ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದಿ ಅಭಿವೃದ್ಧಿ, ಹಿಂದಿ ಹೇರಿಕೆ

Last Updated 9 ಮೇ 2017, 19:30 IST
ಅಕ್ಷರ ಗಾತ್ರ

‘ಏಕತೆ ಕಾಪಾಡಲು ‘ಹಿಂದಿ’ಯೇ ಬೇಕಿಲ್ಲ’ (ಪ್ರ.ವಾ.ಮೇ, 5) ಎಂಬ ತಮ್ಮ ‘ನಿಜದನಿ’ ಅಂಕಣ ಬರಹದಲ್ಲಿ, ಪೃಥ್ವಿ ದತ್ತ ಚಂದ್ರ ಶೋಭಿ ಅವರು ಅಧಿಕೃತ ಭಾಷೆಗೆ ಸಂಬಂಧಿಸಿದ ಸಂಸತ್ ಸಮಿತಿಯ ಒಂಬತ್ತನೇ ವರದಿಯ ಕೆಲವು ಶಿಫಾರಸುಗಳ ಸಾಧಕ ಬಾಧಕಗಳನ್ನು ವಿವರವಾಗಿ ಚರ್ಚಿಸಿದ್ದಾರೆ.

‘ಈ ಎಲ್ಲ ಕ್ರಮಗಳು ಹಿಂದಿ  ಅಭಿವೃದ್ಧಿಯ ಉದ್ದೇಶದಿಂದ ತೆಗೆದುಕೊಂಡಿರುವುದು ಎನ್ನುವುದು ನಿಜ. ಆದರೆ ಹಿಂದಿಯನ್ನು ಇಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಲ್ಲೊಂದು ಎನ್ನುವ ನೆಲೆಗಿಂತಲೂ ಇಂಗ್ಲಿಷ್‌ನೊಡನೆ ಅಧಿಕೃತ ಆಡಳಿತದ ಭಾಷೆ ಎನ್ನುವ ನಿಟ್ಟಿನಲ್ಲಿ ಹಿಂದಿಯ ಅಭಿವೃದ್ಧಿ ಪ್ರಯತ್ನ ನಡೆದಿದೆ... ಆದರೆ ಹಿಂದಿಯ ಅಗತ್ಯವಿಲ್ಲದಿರುವ ಭಾಗಗಳಲ್ಲಿಯೂ ಹಿಂದಿ ಬಳಕೆಯಾಗುತ್ತಿರುವುದನ್ನು ಹೇರಿಕೆ ಎಂದು ನಾವು ಕರೆಯಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರೊ. ಶೋಭಿ ಮತ್ತು ಅವರಂತೆ ಕೇಂದ್ರ ಸರ್ಕಾರದ ಹಿಂದಿ ಅಭಿವೃದ್ಧಿ ಕಾರ್ಯಗಳನ್ನು ‘ಹಿಂದಿ ಹೇರಿಕೆ’ ಎಂದು ವಾದಿಸುವ ಅನೇಕರಿಗೆ ಹಿಂದಿಯು ಕನ್ನಡ, ತೆಲುಗು, ಮರಾಠಿಗಳಂತೆ, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ರಾಷ್ಟ್ರೀಯ ಭಾಷೆಗಳೆಂದು ನಮೂದಾಗಿರುವ ಭಾಷೆಗಳಲ್ಲಿ ಒಂದು ಅಷ್ಟೆ. ಅದಕ್ಕೆ ಇತರ ಭಾಷೆಗಳಿಗೆ ಕೊಡದ ಸೌಲಭ್ಯ ಸವಲತ್ತುಗಳನ್ನು ಕೊಡುವುದು ಅನ್ಯಾಯ. ಹೀಗೆ ಹೇಳುವವರು ನಮ್ಮ ಸಂವಿಧಾನದಲ್ಲಿ ಹಿಂದಿಯನ್ನು ಕೇಂದ್ರ ಸರ್ಕಾರದ ಅಧಿಕೃತ ಭಾಷೆ (ಅಫಿಶಿಯಲ್‌ ಲ್ಯಾಂಗ್ವೇಜ್‌) ಎಂದು ಮತ್ತು ಇದರ ಜೊತೆಗೆ ಹಿಂದಿಯೇತರ ಭಾಷಿಕರು ಅಪೇಕ್ಷಿಸುವ ತನಕ ಇಂಗ್ಲಿಷ್‌ ಭಾಷೆ ಕೇಂದ್ರ ಸರ್ಕಾರದ ಸಹ (ಅಸೋಸಿಯೇಟ್‌) ಅಧಿಕೃತ ಭಾಷೆಯಾಗಿರುತ್ತದೆ ಎಂದು ನಮೂದಾಗಿದೆ ಎಂಬುದನ್ನು ಮರೆಯುತ್ತಾರೆ. ಸಂವಿಧಾನದಲ್ಲಿ ಈ ನಮೂದು ಇರುವ ತನಕ ಕೇಂದ್ರ ಸರ್ಕಾರ ಹಿಂದಿಯನ್ನು ಇಡೀ ದೇಶದ ಏಕೈಕ ಅಧಿಕೃತ ಭಾಷೆಯನ್ನಾಗಿ ಮಾಡುವುದು ಸಾಧ್ಯವಿಲ್ಲ. ಹಿಂದೆ 1965ರಲ್ಲಿ ಹಿಂದಿ ಕಟ್ಟರ್‌ವಾದಿಗಳ ಒತ್ತಾಯದಿಂದ ಹೀಗೆ ಮಾಡಲು ಹೋಗಿ ಹಿಂದಿಯೇತರ ರಾಜ್ಯಗಳಲ್ಲಿ, ಅದರಲ್ಲೂ ಇಂದಿನ ತಮಿಳುನಾಡಿನಲ್ಲಿ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರ ಕಳೆದುಕೊಂಡು ಶಾಶ್ವತವಾಗಿ ಮೂಲೆಗುಂಪಾಯಿತು. ಇದೆಲ್ಲದರಿಂದಾಗಿ ಹಿಂದಿ ಹೇರಿಕೆ ಸಾಧ್ಯವೂ ಅಲ್ಲ ಸಾಧುವೂ ಅಲ್ಲ ಎಂಬುದು ಅಧಿಕಾರಸ್ಥರಿಗೆ ಮನವರಿಕೆಯಾಗಿದೆ.

ನಮಗೆಲ್ಲಾ ಗೊತ್ತಿರುವಂತೆ ಕಳೆದ ಎಪ್ಪತ್ತು ವರ್ಷಗಳಿಂದ ಇಂಗ್ಲಿಷ್‌ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಷ್ಟೇ ಆಗಿಲ್ಲ ಅದು ನಮ್ಮೆಲ್ಲ ರಾಜ್ಯ ಸರ್ಕಾರಗಳ ‘ಅನಧಿಕೃತ ಅಧಿಕೃತ ಭಾಷೆ’ಯಾಗಿ ಮೆರೆಯುತ್ತಿದೆ. ಅಷ್ಟೇ ಅಲ್ಲ ಅದು ದೇಶದಾದ್ಯಂತ ವ್ಯಾಪಾರೋದ್ಯಮ ಕ್ಷೇತ್ರದ ಅಧಿಕೃತ ಭಾಷೆಯೂ ಆಗಿದೆ. ಹೀಗಾಗಿಯೆ ಭಾರತದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ತಂದೆ ತಾಯಂದಿರು ತಮ್ಮ ಮಕ್ಕಳನ್ನು ದೊಡ್ಡ ಮೊತ್ತದ ಫೀಸ್‌ ಕೊಟ್ಟು ಇಂಗ್ಲಿಷ್‌ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಎಲ್ಲಾ ರಾಜ್ಯಗಳ ಸಾಹಿತಿಗಳು ಚಿಂತಕರು ಖಂಡಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಹಿಂದೆ ಹಿಂದಿ ಹೇರಿಕೆಯನ್ನು ಸಕಾರಣವಾಗಿ ವಿರೋಧಿಸಿದ್ದ ನಾವು, ಕೇಂದ್ರ ಸರ್ಕಾರ ಈಗ ಹಿಂದಿ ಭಾಷೆಯನ್ನು ಇಂಗ್ಲಿಷ್‌ಗೆ ಸಮಾನವಾಗಿ ಅಥವಾ ಪರ್ಯಾಯವಾಗಿ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದನ್ನು ವಿರೋಧಿಸುವುದು ಸರಿಯೆ? ನಮ್ಮ ರಾಜ್ಯದಲ್ಲಿ ‘ಅನಧಿಕೃತವಾಗಿ ಅಧಿಕೃತ’ ಭಾಷೆಯಾಗಿರುವ ಇಂಗ್ಲಿಷ್‌ಗೆ ಪರ್ಯಾಯವಾಗಿ ಕನ್ನಡವನ್ನು ಅಧಿಕೃತ ಭಾಷೆಯಾಗಿ ಬೆಳೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಮೂವತ್ತು ವರ್ಷಗಳ ಹಿಂದೆಯೇ ಸ್ಥಾಪಿಸಿರುವುದನ್ನು ಗಮನಿಸಿ.

ಸಂವಿಧಾನದಲ್ಲಿರುವಂತೆ ಹಿಂದಿಯು ಇಂಗ್ಲಿಷ್‌ಗೆ ಪರ್ಯಾಯವಾಗಿ ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾಗಿ ಬೆಳೆದರೆ ಹಿಂದಿ ಭಾಷಿಕರಿಗೆ ಸುಲಭದಲ್ಲಿ ಹೆಚ್ಚಿನ ಲಾಭವನ್ನುಂಟು ಮಾಡಿ ಹಿಂದಿಯೇತರ ಭಾಷಿಕರಿಗೆ ನಷ್ಟ ಉಂಟು ಮಾಡುವುದಿಲ್ಲವೆ? ನಾವು ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಇಂದು ಅಧಿಕೃತ ಭಾಷೆಯಾಗಿ ಬೆಳೆಸಲಾಗುತ್ತಿರುವ ಹಿಂದಿಯು ಹಿಂದಿ ಭಾಷಿಕರ ಮನೆಮಾತುಗಳಿಗಿಂತ ಭಿನ್ನವಾಗಿದೆ. ಹಿಂದಿ ವಿರೋಧಿಗಳೇ, ಅಧಿಕೃತ ಹಿಂದಿ ಎಂಬುದು ಉತ್ತರ ಭಾರತದ ಭೊಜ್ಪುರಿ, ಮಾಗಧಿ, ಅವಧಿ, ಮೈಥಿಲಿ, ಬುಂದೇಲಿ, ಹರ್ಯಾನ್ವಿ, ಛತ್ತಿಸ್‌ಘಡಿ ಮುಂತಾದ ಜನ ಭಾಷೆಗಳನ್ನು ತುಳಿದು ಬೆಳೆಸಲಾಗಿರುವ ಭಾಷೆ. ಅದು ಸಂಸ್ಕೃತ ಪದಗಳಿಂದ ತುಂಬಿದ ಕೃತಕ ಭಾಷೆ ಎಂದೆಲ್ಲಾ ಆಪಾದಿಸುತ್ತಾರೆ.

ಭಾರತದಂತಹ ರಾಷ್ಟ್ರ ಮತ್ತು ಅವುಗಳಲ್ಲಿ ರೂಪಿಸಲಾಗಿರುವ ಕರ್ನಾಟಕದಂತಹ ರಾಜ್ಯಗಳು, ಲಕ್ಷಾಂತರ ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಅಲ್ಲಿನ ಸರ್ಕಾರಗಳು ಪ್ರತಿ ಇಪ್ಪತ್ತು ಕಿ.ಮೀ.ಗೆ ಉಚ್ಚಾರಣೆಯಲ್ಲಿ ಬದಲಾಗುವ ಆಡು ಭಾಷೆಗಳನ್ನು ತಮ್ಮ ಅಧಿಕೃತ ಭಾಷೆಗಳನ್ನಾಗಿ ಹೊಂದಲಾಗುವುದಿಲ್ಲ. ಕೇಬಲ್ ಟಿ.ವಿ.ಯಲ್ಲಿ ಲಭ್ಯವಿರುವ ವಿವಿಧ ಭಾಷೆಗಳ ಸುದ್ದಿ ಪ್ರಸಾರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಬಳಕೆಯಾಗುತ್ತಿರುವ, ಎಲ್ಲಾ ಭಾರತೀಯ ಭಾಷೆಗಳು (ಉರ್ದು ತಮಿಳಿನಂತಹ ಕೆಲವೇ ಭಾಷೆಗಳನ್ನು ಬಿಟ್ಟು) ಕೂಡ ತಮ್ಮ ಪ್ರಮಾಣ ಭಾಷೆಗಳನ್ನು ಸಂಸ್ಕೃತ/ಪ್ರಾಕೃತ ಪದ ಸಂಪತ್ತಿನಿಂದಲೇ ರೂಪಿಸಿಕೊಂಡಿರುವುದನ್ನು ಸುಲಭವಾಗಿ ತಿಳಿಯಬಹುದಾಗಿದೆ. ಖಾಸಗಿ ಕನ್ನಡ ವಾಹಿನಿಗಳ ವಾರ್ತಾ ವಾಚಕರಾಗಿ ದಕ್ಷಿಣ ಕನ್ನಡದ ತುಳು ಮತ್ತು ಬ್ಯಾರಿ ಭಾಷಿಕರೇ ಹೆಚ್ಚಾಗಿ ಕಂಡು ಬರುತ್ತಿರುವುದಕ್ಕೆ ಕಾರಣ ಅವರೆಲ್ಲಾ ಪ್ರಮಾಣ ಕನ್ನಡವನ್ನು ಕರಗತ ಮಾಡಿಕೊಂಡಿರುವುದೇ ಆಗಿದೆ. ಹಾಗೆಯೇ ದೂರದರ್ಶನದ ಖಾಯಂ ವಾರ್ತಾ ವಾಚಕರಾಗಿದ್ದ ರುಕ್ಸಾನಾ ಸುಲ್ತಾನ್, ಅವಿನಾಶ್ ಕೌರ್, ಸರಲಾ ಝರೀವಾಲಾ, ರಮಣ್ ಅವರು ಕ್ರಮವಾಗಿ ಉರ್ದು, ಪಂಜಾಬಿ, ಗುಜರಾತಿ ಮತ್ತು ತೆಲುಗು ಭಾಷಿಕ ಸಮುದಾಯಗಳಿಗೆ ಸೇರಿದವರಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು. ಕನ್ನಡದ ಪ್ರಮುಖ ಕಾದಂಬರಿಕಾರರಾದ ಶಿವರಾಮ ಕಾರಂತರು ತಮ್ಮ ಕಾದಂಬರಿಗಳನ್ನು ತಮ್ಮ ಪ್ರದೇಶದ ‘ಕುಂದಾಪುರ ಕನ್ನಡ’ದಲ್ಲಿ ಬರೆಯದೆ ಕರ್ನಾಟಕದೆಲ್ಲೆಡೆ ಓದುಗರಿಗೆ ಪರಿಚಿತವಾದ ಗ್ರಾಂಥಿಕ ಕನ್ನಡದಲ್ಲೆ ಬರೆದಿರುವುದಕ್ಕೆ ಕಾರಣ, ತಮಗೆ ಹೆಚ್ಚು ಜನ ಓದುಗರನ್ನು ಮುಟ್ಟಬೇಕೆಂಬ ಇರಾದೆ ಇದ್ದದ್ದು ಎಂದು ಅವರೇ ಹೇಳಿದ್ದರು.

ನನ್ನ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಹಿಂದಿಯೇತರ ರಾಜ್ಯಗಳಲ್ಲಿ ಮಾನ್ಯತೆ ಪಡೆಯಲು, ಈ ಎಲ್ಲಾ ರಾಜ್ಯಗಳ ಹೈಸ್ಕೂಲ್‌ಗಳಲ್ಲಿ ಹಿಂದಿಯಲ್ಲಿ ಸಂಭಾಷಿಸುವುದನ್ನು ಹೇಳಿ ಕೊಡುವ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಮಾಡಿದರೆ ಒಳಿತು. ಆ ಭಾಷೆ ಹಿಂದಿಯೇತರರಿಗೆ ಸುಲಭವಾಗಿ ಪರಿಚಯವಾಗುತ್ತದೆ. ವಿರೋಧವೂ ಕಡಿಮೆಯಾಗಿರುತ್ತದೆ.

–ಗಿರೀಶ ವಿ. ವಾಘ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT