ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಿಕ್ಷಣ ಸಂಸ್ಥೆಗಳತ್ತ ಪೋಷಕರ ಒಲವಿರಲಿ

Last Updated 23 ಏಪ್ರಿಲ್ 2017, 7:19 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬಹುತೇಕ ಸಾಧಕರು ಸರ್ಕಾರಿ ಶಾಲೆಗಳಲ್ಲೇ ಕಲಿತಿದ್ದಾರೆ. ಉನ್ನತ ಸಾಧನೆ ಮಾಡಿದ್ದಾರೆ. ಆದರೂ, ಬಹುತೇಕ ಪೋಷಕರು ಖಾಸಗಿ ಶಾಲೆ,ಕಾಲೇಜುಗಳತ್ತಲೇ ಚಿತ್ತ ಹರಿಸುತ್ತಾರೆ. ಪೋಷಕರ ಇಂತಹ ಮನೋಭಾವ ಬದಲಾಗಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಲೇಜಿನ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ ಸೇರಿದಂತೆ ಸಮಗ್ರ ಶಿಕ್ಷಣಕ್ಕೆ ಸರ್ಕಾರ ಪ್ರತಿ ವರ್ಷ ₹ 25 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಎಲ್ಲ ಸರ್ಕಾರಿ ಶಾಲಾ–ಕಾಲೇಜುಗಳೂ ಸೇವಾ ಮನೋಭಾವ ಹೊಂದಿವೆ. ಆದರೆ, ಖಾಸಗಿ ಶಾಲಾ–ಕಾಲೇಜುಗಳು ವ್ಯಾಪಾರಿ ಮನೋಭಾವ ಬೆಳೆಸಿಕೊಂಡಿವೆ. ಈ ಸೂಕ್ಷ್ಮಗಳನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳ ಬೇಕು’ ಎಂದು ಕಿವಿಮಾತು ಹೇಳಿದರು.

‘ಅಂಬೇಡ್ಕರ್‌ ಅವರು ಹೇಳಿದಂತೆ ದೇಶದ ಇತಿಹಾಸ ಅರಿಯದವನು ಭವಿಷ್ಯ ರೂಪಿಸಲಾರ. ವಿದ್ಯಾರ್ಥಿಗಳು ಈ ದೇಶದ ಸಂಪತ್ತು. ಶಾಲಾ–ಕಾಲೇಜುಗಳಲ್ಲಿ ಕಲಿತವರಿಗೆ ಒಳ್ಳೆಯ ಗೌರವ ದೊರೆಯುತ್ತದೆ. ಗೌರವ ದೊರೆಯಲು ಒಳ್ಳೆಯ ಶಿಕ್ಷಕರೂ ಅಗತ್ಯ’ ಎಂದು ವಿಶ್ಲೇಷಿಸಿದರು.‘ಖಾಸಗಿ ಶಾಲೆಗಳಲ್ಲಿ ಓದಿದವರೇ ಶ್ರೇಷ್ಠರು. ಅವರೇ ಉನ್ನತ ಸ್ಥಾನ ಅಲಂಕರಿಸುತ್ತಾರೆ ಎನ್ನುವುದು ಕೇವಲ ಭ್ರಮೆ. ಸಹ್ಯಾದ್ರಿ ಕಾಲೇಜು ಒಂದು ಸರ್ಕಾರಿ ಕಾಲೇಜು. ರಾಜ್ಯದ ಖಾಸಗಿ ಕಾಲೇಜುಗಳಿಗೂ ಇದು ಮಾದರಿ ಯಾಗಿದೆ.

ಶಿವಮೊಗ್ಗ ಸುಸಂಸ್ಕೃತ ಜಿಲ್ಲೆ. ಹಲವು ಸಾಹಿತಿಗಳು, ಬರಹಗಾರರು, ಸಾಧಕರು, ಹೋರಾಟಗಾರರ ತವರು. ಮೈಸೂರು ಅರಸರು ಸ್ಥಾಪಿಸಿದ ಸಹ್ಯಾದ್ರಿ ಕಾಲೇಜಿನಲ್ಲಿ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಸಿ.ಎನ್‌.ಆರ್‌.ರಾವ್ ಅವರಂಥ ಮೇಧಾವಿಗಳು ಕಲಿತಿದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ’ ಎಂದು ಬಣ್ಣಿಸಿದರು.ಕಾಲೇಜಿನ ಅಮೃತ ಮಹೋತ್ಸವದ ನೆನಪಿಗಾಗಿ ಸಭಾಭವನ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದರು.

ವಿಧಾನ ಪರಿಷತ್ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ‘ಈ ಕಾಲೇಜಿನಲ್ಲಿ ಓದಿದ ದಿನಗಳು ಅವಿಸ್ಮರಣೀಯ. ಕಾಲೇಜಿನ ಕಾಂಪೌಂಡ್‌ ಒಳಗೆ ಬಂದರೆ ಸಾಕು ಹಳೆಯ ದಿನಗಳ ನೆನಪು ಕಾಡುತ್ತವೆ’ ಎಂದು ಗತ ದಿನಗಳ ನೆನಪು ಮಾಡಿಕೊಂಡರು.ಕೋಣಂದೂರು ಲಿಂಗಪ್ಪ ಬರೆದ ನಾಟಕದಲ್ಲಿ ಅಭಿನಯಿಸಿದ್ದು, ಬಹುಮಾನ ಪಡೆದದ್ದು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಕ್ಷಣಗಳ ಮೆಲುಕು ಹಾಕಿದರು. ರಾಜ್ಯದ ಹೆಮ್ಮೆಯ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಅಗತ್ಯ ಅನುದಾನ ನೀಡಬೇಕು ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಇಲ್ಲಿನ ಪ್ರಾಂಶುಪಾಲರು ಉತ್ತಮವಾಗಿ ಕಾಲೇಜು ನಡೆಸುತ್ತಾರೆ. ಆದರೆ, ಅಭಿವೃದ್ಧಿ ಮಾಡುವಲ್ಲಿ ಹಿಂದುಳಿ ದಿದ್ದಾರೆ. ಅಭಿವೃದ್ಧಿ ಎನ್ನುವುದು ನಿರಂತರ ಹೋರಾಟದ ಫಲವಾಗಿ ಬರುತ್ತದೆ. ಅಂತಹ ಕೆಲಸ ಕಾಲೇಜಿನಲ್ಲೂ ಆಗಬೇಕು’ ಎಂದರು.‘ಇಂದು ವಿಜ್ಞಾನ ಬೆಳೆದಿದೆ. ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯ ದೊರೆತಿದೆ. ಆದರೂ, ಶೈಕ್ಷಣಿಕ ಸಾಧನೆಯಲ್ಲಿ ಹಿಂದುಳಿದಿದ್ದಾರೆ. ಕಾಲ ನಮಗಾಗಿ ಕಾಯುವುದಿಲ್ಲ. ಇರುವ ಕಾಲ ಸದುಯೋಗಪಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಜೋಗನ್‌ ಶಂಕರ್ ಪ್ರಾಸ್ತಾವಿಕ ಮಾತನಾಡಿದರು. ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತರೀಕೆರೆ ಶಾಸಕ ಜಿ.ಎಚ್‌. ಶ್ರೀನಿವಾಸ, ವಿಧಾನಪರಿಷತ್‌ ಸದಸ್ಯರಾದ ಆರ್.ಪ್ರಸನ್ನಕುಮಾರ್, ಭಾನುಪ್ರಕಾಶ್, ‘ಕಾಡಾ’ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್, ‘ಸೂಡಾ’ ಅಧ್ಯಕ್ಷ ಕೆ.ಎಂ.ಉಸ್ಮಾನ್, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷೆ ಬಲ್ಕಿಶ್ ಬಾನು, ಮೇಯರ್ ಎನ್‌.ಏಳುಮಲೈ,
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಕುಮಾರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT