ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿ ಇಲ್ಲದ ಕಾನೂನಿಗೆ ಗಲ್ಲು ‘ಬಲಿ’

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಹೀನಕೃತ್ಯ ಎಸಗುವ ಅಪರಾಧಿಗಳಿಗೆ ಗಲ್ಲುಶಿಕ್ಷೆ ನೀಡಬೇಕೇ ಬೇಡವೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಲೇ ಇದೆ. ಈ ಮಧ್ಯೆಯೇ ಇಂಥ ಅಪರಾಧಿಗಳಿಗೆ ನಮ್ಮ ಕಾನೂನಿನಲ್ಲಿರುವ ಲೋಪ ವರದಾನ ಆಗುತ್ತಿರುವುದು ದುರದೃಷ್ಟಕರ.

ನಿರ್ಭಯಾ’ ಪ್ರಕರಣದ ನಾಲ್ವರು ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಕಾಯಂ ಮಾಡಿದ ನಂತರ ಅವರು ನೇಣಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇರುವ ಮುಂದಿನ ಆಯ್ಕೆಗಳ ಕುರಿತು ಎಲ್ಲೆಡೆ ಚರ್ಚೆ ಶುರುವಾಗಿದೆ. ಮರಣದಂಡನೆಯನ್ನು ಮುಂದೂಡಲು ಮೂರು ಅವಕಾಶಗಳು ಸದ್ಯ ಅಪರಾಧಿಗಳ ಪಾಲಿಗಿವೆ.

ಒಂದನೆಯದ್ದು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಇದೇ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದು. ಗಲ್ಲುಶಿಕ್ಷೆ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿತಗೊಂಡ ಅಂಶಗಳಲ್ಲಿ ಏನಾದರೂ ದೋಷಗಳು ಇದ್ದರೆ ಅಥವಾ ಅಪರಾಧಿಗಳ ಪರವಾಗಿ ಇರುವಂಥ ಇನ್ನಾವುದಾದರೂ ಸಾಕ್ಷ್ಯಾಧಾರಗಳು ತೀರ್ಪಿನ ನಂತರ ಅಪರಾಧಿಗಳ ಪರ ವಕೀಲರಿಗೆ ಸಿಕ್ಕಿದ್ದರೆ, ಅವನ್ನು ಕೋರ್ಟ್‌ ಮುಂದಿಟ್ಟು ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರುವ ಅರ್ಜಿ ಇದು.

ನಿರ್ಭಯಾ ಪ್ರಕರಣದ ಬಗ್ಗೆ ಹೇಳುವುದಾದರೆ, ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಲು ಅಪರಾಧಿಗಳ ಪರ ವಕೀಲರು ಈಗಾಗಲೇ ದಾರಿ ಕಂಡುಕೊಂಡಿದ್ದಾರೆ. ಅದೇನೆಂದರೆ ಈ ಘಟನೆ  ವಿರುದ್ಧ ದೇಶದಾದ್ಯಂತ ವ್ಯಾಪಕ ಪ್ರತಿಭಟನೆ ನಡೆದ ಕಾರಣ, ತೀವ್ರ ಒತ್ತಡಕ್ಕೆ ಒಳಗಾಗಿ  ಕೋರ್ಟ್‌ ಇಂಥ ಕಠಿಣ ತೀರ್ಪು ನೀಡಿದ್ದು, ಅದನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕೋರಿಕೊಳ್ಳುವುದಾಗಿ ವಕೀಲರು ಈಗಾಗಲೇ ಹೇಳಿದ್ದಾರೆ. ಒಂದೊಮ್ಮೆ ಪುನರ್‌ಪರಿಶೀಲನಾ ಅರ್ಜಿಯೂ ತಿರಸ್ಕೃತವಾದರೆ ಅಪರಾಧಿಗಳಿಗೆ ಇನ್ನೂ ಒಂದು ಅವಕಾಶ ಇದೆ. ಅದೆಂದರೆ ಸುಪ್ರೀಂ ಕೋರ್ಟ್‌ನಲ್ಲಿಯೇ ‘ಕ್ಯುರೇಟಿವ್‌ ಪಿಟಿಷನ್‌’ ಸಲ್ಲಿಸುವುದು. ತೀರ್ಪಿನಲ್ಲಿ ತಾಂತ್ರಿಕವಾಗಿ ಏನಾದರೂ ದೋಷಗಳನ್ನು ವಕೀಲರು ಹುಡುಕಿ ಅಪರಾಧಿಗಳ ಪರವಾಗಿ ತೀರ್ಪು ನೀಡುವಂತೆ ಕೋರುವ ಅರ್ಜಿಯಿದು.

ಈ ಎರಡೂ ಬಗೆಯ ಅರ್ಜಿಗಳ ಇತಿಹಾಸ ಕೆದಕಿದರೆ ಸುಪ್ರೀಂ ಕೋರ್ಟ್‌ ಮುಂದೆ ಬಂದಿರುವ ಇಂಥ ಸಾವಿರಾರು ಅರ್ಜಿಗಳ ಪೈಕಿ ಬೆರಳೆಣಿಕೆಯಷ್ಟು  ಅರ್ಜಿಗಳಲ್ಲಿ ಮಾತ್ರ ಅಪರಾಧಿಗಳ ಪರವಾಗಿ ತೀರ್ಪು ಹೊರಬಂದಿದೆ.

ಈ ಎರಡೂ ಬಗೆಯ ಅರ್ಜಿಗಳು ತಿರಸ್ಕೃತಗೊಂಡರೆ, ಅಪರಾಧಿಗಳು ಕೊನೆಯ ಅಸ್ತ್ರವಾಗಿ ರಾಷ್ಟ್ರಪತಿಗಳಿಗೆ ‘ಕ್ಷಮಾದಾನದ ಅರ್ಜಿ’ ಸಲ್ಲಿಸಬಹುದು. ಸಂವಿಧಾನದ 72ನೇ ವಿಧಿಯ ಅನ್ವಯ ರಾಷ್ಟ್ರಪತಿಯವರು ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಬಹುದು, ಅಪರಾಧಿಗಳಿಗೆ ಕ್ಷಮೆ ನೀಡಬಹುದು ಅಥವಾ ಶಿಕ್ಷೆ ಪ್ರಮಾಣ ಕಡಿಮೆ ಮಾಡಬಹುದು. ಸಚಿವ ಸಂಪುಟದ ಸಲಹೆ ಪಡೆದು ರಾಷ್ಟ್ರಪತಿಗಳು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ.

ಮರಣದಂಡನೆ, ಕಾನೂನಿನಲ್ಲಿ ವಿಧಿಸಬಹುದಾದ ಕಟ್ಟಕಡೆಯ ಶಿಕ್ಷೆ. ಆದ್ದರಿಂದ ಯಾವುದೇ ನಿರಪರಾಧಿಗೆ ಅಥವಾ ತಿಳಿಯದೇ ಮಾಡಿರುವ ತಪ್ಪಿಗೆ ಕಠೋರ ಶಿಕ್ಷೆ ಆಗಬಾರದು ಎನ್ನುವ ದೃಷ್ಟಿಯಿಂದ ಇಂಥ ಅವಕಾಶಗಳನ್ನು ಅಪರಾಧಿಗಳಿಗೆ ಕಾನೂನು ಕಲ್ಪಿಸಿರುವುದು ತುಂಬಾ ಸಂತೋಷದಾಯಕವಾದದ್ದೇ. ಆದರೆ ವಾಸ್ತವದಲ್ಲಿ, ಕಾನೂನಿನಲ್ಲಿರುವ ಲೋಪ ಉಗ್ರಸ್ವರೂಪದ ಅಪರಾಧಿಗಳಿಗೂ ವರದಾನವಾಗಿ ಪರಿಣಮಿಸುತ್ತಿದೆ. ಕೆಳಹಂತದ ಕೋರ್ಟ್‌ಗಳು ಹೊರಡಿಸುವ ಆದೇಶವನ್ನು ಮೇಲ್ಮನವಿ ಮೂಲಕ ಪ್ರಶ್ನಿಸಲು ಸಮಯದ ಮಿತಿ ಹಾಕಿರುವ ನಮ್ಮ ಕಾನೂನು, ಆ ಪ್ರಕರಣವನ್ನು ಎಷ್ಟು ಅವಧಿಯ ಒಳಗೆ ಇತ್ಯರ್ಥಗೊಳಿಸಬೇಕು ಎಂಬ ಬಗ್ಗೆ ಮೌನ ತಾಳಿದೆ. ಈ ಲೋಪ ಎಲ್ಲಕ್ಕಿಂತ ಹೆಚ್ಚಾಗಿ ಕ್ಷಮಾದಾನದ ಅರ್ಜಿಗೆ ಮುಳುವಾಗಿದೆ.

ಕ್ಷಮಾದಾನದ ಅರ್ಜಿಯನ್ನು ಪರಿಶೀಲಿಸಿ ಇಂತಿಷ್ಟು ಸಮಯದಲ್ಲಿ ರಾಷ್ಟ್ರಪತಿಗಳು ಆದೇಶ ಹೊರಡಿಸಬೇಕು ಎಂಬ ಅಂಶ ನಮ್ಮ ಯಾವ ಕಾನೂನಿನಲ್ಲಿಯೂ ಉಲ್ಲೇಖವಾಗಿಲ್ಲ. ಆದ್ದರಿಂದಲೇ ಘೋರಾತಿಘೋರ ಅಪರಾಧಿಗಳೂ ಇದನ್ನೇ ಬಂಡವಾಳ ಮಾಡಿಕೊಂಡು ಗಲ್ಲುಶಿಕ್ಷೆಯಿಂದ ಪಾರಾಗಿರುವ ಹಲವಾರು ನಿದರ್ಶನಗಳು ಇವೆ.

ಇನ್ನೊಂದೆಡೆ, ಅಪರಾಧಿಗಳಿಗೆ ವರದಾನವಾಗುವಂಥ ತೀರ್ಪೊಂದನ್ನು ಸುಪ್ರೀಂ ಕೋರ್ಟ್‌ 2014ರಲ್ಲಿ ನೀಡಿದೆ. ‘ಕ್ಷಮಾದಾನದ ಅರ್ಜಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಆದೇಶ ಹೊರಡಿಸುವುದು ವಿಳಂಬ ಆದಲ್ಲಿ ಅಪರಾಧಿಯ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗುವುದು’ ಎಂದು ‘ಶತ್ರುಘ್ನ ಚವ್ಹಾಣ್‌  ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ’ ಪ್ರಕರಣದಲ್ಲಿ ಕೋರ್ಟ್‌ ಹೇಳಿದೆ. ಆದರೆ ‘ವಿಳಂಬ’ ಎಂದರೆ ಅದು ಎಷ್ಟು ಎಂಬ ಬಗ್ಗೆ ಇನ್ನೂ ಎಲ್ಲಿಯೂ ಸ್ಪಷ್ಟವಾಗಿಲ್ಲ.

ರಾಜೀವ್‌ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಪ್ರಮುಖ ಅಪರಾಧಿಗಳಾಗಿದ್ದ ಸಂತನ್, ಮುರುಗನ್ ಹಾಗೂ ಪೆರಾರಿವೇಲನ್ ಅವರಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿಗೆ ಸುಪ್ರೀಂ ಕೋರ್ಟ್‌ ಇಳಿಸಿದ್ದು ಕೂಡ ವಿಳಂಬದ ಕಾರಣಕ್ಕಾಗಿಯೇ. ರಾಷ್ಟ್ರಪತಿಗಳು 11 ವರ್ಷಗಳವರೆಗೆ ಕ್ಷಮಾದಾನದ ಅರ್ಜಿಯನ್ನು ಇತ್ಯರ್ಥ ಮಾಡದೇ ಪ್ರಕರಣಕ್ಕೆ ಸಂಬಂಧಿಸಿದ ಫೈಲ್‌ಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಅದನ್ನೇ ಪ್ರಶ್ನಿಸಿ ಈ ಹಂತಕರು ಸುಪ್ರೀಂ ಕೋರ್ಟ್‌ ಮೊರೆ ಹೋಗಿ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಂಡರು. ಅದೇ ರೀತಿ, ವೀರಪ್ಪನ್‌ ಸಹಚರರಾಗಿದ್ದ ಮೀಸೆಕಾರ ಮಾದಯ್ಯ, ಬಿಲ್ವೇಂದ್ರ, ಜ್ಞಾನಪ್ರಕಾಶ್, ಸೈಮನ್ ಅವರೂ ಇದೇ ಅವಧಿಯಲ್ಲಿ ಗಲ್ಲುಶಿಕ್ಷೆಯಿಂದ ತಪ್ಪಿಸಿಕೊಂಡರು. ಚಾಮರಾಜನಗರದ ಅತ್ಯಾಚಾರ ಪ್ರಕರಣವೊಂದರಲ್ಲಿ ಅಪರಾಧಿಗಳಾಗಿದ್ದ ಶಿವು, ಜಡೆಸ್ವಾಮಿ, ಮಂಗಳೂರಿನ ಪ್ರವೀಣ್ ಕುಮಾರ್ ಅವರು ಕೂಡ ‘ವಿಳಂಬ’ದ ಪ್ರಯೋಜನ ಪಡೆದು ಗಲ್ಲಿನಿಂದ ತಪ್ಪಿಸಿಕೊಂಡು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಸರಣಿಕೊಲೆ ಪಾತಕಿ ಅಲಹಾಬಾದಿನ ಸುರೇಂದರ್‌ ಕೋಳಿ ಅವರ ಕ್ಷಮಾದಾನದ ಅರ್ಜಿಯನ್ನು ಇತ್ಯರ್ಥಪಡಿಸಲು ರಾಷ್ಟ್ರಪತಿಗಳು ಮೂರು ವರ್ಷ ತೆಗೆದುಕೊಂಡಿದ್ದ ಕಾರಣದಿಂದ ಸುಪ್ರೀಂ ಕೋರ್ಟ್‌ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತು.

‘ಕ್ಷಮಾದಾನದ ಅರ್ಜಿ ಇತ್ಯರ್ಥಕ್ಕೆ ಕಾಲದ ಮಿತಿ ಹಾಕಬೇಕು’ ಎಂದು ಕೋರಿ ಮುಂಬೈನ ಲಷ್ಕರ್‌-ಎ-ಹಿಂದ್‌ ಎಂಬ ಸ್ವಯಂಸೇವಾ ಸಂಸ್ಥೆ 2008ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. 2006ರಲ್ಲಿ ಮರಣದಂಡನೆಗೆ ಒಳಗಾಗಿದ್ದ, ಸಂಸತ್‌ ಭವನದ ಮೇಲಿನ ದಾಳಿ ಪ್ರಕರಣದ ರೂವಾರಿ ಅಫ್ಜಲ್‌ ಗುರು, ರಾಷ್ಟ್ರಪತಿಗಳಿಗೆ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯ ಆದೇಶ 2010 ಮುಗಿದರೂ ಹೊರಬಿದ್ದಿರಲಿಲ್ಲ. ಹಾಗಾಗಿ ಈ ಅರ್ಜಿ ಸಲ್ಲಿಸಲಾಗಿತ್ತು.

ನಮ್ಮ ನಿಷ್ಪ್ರಯೋಜಕ ಎನಿಸಿರುವ 125ಕ್ಕೂ ಅಧಿಕ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ತೆಗೆದುಹಾಕಿದೆ. ಇದಿಷ್ಟೇ ಸಾಲದು. ಸ್ಪಷ್ಟತೆ ಇಲ್ಲದ ಕಾನೂನಿಗೆ  ಸ್ಪಷ್ಟ ರೂಪ ತಂದು ತಿದ್ದುಪಡಿ ಮಾಡಬೇಕಿದೆ. ಕ್ರೂರ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್‌ ಗಲ್ಲು ವಿಧಿಸಿದಾಗ ‘ಸಂತ್ರಸ್ತರಿಗೆ ಕೊನೆಗೂ ನ್ಯಾಯ ಸಿಕ್ಕಿತು’ ಎನ್ನುತ್ತೇವೆ. ಆದರೆ ಕಾನೂನಿನ ಲೋಪದಿಂದ ಗಲ್ಲಿನಿಂದ ಮುಕ್ತವಾದರೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT