ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್‌: ತೀರ್ಪಿನ ನಿರೀಕ್ಷೆಯಲ್ಲಿ...

ಈ ಅನಧಿಕೃತ ವ್ಯವಸ್ಥೆಯನ್ನು ಅಧಿಕೃತಗೊಳಿಸುವಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಪಾತ್ರವೆಷ್ಟಿದೆ?
Last Updated 26 ಏಪ್ರಿಲ್ 2017, 20:21 IST
ಅಕ್ಷರ ಗಾತ್ರ

ತಲಾಖ್‌ ಎಂದರೆ ಇಸ್ಲಾಮಿ ಷರೀಯತ್‌ನ ಪ್ರಕಾರ ಒಬ್ಬ ಪತಿ ತನ್ನ ಪತ್ನಿಗೆ ನೀಡುವ ವಿಚ್ಛೇದನ. ತಲಾಖ್‌ ಎಂಬುದು ಅರೇಬಿಕ್ ಶಬ್ದವಾಗಿದ್ದು, ಅದರ ಅರ್ಥ ‘ನಿರಾಕರಣೆ’ ಎಂದಾಗುತ್ತದೆ.

ಇಸ್ಲಾಂನಲ್ಲಿ ಪುರುಷನು ಯಾವುದೇ ಅಡೆತಡೆ ಇಲ್ಲದೆ ತಲಾಖ್‌ ನೀಡಬಹುದು. ಆದರೆ ಪತ್ನಿಯೂ ಪತಿಯಿಂದ ವಿಚ್ಛೇದನವನ್ನು ಕೋರಬಹುದು. ಚಾರಿತ್ರಿಕವಾಗಿ ವಿಚ್ಛೇದನದ ಕಾನೂನುಗಳು ಷರೀಯತ್‌ನ ಕಟ್ಟಳೆಗೆ ಒಳಪಟ್ಟಿರುತ್ತವೆ ಮತ್ತು ಇಸ್ಲಾಂನ ವಿಭಿನ್ನ ಶಾಖೆಗಳ ಪ್ರಕಾರ ಈ ಕಾನೂನುಗಳು ಭಿನ್ನ ರೀತಿಯಲ್ಲಿ ಆಚರಣೆಗೆ ಒಳಪಟ್ಟಿದ್ದು, ವಿಭಿನ್ನವಾಗಿ ಅರ್ಥಾನ್ವಯಗೊಳ್ಳುತ್ತವೆ.

ಇಸ್ಲಾಂಪೂರ್ವ ಅರಬ್‌ನಲ್ಲಿ ಚಾಲ್ತಿಯಲ್ಲಿದ್ದ ವಿಚ್ಛೇದನದ ಆಚರಣೆಗಳನ್ನು ಕೆಲವು ತಿದ್ದುಪಡಿಗಳ ಮೂಲಕ ಮತ್ತು ಲಿಂಗ ಸಮಾನತೆಯ ನೆಲೆಯಲ್ಲಿ ಕುರ್‌ಆನ್‌ ಸುಧಾರಣೆಗೆ ಒಳಪಡಿಸಿತು. ಇಸ್ಲಾಂಪೂರ್ವ ಕಾಲಾವಧಿಯಲ್ಲಿ ಪುರುಷರು ತಮ್ಮ ಪತ್ನಿಯರನ್ನು ಹಿಂಸೆಗೆ ಗುರಿಪಡಿಸುವ ಸಲುವಾಗಿ ಎಷ್ಟು ಸಲ ಬೇಕಾದರೂ ತಲಾಖ್‌ ನೀಡುತ್ತಿದ್ದರು. ತದನಂತರ ಆ ಮಹಿಳೆಯರನ್ನು ತಮ್ಮ ಮದುವೆಯ ಬಂಧನದಲ್ಲಿಯೇ ಇರಿಸಿಕೊಳ್ಳುತ್ತಿದ್ದರು.

ಹೀಗಾಗಿ ಆ ಮಹಿಳೆಗೆ ದಾಂಪತ್ಯ ಜೀವನವೂ ಸಿಗುತ್ತಿರಲಿಲ್ಲ, ವಿಚ್ಛೇದನದ ಬಿಡುಗಡೆಯೂ ದೊರಕುತ್ತಿರಲಿಲ್ಲ. ಈ ಪದ್ಧತಿಯನ್ನು ಪ್ರವಾದಿ ಮೊಹಮ್ಮದ್‌ರವರು ಬದಲಾವಣೆ ಮಾಡಿ, ಒಬ್ಬ ಪತಿ ತನ್ನ ಪತ್ನಿಗೆ ನೀಡುವ ತಲಾಖ್‌ಅನ್ನು ಮೂರು ತಲಾಖ್‌ನ ಅವಧಿ ಎಂದು ತಿಳಿಸಿ, ಆ ಕ್ರಮವನ್ನು ಅನುಷ್ಠಾನಕ್ಕೆ ತಂದರು.

ಈ ಬಗ್ಗೆ ಕುರ್‌ಆನ್‌ನಲ್ಲಿ ಹೀಗೆಂದು ಆದೇಶಿಸಲಾಗಿದೆ: ‘ನೀವು ಸ್ತ್ರೀಯರಿಗೆ ತಲಾಖ್‌ ಕೊಟ್ಟು ಅವರ ಇದ್ದತ್ ಪೂರ್ಣಗೊಳ್ಳಲು ಸಮೀಪಿಸಿದಾಗ ಅವರನ್ನು ನ್ಯಾಯೋಚಿತ ರೀತಿಯಲ್ಲಿ ಇರಿಸಿಕೊಳ್ಳಿರಿ, ಇಲ್ಲವೇ ನ್ಯಾಯೋಚಿತ ರೀತಿಯಿಂದ ಬಿಡುಗಡೆಗೊಳಿಸಿರಿ. ಕೇವಲ ಸತಾಯಿಸಲಿಕ್ಕಾಗಿ ಅವರನ್ನು ತಡೆದಿರಿಸಿಕೊಂಡರೆ ಅದು ಅತಿಕ್ರಮವಾಗುವುದು’ (ಸೂರ ಅಲ್‌ ಬಖರ: 231).

ತಲಾಖ್‌ ಎಂಬ ವ್ಯವಸ್ಥೆಯನ್ನು ಇಸ್ಲಾಮಿ ವ್ಯಾಖ್ಯಾನದ ಅಡಿಯಲ್ಲಿ ‘ಅನಿವಾರ್ಯ ಅನಿಷ್ಟ’ವೆಂದು ಭಾವಿಸುತ್ತಾರೆ.  ಅತ್ಯಂತ ಅಗತ್ಯವಾದ ಸಂದರ್ಭದಲ್ಲಿ ಅದೊಂದು ಬಿಡುಗಡೆಯ ಹಾದಿ. ನನ್ನ ಬಾಲ್ಯದ ಸಂದರ್ಭದಲ್ಲಿ ತಲಾಖ್‌ ಎಂಬ ಶಬ್ದವನ್ನೇ ನಾನು ಕೇಳಿರಲಿಲ್ಲ.  ಆ ಶಬ್ದದ ಪ್ರಯೋಗವನ್ನು ನಮ್ಮ ಹಿರಿಯರು ಅತ್ಯಂತ  ಗೌಪ್ಯವಾಗಿ ಹಾಗೂ ಚಲಿಸದ ತುಟಿಗಳ ಮೂಲಕ ಮತ್ತು ಕಣ್ಣಿನ ನೋಟದಿಂದ ಮಾತ್ರ ಒಬ್ಬರಿಗೊಬ್ಬರು ಸಂವಹನಗೊಳಿಸುತ್ತಿದ್ದರು.

ಕೆಲವೊಮ್ಮೆ ಮಾತ್ರ ಅವನು ‘ಹರಾಮ್‌ಅನ್ನು ಉಚ್ಚರಿಸಿದನಂತೆ’ ಎಂದು ಹೇಳುತ್ತಿದ್ದರು. ಅಂದು ತಲಾಖ್‌ ಎಂಬುದು ಅಷ್ಟೊಂದು ವಿರಳವಾಗಿತ್ತು.  ಇಂದು ವಿಚ್ಛೇದನ ಎಂಬ ಅಸ್ತ್ರವನ್ನು ಎಲ್ಲ ಜಾತಿ, ಜನ, ವರ್ಗ ಮತ್ತು ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರಯೋಗಿಸಲಾಗುತ್ತಿದೆ. ವಿಚ್ಛೇದನವನ್ನು ಇಂದು ಮಹಿಳೆಯರ ಪೈಕಿ ಕೆಲವರು ಬಯಸುತ್ತಿದ್ದಾರೆ.  ನನ್ನ ವೃತ್ತಿಯಲ್ಲಿ ಕಂಡು ಬಂದ ಎರಡು ವಿಭಿನ್ನ ಸಂದರ್ಭಗಳು ಹೀಗಿವೆ:

ಒಬ್ಬ ಮೆಕ್ಯಾನಿಕ್, ಜೋಲುಮೋರೆಯನ್ನು ಹಾಕಿಕೊಂಡು ಒಂದು ಪತ್ರವನ್ನು ತಂದು ನನ್ನ ಕೈಗೆ ಕೊಟ್ಟ. ಆತನ ಪತ್ನಿಯು ಆಕೆಯ ತವರು ಮನೆಯಿಂದ  ಆ ಪತ್ರವನ್ನು ಬರೆದಿದ್ದಳು.  ಪತ್ರದ ಒಕ್ಕಣೆಯನ್ನು  ಸಾಂಪ್ರದಾಯಿಕ ಶೈಲಿಯಲ್ಲಿ ಆಕೆ ಆರಂಭಿಸಿದ್ದಳು. ‘ಮೇರೆ ಸರ್‌ತಾಜ್...’ (ನನ್ನ ಶಿರೋಮುಕುಟವೇ) ಎಂದು ಆರಂಭವಾದ ಪತ್ರದಲ್ಲಿ ತಮ್ಮ ಆರೋಗ್ಯ ಹೇಗಿದೆ ಎಂಬ ಅತ್ಯಂತ ಗೌರವಾನ್ವಿತ ಉಭಯ ಕುಶಲೋಪರಿಯ  ಸಾಲುಗಳ ನಂತರ ಆಕೆಯು ಒಮ್ಮೆಲೆ ‘ನೀನು’ ಎಂಬ ಏಕವಚನದ ಪ್ರಯೋಗಕ್ಕೆ ಇಳಿದು, ತನ್ನ ಮೇಲೆ ಹಿಂಸೆ ಮಾಡಿದ್ದ ಅವನನ್ನು ವಾಚಾಮಗೋಚರವಾಗಿ ಬೈದಿದ್ದಳು. 

ನಂತರ ಕೊನೆಯ ವಾಕ್ಯದಲ್ಲಿ ತಾನು ಯಾವ ಕಾರಣಕ್ಕೂ ಅವನ ಪತ್ನಿಯಾಗಿ ಮುಂದುವರೆಯುವುದಿಲ್ಲ ಎಂತಲೂ ಆಣೆ ಪ್ರಮಾಣಗಳ ಮೂಲಕ ಘೋಷಿಸಿದ್ದೂ ಅಲ್ಲದೆ ಅಂತಿಮ ವಾಕ್ಯದಲ್ಲಿ  ‘ನೀನು ಗಂಡಸಾಗಿದ್ದರೆ ನನಗೆ ತಲಾಖ್‌ ಕೊಡುತ್ತೀಯಾ’ ಎಂದು ಸವಾಲನ್ನು ಕೂಡ ಎಸೆದಿದ್ದಳು.

ನಜೀಬ್ ಎಂಬ ಹೆಸರಿನ ಆ ಮೆಕ್ಯಾನಿಕ್  ಆತಂಕದಿಂದ  ‘ಈಗ ನಾನೇನು ಮಾಡಲಿ?’ ಎಂದು ಮೋರೆಯನ್ನು ಕೆಳ ಹಾಕಿದ. ಸಾಮಾನ್ಯವಾಗಿ ನಮ್ಮ ಆಫೀಸಿನ ಕಕ್ಷಿದಾರರ ವೈವಾಹಿಕ ಜೀವನದ ಬಗ್ಗೆ ನಾನು ತೀರ್ಮಾನವನ್ನು ಹೇಳುವುದಿಲ್ಲ. ಅವರ ತೀರ್ಮಾನವನ್ನು ಮಾತ್ರ ಅನುಷ್ಠಾನಕ್ಕೆ ತರುತ್ತೇನೆ.

ಆದರೆ ಆ ಪ್ರಕರಣದಲ್ಲಿ ಮಾತ್ರ ನಾನು ಅವನೊಡನೆ ಕೆಲವೊಂದು ವಿಷಯಗಳ ಬಗ್ಗೆ ಚರ್ಚೆ ಮಾಡಿದಾಗ ಅವನು, ‘ತಲಾಖ್‌ ಪತ್ರವನ್ನು ಬರೆದು ಅವಳಿಗೆ ಕಳುಹಿಸಿ’ ಎಂದು ನನಗೆ ಹೇಳಿದ. ಮಹಿಳೆಯೊಬ್ಬಳು ತನ್ನ ಬದುಕಿನ ಆಯ್ಕೆಯು ವಿಚ್ಛೇದನದ ರೂಪದಲ್ಲಿದೆ ಎಂದು ಬಲವಾಗಿ ಪ್ರತಿಪಾದಿಸಿ ಅದನ್ನು ಪಡೆದ ಪ್ರಕರಣವಾಗಿತ್ತು ಅದು.

ಆಕೆ ಮತ್ತು ಆತ ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದರು. ಐದು ವರ್ಷದ ವೈವಾಹಿಕ ಬದುಕಿನಲ್ಲಿ ಆಕೆಗೆ ಯಾವ ನೆಮ್ಮದಿಯೂ ದೊರಕಿರಲಿಲ್ಲ.  ಅಂದಿಗೆ ಅವನು ಮನೆಗೆ ಬಂದು ಒಂದು ವಾರವಾಗಿತ್ತು.  ಆಕೆ ಅವನನ್ನು ಹುಡುಕಿಕೊಂಡು ಅವನ ಆಫೀಸಿಗೆ ಹೋದಳು. ತನ್ನ ಸಹೋದ್ಯೋಗಿಗಳ ಎದುರು ಅವಳನ್ನು ಅಲ್ಲಿ ಕಂಡು ಅವನ ಕೋಪ ನೆತ್ತಿಗೇರಿತು. ಅವನು ಕೂಡಲೇ ಅವಳಿಗೆ ‘ತಲಾಖ್‌, ತಲಾಖ್‌, ತಲಾಖ್‌’ ಎಂದ. ಒಂದು ಕ್ಷಣ ಅವಳ ಮೈಮೇಲೆ ಟನ್‌ಗಟ್ಟಲೆ ಹಿಮ ಸುರಿದಂತಾಯಿತು. 

ಅವಳ ಸ್ತಬ್ಧ ಚೇತನಗಳೆಲ್ಲವೂ ಒಟ್ಟುಗೂಡುತ್ತಿದಂತೆಯೇ ಅವಳು ನಮ್ಮ ಕಚೇರಿಗೆ ಧಾವಿಸಿದಳು. ಅವಳ ಕಣ್ಣಿಂದ ಆನಂದಾಶ್ರುಗಳು ಮಿಡಿಯುತ್ತಿದ್ದವು. ಅವಳು ಪಡುತ್ತಿದ್ದ ಸಂಭ್ರಮವನ್ನು ಕಂಡು ಅದರ ಹಿನ್ನೆಲೆಯನ್ನು ತಿಳಿದಾಗ ನನಗೆ ಆಶ್ಚರ್ಯವಾಗಿಹೋಯಿತು.  ಯಥಾಪ್ರಕಾರ ಅವನ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಿದಾಗ ಅವನು ನ್ಯಾಯಾಲಯದ ಬಳಿ ಬಂದು ನನ್ನನ್ನು ಭೇಟಿಯಾಗಿ, ‘ನಾನು ಅವಳಿಗೆ ತಲಾಖ್‌ ಕೊಟ್ಟಿಲ್ಲ. ಅವಳು ಸುಳ್ಳು ಹೇಳುತ್ತಿದ್ದಾಳೆ’ ಎಂದ.  

‘ಹಾಗಾದರೆ ಆಕೆ ನಿನ್ನ ಆಫೀಸಿಗೆ ಬಂದಿದ್ದಾಗ ನೀನು ಏನು ಹೇಳಿದೆ’ ಎಂದು ನಾನು ಕೇಳಿದೆ. ‘ನಾನು ಹಲ್ಲಾಖ್, ಹಲ್ಲಾಖ್, ಹಲ್ಲಾಖ್ ಎಂದು ಹೇಳಿದೆ’ ಎಂದು ಅವನು ನುಡಿದ. ಹಲ್ಲಾಖ್ ಎಂದರೆ ಗಂಟಲು ಎಂದು ಅರ್ಥ. ಸತ್ಯ ಬಹಿರಂಗವಾಗಿತ್ತು. ಸುತ್ತಲಿದ್ದ ಜನರು ನನ್ನನ್ನು ನೋಡುತ್ತಿರುವರು ಎಂಬ ಪರಿವೆಯೇ ಇಲ್ಲದೆ ನಾನು ಎಷ್ಟು ನಕ್ಕೆನೆಂದರೆ ನನ್ನ ಇಡೀ ಜೀವನದಲ್ಲಿ  ಆ ರೀತಿಯಲ್ಲಿ ಮತ್ತೊಂದು ಸಾರಿ ನಕ್ಕಿರುವುದಿಲ್ಲ.

ನಾನು ಹೇಳಬೇಕಾದದ್ದು ಇಷ್ಟೇ: ವಿಚ್ಛೇದನವನ್ನು ಅನೇಕ ಸಂದರ್ಭಗಳಲ್ಲಿ ಮಹಿಳೆಯರೂ ಬಯಸುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ವಿಚ್ಛೇದನ ಎಂಬುದು ಪುರುಷನ ಆಯ್ಕೆಯ ಮತ್ತು ಪ್ರತಿಷ್ಠೆಯ ವಿಷಯವಾಗಿದೆ. ಮಹಿಳೆಯನ್ನು ನಿರಾಕರಣೆಗೆ ಒಳಪಡಿಸುವ, ಆಕೆಯ ಅಸ್ತಿತ್ವವನ್ನು ಧ್ವಂಸಗೊಳಿಸುವ ಕೃತ್ಯವಾಗಿ ಪರಿಣಮಿಸಿದೆ. 

ಈಗ ನಮ್ಮ ಎದುರಿಗೆ ಇರುವ ಪ್ರಶ್ನೆ ಎಂದರೆ ಪುರುಷ ಕೇಂದ್ರಿತವಾದ ಆತನ ಅಧಿಕಾರದ ವ್ಯಾಪ್ತಿಯಲ್ಲಿರುವ ಸುಲಭದ ಶೀಘ್ರ ತಲಾಖ್‌ಅನ್ನು ಯಾವ ರೀತಿಯಲ್ಲಿ ಪರಿಗಣಿಸಬೇಕು. ಈ ತ್ರಿವಳಿ ತಲಾಖ್‌ಗೆ ಕುರ್‌ಆನ್ ಮತ್ತು ಪ್ರವಾದಿಯವರ ಸುನ್ನದಲ್ಲಿ ಅಧಿಕೃತ ಮಾನ್ಯತೆ ಇದೆಯೇ? ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿಯು ತ್ರಿವಳಿ ತಲಾಖ್‌ನ ಪ್ರತಿಪಾದನೆಯಲ್ಲಿ ತನ್ನ ಸರ್ವಸ್ವವನ್ನೂ ತೊಡಗಿಸಿ ಸಕ್ರಮಗೊಳಿಸಲು ಮಾಡುತ್ತಿರುವ ಪ್ರಯತ್ನ ಎಷ್ಟು ಸರಿ?

ತಲಾಖ್‌ನ ಇಸ್ಲಾಮಿ ಉಪಬಂಧವನ್ನು ತಮಗೆ ಸರಿತೋಚಿದಂತೆ ತಿರುಚುತ್ತ ಮೆಸೇಜ್, ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ದೂರವಾಣಿ ಮೂಲಕ ತಮ್ಮ ಪತ್ನಿಯರಿಗೆ ಕಳುಹಿಸಿದ್ದು ತಾವು ಷರೀಯತ್ ಕಾನೂನು ಮತ್ತು ದೇಶದ ಕಾನೂನಿಗೆ ಅತೀತರೆಂದು ಮೆರೆಯುತ್ತಿರುವ, ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನವನ್ನು ಕೊಡುತ್ತಿರುವ ಪುರುಷರಿಗೆ ಈ ಮಂಡಳಿಯು ಬೆಂಬಲವಾಗಿ ನಿಂತಿದೆಯೇ?

ಈ ರೀತಿ ಅಚಾನಕ್‌ ಆಗಿ ಬಂದೆರಗುವ ತಲಾಖ್‌ನ ಪಿಡುಗಿನಿಂದ ಗಾಸಿಗೊಂಡಿರುವ ಮುಸ್ಲಿಂ ಹೆಣ್ಣು ಮಕ್ಕಳ ಆರ್ಥಿಕ, ಸಾಮಾಜಿಕ, ಭಾವನಾತ್ಮಕ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ಮತ್ತು ಅವರ ಮಕ್ಕಳ ದೈನಂದಿನ ದೇಖು ರೇಖುಗಳ ಬಗ್ಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿ ಸಕ್ಷಮವಾದ ಕ್ರಮಗಳನ್ನು ಕೈಗೊಂಡಿದೆಯೇ? ಈ ಎಲ್ಲಾ ಅಂಶಗಳು ಈ ಸಮಸ್ಯೆಯ ಅನೇಕ ಆಯಾಮಗಳನ್ನು ಪ್ರತಿನಿಧಿಸುತ್ತವೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಮಂಡಳಿಯವರು ಕೂಡ ಒಪ್ಪಿರುವಂಥ ವಿಷಯವೆಂದರೆ ಸದರಿ ಪದ್ಧತಿಯು ಕುರ್‌ಆನ್ ಮತ್ತು ಪ್ರವಾದಿಯವರ ಆಚರಣೆಯಲ್ಲಿ ಮಾನ್ಯತೆ ಪಡೆದಿರುವುದಿಲ್ಲ. ಇತ್ತೀಚಿನ ವರದಿಯೆಂದರೆ ಲಖನೌದಿಂದ 380 ಕಿ.ಮೀ. ದೂರದಲ್ಲಿರುವ ಅಮ್ರೋಹ ನಿವಾಸಿ, ನೆಟ್‌ಬಾಲ್ ರಾಷ್ಟ್ರೀಯ ಕ್ರಿಡಾಪಟುವಾದ ಶುಮೈಲಾ ಜಾವಿದ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರೆಂಬ ಕಾರಣಕ್ಕೆ ಅವರ ಪತಿ ಫೋನಿನ ಮೂಲಕ ತ್ರಿವಳಿ ತಲಾಖ್‌  ನೀಡಿರುವ ಅಂಶ ಈ ಪಿಡುಗಿನ ವ್ಯಾಪಕತೆಯನ್ನು ಸೂಚಿಸುತ್ತದೆ. 

ವಿಷಮ ದಾಂಪತ್ಯದಿಂದ ಹೊರಬರಲು ಪುರುಷನಿಗೆ ಮಾತ್ರ ಅಧಿಕಾರ ನೀಡುವ ತಲಾಖ್‌ ವ್ಯವಸ್ಥೆಯಲ್ಲಿ ಮುಸ್ಲಿಂ ಮಹಿಳೆಗೆ ಇರುವ ಪರಿಹಾರವೇನು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಮಹಿಳೆಗೆ ವಿಚ್ಛೇದನ ನೀಡುವ ಅಧಿಕಾರವಿದೆಯೇ ಎಂಬುವಲ್ಲಿ, ಆಕೆಗೆ ಪುರುಷನಂತೆ ಏಕಪಕ್ಷೀಯವಾಗಿ, ಮನಸೋ ಇಚ್ಛೆ, ವಿನಾಕಾರಣ ತಲಾಖ್‌ ನೀಡುವ ಹಕ್ಕು ಇಲ್ಲ.  ಆದರೆ ಕೆಲವು ಷರತ್ತುಬದ್ಧ ಬಿಡುಗಡೆಯ ಮಾರ್ಗಗಳು ಆಕೆಗೆ  ಇವೆ.  ಅವು ಯಾವುವೆಂದರೆ ‘ತಲಾಖ್‌-ಎ-ತಫ್‌ವೀಝ್’ ಮತ್ತು ‘ಖುಲಾ’ ಹಾಗೂ ‘ಫಸ್ಖ್‌’ ಎಂಬ ಕ್ರಮಗಳು. 

ತಲಾಖ್‌-ಎ-ತಫ್‌ವೀಝ್ ಎಂದರೆ ಪುರುಷನು ತನಗೆ ಇರುವ ತಲಾಖ್‌ನ ಹಕ್ಕನ್ನು ತನ್ನ ಪತ್ನಿಗೆ ವರ್ಗಾವಣೆ ಮಾಡುವುದು. ಪತಿಯು ಕರಾರಿನ ಮೂಲಕ ತಲಾಖ್‌ ನೀಡುವ ಹಕ್ಕನ್ನು ತನ್ನ ಪತ್ನಿಗೆ ಹಸ್ತಾಂತರಿಸಿದಲ್ಲಿ ಆಕೆ ಅಧಿಕಾರದ ಮೂಲಕ ತನ್ನ ಪತಿಗೆ ತಲಾಖ್‌ ಅನ್ನು ತನ್ನ ಆಯ್ಕೆಯ ಮೇರೆಗೆ ನೀಡಬಹುದು.

ಈ ಉಪಬಂಧವನ್ನು ಮೌಲ್ವಿಗಳಾಗಲೀ ಅಥವಾ ಮುಸ್ಲಿಂ ಸಾಮಾಜಿಕ ಮುಖಂಡರಾಗಲೀ ಯಾವ ಪ್ರವಚನದಲ್ಲಿಯೂ, ಭಾಷಣದಲ್ಲಿಯೂ, ಬರವಣಿಗೆಯಲ್ಲಿಯೂ ಉದ್ಧರಿಸುವುದಿಲ್ಲ. ಈ ರೀತಿಯ ತಲಾಖ್‌ನ ಒಂದು ಕ್ರಮವಿದೆ ಎಂಬುದು ಕೂಡ ಬಹುತೇಕ ಮುಸ್ಲಿಂ ಸಮುದಾಯದವರಿಗೆ ತಿಳಿದಿಲ್ಲ.  ಎರಡನೆಯದಾಗಿ ಮುಸ್ಲಿಂ ಮಹಿಳೆಯೊಬ್ಬಳು ಒಂದು ಪ್ರಸ್ತಾವವನ್ನು ತನ್ನ ಪತಿಗೆ ಸಲ್ಲಿಸಿ  ದಾಂಪತ್ಯ ಜೀವನದಿಂದ ತನಗೆ ಬಿಡುಗಡೆ ಕೊಡಬೇಕು ಎಂದು ಕೇಳಬಹುದು. ಅದನ್ನು ಖುಲಾ ಎಂದು ಹೇಳುವರು.

ಆಕೆಯ ಪ್ರಸ್ತಾವವನ್ನು ಒಪ್ಪುವುದು ಅಥವಾ ಬಿಡುವುದು ಅವನ ಇರಾದೆಗೆ ಬಿಟ್ಟ ವಿಷಯ. ಅವನು ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು ಅಥವಾ ಅಕೆಯ ಖುಲಾದ ಪ್ರಸ್ತಾವವನ್ನು ತಾನು ಒಪ್ಪಬೇಕಾದಲ್ಲಿ ಆಕೆ ತನಗೆ ಮೆಹರ್ ಮರಳಿಸಬೇಕೆಂತಲೂ ಅಥವಾ ತನಗೆ ಇಂತಿಷ್ಟು ಹಣ ಕೊಡಬೇಕೆಂತಲೂ ಅಥವಾ ಮದುವೆಯಲ್ಲಿ ತಾನು ಆಕೆಗೆ ನೀಡಿದ ಒಡವೆ ವಸ್ತುಗಳನ್ನು ಮರಳಿಸಬೇಕೆಂತಲೂ ಆತನು ಕರಾರುಗಳನ್ನು ಒಡ್ಡಬಹುದು.

ಮೂರನೆಯದಾಗಿ ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಿ ಮದುವೆಯನ್ನು ಇಂತಹ ನಿರ್ದಿಷ್ಟ ಕಾರಣಗಳಿಗಾಗಿ ರದ್ದುಗೊಳಿಸಬೇಕೆಂದು ಆಕೆ  ಕೋರಬಹುದು. 1939ರ ‘ದಿ ಡಿಸಲ್ಯೂಷನ್‌ ಆಫ್‌ ಮುಸ್ಲಿಂ ಮ್ಯಾರೇಜ್‌ ಆಕ್ಟ್’ನ ಉಪಬಂಧಗಳ ಮೇರೆಗೆ, ನಾಲ್ಕು ವರ್ಷ ಪತಿ ನಾಪತ್ತೆಯಾಗಿದ್ದಲ್ಲಿ ಅಥವಾ ಎರಡು ವರ್ಷಗಳಿಂದ ತನ್ನನ್ನು ತೊರೆದಿದ್ದು ಜೀವನಾಂಶವನ್ನು ಪತಿ ನೀಡುತ್ತಿಲ್ಲವೆಂದು ಸಾಬೀತುಪಡಿಸಿ ಮದುವೆ ರದ್ದುಗೊಳಿಸುವ ಆದೇಶ ಪಡೆಯಬಹುದು.

ಮೂರು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯವರೆಗೆ ತನ್ನ ಪತಿಯು ವೈವಾಹಿಕ ಕರ್ತವ್ಯವನ್ನು ನಿರ್ವಹಿಸಿಲ್ಲವೆಂದೂ ಅಥವಾ ಪತಿಯು ಪುರುಷತ್ವ ಹೀನನಾಗಿರುವನೆಂದೂ ಇಲ್ಲವೇ ಪತಿಯು ಕುಷ್ಠರೋಗ ದಂತ ಅಂಟುಜಾಡ್ಯದಿಂದ ಅಥವಾ ಮಾನಸಿಕ ಜಾಡ್ಯದಿಂದ ನರಳುತ್ತಿರುವನೆಂದೂ  ಸಾಬೀತುಗೊಳಿಸಿ ನ್ಯಾಯಾಲಯದಿಂದ ಮದುವೆ ರದ್ದುಗೊಳಿಸುವ ಆದೇಶ ಪಡೆಯಬಹುದು.

ತ್ರಿವಳಿ ತಲಾಖ್‌ನ ಬಗ್ಗೆ ಮುಸ್ಲಿಂ ಬಾಹುಳ್ಯವಿರುವ ಸುಮಾರು 25 ರಾಷ್ಟ್ರಗಳು ದೃಢವಾದ ನಿಲುವನ್ನು ತಳೆದು ಆ ವ್ಯವಸ್ಥೆಯ ವಿರುದ್ಧ ಸಕ್ಷಮವಾದ ಕಾನೂನನ್ನು ಜಾರಿಗೊಳಿಸಿವೆ. ಬಿಜೆಪಿಯ ಚುನಾವಣಾ ರಾಜಕೀಯದ ತಂತ್ರಗಾರಿಕೆಯ ಕ್ರಮವಾಗಿ ಮುಸ್ಲಿಂ ಮಹಿಳೆಯರ ಪ್ರಶ್ನೆ ಹೆಚ್ಚು ಚರ್ಚೆಯಾಗುತ್ತಿದೆ. ಅಷ್ಟಾಗಿಯೂ ತ್ರಿವಳಿ ತಲಾಖ್‌ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಬಹುತೇಕ ಜನರು ನಿರೀಕ್ಷೆ ಮತ್ತು ಕುತೂಹಲವನ್ನು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT