ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗೆದದ್ದು ಬಹುದೊಡ್ಡ ಬೆಟ್ಟ... ಸಿಕ್ಕಿದ್ದೇನು?

Last Updated 13 ಮೇ 2017, 19:30 IST
ಅಕ್ಷರ ಗಾತ್ರ

ರ್ತು ಪರಿಸ್ಥಿತಿಯ ನಂತರ ಜನಿಸಿದ ತಲೆಮಾರಿನವರಿಗೆ 2016ರ ನವೆಂಬರ್ ಎಂಟನೆಯ ತಾರೀಕನ್ನು ಮರೆಯಲು ಖಂಡಿತ ಸಾಧ್ಯವಿಲ್ಲ. ಏಕೆ ಸಾಧ್ಯವಿಲ್ಲ ಎಂಬುದು ತೀರಾ ಸ್ಪಷ್ಟ.  ಅಂದು ಸಂಜೆಯ ಹೊತ್ತಿಗೆ, ‘ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ರಾತ್ರಿ 8 ಗಂಟೆಗೆ ಭಾಷಣ ಮಾಡಲಿದ್ದಾರೆ’ ಎಂಬ ಒಂದು ಸಾಲಿನ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಯಿತು. ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ತೀರ್ಮಾನವನ್ನು ದಿಢೀರ್‌ ಎಂದು ಕೈಗೊಂಡಿದ್ದು ಏಕೆ ಎಂಬುದು ಬಹುತೇಕರಿಗೆ ಗೊತ್ತಾಗಲಿಲ್ಲ. ಅಂತೂ ಎಂಟು ಗಂಟೆಯ ಸಮಯ ಬಂತು, ಪ್ರಧಾನಿಯವರ ಭಾಷಣ ಆರಂಭವಾಯಿತು.

ಅವರ ಭಾಷಣವು ಮಹತ್ವದ ಘೋಷಣೆಯೊಂದನ್ನು ಹೊರಡಿಸುವ ಉದ್ದೇಶ ಹೊಂದಿದೆ ಎಂಬುದೂ ಗೊತ್ತಾಯಿತು. ‘ನಿಮ್ಮ ಕಿಸೆಯಲ್ಲಿರುವ  500 ರೂಪಾಯಿ ಹಾಗೂ 1,000 ರೂಪಾಯಿ  ಮುಖಬೆಲೆಯ ನೋಟುಗಳು ಕಾಗದದ ತುಣುಕುಗಳು ಮಾತ್ರ’ ಎಂದು ಪ್ರಧಾನಿ ಪ್ರಕಟಿಸಿದರು! ಅವರು ಈ ಮಾತು ಆಡಿದ ಹೊತ್ತಿನಲ್ಲಿ ಭಾರತದಲ್ಲಿ ಚಲಾವಣೆಯಲ್ಲಿದ್ದ ಹಣದ ಶೇಕಡ 86ರಷ್ಟು ಮೊತ್ತ ₹ 500 ಹಾಗೂ ₹1,000 ಮುಖಬೆಲೆಯ ನೋಟುಗಳಿಂದ ಕೂಡಿತ್ತು. ಅಂದು ಮಧ್ಯರಾತ್ರಿಯ ನಂತರ ಅಷ್ಟೂ ನೋಟುಗಳು ‘ಕಾಗದದ ತುಂಡು’ಗಳಾಗಿ ಬದಲಾದವು. ಅರ್ಥಾತ್ ಮೌಲ್ಯ ಕಳೆದುಕೊಂಡವು. ‘ನ ಭೂತೋ’ ಎಂಬಂತಹ ಈ ತೀರ್ಮಾನದ ಪರಿಣಾಮಗಳೇನು? ಇದರಿಂದ ಜನಸಾಮಾನ್ಯ ಪಡೆದಿದ್ದೇನು, ಕಳೆದುಕೊಂಡಿದ್ದೇನು?

ಇಂತಹ ಪ್ರಶ್ನೆಗಳಿಗೆ ಒಬ್ಬ ಸಾಮಾನ್ಯ ನಾಗರಿಕನಾಗಿ ಉತ್ತರ ಹುಡುಕುವ ಯತ್ನ ಇಲ್ಲಿದೆ.

ನಕಲಿ ನೋಟುಗಳ ನಿವಾರಣೆ, ಕಾಳಧನ– ಭ್ರಷ್ಟಾಚಾರ ನಿಗ್ರಹ ಹಾಗೂ ಭಯೋತ್ಪಾದನೆಗೆ ಹಣಕಾಸಿನ ನೆರವು ಸಿಗದಂತೆ ಮಾಡುವುದು ಈ ತೀರ್ಮಾನದ ಹಿಂದಿರುವ ಉದ್ದೇಶ ಎಂಬುದನ್ನು ಪ್ರಧಾನಿಯವರೇ ಹೇಳಿದ್ದರು. ಇಂದಿರಾ ಗಾಂಧಿ ನಂತರದ ಅತ್ಯಂತ ವರ್ಚಸ್ವೀ ನಾಯಕ ಆಡಿದ ಮಾತುಗಳು ಅವಾಗಿದ್ದ ಕಾರಣ, ಅವುಗಳನ್ನು ನಂಬದಿರಲು ಕಾರಣಗಳಿರಲಿಲ್ಲ.

‘ಈ ತೀರ್ಮಾನದಿಂದ ಕೆಲವು ದಿನ ತೊಂದರೆ ಆಗಬಹುದು. ಆದರೆ ದೇಶಕ್ಕಾಗಿ ಇಷ್ಟು ಸಹಿಸಿಕೊಳ್ಳಿ’ ಎಂಬ ಅರ್ಥ ನೀಡುವ ಮಾತುಗಳನ್ನೂ ಪ್ರಧಾನಿ ಆಡಿದ್ದರು. ಇದನ್ನೂ ಜನ ನಂಬಿದರು. ಬಲಿಷ್ಠ ಪ್ರಧಾನಿಯೊಬ್ಬರು ಆಡಿದ ಮಾತುಗಳನ್ನು ನಂಬದಿರಲಾದೀತೇ?!

‘ದೇಶಕ್ಕೆ ಒಳಿತು ಮಾಡಲು’ ಪ್ರಧಾನಿ ಕೈಗೊಂಡ ತೀರ್ಮಾನಕ್ಕೆ ಜನರು ಬೆಂಬಲ ಸೂಚಿಸಿದರು. ಹಾಲು, ತರಕಾರಿ ಖರೀದಿಸಲು ಕಷ್ಟವಾದರೂ ಅಡ್ಡಿಯಿಲ್ಲ, ಕಾಳಧನದ ಪೀಡೆ ತೊಲಗಲಿ ಎಂಬ ಉದ್ದೇಶದಿಂದ ಸಹನೆಯಿಂದ ಬ್ಯಾಂಕ್‌ ಮುಂದೆ ಸರತಿ ಸಾಲಿನಲ್ಲಿ ನಿಂತರು. ಆದರೆ ಜನರ ಸಹನೆಯ ನಡುವೆಯೇ, ಅರ್ಥಶಾಸ್ತ್ರಜ್ಞರಿಂದ ಕಟು ಟೀಕೆಗಳು ವ್ಯಕ್ತವಾಗಲು ಆರಂಭವಾದವು.

‘ವಿಶ್ವಾಸದ ಮೇಲೆ ನಿಂತಿರುವ ಅರ್ಥವ್ಯವಸ್ಥೆಯ ಪಾಲಿಗೆ ನೋಟು ರದ್ದತಿ ಎಂಬುದು ವಿನಾಶಕಾರಿ. ದೇಶ ಇಪ್ಪತ್ತು ವರ್ಷಗಳಿಂದ ವೇಗವಾಗಿ ಬೆಳೆಯುತ್ತಿತ್ತು. ಈ ಬೆಳವಣಿಗೆ ನಿಂತಿದ್ದು ವಿಶ್ವಾಸದ ಮೇಲೆ. ಆದರೆ, ಸರ್ವಾಧಿಕಾರಿ ತೀರ್ಮಾನ ಕೈಗೊಂಡು, ಆರ್‌ಬಿಐ ಗವರ್ನರ್‌ ನೀಡಿದ್ದ ವಾಗ್ದಾನ ಉಳಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ವಿಶ್ವಾಸದ ಬೇರುಗಳಿಗೇ ಏಟು ನೀಡಲಾಗಿದೆ’ ಎಂದು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನವೆಂಬರ್ ಅಂತ್ಯದ ವೇಳೆಗೆ ಸರ್ಕಾರದ ಕ್ರಮವನ್ನು ಟೀಕಿಸಿದ್ದರು.

ಆರ್‌ಬಿಐ ಗವರ್ನರ್‌ ಕೂಡ ಆಗಿದ್ದ, ಪ್ರಧಾನಿಯಾಗಿ ದೇಶವನ್ನು ಎರಡು ಅವಧಿಗೆ ಮುನ್ನಡೆಸಿದ ಮನಮೋಹನ್‌ ಸಿಂಗ್‌ ಅವರು, ಸರ್ಕಾರದ ಕ್ರಮವನ್ನು ‘ಸಂಘಟಿತ ಲೂಟಿ, ಕಾನೂನುಬದ್ಧ ದರೋಡೆ’ ಎಂದಿದ್ದರು. ಸಿಂಗ್ ಅವರು ಇಷ್ಟು ಕಟುವಾಗಿ ಹಿಂದೆಂದೂ ಮಾತನಾಡಿರಲಿಕ್ಕಿಲ್ಲ. ಆದರೆ ಮುಂದೊಂದು ದಿನ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರನ್ನು ಸಂಸತ್ತಿನ ಸಮಿತಿಯೊಂದರ ಎದುರು ಮುಜುಗರಕ್ಕೆ ಒಳಗಾಗದಂತೆ ರಕ್ಷಿಸಿದವರೂ ಇದೇ ಮನಮೋಹನ್ ಸಿಂಗ್‌. ಅರ್ಥಶಾಸ್ತ್ರಜ್ಞನ ವಿವೇಕ ಇಲ್ಲಿ ಕೆಲಸ ಮಾಡಿತ್ತು.

ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ದೇಶದಲ್ಲಿ ನೋಟುಗಳನ್ನು ಮುದ್ರಿಸುವ, ಅವುಗಳನ್ನು ವಿತರಿಸುವ ಅಧಿಕಾರ ಇರುವುದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ. ನೋಟುಗಳಿಗೆ ಬೆಲೆ ನಿಗದಿಯಾಗುವುದು ಆರ್‌ಬಿಐ ಗವರ್ನರ್ ಅದರ ಮೇಲೆ ಮಾಡುವ ಸಹಿಯಿಂದ. ಆದರೆ, ನೋಟು ರದ್ದತಿಯಂತಹ ಅತಿ ಮಹತ್ವದ ತೀರ್ಮಾನ ಪ್ರಕಟಿಸಿದ್ದು ಪ್ರಧಾನಿ!

ನೋಟು ರದ್ದತಿ ಆಯಿತು, ಹಳೆಯ ನೋಟುಗಳು ಬೆಲೆ ಕಳೆದುಕೊಂಡವು. ಆದರೆ, ರದ್ದುಗೊಂಡ ನೋಟುಗಳ ಮೌಲ್ಯಕ್ಕೆ ಸರಿಸಮನಾದ ಹೊಸ ನೋಟುಗಳನ್ನು ಪೂರೈಸಲು ಆರ್‌ಬಿಐಗೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಎಟಿಎಂ ಹಾಗೂ ಬ್ಯಾಂಕ್‌ಗಳ ಎದುರು ಜನ ಪಡಿಪಾಟಲು ಅನುಭವಿಸಿದರು.

ಈ ಹಂತದಲ್ಲಿ ಮತ್ತೊಂದು ಮಾತು ಹೇಳಿದ ಪ್ರಧಾನಿ, ‘ನನಗೆ ಐವತ್ತು ದಿನಗಳ ಕಾಲಾವಕಾಶ ಕೊಡಿ. ನಿಮ್ಮ ಕನಸಿನ ಭಾರತವನ್ನು ನಿಮಗೆ ಕೊಡುವೆ’ ಎಂಬ ಭರವಸೆ ನೀಡಿದರು. ಐವತ್ತು ದಿನಗಳು ಕಳೆದಿವೆ. ಐವತ್ತು ದಿನಗಳೇನು, ಆರು ತಿಂಗಳೇ ಕಳೆದಿವೆ. ‘ಕನಸಿನ ಭಾರತ’ ಸಿಕ್ಕಿತೇ? ಇದು ತೀರಾ ದೊಡ್ಡ ಪ್ರಶ್ನೆಯಾಗಬಹುದು. ಹಾಗಾಗಿ, ನೋಟು ರದ್ದತಿಗೆ ಸಂಬಂಧಿಸಿದ ತೀರಾ ಸರಳ ಪ್ರಶ್ನೆಗಳನ್ನು ಮಾತ್ರ ಅವಲೋಕನಕ್ಕೆ ಎತ್ತಿಕೊಳ್ಳೋಣ.

ಮೊದಲನೆಯದು ಕಪ್ಪುಹಣಕ್ಕೆ ಸಂಬಂಧಿಸಿದ್ದು. ನೋಟು ರದ್ದತಿಗೂ ಮೊದಲು ಪ್ರಕಟವಾಗಿದ್ದ ವರದಿಗಳ ಅನ್ವಯ ನೋಟುಗಳ ರೂಪದಲ್ಲಿರುವ ಕಪ್ಪು ಹಣವು ಒಟ್ಟು ಕಪ್ಪು ಹಣದ ಶೇಕಡ 6ರಷ್ಟು ಮಾತ್ರ. ಹಾಗಾದರೆ, ನೋಟು ರದ್ದತಿಯ ನಂತರ ಪತ್ತೆಯಾದ ಕಪ್ಪುಹಣದ ಮೊತ್ತ ಎಷ್ಟು? ಇದಕ್ಕೆ ಸ್ಪಷ್ಟ ಉತ್ತರ ಸರ್ಕಾರದ ಕಡೆಯಿಂದ ಅಥವಾ ಆರ್‌ಬಿಐ ಕಡೆಯಿಂದ ಇದುವರೆಗೆ ಬಂದಿಲ್ಲ.

‘ಆದಾಯ ಮತ್ತು ಸಂಪತ್ತಿನ ನಡುವೆ ವ್ಯತ್ಯಾಸ ಕಂಡುಬಂದ ಪ್ರಕರಣಗಳಲ್ಲಿ ನೋಟಿಸ್ ಜಾರಿಗೊಳಿಸುವ ಪ್ರಕ್ರಿಯೆ ಮುಗಿದು, ಅದಕ್ಕೆ ಸಂಬಂಧಪಟ್ಟವರಿಂದ ಉತ್ತರ ಪಡೆದು, ಅವರ ಆದಾಯ ಹಾಗೂ ಸಂಪತ್ತಿನ ನಡುವೆ ತಾಳೆ ಆಗದಿದ್ದರೆ ಮಾತ್ರ, ತಾಳೆಯಾಗದ ಸಂಪತ್ತನ್ನು ಕಪ್ಪುಹಣ ಎಂದು ಘೋಷಿಸಬಹುದು. ಅಲ್ಲಿಯವರೆಗೆ ಜನ ತಾಳ್ಮೆಯಿಂದ ಕಾಯಬೇಕು’ ಎಂದು ಅಧಿಕಾರಿಗಳು ಉತ್ತರ ನೀಡಬಹುದು. ಆದರೆ, ರದ್ದುಗೊಂಡ ನೋಟುಗಳ ಒಟ್ಟು ಅಂದಾಜು ಮೌಲ್ಯ ₹ 15.44 ಲಕ್ಷ ಕೋಟಿ. ಇದರಲ್ಲಿ ಬ್ಯಾಂಕುಗಳಿಗೆ ಹಿಂದಿರುಗಿದ ಹಾಗೂ  ಬ್ಯಾಂಕುಗಳ ಮೂಲಕ ವಿನಿಮಯ ಆದ ನೋಟುಗಳ ಒಟ್ಟು ಮೌಲ್ಯ ಎಷ್ಟು ಎಂಬ ಪ್ರಶ್ನೆಗೂ ನಿಖರ ಉತ್ತರ ದೊರೆತಿಲ್ಲ.

ದೇಶದಲ್ಲಿ ನಕಲಿ ನೋಟುಗಳ ಹಾವಳಿ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಿದೆ. ನಕಲಿ ನೋಟುಗಳನ್ನು ಇಲ್ಲವಾಗಿಸುವ ಉದ್ದೇಶವನ್ನೂ ಹೊಂದಿದ್ದ ನೋಟು ರದ್ದತಿ ತೀರ್ಮಾನದಿಂದ ಪತ್ತೆಯಾದ ಖೋಟಾ ನೋಟುಗಳ ಸಂಖ್ಯೆ ಅಥವಾ ಪ್ರಮಾಣ ಎಷ್ಟು ಎಂಬ ಪ್ರಶ್ನೆಗೆ ಪ್ರಭುತ್ವ ಉತ್ತರ ನೀಡುವ ಗೋಜಿಗೇ ಹೋಗಿಲ್ಲ. ಇದು ಎರಡನೆಯ ವಿಚಾರವಾಯಿತು.

ಮೂರನೆಯ ವಿಚಾರ ಬಹಳ ಮಹತ್ವದ್ದು. ಇದು ಭಯೋತ್ಪಾದನೆ ದಮನಕ್ಕೆ ಸಂಬಂಧಿಸಿದ್ದು. ನೋಟು ರದ್ದತಿ ನಂತರ ಭಯೋತ್ಪಾದಕರಿಗೆ, ನಕ್ಸಲೀಯರಿಗೆ ಹಣಕಾಸಿನ ಹರಿವು ನಿಂತಿತೇ? ಈ ಬಗ್ಗೆಯೂ ಸರ್ಕಾರ ಸಾರ್ವಜನಿಕವಾಗಿ ಅಥವಾ ಸಂಸತ್ತಿನಲ್ಲಿ ಉತ್ತರ ನೀಡಿಲ್ಲ.

ಆದರೆ, ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಹಾಗೂ ನಕ್ಸಲೀಯರು ಕೇಂದ್ರ ಮೀಸಲು ಪೊಲೀಸ್ ಪಡೆಯ ಯೋಧರನ್ನು ಈಚೆಗೆ ಹತ್ಯೆ ಮಾಡಿದ ಪರಿ ಗಮನಿಸಿದರೆ, ಅವರ ಶಕ್ತಿ ಕುಂದಿದಂತೆ ಕಾಣುತ್ತಿಲ್ಲ.

ನೋಟು ರದ್ದತಿಯ ನಂತರ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡವು. ಇದನ್ನು ಸರ್ಕಾರವೂ ಅಲ್ಲಗಳೆಯಲಿಲ್ಲ. ‘ಅರ್ಥ ವ್ಯವಸ್ಥೆ ತಾತ್ಕಾಲಿಕವಾಗಿ ಒಮ್ಮೆ ಕುಗ್ಗಿದರೂ ಮುಂದೆ ಒಳ್ಳೆಯದಾಗಲಿದೆ’ ಎಂಬ ಅರ್ಥದಲ್ಲಿ ಕೇಂದ್ರ ಹೇಳಿತು. ಆದರೆ, ಇಲ್ಲಿ ಒಂದು ಸೂಕ್ಷ್ಮ ಇರುವುದನ್ನು ಗಮನಿಸಬೇಕು. ನೋಟು ರದ್ದತಿಯ ತೀರ್ಮಾನ ಕೈಗೊಳ್ಳುವ ಮೊದಲು ಆರ್‌ಬಿಐ ಅದರ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಿತ್ತೇ ಎಂಬ ಪ್ರಶ್ನೆಯನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿ ಕೇಳಲಾಗಿತ್ತು. ಈ ಪ್ರಶ್ನೆಗೆ ಆರ್‌ಬಿಐ ಉತ್ತರಿಸಿಲ್ಲ.

ಇವೆಲ್ಲ ಆಡಳಿತಾತ್ಮಕ ವಿಚಾರಗಳಾದವು. ಆದರೆ, ನೋಟು ರದ್ದತಿಯ ಮೂಲಕ ಕೇಂದ್ರ ಸರ್ಕಾರವು ನಗದುರಹಿತ ಅರ್ಥ ವ್ಯವಸ್ಥೆಯತ್ತ ದೇಶವನ್ನು ಕೊಂಡೊಯ್ಯುವ ಯತ್ನ ನಡೆಸಿದಂತೆ ಕಂಡುಬಂತು. ಜನ ಇದನ್ನು ಒಂದಿಷ್ಟು ಬೆರಗಿನಿಂದ ನೋಡಿದರು. ಕೆಲವರು ಇದನ್ನು ಅಳವಡಿಸಿಕೊಳ್ಳಲು ಮುಂದಾದರು. ಮೊಬೈಲ್‌ ವಾಲೆಟ್‌ಗಳ, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಯಿತು. ಆದರೆ, ನೋಟುಗಳ ಮೂಲಕ ಇಬ್ಬರು ವ್ಯಕ್ತಿಗಳ ನಡುವೆ ಆಗುತ್ತಿದ್ದ ಹಣಕಾಸಿನ ವಹಿವಾಟಿಗೆ ಮೊಬೈಲ್‌ ವಾಲೆಟ್‌ಗಳು ಎಂಬ ಮಧ್ಯವರ್ತಿಗಳ ಅವಶ್ಯಕತೆ ಏಕೆ ಎಂಬ ಪ್ರಶ್ನೆ ಮುನ್ನೆಲೆಗೆ ಬರಲಿಲ್ಲ.

ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಸಾವಿರ ರೂಪಾಯಿ ಕೊಡಬೇಕು ಎಂದಿಟ್ಟುಕೊಳ್ಳಿ. ಆತ ಅದನ್ನು ನೋಟಿನ ರೂಪದಲ್ಲಿ ನೇರವಾಗಿ ಕೊಡಬಹುದು. ಅದನ್ನೇ ಆತ ವಾಲೆಟ್‌ಗಳ ಮೂಲಕ ಮಾಡಬೇಕು ಎಂದಾದರೆ, ಕೊಡಬೇಕಾದ ವ್ಯಕ್ತಿ ಮೊದಲು ತನ್ನ ಖಾತೆಯಿಂದ ಸಾವಿರ ರೂಪಾಯಿಯನ್ನು ವಾಲೆಟ್‌ಗೆ ಭರ್ತಿ ಮಾಡಬೇಕು. ನಂತರ ಆ ಮೊತ್ತವನ್ನು ಪಡೆಯಬೇಕಿರುವ ವ್ಯಕ್ತಿಯ ವಾಲೆಟ್‌ಗೆ ವರ್ಗಾಯಿಸಬೇಕು. ಪಡೆದುಕೊಂಡ ವ್ಯಕ್ತಿ ಅದನ್ನು ವಾಲೆಟ್‌ನಿಂದ ಖಾತೆಗೆ ವರ್ಗಾಯಿಸಿಕೊಳ್ಳಬೇಕು. ಈ ಪ್ರಕ್ರಿಯೆಗಳಲ್ಲಿ ಒಂದಿಷ್ಟು ಮೊತ್ತ ವಾಲೆಟ್‌ ಕಂಪೆನಿಗೆ ಕಮಿಷನ್ ರೂಪದಲ್ಲಿ ಪಾವತಿಯಾಗುತ್ತದೆ- ಈ ಮೊತ್ತವನ್ನು ಬಳಕೆದಾರನೇ ಭರಿಸಬೇಕು. ಇದರ ಬದಲು, ನೋಟು ರದ್ದತಿಗೆ ಮೊದಲೇ ಯುಪಿಐ (Unified Payment Interface) ವ್ಯವಸ್ಥೆಯನ್ನು ಬಲಗೊಳಿಸಿದ್ದಿದ್ದರೆ, ಈ ಪ್ರಮೇಯ ಇರುತ್ತಿರಲಿಲ್ಲ. ಇಲ್ಲಿ ಹಣದ ವರ್ಗಾವಣೆ ಖಾತೆಯಿಂದ ಖಾತೆಗೆ ನೇರವಾಗಿ ಆಗುತ್ತದೆ. ಮಧ್ಯವರ್ತಿ ವಾಲೆಟ್‌ಗಳ ಅವಶ್ಯಕತೆ ಇಲ್ಲ. ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ), ಯುಪಿಐ ಆಧಾರದಲ್ಲಿ ಕೆಲಸ ಮಾಡುವ ‘ಭೀಮ್’ ಆ್ಯಪ್‌ ಬಿಡುಗಡೆ ಮಾಡಿದ್ದು ಡಿಸೆಂಬರ್ ಅಂತ್ಯಕ್ಕೆ. ಅಷ್ಟೇ ಅಲ್ಲ, ದೇಶದ ಎಲ್ಲ ಬ್ಯಾಂಕ್‌ಗಳು ಇಂದಿಗೂ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಂಡಿಲ್ಲ.

ನಗದುರಹಿತ ವಹಿವಾಟಿನ ಪರ ವಾದಿಸುವವರು ‘ಜ್ಯಾಮ್‌’ ಬಗ್ಗೆ ಮತ್ತೆ ಮತ್ತೆ ಹೇಳುತ್ತಿರುತ್ತಾರೆ. ಜ್ಯಾಮ್‌ (JAM) ಅಂದರೆ ಜನಧನ ಖಾತೆ, ಆಧಾರ್‌ ಸಂಖ್ಯೆ ಹಾಗೂ ಮೊಬೈಲ್‌ ಸಂಖ್ಯೆ. ಜನಧನ ಖಾತೆ ಜೊತೆ ಆಧಾರ್‌ ಹಾಗೂ ಮೊಬೈಲ್‌ ಸಂಖ್ಯೆ ಜೋಡಣೆ ಆಗಿದ್ದರೆ, ಬಡವರೂ ನಗದುರಹಿತ ವಹಿವಾಟು ನಡೆಸಲು ಅಡ್ಡಿಯಿಲ್ಲ ಎಂಬ ವಾದವಿದೆ. ಆದರೆ, ಯುಪಿಐ ಆಧಾರಿತ ‘ಭೀಮ್‌’ ಆ್ಯಪ್‌, ಮುಂದೆ ಬರಲಿರುವ ಆಧಾರ್‌ ಆಧಾರಿತ ಹಣ ಪಾವತಿ ವ್ಯವಸ್ಥೆಗೆ ಇಂಟರ್ನೆಟ್ ಸಂಪರ್ಕ ಬೇಕು. ಮೊಬೈಲ್‌ ಸಿಗ್ನಲ್‌ಗಳೇ ಸರಿಯಾಗಿ ಸಿಗದ ಹಳ್ಳಿಗಳಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯಿದೆ. ಅಂದರೆ, ಇಂತಹ ಪ್ರದೇಶಗಳಲ್ಲಿ ನಗದು ಹಣದ ಪೂರೈಕೆ ಪೂರ್ಣ ಪ್ರಮಾಣದಲ್ಲಿ ಇರಲೇಬೇಕು. ಇಲ್ಲವಾದರೆ, ಆ ಪ್ರದೇಶದ ಆರ್ಥಿಕ ಚಟುವಟಿಕೆಗಳು ದುರ್ಬಲವಾಗುತ್ತವೆ.

ರಿಯಲ್‌ ಎಸ್ಟೇಟ್‌ ವಹಿವಾಟಿನಲ್ಲಿ ಕಾಳಧನದ್ದೇ ಕಾರುಬಾರು ಎಂಬ ಮಾತಿದೆ. ನೋಟು ರದ್ದತಿಯಿಂದ ನಿವೇಶನ ಬೆಲೆಗಳಲ್ಲಿ ಭಾರಿ ಇಳಿಕೆ ಆಗಬಹುದು ಎಂದು ತಲೆಯ ಮೇಲೊಂದು ಸೂರು ಹೊಂದುವ ಆಕಾಂಕ್ಷೆಯುಳ್ಳ ಅನೇಕರು ನಿರೀಕ್ಷಿಸಿದ್ದರು. ನಿರೀಕ್ಷೆಯೇನು, ನೋಟು ರದ್ದತಿಯ ಬಳಿಕ ಈ ಉದ್ಯಮ ಬೋರಲು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ನಿವೇಶನ ಮತ್ತು ಫ್ಲ್ಯಾಟ್‌ಗಳ ಬೆಲೆಯಲ್ಲಿ ಇದರ ಪರಿಣಾಮ ಗಣನೀಯ ಎನ್ನುವ ರೀತಿಯಲ್ಲಿ ಆದಂತಿಲ್ಲ.

ನೋಟು ರದ್ದತಿಯ ಹಿಂದೆ ಸರ್ಕಾರದ ನಿಜವಾದ ಉದ್ದೇಶ ಏನಿದ್ದಿತೋ ಏನೋ! ಆದರೆ, ಜನಸಾಮಾನ್ಯರ ಮನಸ್ಸಿನಲ್ಲಿ ಆಶಾಗೋಪುರಗಳು ಸೃಷ್ಟಿಯಾಗಿದ್ದವು. ಕಾಳಧನಿಕರ ಸೊಕ್ಕು ಅಡಗುತ್ತದೆ. ‘ಕನಸಿನ ಭಾರತ’ ಉದಯಿಸುತ್ತದೆ ಎಂದೆಲ್ಲ ಭಾವಿಸಿದ್ದರು.

ಆದರೆ, 2016ರ ನವೆಂಬರ್‌ 7ರಂದು ಭಾರತ ಹೇಗಿತ್ತೋ ಈಗಲೂ ಹೆಚ್ಚುಕಡಿಮೆ ಅದೇ ರೀತಿ ಇದೆ. ಇದರ ನಡುವೆ 2016–17ನೇ ಹಣಕಾಸು ವರ್ಷದಲ್ಲಿ 91 ಲಕ್ಷ ಜನ ಆದಾಯ ತೆರಿಗೆ ವ್ಯಾಪ್ತಿಗೆ ಹೊಸದಾಗಿ ಒಳಪಟ್ಟಿದ್ದಾರೆ ಎಂಬ ವರದಿ ಇಲ್ಲಿ ಉಲ್ಲೇಖಾರ್ಹ. ಇದಕ್ಕೆ ನೋಟು ರದ್ದತಿ ಮಾತ್ರವೇ ಕಾರಣ ಆಗಿರಲಾರದು.

ನೋಟು ರದ್ದತಿ ಆಗಿಹೋಗಿದೆ. ಪ್ರಶ್ನೆಗಳು ಉಳಿದುಕೊಂಡಿವೆ. ಕೇಂದ್ರದಲ್ಲಿ ಈಗ ಆಡಳಿತ ನಡೆಸುತ್ತಿರುವ ಪಕ್ಷ ತನ್ನ ಸಾಧನೆಗಳನ್ನು ಹೇಳಿಕೊಳ್ಳಲು ಎಂದೂ ಹಿಂಜರಿದ ನಿದರ್ಶನ ಇಲ್ಲ. ನೋಟು ರದ್ದತಿಯಿಂದ ದೇಶಕ್ಕೆ ತಾವು ಅಂದುಕೊಂಡಂತೆ ಪ್ರಯೋಜನ ಆಗಿದ್ದಿದ್ದರೆ ಇಷ್ಟು ಹೊತ್ತಿಗೆ ಆ ಪಕ್ಷದವರು ಅದನ್ನು ಖಂಡಿತ ಹೇಳುತ್ತಿದ್ದರು. ಅವರ ಮೌನವೇ ಶಂಕೆಗಳಿಗೆ ಕಾರಣವಾಗಿದೆ. ಶಂಕೆ ನಿವಾರಿಸುವ ಮತ್ತು ಉತ್ತರ ಕೊಡುವ ಹೊಣೆ ಸರ್ಕಾರ ಹಾಗೂ ಆರ್‌ಬಿಐ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT