ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಶರಣಾದ ನೈಟ್‌ರೈಡರ್ಸ್‌

Last Updated 13 ಮೇ 2017, 20:01 IST
ಅಕ್ಷರ ಗಾತ್ರ

ಕೋಲ್ಕತ್ತ: ಪ್ರಮುಖ ಆಟ ಗಾರರಿಗೆ ವಿಶ್ರಾಂತಿ ನೀಡಿದರೂ ಆತ್ಮ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡ ಗೆಲುವಿನ ನಗೆ ಸೂಸಿತು. ಕೊಲ್ಕತ್ತ ನೈಟ್‌ರೈಡರ್ಸ್‌ನ ಜಯದ ಆಸೆಗೆ ಇದರಿಂದ ಭಂಗ ಉಂಟಾಯಿತು.

ಈಡನ್ ಗಾರ್ಡನ್ಸ್ ಅಂಗಳದಲ್ಲಿ ಶನಿವಾರ ನಡೆದ ಐಪಿಎಲ್ ಹತ್ತನೇ ಆವೃತ್ತಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ 9 ರನ್‌ಗಳ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್‌ ಪಾಯಿಂಟ್ಸ್‌ ಪಟ್ಟಿಯ ಅಗ್ರಸ್ಥಾನ ಉಳಿಸಿಕೊಂಡಿತು. 

ಆರಂಭಿಕ ಬ್ಯಾಟ್ಸ್‌ಮನ್‌ ಸೌರಭ್‌ ತಿವಾರಿ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಂಬಟಿ ರಾಯುಡು ಅವರ ಅರ್ಧಶತಕಗಳ ಬಲ, ಕನ್ನಡಿಗ ವಿನಯ್‌ಕುಮಾರ್‌ ಸೇರಿದಂತೆ ವೇಗಿಗಳ ಪರಿಣಾಮಕಾರಿ ಬೌಲಿಂಗ್‌ ದಾಳಿ ಇಂಡಿಯನ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. 

174 ರನ್‌ಗಳ ಗುರಿ ಬೆನ್ನಟ್ಟಿದ ನೈಟ್‌ ರೈಡರ್ಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಸುನಿಲ್ ನಾರಾಯಣ್‌ ಅವರ ವಿಕೆಟ್ ಅನ್ನು ಮೊದಲ ಓವರ್‌ನಲ್ಲೇ ಕಳೆದು ಕೊಂಡಿತು. ಕ್ರಿಸ್ ಲಿನ್‌ ಮತ್ತು ನಾಯಕ ಗೌತಮ್ ಗಂಭೀರ್ ಎರಡನೇ ವಿಕೆಟ್‌ಗೆ 41 ರನ್‌ ಸೇರಿಸಿ ತಂಡವನ್ನು ಕಾಪಾ ಡಲು ಶ್ರಮಿಸಿದರು. ಐದನೇ ಓವರ್‌ನಲ್ಲಿ ಗಂಭೀರ್‌ ಔಟಾದಾಗ ತಂಡ ಸಂಕಷ್ಟಕ್ಕೆ ಸಿಲುಕಿತು. ನಂತರದ ಎರಡು ಓವರ್‌ಗಳಲ್ಲಿ ರಾಬಿನ್ ಉತ್ತಪ್ಪ ಮತ್ತು ಕ್ರಿಸ್ ಲಿನ್‌ ಅವರ ವಿಕೆಟ್ ಕಬಳಿಸಿದ ಇಂಡಿಯನ್ಸ್ ಬೌಲರ್‌ಗಳು ಕೇಕೆ ಹಾಕಿದರು.

ಈ ಸಂದರ್ಭದಲ್ಲಿ ಮನೀಷ್‌ ಪಾಂಡೆ ಮತ್ತು ಯೂಸುಫ್ ಪಠಾಣ್‌ ವೇಗವಾಗಿ ರನ್ ಗಳಿಸಿ ತಂಡವನ್ನು ಮೂರಂಕಿ ಸಮೀಪ ಕೊಂಡೊಯ್ದರು. ಆದರೆ ಪಟ್ಟು ಬಿಡದ ಬೌಲರ್‌ಗಳು ರನ್‌ ಗಳಿಕೆಗೆ ಕಡಿ ವಾಣ ಹಾಕುವುದರ ಜೊತೆಯಲ್ಲಿ ವಿಕೆಟ್‌ ಗಳನ್ನು ಕಬಳಿಸುತ್ತ ಸಾಗಿದರು. ಕೊನೆಯ ಓವರ್‌ಗಳಲ್ಲಿ ಪಂದ್ಯದ ಮೇಲೆ ಹಿಡಿತ ಬಿಗಿ ಮಾಡಿ ಗೆಲುವು ಸಾಧಿಸಿದರು.

ತಿವಾರಿ, ರಾಯುಡು ಅಮೋಘ ಬ್ಯಾಟಿಂಗ್‌: ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ಇನಿಂಗ್ಸ್‌ಗೆ ಅರಂಭಿಕ ಬ್ಯಾಟ್ಸ್‌ಮನ್‌ ಮನೋಜ್‌ ತಿವಾರಿ ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಅಂಬಟಿ ರಾಯುಡು ಬಲ ತುಂಬಿದರು. ಅಮೋಘ ಬ್ಯಾಟಿಂಗ್ ಮಾಡಿದ ಇವರಿಬ್ಬರು ಕ್ರಮವಾಗಿ 52 ಮತ್ತು 63 ರನ್ ಸಿಡಿಸಿ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾದರು.

ಆರಂಭಿಕ ಜೊತೆಗಾರ ಲೆಂಡ್ಲ್‌ ಸಿಮನ್ಸ್ ಶೂನ್ಯಕ್ಕೆ ಔಟಾದರೂ ಎದೆ ಗುಂದದೆ ಬ್ಯಾಟ್ ಬೀಸಿದ ತಿವಾರಿ 43 ಎಸೆತಗಳಲ್ಲಿ 52 ರನ್ ಸಿಡಿಸಿದರು. ಅವರ ಬ್ಯಾಟ್‌ನಿಂದ 9 ಬೌಂಡರಿಗಳು ಸಿಡಿದವು. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಎರಡನೇ ವಿಕೆಟ್‌ಗೆ 57 ರನ್ ಜೋಡಿಸಿದರು. ರೋಹಿತ್‌ ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಲಿಲ್ಲ. 21 ಎಸೆತಗಳಲ್ಲಿ ಅವರು ಗಳಿಸಿದ್ದು ಕೇವಲ 27 ರನ್ ಮಾತ್ರ. ಅವರು ಔಟಾದ ನಂತರ ಅಂಬಟಿ ರಾಯುಡು ರನ್ ಗಳಿಕೆಯ ವೇಗ ಹೆಚ್ಚಿಸಿದರು. ತಿವಾರಿ ಮತ್ತು ರಾಯುಡು ಮೂರನೇ ವಿಕೆಟ್‌ಗೆ 61 ರನ್ ಸೇರಿಸಿ ತಂಡವನ್ನು 150ರ ಸನಿಹ ತಲುಪಿಸಿದರು. 37 ಎಸೆತಗಳಲ್ಲಿ 63 ರನ್‌ ಗಳಿಸಿದ ರಾಯುಡು 3 ಸಿಕ್ಸರ್‌ ಮತ್ತು 6 ಬೌಂಡರಿಯೊಂದಿಗೆ ಮಿಂಚಿದರು.

ಪಾಯಿಂಟ್ಸ್‌ ಪಟ್ಟಿಯಲ್ಲಿ ಸುಲಭ ವಾಗಿ ಎರಡನೇ ಸ್ಥಾನಕ್ಕೆ ಏರುವ ನೈಟ್‌ ರೈಡರ್ಸ್ ಕನಸಿಗೆ ಈ ಸೋಲಿನೊಂದಿಗೆ ಪೆಟ್ಟು ಬಿತ್ತು.

ಸಂಕ್ಷಿಪ್ತ ಸ್ಕೋರ್‌

ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ ಗಳಿಗೆ 173 (ಸೌರಭ್‌ ತಿವಾರಿ 52, ರೋಹಿತ್ ಶರ್ಮಾ 27, ಅಂಬಟಿ ರಾಯುಡು 63; ಟ್ರೆಂಟ್‌ ಬೌಲ್ಟ್‌ 30ಕ್ಕೆ2); 

ಕೋಲ್ಕತ್ತ ನೈಟ್‌ ರೈಡರ್ಸ್‌: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 164 (ಕ್ರಿಸ್ ಲಿನ್‌ 26, ಗೌತಮ್‌ ಗಂಭೀರ್ 21, ಮನೀಷ್‌ ಪಾಂಡೆ 33, ಯೂಸುಫ್ ಪಠಾಣ್‌ 20, ಕಾಲಿನ್ ಡಿ ಗ್ರ್ಯಾಂಡ್‌ ಹೋಮ್‌  29; ಟಿಮ್‌ ಸೌಥಿ 39ಕ್ಕೆ2, ಆರ್‌.ವಿನಯ್‌ ಕುಮಾರ್‌ 31ಕ್ಕೆ2, ಹಾರ್ದಿಕ್ ಪಾಂಡ್ಯ 22ಕ್ಕೆ2).

ಫಲಿತಾಂಶ:  ಮುಂಬೈ ಇಂಡಿಯನ್ಸ್‌ಗೆ 9 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT