ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆಯ ಸುವಾಸನೆ ನಡುವೆ ಶಕ್ತಿದೇವತೆಯ ಆರಾಧನೆ

Last Updated 24 ಏಪ್ರಿಲ್ 2017, 4:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಶನಿವಾರ ರಾತ್ರಿ ಆರಂಭಗೊಂಡ ಧರ್ಮರಾಯಸ್ವಾಮಿ ಹೂವಿನ ಕರಗ ಶಕ್ತ್ಯುತ್ಸವ ಭಾನುವಾರ ಸಂಜೆ ವರೆಗೆ ನಗರದಾದ್ಯಂತ ವೈಭವಪೂರ್ಣವಾಗಿ ನಡೆಯಿತು. ನೆರೆಹೊರೆಯ ಗ್ರಾಮಸ್ಥರ ಜತೆಗೆ ಸ್ಥಳೀಯ ಸಾವಿರಾರು ಭಕ್ತರು ಉತ್ಸವಕ್ಕೆ ಸಾಕ್ಷಿಯಾದರು.

ಭಗತ್‌ಸಿಂಗ್‌ ನಗರದಲ್ಲಿರುವ ಧರ್ಮರಾಯಸ್ವಾಮಿ ದೇಗುಲದ ಸುತ್ತಲಿನ ಪ್ರದೇಶ ವಿದ್ಯುತ್‌ ದೀಪಗಳ ಅಲಂಕಾರದಿಂದ ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಪ್ರಮುಖ ರಸ್ತೆಗಳಲ್ಲಿ ಕೂಡ ದೀಪಾಲಂಕಾರ ಮಾಡಲಾಗಿತ್ತು. ದೇವಸ್ಥಾನದಲ್ಲಿ ಶನಿವಾರ ರಾತ್ರಿ ದ್ರೌಪದಮ್ಮನವರ ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಅರಿಶಿನ ಬಣ್ಣದ ಸೀರೆ ಉಟ್ಟು, ಬಳೆ ತೊಟ್ಟು, ದ್ರೌಪದಿಯಂತೆ ಸರ್ವಾಲಂಕಾರ ಭೂಷಿತರಾಗಿದ್ದ ಕರಗದ ಪೂಜಾರಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ.ಬಾಲಾಜಿ ಅವರು, ಹೂವಿನ ಕರಗ ಹೊತ್ತು ರಾತ್ರಿ 10.30ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ‘ಗೋವಿಂದಾ. ಗೋವಿಂದಾ..’ ಎಂದು ನಾಮಸ್ಮರಣೆ ಮಾಡುತ್ತ ಅವರ ಹಿಂದೆ ಹೆಜ್ಜೆ ಹಾಕಿದರು.

ಮಲ್ಲಿಗೆ ಹೂವು, ಕನಕಾಂಬರ ಹೂವಿನ ಎಸಳುಗಳ ಅಲಂಕಾರ, ಮೇಲ್ತುದಿಯಲ್ಲಿ ಬೆಳ್ಳಿ ಛತ್ರಿಯಿಂದ ಆಕರ್ಷಕವಾಗಿ ಕಂಗೊಸಸಳಿಸುತ್ತಿದ್ದ ‘ಕರಗ’ ಸೂಸುತ್ತಿದ್ದ ಮಲ್ಲಿಗೆಯ ಪರಿಮಳ ದಾರಿಯುದ್ದಕ್ಕೂ ಭಕ್ತರನ್ನು ಪರವಶಗೊಳಿಸುತ್ತಿತ್ತು. ನಗರದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಜನ ರಾತ್ರಿ ಇಡೀ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಕರಗದ ದರ್ಶನ ಪಡೆದರು.

ಎಂ.ಜಿ.ರಸ್ತೆಯಲ್ಲಿ ದರ್ಗಾ ಬಳಿ ಮತ್ತು ನಗರಸಭೆ ಖಾಸಗಿ ಬಸ್‌ ನಿಲ್ದಾಣದ ಬಳಿ ರಸಮಂಜರಿ ಕಾರ್ಯಕ್ರಮಗಳಿಗಾಗಿ ನಿರ್ಮಿಸಿದ್ದ ವೇದಿಕೆ ಮೇಲೆ ಕರಗ ಹೊತ್ತ ಬಾಲಾಜಿ ಅವರು ತಮಟೆಯ ಸದ್ದಿನ ನಡುವೆ ಕೆಲ ಹೊತ್ತು ವಿವಿಧ ಭಂಗಿಗಳಲ್ಲಿ ಪ್ರದರ್ಶಿಸಿದ ಮೈನವಿರೇಳಿಸುವ ನೃತ್ಯ ಅಲ್ಲಿ ನೆರೆದಿದ್ದ ಭಕ್ತ ಸಮೂಹವನ್ನು ಮೂಕವಿಸ್ಮಿತರನ್ನಾಗಿ ಮಾಡಿತು. ಅನೇಕರು ಆ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಮುಗಿಬಿದ್ದು ಚಿತ್ರೀಕರಿಸಿದರು. ಎರಡು ವೇದಿಕೆಗಳ ಬಳಿ ನೆರೆದಿದ್ದ ಅಪಾರ ಜನಸಮೂಹದ ಕರತಾಡನದ ಸದ್ದು ಮುಗಿಲು ಮುಟ್ಟಿತ್ತು.

ನಗರದಾದ್ಯಂತ ಸಂಚರಿಸಿದ ಕರಗದ ಮೆರವಣಿಗೆಗೆ ಕೀಲುಕುದುರೆ, ಡೊಳ್ಳು ಕುಣಿತ, ಪೂಜಾ ಕುಣಿತ, ತಮಟೆ ವಾದನ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಮೆರಗು ತುಂಬಿದವು. ನಗರದ ಬಹುತೇಕ ವಾರ್ಡ್‌ಗಳ ಮುಖ್ಯರಸ್ತೆ ಮತ್ತು ಅಡ್ಡರಸ್ತೆಗಳಲ್ಲಿ ಕರಗ ಸಾಗಿ ಬಂದಾಗ ಸ್ಥಳೀಯರು ಪೂಜೆ ಸಲ್ಲಿ­ಸಿ ಭಕ್ತಿ ಸಮರ್ಪಿಸುತ್ತಿದ್ದ ದೃಶ್ಯಗಳು ಗೋಚರಿಸಿದವು. ನಗರದ ಕೆಲವೆಡೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ವಹ್ನಿಕುಲಸ್ಥರ (ತಿಗಳರು) ಮನೆಗಳಲ್ಲಿ ಭಾನುವಾರ ಕರಗಕ್ಕೆ ಪೂಜೆ ಸಲ್ಲಿಸಲಾಯಿತು. ಧರ್ಮರಾಯಸ್ವಾಮಿ ದೇವಾಲಯದ ಬಳಿ ನಿರ್ಮಿಸಿದ ಅಗ್ನಿಕುಂಡವನ್ನು ಸಂಜೆ 5ರ ಸುಮಾರಿಗೆ ಬಾಲಾಜಿ ಅವರು ಪ್ರವೇಶಿಸುವುದರ ಮೂಲಕ ಕರಗ ಆಚರಣೆ ಸಂಪನ್ನಗೊಂಡಿತು.

ಮುಖಂಡರಾದ ಲೋಕೇಶ್‌ಕುಮಾರ್, ಗಂಗರೇಕಾಲವೆ ನಾರಾಯಣಸ್ವಾಮಿ, ಶ್ಯಾಮ್, ಧರ್ಮರಾಯಸ್ವಾಮಿ ದೇವಾಲಯ ಕರಗ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಗೋಪಾಲ್, ಕಾರ್ಯದರ್ಶಿ ಕೆ.ವಿ.ಗವಿರಾಯಪ್ಪ, ಸದಸ್ಯರಾದ ಮುನಿವೆಂಕಟಸ್ವಾಮಿ, ಚಿನ್ನಪ್ಪ, ಅರುಣ್ ಮತ್ತು ತಿಗಳ ಸಮುದಾಯದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಜನಮನ ಸೂರೆಗೊಂಡ ಆರ್ಕೆಸ್ಟ್ರಾ

ಎಂ.ಜಿ.ರಸ್ತೆಯಲ್ಲಿ ದರ್ಗಾ ಬಳಿ ಮತ್ತು ನಗರಸಭೆ ಖಾಸಗಿ ಬಸ್‌ ನಿಲ್ದಾಣದ ಬಳಿ ಶನಿವಾರ ರಾತ್ರಿ ಆಯೋಜಿಸಿದ್ದ ರಸಮಂಜರಿ (ಆರ್ಕೆಸ್ಟ್ರಾ) ಕಾರ್ಯಕ್ರಮಗಳು ಜನಮನ ಸೂರೆಗೊಂಡವು. ತಮ್ಮಿಷ್ಟದ ಹಾಡುಗಳಿಗೆ ವೇದಿಕೆ ಮೇಲೆ ಕಲಾವಿದರು ನೃತ್ಯ ಮಾಡುವುದನ್ನು ಕಂಡು ಶಿಳ್ಳೆ ಹಾಕಿ, ಚಪ್ಪಾಳೆ ತಟ್ಟುತ್ತಿದ್ದ ಪಡ್ಡೆ ಹುಡುಗರಂತೂ ನಿಂತಲ್ಲೇ ಹೆಜ್ಜೆ ಹಾಕುತ್ತಿದ್ದರು. ಇನ್ನು ಕೆಲವರು ತಮ್ಮ ಇಷ್ಟದ ಚಲನಚಿತ್ರದ ಹಾಡುಗಳನ್ನು ಹಾಡಲು ವಾದ್ಯಗೋಷ್ಠಿ ತಂಡದವರಿಗೆ ಮನವಿ ಮಾಡಿ, ಆ ಹಾಡು ಕೇಳಿ ಆನಂದಿಸಿದರು. ಈ ವೇದಿಕೆಗಳ ಬಳಿ ಕೂಡ ಮೊಬೈಲ್ ಹಿಡಿದು ಚಿತ್ರಕರಿಸಿಕೊಳ್ಳುವವರು, ಸೆಲ್ಫಿ ತೆಗೆದುಕೊಳ್ಳುವವರು ಹೆಚ್ಚಾಗಿಯೇ ಕಂಡುಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT