ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ: ವರ್ಚಸ್ಸು– ವೈರುಧ್ಯ

ಸರಳ, ನೇರ ನಡೆ–ನುಡಿಯ ಭಿನ್ನ ವ್ಯಕ್ತಿತ್ವದ ನಾಯಕತ್ವದಲ್ಲಿ ಇಂಥ ವೈರುಧ್ಯ ಸಾಧ್ಯವೇ?
Last Updated 4 ಮೇ 2017, 19:30 IST
ಅಕ್ಷರ ಗಾತ್ರ
l ಕಿಕ್ಕೇರಿ ಎಂ. ಚಂದ್ರಶೇಖರ್
ತನ್ನ ಮನೆ, ತನ್ನ ಊರು, ತನ್ನ ಜಿಲ್ಲೆ ಹಾಗೂ ತನ್ನ ದೇಶ ಹೀಗೆ ತನ್ನ ಸುತ್ತಮುತ್ತ ದಿನನಿತ್ಯ ನಡೆಯುತ್ತಿರುವ ಲೋಪದೋಷಗಳನ್ನು ಸರಿಪಡಿಸುವ ಚಡಪಡಿಕೆಯ
ಲ್ಲಿರುವ ಯುವ ಸಮುದಾಯಕ್ಕೆ ಸಮಾಜ ಸುಧಾರಣೆಯ ಸಂದೇಶ ನೀಡುವ ಸಿನಿಮಾ ಸ್ಫೂರ್ತಿಯಾಗಬಹುದು. ಹಾಗೆಯೇ ದಿನಪತ್ರಿಕೆಯ ಲೇಖನವೊಂದು ಯುವಜನರಿಗೆ ಸ್ಥೈರ್ಯ ನೀಡಬಹುದು.
 
ಇವೆಲ್ಲವುಗಳಿಗಿಂತ ಭಿನ್ನವಾಗಿ ವಾಸ್ತವಕ್ಕೆ ಹತ್ತಿರವಾದಂತೆ ಯುವಜನರಿಗೆ ಸ್ಫೂರ್ತಿ ಸಿಗುವುದು ಸರಳ, ನೇರ ನುಡಿಯ ರಾಜಕಾರಣಿಯಿಂದ ಮಾತ್ರ. ಇಂದು ರಾಜಕೀಯ ವಲಯದಲ್ಲಿ ಇಂತಹ ಸದ್ಗುಣಗಳುಳ್ಳ ವ್ಯಕ್ತಿ  ವಿರಳ. ಕಂಡು ಬಂದರೂ ಈ ಎಲ್ಲಾ ಗುಣಗಳಿಗೆ ಧಕ್ಕೆ ಬರದಂತೆ ಕೊನೆಯವರೆವಿಗೂ ಮುಂಜಾಗ್ರತೆ ವಹಿಸುವುದು ಬಹಳಷ್ಟು ಕಷ್ಟ ಹಾಗೂ ಅಸಾಧ್ಯ.
 
ಇಂತಹ ಸದ್ಗುಣಗಳ ಜೊತೆಗೆ  ಸತತ 15 ವರ್ಷ ಗುಜರಾತಿನ ಮುಖ್ಯಮಂತ್ರಿಯಾಗಿ ಮಾದರಿ ರಾಜ್ಯ ರೂಪಿಸಿದ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿ
ಯವರು,  ತಮ್ಮ ಪಕ್ಷಕ್ಕೆ ಒಂದು ಹೊಸ ತಿರುವನ್ನು ತಂದುಕೊಡುತ್ತಾರೆ. ಅವರ ಮಾತುಗಳನ್ನು ಕೇಳಲು ಜನ ರೇಡಿಯೊ, ಟಿ.ವಿ.ಗಳ ಮುಂದೆ ಕಾದು  ಕುಳಿತು
ಕೊಳ್ಳುತ್ತಾರೆ. ಈ ಭಾಷಣಗಳಲ್ಲಿ ತನ್ನನ್ನು ತಾನೇ ಫಕೀರ ಎಂದು ಕರೆದುಕೊಂಡರು ಅವರು. ‘ನಾನು ದೇಶಕ್ಕಾಗಿ ಪ್ರಾಣ ಕೊಡುವೆ, ನನಗೆ ವಾರಸುದಾರರಿಲ್ಲ, ನನಗಾಗಿ ಏನೂ ಬೇಡ’ ಎಂದು ಬಿಂಬಿಸತೊಡಗಿದರು.
 
ಆಗರ್ಭ ಶ್ರೀಮಂತರ ವೈಭೋಗ ನೋಡಿ ಒಳಗೊಳಗೆ  ಕುದಿಯುತ್ತಿದ್ದ ಶ್ರೀಸಾಮಾನ್ಯರ ಹೃದಯಕ್ಕೆ ಒಂದೇ ಒಂದು ವಾಕ್ಯದಿಂದ ಲಗ್ಗೆ ಹಾಕಿದರು. ಅದೇನೆಂದರೆ: ‘ವಿದೇಶ ಗಳಲ್ಲಿರುವ ಭಾರತೀಯರ ಕಪ್ಪು ಹಣ ತಂದು ದೇಶದ ಜನರಿಗೆ ಹಂಚುತ್ತೇವೆ’.
 
ಜನ ತಲೆಬಾಗಿದರು. ಭಾರತದ ಜನರಿಗೆ ವರವಾಗಿ ಸಿಕ್ಕಿರುವ ಮಹಾತ್ಮನೆಂದು ದೇಶಕ್ಕೆ ದೇಶವೇ ಜೈಕಾರ ಹಾಕಿತು. ದೇಶದ ಮಹಾನ್ ಹುದ್ದೆ ಅಲಂಕರಿಸುವ ಸೌಭಾಗ್ಯ ದೊರಕಿತು. ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಂತೆ ವಿದೇಶಗಳತ್ತ ಪ್ರವಾಸ.
 
ವಿಶ್ವವೇ ತನ್ನತ್ತ ತಿರುಗುವಂತೆ ಮಂತ್ರಮುಗ್ಧವಾಗಿಸಿತ್ತು ಅವರ ಭಾಷಣ. ದಿನ ಕಳೆದಂತೆಲ್ಲ ಹೊಸ ಹೊಸ ಆಯಾಮಗಳನ್ನು ಹುಟ್ಟು ಹಾಕಲು ಯತ್ನಿಸಿದರು. ಅವರ ಅಧಿಕಾರದ ಅವಧಿಯ ಮೂರು ವರ್ಷಗಳಲ್ಲಿ ಇಣುಕಿ ನೋಡಿದರೆ ಅವರೇ ನುಡಿದಂತೆ ಹಾಗೂ ದೇಶದ ಜನರು ನಿರೀಕ್ಷಿಸಿದಂತೆ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ.
 
ಅಧಿಕಾರ ವಹಿಸಿಕೊಂಡ ಹೊಸ್ತಿಲಲ್ಲೇ ಭಾರಿ ಮೊತ್ತದ ಸೂಟು ಧರಿಸಿ ಟೀಕೆಗೆ ಗುರಿಯಾದರು.‘ಸ್ವಚ್ಛ ಭಾರತ ಆಂದೋಲನ’ ಆರಂಭಿಸಿದ ಮೋದಿಯವರಿಗೆ ಮೊದಲು ಹೆಚ್ಚುತ್ತಿರುವ ಜನಸಂಖ್ಯೆಗೆ ಕಡಿವಾಣ ಹಾಕುವ ಯಾವುದೇ ಉಪಾಯ ಕಂಡು ಬಂದಿಲ್ಲ. ಈಗಲೂ  ಕೆಲವು ಸಮುದಾಯದವರು ‘ಮನೆ ತುಂಬ ಮಕ್ಕಳಿರಲಿ’ ಎಂದು ಬಯಸುತ್ತಾರೆ. ಆ ಮಕ್ಕಳಿಗೆ ಮೂಲಭೂತ ಸೌಲಭ್ಯ ನೀಡುವ ಶಕ್ತಿಯಿಲ್ಲ ದಿದ್ದರೂ ಎರಡು ಮಕ್ಕಳಿಗಿಂತ ಅಧಿಕ ಮಕ್ಕಳನ್ನು ಬಯಸುತ್ತಾರೆ.  ಕೆಲವು ನಿಬಂಧನೆಗಳ ಮೂಲಕ ಜನಸಂಖ್ಯೆಯನ್ನು  ಸರ್ಕಾರ ನಿಯಂತ್ರಿಸಬಹುದು.
 
ಉದಾಹರಣೆಗೆ ಇಂದು ಅತಿ ಮುಖ್ಯವಾಗುವ ಪಡಿತರ ಚೀಟಿ ಹಾಗೂ ಇತರ ಸರ್ಕಾರಿ ಸೌಲಭ್ಯ ದೊರಕುವ ಪತ್ರಗಳನ್ನು ನೀಡುವಾಗ ಒಂದು ಮಗು ಉಳ್ಳವರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯ, ಎರಡು ಮಕ್ಕಳಿರುವವರಿಗೆ ಅದರಲ್ಲಿ ಸ್ವಲ್ಪ ಕಡಿತ,  ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ  ಸರ್ಕಾರದ ಯಾವುದೇ  ಸೌಲಭ್ಯ ದೊರೆಯುವುದಿಲ್ಲ ಎಂದು ಕಟ್ಟುನಿಟ್ಟು ಮಾಡಬೇಕು. ಈ ರೀತಿ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಪಡಬಹುದು.
 
ಭಾಷಣಗಳಲ್ಲಿ ಬಡವರನ್ನು ಉದ್ಧಾರ ಮಾಡುವ ವಾಗ್ದಾನ ನೀಡುವ ಮೋದಿಯವರು ತುಸು ಚಿಂತಿಸ ಬೇಕಿದೆ. ಅಭಿವೃದ್ಧಿಯತ್ತ ಸಾಗಲು ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯವಾಗಿರುವ ಶಿಕ್ಷಣ ಕ್ಷೇತ್ರ ಇಂದು ಯಾವ ಮಟ್ಟದಲ್ಲಿದೆ? ಗ್ರಾಮೀಣ ಪ್ರದೇಶದಿಂದ ದೆಹಲಿಯ ವರೆಗೂ ಶಿಕ್ಷಣ ಕ್ಷೇತ್ರ ಹಣ ಮಾಡುವ ದಂಧೆಯಾಗಿದೆ.  ಶಿಕ್ಷಣ ಕ್ಷೇತ್ರದಲ್ಲಿನ ಕಪ್ಪು ಹಣ ಇವರಿಗೇಕೆ ಗೋಚರಿ ಸುತ್ತಿಲ್ಲ? ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೇಕೆ ಯತ್ನಿಸುತ್ತಿಲ್ಲ? ಆರೋಗ್ಯ ಇಲಾಖೆ ಕೂಡ ಇದಕ್ಕಿಂತ ಮಿಗಿಲಾಗಿಲ್ಲ.
 
ನಕಲಿ ನೋಟು ಹಾಗೂ ಕಪ್ಪುಹಣಕ್ಕೆ  ಕಡಿವಾಣ ಹಾಕುವ ಸಲುವಾಗಿ ನೋಟು ಬದಲಾವಣೆ ಮಾಡಿದರು. ಆದರೆ ಸರಿಯಾದ ಪೂರ್ವಸಿದ್ಧತೆ ಇಲ್ಲದ್ದರಿಂದ ಶ್ರೀಸಾಮಾನ್ಯ ಸೊರಗಿಹೋದ. ಆದರೆ ಅವರದೇ  ಪಕ್ಷದ ನಾಯಕರು  ನೂರಾರು ಕೋಟಿ ಖರ್ಚು ಮಾಡಿ ಮದುವೆ ಸಮಾರಂಭಗಳನ್ನು ಮಾಡಿದರು.
 
ಸರಳ ಹಾಗೂ ನೇರ ನಡೆ–ನುಡಿಯ, ಆಮಿಷಗಳಿಗೆ ಒಳಗಾಗದ, ಇತರರಿಗಿಂತ ಭಿನ್ನವಾಗಿರುವ ವ್ಯಕ್ತಿಯ ನಾಯಕತ್ವದಲ್ಲಿ ಇಂತಹ ವೈರುಧ್ಯಗಳಿರಲು ಸಾಧ್ಯವೇ?
ವಿದೇಶಗಳಲ್ಲಿ ಮಹಾತ್ಮ ಗಾಂಧಿ, ಬಸವಣ್ಣ ಮತ್ತು ವಿವೇಕಾನಂದರ ಸ್ಮಾರಕಗಳನ್ನು ನಿರ್ಮಿಸುವುದರ ಮೂಲಕ ಜಗತ್ತಿಗೆ ಅವರ ಸಂದೇಶಗಳನ್ನು ಸಾರಲು ಹೊರಟಿರುವವರಿಗೆ, ತಮ್ಮದೇ ನೆಲದಲ್ಲಿ ತಮ್ಮದೇ ಜನ ರಿಗೆ ತಾವೇ ನೀಡಿದ ಭರವಸೆಗಳನ್ನು ಈಡೇರಿಸಲಾಗುತ್ತಿಲ್ಲ.
 
ಈ ಐದು ವರ್ಷ ಪೂರೈಸಿ ಮುಂದಿನ ಐದು ವರ್ಷಗಳಲ್ಲೂ ಮತ್ತೆ ಪ್ರಧಾನಿಯಾಗಿಯೇ ಮೋದಿ ಆಯ್ಕೆಯಾಗಿ ಮುಂದುವರಿಯಬಹುದು. ಆದರೆ ಅದು ಭಾರತೀಯರ ಮಾನವೀಯ ಮೌಲ್ಯಗಳ ಆಧಾರದ ಮೇಲಲ್ಲ. ಅದು ಕೇವಲ ದುರುಳ ರಾಜಕೀಯ ದಾಳಗಳಿಂದ ಮಾತ್ರ ಸಾಧ್ಯ! ಏಕೆಂದರೆ ಇತರರಿಗಿಂತಲೂ ಭಿನ್ನವಾಗಿ ಕಂಡ ಮೋದಿಯವರು, ತಮ್ಮ ವರ್ಚಸ್ಸು ಮಾಸುತ್ತಿರುವುದನ್ನು ಅರ್ಥಮಾಡಿಕೊಳ್ಳುತ್ತಲೇ ಇಲ್ಲ. 
 
ವಾಜಪೇಯಿ ಸೂತ್ರ ಪಾಲಿಸಿ
ಕಾಶ್ಮೀರ ಬಿಕ್ಕಟ್ಟು ರಾತ್ರೋರಾತ್ರಿ ಬಗೆಹರಿಯದಿದ್ದರೂ, ಅದರ ತೀವ್ರತೆ ಕಡಿಮೆ ಆಗಬಹುದು ಎಂಬ ಆಶಾಭಾವ ಬಿಜೆಪಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಇತ್ತು. ಗರಿಷ್ಠ ಮುಖಬೆಲೆಯ ನೋಟುಗಳನ್ನು ಕಳೆದ ವರ್ಷ ರದ್ದು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ‘ಭಯೋತ್ಪಾದನೆಗೆ ಆರ್ಥಿಕ ನೆರವು ಸಿಗುವುದು ಇನ್ನು ಮುಂದೆ ಕಷ್ಟವಾಗಲಿದೆ. ಹಾಗಾಗಿ ಭಯೋತ್ಪಾದನೆ ಕಡಿಮೆ ಆಗಲಿದೆ’ ಎಂಬ ಮಾತು ಆಡಿದ್ದರು.
 
ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ನಿರ್ದಿಷ್ಟ ದಾಳಿ ನಡೆಸಿದ ನಂತರ, ಉಗ್ರವಾದ ಕಡಿಮೆ ಆಗುವ ಆಶಾಭಾವ ಗಟ್ಟಿಯಾಗಿತ್ತು. ಆದರೆ ಈಗ ಅವೆಲ್ಲವೂ ಹುಸಿಯಾಗುತ್ತಿವೆ. ಕಾಶ್ಮೀರದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಅಟಲ್‌ ಬಿಹಾರಿ ವಾಜಪೇಯಿ ಸೂತ್ರ ಅಲ್ಲಿ ಪಾಲನೆ ಆಗುತ್ತಿರುವಂತೆ ಕಾಣುತ್ತಿಲ್ಲ. 
 
ಭಾರತದ ಮಕುಟಮಣಿ ಕಾಶ್ಮೀರದ ಜೊತೆ ಬಿಜೆಪಿಗೆ ಭಾವನಾತ್ಮಕ ಸಂಬಂಧ ವೊಂದಿದೆ. ಪಕ್ಷಕ್ಕೆ ಅದರ ನೆನಪು ಇದ್ದೇ ಇರುತ್ತದೆ. ಆ ನೆನಪಿನ ನೆವದಲ್ಲಾದರೂ, ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳುವಂತೆ ಕೇಂದ್ರ ಕ್ರಮ ಕೈಗೊಳ್ಳಬೇಕು.
  ನಿವೇದಿತಾ ಶೆಣೈ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT