ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್ ಬಸ್‌ ಯೋಜನೆ ಪಟ್ಟಿಯಲ್ಲಿ ನಗರ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲಿ ನಗರ ಸ್ಥಾನ ಪಡೆಯುವ ನಿರೀಕ್ಷೆ
Last Updated 9 ಮೇ 2017, 8:32 IST
ಅಕ್ಷರ ಗಾತ್ರ
ಮೈಸೂರು: ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಿಸುವ ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಕಾಂಕ್ಷಿ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆ ಯಾಗುವ ಸಂಭವನೀಯ ನಗರಗಳಲ್ಲಿ ಮೈಸೂರು ಸ್ಥಾನ ಪಡೆದಿದೆ. ಒಂದು ವೇಳೆ ಕೊನೆಯ ಸುತ್ತಿನಲ್ಲಿ ನಗರ ಆಯ್ಕೆಯಾದರೆ ಸಾರ್ವಜನಿಕರ ಸಾರಿಗೆ ವ್ಯವಸ್ಥೆಯೇ ಬದಲಾಗುವ ಸಾಧ್ಯತೆ ಇದೆ.
 
ಏನಿದು ಯೋಜನೆ?: ಕೇಂದ್ರ ಸರ್ಕಾರದ ನೀತಿ ಆಯೋಗವು ದೇಶದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬದಲಿಸುವ ಬೃಹತ್ ಯೋಜನೆಯನ್ನು ರೂಪಿಸುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್ ವಾಹನಗಳು, ಹೈಪರ್‌ಲೂಪ್ ಹಾಗೂ ಸ್ಕೈ ಟ್ರಾನ್ಸ್‌ಗಳೂ ಸೇರಿವೆ.
 
ಸದ್ಯ, ನಗರದ ಸಂಪೂರ್ಣ ಸಾರ್ವಜನಿಕರ ಸಾರಿಗೆ ವ್ಯವಸ್ಥೆ ಎಲೆಕ್ಟ್ರಾನಿಕ್ ವಾಹನಗಳ ಮೂಲಕ ನಡೆಯುವಂತೆ ಮಾಡುವ ಯೋಜನೆಯ ಸಂಭವನೀಯ ಪಟ್ಟಿಯಲ್ಲಿ ಮೈಸೂರು ಆಯ್ಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
 
ಈಗಾಗಲೇ ಹಿಮಾಚಲ ಪ್ರದೇಶದ ರೊಹಂತಂಗ್ ನಗರದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನ ಗೊಂಡಿದೆ. ಎಲ್ಲ ಸಾರ್ವಜನಿಕರ ಬಸ್‌ಗಳೂ ಅಲ್ಲಿ ಎಲೆಕ್ಟ್ರಿಕ್ ಬಸ್‌ಗಳಾಗಿದ್ದು, ಡಿಸೆಲ್ ಹಾಗೂ ಪೆಟ್ರೊಲ್ ಚಾಲಿತ ಬಸ್‌ಗಳು ಅಲ್ಲಿಲ್ಲ. ಈ ಯೋಜನೆಯ ಯಶಸ್ಸಿನಿಂದ ಮುಂದುವರಿದಿರುವ ನೀತಿ ಆಯೋಗ, ಪ್ರಾಯೋಗಿಕ ಅನುಷ್ಠಾನವನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆಸಿದೆ.
 
ಈ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿರುವ ಆಯೋಗವು ಅವುಗಳಲ್ಲಿ ತಲಾ ಎರಡು ನಗರಗಳನ್ನು ಸಂಭವನೀಯ ಪಟ್ಟಿಯಲ್ಲಿ ಸೇರಿಸಿದೆ. ಕರ್ನಾಟಕದಿಂದ ಬೆಂಗಳೂರು ಹಾಗೂ ಮೈಸೂರು ಸ್ಥಾನ ಪಡೆದಿದ್ದರೆ, ಆಂಧ್ರಪದೇಶದಿಂದ ಅಮರಾವತಿ, ಕಾಕಿನಾಡ ಹಾಗೂ ವಿಶಾಖಪಟ್ಟಣಂ ನಗರಗಳು ಸ್ಥಾನ ಪಡೆದಿವೆ.
 
ಇವುಗಳಲ್ಲಿ ಕೇವಲ ಎರಡು ನಗರಗಳು ಮಾತ್ರ ಆಯ್ಕೆಯಾಗಲಿವೆ. ಬೆಂಗಳೂರು ಬೃಹತ್ ಸಾರಿಗೆ ಜಾಲ ಹೊಂದಿರುವುದರಿಂದ ಹಾಗೂ ಇಂಟಲಿಜೆನ್ಸ್ ಸಾರಿಗೆ ವ್ಯವಸ್ಥೆಯನ್ನು ಯಶಸ್ವಿಯಾಗಿ ನಗರ ಅನುಷ್ಠಾನಕ್ಕೆ ತಂದಿರುವುದಿರಂದ ಮೈಸೂರು ರಾಜ್ಯದಿಂದ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳು ಇವೆ ಎಂದು ಅಂದಾಜು ಮಾಡಲಾಗಿದೆ.
 
ಏನಿದರ ಪ್ರಯೋಜನ?: ಉದ್ದೇಶಿತ ಯೋಜನೆ ಪ್ರಕಾರ ಇಡಿ ನಗರದ ಸಾರ್ವಜನಿಕರ ಸಾರಿಗೆ ವ್ಯವಸ್ಥೆಯು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಲಿದೆ. ಜತೆಗೆ, ಇಂತಹ ವಾಹನಗಳ ಖರೀದಿಗೆ ಸುಲಭವಾಗಿ ಸಾಲ, ಸೌಲಭ್ಯ ನೀಡುವ ಯೋಜನೆಯನ್ನೂ ಜಾರಿಗೆ ತರುವ ನಿರೀಕ್ಷೆ ಇದೆ.
 
ನಗರದ ಹಲವೆಡೆ ಎಲೆಕ್ಟ್ರಿಕ್ ವಾಹನ ಗಳಲ್ಲಿ ಬಳಸುವ ಬ್ಯಾಟರಿಗಳ ರೀಚಾರ್ಜ್ ಪಾಯಿಂಟ್‌ಗಳ ಸೌಲಭ್ಯ ಕಲ್ಪಿಸುವುದು, ಪೆಟ್ರೊಲ್ ಬಂಕ್‌ಗಳಲ್ಲಿ ಇಂತಹ ಸೌಕರ್ಯ ಒದಗಿಸುವ ವ್ಯವಸ್ಥೆ ಜಾರಿಗೆ ತರುವುದೂ ಸೇರಿದಂತೆ ಇಡೀ ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಚಿತ್ರಣವೇ ಸಂಪೂರ್ಣ ಬದಲಾಗಲಿದೆ ಎಂದು ಮೂಲಗಳು ತಿಳಿಸಿವೆ.
 
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಈಗಾಗಲೇ 50 ಎಲೆಕ್ಟ್ರಿಕ್‌ ಬಸ್‌ಗಳನ್ನು ನಗರಕ್ಕೆ ನೀಡುವುದಾಗಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ನೀತಿ ಆಯೋಗದ ಯೋಜನೆಯಲ್ಲೂ ಸ್ಥಾನ ಪಡೆಯುವ ನಿರೀಕ್ಷೆ ಗರಿಗೆದರಿರುವುದು ನಗರದ ಪರಿಸರದಮಟ್ಟಿಗೆ ಸಮಾಧಾನಕರವಾದ ಬೆಳವಣಿಗೆ ಎನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT