ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಸಾರ ಕ್ಷತ್ರಿಯ ಸಹಕಾರಿ ಬ್ಯಾಂಕ್‌ನ ಯಶೋಗಾಥೆ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ನಗರದಲ್ಲಿ ಐದು ಶಾಖೆಗಳನ್ನು ಹೊಂದಿರುವ, ಆಡಿಟ್‌ ವರದಿಯಲ್ಲಿ ನಿರಂತರವಾಗಿ ಎ ದರ್ಜೆ ಪಡೆಯುತ್ತ ಬಂದಿರುವ ಬ್ಯಾಂಕ್‌ನ ಹೆಜ್ಜೆ ಗುರುತುಗಳು...

ದರ್ಜಿ (ಟೇಲರಿಂಗ್‌) ಸಮಾಜದ ಮುಖಂಡರ ದೂರದೃಷ್ಟಿಯ ಫಲವಾಗಿ 100 ವರ್ಷಗಳ ಹಿಂದೆ ಬೆಂಗಳೂರಿನ ದರ್ಜಿಪೇಟೆಯಲ್ಲಿ ಭಾವಸಾರ ಕ್ಷತ್ರಿಯ ಸಹಕಾರಿ ಸಂಘದ ರೂಪದಲ್ಲಿ ಅಸ್ತಿತ್ವಕ್ಕೆ ಬಂದ ಸಂಸ್ಥೆಯೊಂದು ಒಂದು ನೂರು ವರ್ಷಗಳಲ್ಲಿ ಸಹಕಾರಿ ಬ್ಯಾಂಕ್‌ ಆಗಿ ಬೆಳೆದು ಬಂದಿದೆ.

ಬಿ. ಎಸ್‌. ರಾಣೋಜಿರಾವ್‌ ಮತ್ತು ವಿ. ಎಂ. ಧೋಂಡೋಜಿ ರಾವ್‌  ನೇತೃತ್ವದಲ್ಲಿ  ಮುಖಂಡರು ಭಾವಸಾರ ಸಮಾಜದ ಪ್ರತಿಯೊಂದು ಮನೆ, ಮನೆಗೆ ತೆರಳಿ, ಹತ್ತು ಪೈಸೆ, ನಾಲ್ಕಾಣೆ ಸಂಗ್ರಹಿಸಿದ್ದರು. ಆ ಕಾಲಕ್ಕೆ ಈ ರೀತಿ ಸಂಗ್ರಹವಾದ ಷೇರು ಮೊತ್ತ ಕೇವಲ ಎಂಟು ರೂಪಾಯಿ, ಹನ್ನೆರಡು ಆಣೆ!

ಒಂದು ನೂರು ವರ್ಷಗಳಲ್ಲಿ ಬ್ಯಾಂಕ್‌ನ ಷೇರು ಬಂಡವಾಳ ಈಗ ₹ 8 ಕೋಟಿಗಳಿಗೆ ಏರಿದೆ. ಠೇವಣಿಗಳ ಮೊತ್ತ ₹ 240 ಕೋಟಿಗಳಿಗೆ ತಲುಪಿದೆ.  ₹ 14 ಕೋಟಿಗಳ ನಿವ್ವಳ ಸಂಪತ್ತು (net asset) ಹೊಂದಿರುವ ಹಂತಕ್ಕೆ ಬೆಳೆದು ನಿಂತಿರುವುದು ಬ್ಯಾಂಕ್‌ನ ಆರ್ಥಿಕ ಸದೃಢತೆಗೆ ಸಾಕ್ಷಿಯಾಗಿದೆ. 

ಚಿಕ್ಕಪೇಟೆಯ ದರ್ಜಿಪೇಟೆಯಲ್ಲಿ ಆರಂಭಗೊಂಡ ಸಹಕಾರ ಸಂಘ, ಈಗ ನಗರದ ಐದು ಕಡೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಮೂರು ಶಾಖೆಗಳು ಸ್ವಂತ ಕಟ್ಟಡ ಹೊಂದಿವೆ. ಕಂಟೊನ್ಮೆಂಟ್‌ ಶಾಖೆಗೂ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಈಗಾಗಲೇ ನಿವೇಶನ ಖರೀದಿಸಲಾಗಿದೆ. ಈ ಜಾಗೆಯಲ್ಲಿ ಶತಮಾನೋತ್ಸವ ಸ್ಮಾರಕ ಭವನ ನಿರ್ಮಿಸಲಾಗುವುದು. ಈ ಭವನದಲ್ಲಿಯೇ ಬ್ಯಾಂಕ್‌ ಶಾಖೆ ಕಾರ್ಯನಿರ್ವಹಿಸಲಿದೆ.

ಸೊಸೈಟಿಗೆ ಪಾರ್ವತಿ ಬಾಯಿ ದಾನ ನೀಡಿದ ಜಾಗದಲ್ಲಿ ಸಮಾಜದ ಮುಖಂಡರು   1916ರಲ್ಲಿ ಚಿಕ್ಕದಾಗಿ ಕಟ್ಟಡ  ಕಟ್ಟಿಸಿಕೊಂಡು ಸಹಕಾರಿ ಸಂಘಕ್ಕೆ ಚಾಲನೆ ನೀಡಿದ್ದರು. ಇದೇ ಜಾಗದಲ್ಲಿ 1978ರಲ್ಲಿ ಚಿಕ್ಕ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು.  2000ರಲ್ಲಿ ಹಳೆ ಕಟ್ಟಡ ಕೆಡವಿ, 7 ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸಲಾಗಿದೆ.

ರೂಪೆ ಡೆಬಿಟ್‌ ಕಾರ್ಡ್‌
‘ಶತಮಾನೋತ್ಸವ ಸಮಾರಂಭದ ಅಂಗವಾಗಿ ಗ್ರಾಹಕರಿಗೆ ರೂಪೆ ಡೆಬಿಟ್‌ ಕಾರ್ಡ್‌ ವಿತರಿಸಲಾಗುತ್ತಿದೆ. ಇದೇ 23ರಂದು ನಡೆಯಲಿರುವ ಸಮಾರಂಭದಲ್ಲಿ ಈ ಕಾರ್ಡ್‌ ವಿತರಣೆಗೆ ಚಾಲನೆ ನೀಡಲಾಗುವುದು’ ಎಂದು ಬ್ಯಾಂಕ್‌ನ ಅಧ್ಯಕ್ಷ ಪಿ. ಎಸ್‌. ಚಂದ್ರಶೇಖರ್ ಹೇಳುತ್ತಾರೆ.
‘ತಂತ್ರಜ್ಞಾನ ಅಳವಡಿಕೆಯಲ್ಲಿ ಬ್ಯಾಂಕ್‌ ಮುಂಚೂಣಿಯಲ್ಲಿದ್ದು, ಇತರರಿಗೆ ಆದರ್ಶವಾಗಿದೆ.

ರೂಪೆ ಕಾರ್ಡ್‌ಗೆ ಐಸಿಐಸಿಐ  ಬ್ಯಾಂಕ್‌, ಪ್ರಾಯೋಜಕ ಬ್ಯಾಂಕ್‌ ಆಗಿರಲಿದೆ. ದೇಶದ ಎಲ್ಲೆಡೆ ಈ ಡೆಬಿಟ್‌ ಕಾರ್ಡ್‌ ಬಳಸಬಹುದು. ಇಲ್ಲಿ  ಬ್ಯಾಂಕ್‌ಗೆ ಹೂಡಿಕೆಯ, ನಿರ್ವಹಣೆ ವೆಚ್ಚದ ಹೊರೆ ಬ್ಯಾಂಕ್‌ಗೆ ಇಲ್ಲ. ಐಸಿಐಸಿಐ ಬ್ಯಾಂಕ್‌ಗೆ ನಿರ್ವಹಣಾ ಶುಲ್ಕ ಪಾವತಿಸಲಾಗುತ್ತಿದೆ.

ಅತಿ ಕಡಿಮೆ ಬಂಡವಾಳ ಹೂಡಿಕೆ ಮಾಡಿ ಗರಿಷ್ಠ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುತ್ತಿರುವ ಕೆಲವೇ ಕೆಲ ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಇದೂ ಒಂದಾಗಿದೆ.

‘ಸಿಪಿಯು ಬದಲಿಗೆ ಎನ್‌ಕಂಪ್ಯೂಟಿಂಗ್‌ ಡಿವೈಸ್‌ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ಸಹಕಾರಿ ಬ್ಯಾಂಕ್‌ ಎನ್ನುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.  ಪರಿಸರ ಸ್ನೇಹಿ,  ಮತ್ತು ಕಡಿಮೆ ವೆಚ್ಚದ ಈ ಸೌಲಭ್ಯಕ್ಕಾಗಿ ಬ್ಯಾಂಕ್‌ ‘ಟೆಕ್ನಾಲಜಿ ಗ್ರೀನ್‌ ಪೀಸ್‌’ ಪ್ರಶಸ್ತಿ ಪಡೆದುಕೊಂಡಿದೆ. ಎನ್‌ಕಂಪ್ಯೂಟಿಂಗ್‌ನ  ಬಳಕೆಯು  ಇತರ ಬ್ಯಾಂಕ್‌ಗಳಿಗೆ ಮಾದರಿಯಾಗಿದೆ.

‘ಗ್ರಾಹಕರ ಅನುಕೂಲತೆ ಹೆಚ್ಚಿಸುವ ತಂತ್ರಜ್ಞಾನ ಅಳವಡಿಕೆಗೆ ಬ್ಯಾಂಕ್‌ ಪರಿಣತರ ಪ್ರತ್ಯೇಕ ತಂಡ ಹೊಂದಿದೆ.   ಭವಿಷ್ಯದ ಅಗತ್ಯಕ್ಕೆ ಅನುಗುಣವಾಗಿ  ಹೊಸ ಹೊಸ ತಂತ್ರಜ್ಞಾನ ಅಳವಡಿಕೆಗೆ ಬ್ಯಾಂಕ್‌ನ ನಿರ್ದೇಶಕ ಮಂಡಳಿಯು ಸದಾ ಮುಕ್ತ ಮನಸ್ಸು ಹೊಂದಿದೆ. ಆರ್‌ಬಿಐ ನಿಬಂಧನೆ ಕಾರಣಕ್ಕೆ ಇಂಟರ್‌ನೆಟ್‌ ಬ್ಯಾಂಕ್‌ ಸೌಲಭ್ಯ ಮಾತ್ರ ಒದಗಿಸಲಾಗುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ತಂತ್ರಜ್ಞಾನ ಪ್ರಗತಿ
ಗ್ರಾಹಕರು ಯಾವುದೇ ಶಾಖೆಯಿಂದ ಖಾತೆ ನಿರ್ವಹಿಸಬಹುದಾದ ಕೋರ್‌ ಬ್ಯಾಂಕಿಂಗ್‌ ಸೊಲುಷನ್‌ (ಸಿಬಿಎಸ್‌) ಮತ್ತು ಟ್ರು ಕೋರ್‌ ಬ್ಯಾಂಕಿಂಗ್‌ ಸೌಲಭ್ಯ  ಅಳವಡಿಸಿಕೊಂಡಿದೆ.

‘ಗ್ರಾಹಕರು ಬ್ಯಾಂಕ್‌ ಶಾಖೆಯಲ್ಲಿ ತಮ್ಮ ಖಾತೆಗೆ  ಹಣ ಕಟ್ಟಿದ ತಕ್ಷಣ ಆ ವಿವರವು ಬ್ಯಾಂಕ್‌ನ ಬ್ಯಾಲನ್ಸ್‌ ಶೀಟ್‌ಗೆ ಸೇರ್ಪಡೆಯಾಗುತ್ತದೆ.  ದೇಶದಲ್ಲಿನ ಕೆಲವೇ ಕೆಲ ಸಹಕಾರಿ  ಬ್ಯಾಂಕ್‌ಗಳು ಈ ಸೌಲಭ್ಯ ಅಳವಡಿಸಿಕೊಂಡಿವೆ’ ಎಂದು ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೆ. ಪ್ರಕಾಶ್ ಅವರು ಹೇಳುತ್ತಾರೆ.

‘ಯಲಹಂಕದಲ್ಲಿ ಹೊಸ ಶಾಖೆ ಆರಂಭಿಸುವಾಗ ಪ್ಲಗ್‌ ಆ್ಯಂಡ್‌ ಪ್ಲೇ ರೀತಿಯಲ್ಲಿ 12 ಗಂಟೆಗಳಲ್ಲಿ ಕಂಪ್ಯೂಟರ್ ಅಳವಡಿಕೆಯಂತಹ ಸರಳವಾದ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ‘ದತ್ತಾಂಶವನ್ನು ಇನ್ನೊಂದೆಡೆ ಸುರಕ್ಷಿತವಾಗಿ ಸಂಗ್ರಹಿಸಿ ಇರಿಸಲು ಕ್ಲೌಡ್‌ ಕಂಪ್ಯೂಟಿಂಗ್‌ ಸೊಲುಷನ್‌ ಅಳವಡಿಸಿಕೊಳ್ಳಲಾಗಿದೆ. ಇದರಿಂದ ನೈಸರ್ಗಿಕ ಪ್ರಕೋಪ ಸಂದರ್ಭಗಳಲ್ಲೂ  ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ  ಒದಗಲಾರದು. ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿ ಎಲ್ಲವೂ ಸುರಕ್ಷಿತವಾಗಿ ಇರಲಿದೆ’ ಎಂದು  ಅವರು ಹೇಳುತ್ತಾರೆ.

‘ಮೊಬೈಲ್‌ ಬ್ಯಾಂಕಿಂಗ್‌ ಭವಿಷ್ಯದ ಬ್ಯಾಂಕಿಂಗ್ ವಹಿವಾಟು ಆಗಿರಲಿದ್ದು, ಅದಕ್ಕೆ ಪೂರಕವಾಗಿ ಪೇಮೆಂಟ್‌ ಗೇಟ್‌ ವೇ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗುತ್ತಿದೆ. ‘ಎಸ್‌ಎಂಎಸ್‌ ಬ್ಯಾಂಕಿಂಗ್‌ ಸೌಲಭ್ಯ– ಗ್ರಾಹಕರಿಗೆ ಪ್ರತಿಯೊಂದು ವಹಿವಾಟಿನ ಮಾಹಿತಿ, ಸಾಲ ಮರುಪಾವತಿ ಬಗ್ಗೆ ನೆನಪೋಲೆ, ಗ್ರಾಹಕರ ಸಭೆ ಮಾಹಿತಿಯನ್ನು ಎಸ್‌ಎಂಎಸ್ ಮೂಲಕವೇ  ರವಾನಿಸಲಾಗುತ್ತಿದೆ.

ಸಾಲ ಸೌಲಭ್ಯ
ಸಮಾಜದ ಕುಲ ಕಸಬುಗಳಾದ ಟೇಲರಿಂಗ್‌, ಬಟ್ಟೆ ಅಂಗಡಿ ವಹಿವಾಟಿನ ಹಣಕಾಸಿನ ಅಗತ್ಯಗಳನ್ನು ಪೂರೈಸುವುದು ಈ ಬ್ಯಾಂಕ್‌ನ ಮುಖ್ಯ ಧ್ಯೇಯವಾಗಿದೆ. ಮಧ್ಯಮ ಮತ್ತು ಮೇಲ್‌ ಮಧ್ಯಮ ವರ್ಗದವರ ಹಣಕಾಸು ಅಗತ್ಯಗಳನ್ನು ಈಡೇರಿಸಲು ಬ್ಯಾಂಕ್‌ ಶ್ರಮಿಸುತ್ತಿದೆ.  ₹ 5 ಸಾವಿರದಿಂದ ₹1.5 ಕೋಟಿವರೆಗೆ ಸಾಲ ಸೌಲಭ್ಯ ಇಲ್ಲಿ ದೊರೆಯಲಿದೆ.

ಸ್ಪರ್ಧಾತ್ಮಕ ರೀತಿಯಲ್ಲಿ ಬಡ್ಡಿದರ ವಿಧಿಸಲಾಗುತ್ತಿದ್ದು ಶೇ 12ರಿಂದ ಆರಂಭಗೊಳ್ಳುತ್ತದೆ. ಎರಡು ಲಕ್ಷ ರೂಪಾಯಿಗಳ ಆಧಾರರಹಿತ ಸಾಲ ನೀಡಲಾಗುವುದು.

‘ಗಂಡನಿಗೆ ಹೆಂಡತಿ, ಅತ್ತೆಗೆ ಸೊಸೆ ಜಾಮೀನು ಆಧರಿಸಿ ಸಾಲ ನೀಡುವ ಸೌಲಭ್ಯವೂ ಇಲ್ಲಿದೆ. ಸಾಲಗಾರರ  ಸಹಿ ಖಾತರಿ ಆಧರಿಸಿ  ₹ 1 ಲಕ್ಷದವರೆಗೆ ಸಾಲ ನೀಡಲಾಗುವುದು. ಸಾಲ ನೀಡಲು ಧಾರಾಳ, ವಸೂಲಿಯಲ್ಲಿ ನಿಷ್ಠೂರ– ಇದು ನಮ್ಮ ಸಾಲ ನೀತಿ’ ಎಂದು ಬ್ಯಾಂಕ್‌ನ ಉಪಾಧ್ಯಕ್ಷ  ಎಸ್‌. ಸುರೇಶ್‌ ಹೇಳುತ್ತಾರೆ.

ವಸೂಲಾಗದ ಸಾಲದ ಪ್ರಮಾಣವು (ಎನ್‌ಪಿಎ) ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವ ನಿವ್ವಳ ಶೇ 3 ಮತ್ತು ಒಟ್ಟು ಶೇ 7ರ  ಮಿತಿ ಒಳಗೆ ಇದೆ. ಸಾಲ ಮರು ಪಾವತಿ ಕ್ರಮಬದ್ಧವಾಗಿದ್ದರೆ 24 ಗಂಟೆಗಳಲ್ಲಿ ಹೊಸ ಸಾಲ ಮಂಜೂರು ಮಾಡಲಾಗುವುದು.

ಆರ್‌ಬಿಐ, ಸಹಕಾರ ಇಲಾಖೆಯ (ಆರ್‌ಸಿಎಸ್‌) ಎಲ್ಲ ನಿಯಮಗಳಿಗೆ ಅನುಸಾರವೆ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ. ಸಹಕಾರಿ ಇಲಾಖೆಯ ಆಡಿಟ್‌ ವರದಿಯಲ್ಲಿ ನಿರಂತರವಾಗಿ ಎ ದರ್ಜೆ ಪಡೆಯುತ್ತ ಬಂದಿದೆ.

2015ರಲ್ಲಿ ನಡೆದ ಚುನಾವಣೆಯಲ್ಲಿ ಸೋತ ಕೆಲವರು ಹೊಸ ನಿರ್ದೇಶಕ ಮಂಡಳಿಯು ಸುಸೂತ್ರವಾಗಿ ಕೆಲಸ ಮಾಡಬಾರದು ಎನ್ನುವ ಕಾರಣಕ್ಕೆ  ಲಾಭಾಂಶದ ದುರ್ಬಳಕೆ ನಡೆಯುತ್ತಿದೆ ಎನ್ನುವ ಅಪಪ್ರಚಾರ ಆರಂಭಿಸಿದ್ದರು. ಆರೋಪಗಳಲ್ಲಿ ಸತ್ಯಾಂಶ ಇದ್ದಿರಲಿಲ್ಲ. ಬ್ಯಾಂಕ್‌ನ ಸದಸ್ಯರಿಗೆ ನಿಜಸ್ಥಿತಿಯ ಅರಿವು ಇದೆ.

ಬ್ಯಾಂಕ್‌ನ ವರ್ಚಸ್ಸಿಗೆ ಧಕ್ಕೆ ಬಂದ ಕಾರಣ ಎರಡು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಈಗ ಅಂತಹ ಚಟುವಟಿಕೆಗಳೆಲ್ಲ ನಿಂತಿವೆ ಎಂದು ಅಧ್ಯಕ್ಷರು ಹೇಳುತ್ತಾರೆ.

‘ವೆಂಕಟಸ್ವಾಮಿ ಆಯೋಗವು ಭಾವಸಾರ ಕ್ಷತ್ರಿಯ ಸಮಾಜವನ್ನು ಹಿಂದುಳಿದ ವರ್ಗದ ಪಟ್ಟಿಯಿಂದ ಕೈಬಿಟ್ಟಿತ್ತು. ಇದರಿಂದ ಸಮಾಜಕ್ಕೆ ಅನ್ಯಾಯವಾಗಿತ್ತು. ಬ್ಯಾಂಕ್‌ನ ಅಮೃತ ಮಹೋತ್ಸವ ಸಮಾರಂಭವು ಈ ಅನ್ಯಾಯ ಸರಿಪಡಿಸುವ ವೇದಿಕೆಯಾಗಿ ಪರಿಣಮಿಸಿತ್ತು ಎನ್ನುವುದು ಕೂಡ ನಮ್ಮ ಪಾಲಿಗೆ ಹೆಮ್ಮೆಯ ಸಂಗತಿ ಆಗಿದೆ. 

ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು 2ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವುದಾಗಿ ಘೋಷಿಸಿದ್ದರು’ ಎಂದು ಅಧ್ಯಕ್ಷ ಚಂದ್ರಶೇಖರ್‌ ಸ್ಮರಿಸಿಕೊಳ್ಳುತ್ತಾರೆ. 

5 ಶಾಖೆಗಳು 
*ಪ್ರಧಾನ ಕಚೇರಿ, ಖಿಲಾರಿ ರಸ್ತೆ
*ಕಂಟೋನ್‌ಮೆಂಟ್‌
*ಮಲ್ಲೇಶ್ವರಂ
*ಬಸವನಗುಡಿ
*ಯಲಹಂಕ

17 ಸಾವಿರ ಬ್ಯಾಂಕ್‌ನ  ಸದಸ್ಯರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT