ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಕುಟುಂಬದ ಮೂವರಿಗೆ ‘ಬಂಪರ್‌’

2014ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆ
Last Updated 26 ಏಪ್ರಿಲ್ 2017, 10:42 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿರುವ 2014ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ  ಒಂದೇ ಕುಟುಂಬದ ಮೂವರ ಹೆಸರುಗಳಿವೆ!

ಬೆಳಗಾವಿ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಓ)  ಭವಾನಿ ಕೆ.ನಾಯ್ಕ್‌, ಅವರ ಪತಿ ಅದೇ ತಾಲ್ಲೂಕಿನ ಬಡಸ್‌ ಕೆ.ಎಚ್‌ನ ಪಿಡಿಓ ಅಶೋಕ್‌ ಮಿರ್ಜಿ ಮತ್ತು ಭಾವಮೈದುನ ಸಾಗರ ತಾಲ್ಲೂಕಿನ ಕುಡಗುಂದಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಯಶವಂತ ಕೃಷ್ಣ ನಾಯ್ಕ್‌ (ಭವಾನಿ ಸಹೋದರ) ಅವರಿಗೆ ‘ಅದೃಷ್ಟ’ ಒಲಿದು ಬಂದಿದೆ. ಭವಾನಿ  ಮತ್ತು ಯಶವಂತ ಅವರು ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ (ಗ್ರೂಪ್‌ ಎ) ಮತ್ತು ಅಶೋಕ್‌ ಮಿರ್ಜಿ ವಾಣಿಜ್ಯ ತೆರಿಗೆ ಅಧಿಕಾರಿ (ಗ್ರೂಪ್‌ ಬಿ) ಆಗಿ ನೇಮಕ ಆಗಿದ್ದಾರೆ.

‘ಕುತೂಹಲದ ಸಂಗತಿ ಎಂದರೆ, ಯಶವಂತ ಮತ್ತು ಭವಾನಿ ಅವರಿಗೆ ಕೇವಲ 0.5 ಅಂಕಗಳ ವ್ಯತ್ಯಾಸ ಇದೆ. ಇದು ಹೇಗೆ ಸಾಧ್ಯ’ ಎಂದು ಕೆಲವು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ. ‘ಇದರಲ್ಲಿ ಬೇರೆ ಏನಾದರೂ ಅಕ್ರಮ ನಡೆದಿರುವ ಸಾಧ್ಯತೆಯೂ ಇದೆ’ ಎಂದೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಮೇಶ್ವರಪ್ಪ ಪ್ರಕರಣ: 1998ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಒಂದೇ ಕುಟುಂಬದ ನಾಲ್ವರು ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ತನಿಖೆ ಬಳಿಕ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಸಾಬೀತಾಗಿತ್ತು.

ಮುಖ್ಯ ಪರೀಕ್ಷೆಯಲ್ಲಿ ರಾಮೇಶ್ವರಪ್ಪ ಮತ್ತು ಅವರ ಕುಟುಂಬದ ಇತರ ಮೂವರು ಅವ್ಯವಹಾರ ಎಸಗಿ ಮೊದಲ ಮೂರು ರ್‌್ಯಾಂಕ್‌ಗಳನ್ನು ಪಡೆದಿದ್ದಾರೆ ಎಂಬುದು ಆಯೋಗ ನಡೆಸಿದ ತನಿಖೆಯಿಂದ ಸಾಬೀತಾಗಿತ್ತು.

ಅನಂತರ ರಾಮೇಶ್ವರಪ್ಪ, ಅವರ ಭಾವಮೈದುನ ನಾಗರಾಜ್, ನಾದಿನಿಯರಾದ ತ್ರಿವೇಣಿ, ಹೇಮಲತಾ ಸೇರಿದಂತೆ ಅಕ್ರಮ ಎಸಗಿದ ಅಭ್ಯರ್ಥಿಗಳನ್ನು ಆಯೋಗವು  ಕಪ್ಪುಪಟ್ಟಿಗೆ ಸೇರಿಸಿತ್ತು.

ದೂರು ಬಂದರೆ ಪರಿಶೀಲನೆ:  ಅತ್ಯಂತ ಪಾರದರ್ಶಕವಾಗಿ ನೇಮಕಾತಿ ಮಾಡಲಾಗಿದೆ. ಒಂದೆರಡು ದಿನಗಳಲ್ಲೇ ಸಂದರ್ಶನದ ಮತ್ತು ಲಿಖಿತ ಪರೀಕ್ಷೆಯ ವಿಷಯವಾರು ಅಂಕಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಯಾವುದೇ ಅಭ್ಯರ್ಥಿಗಳಿಗೆ ಅನುಮಾನ ಇದ್ದರೆ ದೂರು ಸಲ್ಲಿಸಲು ಅವಕಾಶ ಇದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಎನ್‌.ಎಸ್. ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಷ್ಟಪಟ್ಟು ಓದಿದ್ದೇವೆ-  ಮಿರ್ಜಿ: ‘ನಾನು, ನನ್ನ ಪತ್ನಿ ಮತ್ತು ಭಾವ ಮೈದುನ ಕಷ್ಟಪಟ್ಟು ಓದಿ ವಿವಿಧ ಹುದ್ದೆಗಳಿಗೆ ಆಯ್ಕೆ ಆಗಿದ್ದೇವೆ. ಅವಕಾಶ ವಂಚಿತ ಅಭ್ಯರ್ಥಿಗಳು ನಮ್ಮ ವಿರುದ್ಧ ಆರೋಪ ಹೊರಿಸಿರಬಹುದು’ ಎಂದು ಅಶೋಕ್‌ ಮಿರ್ಜಿ ಪ್ರತಿಕ್ರಿಯಿಸಿದರು.

‘ನಾನು 5 ಪುಸ್ತಕಗಳನ್ನು ಬರೆದಿದ್ದೇನೆ. ನನ್ನ 7 ಮಂದಿ ವಿದ್ಯಾರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ. ಭವಾನಿ 2011ನೇ ಸಾಲಿನಲ್ಲಿ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿ ಸಂದರ್ಶನದಲ್ಲಿ ವಿಫಲ ಆಗಿದ್ದರು.

ಇನ್ನು ಯಶವಂತ ಯಾವುದೇ ಪರೀಕ್ಷೆ ಬರೆದರೂ ಅನುತ್ತೀರ್ಣ ಆಗಿರುವ ಉದಾಹರಣೆ ಇಲ್ಲ. ಈಗಾಗಲೇ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾಗಿ, ಪಿಡಿಓ ಆಗಿ ಆಯ್ಕೆಯಾಗಿದ್ದಾರೆ. ಈ ಪರೀಕ್ಷೆಯಲ್ಲೂ ಪಾಸಾಗಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಯಾರಿಗೆ ಎಷ್ಟು ಅಂಕ?

ಯಶವಂತ ಕೃಷ್ಣ ನಾಯ್ಕ್‌ - 1138.75

ಭವಾನಿ ಕೆ. ನಾಯ್ಕ್‌- 1138.25

ಅಶೋಕ್‌ ಮಿರ್ಜಿ- 1082.25

* ಒಂದೇ ಕುಟುಂಬದ ಮೂವರು ಆಯ್ಕೆಯಾಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅಕ್ರಮ ನಡೆದಿರುವ ಬಗ್ಗೆ ದೂರು ಬಂದರೆ ಪರಿಶೀಲಿಸಲಾಗುವುದು

-ಎನ್‌.ಎಸ್. ಪ್ರಸನ್ನಕುಮಾರ್‌, ಕೆಪಿಎಸ್‌ಸಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT