೇರುತ್ತದೆ.
ಆರ್‌.ವಿ.ಪಾಟೀಲ, ಕಾರ್ಯಪಾಲಕ ಎಂಜಿನಿಯರ್‌,  ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT