ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ಮಕ್ಕಳ ಬಯಲಾಟ

Last Updated 17 ಮೇ 2017, 19:30 IST
ಅಕ್ಷರ ಗಾತ್ರ
ಪಿ. ಅಬ್ದುಲ್‌/ಸಹನಾ ಪಿ.
ಭಳಿರೇ ಎಲಾ ಸಾರಥಿ, ಶಕ್ರಾದ್ಯಖಿಳನ್ನುಪಕ್ರಮಿಸಿ ಮಿಕ್ಕಿಮೀರಿರುವ ಅತಿವಿಕ್ರಮರಿರುವ ಚಕ್ರಬಿಂಬದ ವಿಸ್ತಾರಮಂ ನೋಡಿದೆಯಾ...’ 
ಅಭಿಮನ್ಯುವಿನ ಪಾತ್ರಧಾರಿಯಾಗಿದ್ದ ಎಸ್‌.ಕಾರ್ತಿಕ್‌ ಒಂದಿನಿತೂ ತಡವರಿಸದೆ, ಅಸ್ಖಲಿತವಾಗಿ, ಬಲು ವೀರಾವೇಶದಿಂದ, ಶೂರನಿಗೆ ತಕ್ಕ ಗತ್ತಿನಲ್ಲಿ ಈ ಮಾತು ಹೇಳುವಾಗ ಆನಂದಭಾಷ್ಪ ತಡೆಹಿಡಿಯುವ ಸ್ಥಿತಿಯಲ್ಲಿ ನಾವಿರಲಿಲ್ಲ.
 
ಭಾಗವತಿಕೆಯಲ್ಲಿ ತೊಡಗಿದ್ದ ಎಚ್‌.ತಿಪ್ಪೇಸ್ವಾಮಿ ಅವರತ್ತ ಹೊರಳಿ ನೋಡಿದರೆ ಅವರ ಕಣ್ಣುಗಳೂ ಆ ಕ್ಷಣದಲ್ಲಿ ತುಂಬಿಕೊಂಡು ಹೊಳೆಯುತ್ತಿದ್ದವು. ಎರಡು ತಿಂಗಳುಗಳ ತಪಸ್ಸು ಫಲ ನೀಡಿತು ಎಂಬುದನ್ನು ಅಲ್ಲಿ ಜಿನುಗುತ್ತಿದ್ದ ಹರ್ಷದ ಧಾರೆಯೇ ಸಾರಿ ಸಾರಿ ಹೇಳುತ್ತಿತ್ತು.
****
ಹೊಸಪೇಟೆಯ ಕೊಳೆಗೇರಿ ಮಕ್ಕಳನ್ನು ಸಾಂಸ್ಕೃತಿಕವಾಗಿ ಬೆಳೆಸಲು ಆಗಾಗ ಏನಾದರೂ ಕಾರ್ಯಕ್ರಮ ಮಾಡಬೇಕೆನ್ನುವುದು ನಮ್ಮ ಉಮೇದು. ಈ ಸಲದ ಕಲಿಕೆ ಏನಿರಬೇಕು ಎಂಬ ಯೋಚನೆಯಲ್ಲಿ ಮುಳುಗಿದ್ದಾಗ ಹೊಳೆದದ್ದು ಬಯಲಾಟ.
 
ಹಳೆಗನ್ನಡದ ಪುಟ್ಟ ಕಾವ್ಯವೊಂದರ ಕೆಲವು ಸಾಲುಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲು ಶಾಲೆಗಳಲ್ಲಿ ಮೇಷ್ಟ್ರುಗಳು ಒದ್ದಾಡುವುದು ಮಾಮೂಲಿ. ಆದರೆ, ಬಯಲಾಟದ ಪರಂಪರೆ ಉಳಿಸಿಕೊಂಡು ಬಂದ ಕಲಾವಿದರು ಯಾವುದೇ ಶಾಲೆಯ ಮೆಟ್ಟಿಲು ಏರದಿದ್ದರೂ ನಾಲಿಗೆ ಹೊರಳಲು ಒಲ್ಲೆನೆಂದು ಹಟ ಹಿಡಿದರೂ ಎಂತಹ ಕ್ಲಿಷ್ಟ ಸಾಲುಗಳನ್ನು ಕೂಡ ಸುಲಲಿತವಾಗಿ ಹಾಡುವುದು ಸೋಜಿಗವಲ್ಲವೆ?
 
 
ಹಳೆಗನ್ನಡದ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡುವ ಜತೆಗೆ ಬಯಲಾಟದ ಉಳಿವಿಗೂ ಸಣ್ಣ ಕಾಣಿಕೆ ನೀಡಬಹುದಲ್ಲ ಎಂಬ ಉದ್ದೇಶದಿಂದ ಈ ಸಾಂಪ್ರದಾಯಿಕ ಕಲೆಯನ್ನೇ ಕಲಿಸಲು ನಿರ್ಧಾರ ಮಾಡಿದ್ದಾಯಿತು. ಕೊಳೆಗೇರಿ ಮಕ್ಕಳು ಸ್ವಭಾವತಃ ತುಸು ಒರಟು. ಆದರೆ, ಪ್ರತಿಭೆಯ ವಿಷಯಕ್ಕೆ ಬಂದರೆ ಅವರೆಲ್ಲ ಪುಟಕ್ಕಿಟ್ಟ ಚಿನ್ನ.
 
‘ಏನ್ರಯ್ಯಾ, ಬಯಲಾಟ ಆಡಾಣಾ’ ಎಂದರೆ ಬಹುತೇಕ ಮಕ್ಕಳು ಮೂಗು ಮುರಿದುಬಿಟ್ಟರು. ಹೆಜ್ಜೆ ಹಾಕೋದು, ಹಳೆಗನ್ನಡ ಪದ್ಯ ಹೇಳೋದು ಅವರಿಗೆ ಖುಷಿ ಕೊಡುವ ಕೆಲಸ ಆಗಿರಲಿಲ್ಲ. ಸಿಕ್ಕ ಪ್ರತಿಕ್ರಿಯೆ ನೋಡಿ, ಅಯ್ಯೋ ನಾವು ತಪ್ಪು ಮಾಡಿಬಿಟ್ಟೆವಲ್ಲ ಎಂದೆನಿಸದೆ ಇರಲಿಲ್ಲ.
 
ನಿರ್ಧಾರ ಮಾಡಿದ್ದಾಗಿದೆ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದುಕೊಂಡು ಹುಂಬತನದಿಂದ ಮುಂದಡಿ ಇಟ್ಟಿದ್ದಾಯಿತು. ಆದರೆ, ಬಯಲಾಟ ಆಡಲು ಬೇಕಾದ 20 ಪಾತ್ರಧಾರಿಗಳನ್ನೂ ಹೊಂದಿಸುವುದು ಕಷ್ಟವಾಯಿತು. ತಕ್ಕಡಿಯಲ್ಲಿ ಕಪ್ಪೆ ಇಟ್ಟು ತೂಗಿದಂತಿತ್ತು ಆಗಿನ ಸನ್ನಿವೇಶ. ಅತ್ತ ಕಡೆಯಿಂದ ಇಬ್ಬರನ್ನು ಹೊಂದಿಸಿಕೊಂಡು ಬರುವಷ್ಟರಲ್ಲಿ ಇತ್ತ ಇಬ್ಬರು ನಾಪತ್ತೆ! ಆದರೆ, ‘ತಜ್ಜಂ ತಜಂ ತ ತಕಧಿಮಿ ತಕಝಣ...’ ಗೆಜ್ಜೆನಾದ ಶುರುವಾಯಿತು ನೋಡಿ, ತಾಲೀಮಿನ ಬಿಡಾರದತ್ತ ನೂರಾರು ಮಕ್ಕಳು ದೌಡಾಯಿಸಿ ಬಂದರು.
 
ಅಭಿಮನ್ಯು ಕೂಡ ಬಾಲಕನೇ ಆಗಿದ್ದರಿಂದ ಮಕ್ಕಳಿಂದ ‘ವೀರ ಅಭಿಮನ್ಯು ಕಾಳಗ’ ಪ್ರಸಂಗವನ್ನೇ ಆಡಿಸುವುದು ಉಚಿತವೆಂದು ಒಮ್ಮತದ ನಿರ್ಣಯವಾಗಿತ್ತು. ಅಬ್ಬಬ್ಬಾ, ಸಿಡಗಿನಮೊಳ ಬಳೆಸಿದ್ದಪ್ಪ ಅವರು ರಚಿಸಿರುವ ಈ ಬಯಲಾಟದ ಸಂಭಾಷಣೆಗಳು ಅದೆಷ್ಟೊಂದು ಸೊಗಸು! ಆದಿ–ಅಂತ್ಯ ಪ್ರಾಸಗಳ ಲಾಲಿತ್ಯದಿಂದಾಗಿ ಅವುಗಳಿಗಿದೆ ನೇರವಾಗಿ ಕೇಳುಗರ ಮನದಂಗಳಕ್ಕೆ ಲಗ್ಗೆ ಹಾಕುವ ತಾಕತ್ತು.
 
ಕಾವ್ಯಾತ್ಮಕವಾದ ಈ ಕ್ಲಿಷ್ಟ ಸಂಭಾಷಣೆಗಳನ್ನು ಮಕ್ಕಳು ಹೇಳುವರೇ ಎಂಬ ಅಳುಕು. ಬಯಲಾಟವೆಂದರೆ ಬರೀ ಹಾಡುವುದು ಅಲ್ಲವಲ್ಲ; ಕುಣಿತ ಹಾಗೂ ಆಂಗಿಕ ಅಭಿನಯ ಕೂಡ ಬೇಕೇಬೇಕು, ಹೀಗೆ ಅವುಗಳನ್ನೆಲ್ಲ ಕಲಿಸುವ ಸವಾಲುಗಳ ಮೇಲೆ ಸವಾಲುಗಳು.
 
 
ಮಕ್ಕಳ ಅಭಿನಯ ಸಾಮರ್ಥ್ಯವನ್ನು ಕಂಡುಕೊಳ್ಳಲು ನಾವೊಂದು ಉಪಾಯ ಮಾಡಿದೆವು. ಅವರನ್ನೆಲ್ಲ ಗುಂಪುಗೂಡಿಸಿ ಒಂದು ರಸವತ್ತಾದ ಕಥೆ ಹೇಳಿಸಿ, ಆಮೇಲೆ ತಂಡೋಪ ತಂಡಗಳನ್ನಾಗಿ ಮಾಡಿ ಕಥಾ ಸನ್ನಿವೇಶವನ್ನು ಅಭಿನಯಿಸಿ ತೋರಿಸುವಂತೆ ಸೂಚಿಸಿದೆವು. ನಮ್ಮ ಕಲ್ಪನೆಗೂ ಮೀರಿ ಕಥೆಯನ್ನು ರಂಗಕ್ಕಿಳಿಸಿ ತೋರಿದ್ದರು ಆ ಮಕ್ಕಳು. ಅವರಲ್ಲೇ ಒಂದಿಷ್ಟು ಮಂದಿಯನ್ನು ಆಯ್ಕೆ ಮಾಡಿಕೊಂಡೆವು.
 
ಪ್ರಮುಖ ಪಾತ್ರಗಳಿಗೆ ಬದಲಿ ಪಾತ್ರಧಾರಿಗಳನ್ನು ಸನ್ನದ್ಧಗೊಳಿಸುವುದು ಒಳಿತು ಎನ್ನುವುದು ನಮ್ಮ ತಂಡದ ಒಕ್ಕೊರಲ ಅಭಿಪ್ರಾಯವಾಗಿತ್ತು. ಏಕೆಂದರೆ, ಯಾವಾಗ, ಯಾವ ಪಾತ್ರಧಾರಿ ಕೈಕೊಡುತ್ತಾನೆಯೋ, ಯಾರು ಬಲ್ಲರು? ಅರ್ಜುನನ ಪಾತ್ರಧಾರಿಯೊಬ್ಬ ಅರ್ಧದಲ್ಲೇ ಕೈಕೊಟ್ಟಾಗ ನಮ್ಮ ಮುಂದಾಲೋಚನೆಗಾಗಿ ನಾವೇ ಬೆನ್ನುತಟ್ಟಿಕೊಂಡೆವು.
 
ಬಯಲಾಟದ ಈ ಪ್ರಸಂಗದಲ್ಲಿ ಅಭಿಮನ್ಯು ಹಾಗೂ ಅರ್ಜುನನ ಸಂಭಾಷಣೆಗಳೇ ಹೆಚ್ಚು. ಒಬ್ಬನೇ ಪಾತ್ರಧಾರಿ ಅಷ್ಟೂ ಸಂಭಾಷಣೆಗಳನ್ನು ಕಂಠಪಾಠ ಮಾಡಿ ಒಪ್ಪಿಸುವುದು ಕಠಿಣ ಎನಿಸಿತು. ಅದಕ್ಕೆ ತಿಪ್ಪೇಸ್ವಾಮಿ ಅವರು ಒಂದು ಉಪಾಯ ಸೂಚಿಸಿದರು. ಈ ಎರಡೂ ಪಾತ್ರಗಳಿಗೆ ಪೂರ್ವಾರ್ಧದಲ್ಲಿ ಒಬ್ಬ ಹಾಗೂ ಉತ್ತರಾರ್ಧದಲ್ಲಿ ಮತ್ತೊಬ್ಬ ಹುಡುಗನಿಗೆ ಅವಕಾಶ ಮಾಡಿಕೊಡಬೇಕು; ಆಗ ಸಂಭಾಷಣೆಗಳನ್ನು ಕಂಠಪಾಠ ಮಾಡುವ ಹೊರೆ ಕಡಿಮೆ ಆಗುತ್ತದೆ ಎನ್ನುವುದು ಅವರ ಸೂಚನೆಯಾಗಿತ್ತು. ಅದು ನಮಗೆಲ್ಲ ಒಪ್ಪಿಗೆಯಾಗಿದ್ದರಿಂದ ತಕ್ಷಣ ಅನುಷ್ಠಾನಕ್ಕೆ ಬಂತು. 
 
ಕಾವ್ಯದ ಕುರಿತು ಆರಂಭದಲ್ಲೇ ತಲೆ ಕೆಡಿಸಿಕೊಂಡಿದ್ದರೆ ಮಕ್ಕಳನ್ನು ಹಿಡಿದಿಡುವುದು ಕಷ್ಟವಾಗಿತ್ತು. ‘ಕಿಟಿತಕ ಧಾತ ತೋಂ, ಕಿಟಿತಕ ಧಾ ಧಾ ಕಿಟಿತಕ..’ ಎನ್ನುತ್ತಾ ಹೆಜ್ಜೆ ಹಾಕುವುದನ್ನು ಕಲಿಸಲು ಆರಂಭಿಸಿದೆವು. ಬಯಲಾಟದ ನವಪೀಳಿಗೆ ಕಲಾವಿದರೆಲ್ಲ ಖುಷಿಯಿಂದ ಹೆಜ್ಜೆ ಹಾಕಿದ್ದೇ ಹಾಕಿದ್ದು.
 
ಈ ಹೆಜ್ಜೆ ಹಾಕಿಸುವ ಕೆಲಸವನ್ನು ನಾವು ಮಾಡಿದರೆ, ಹಳೆಗನ್ನಡ ಕಾವ್ಯದ ರಸಧಾರೆಯನ್ನು ಇದೇ ಮಕ್ಕಳಿಂದ ಹೊರಹೊಮ್ಮಿಸುವ ಹೊಣೆಯನ್ನು ತಿಪ್ಪೇಸ್ವಾಮಿ ಹೊತ್ತರು. ಭಾಗವತಿಕೆ ಅವರಿಗೆ ತಂದೆಯಿಂದ ಬಂದ ಬಳುವಳಿ. ಅಭಿಜಾತ ಕಲಾವಿದರಾದ ಅವರು, ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತವನ್ನು ಶಾಸ್ತ್ರೀಯವಾಗಿಯೂ ಅಧ್ಯಯನ ಮಾಡಿದವರು. ಅವರ ಸಹೋದರ ಶಿವರುದ್ರಪ್ಪ ಸಹ ನಮ್ಮ ನೆರವಿಗೆ ಬಂದರು.
 
 
‘ವೀರ ಅಭಿಮನ್ಯು ಕಾಳಗ’ದ ಪದ್ಯಗಳನ್ನು ತೀನ್‌ತಾಳ, ಆದಿತಾಳ, ದಾದರ, ಕವ್ವಾಲಿ, ಕೇರವ, ದೃತ್‌ ಏಕತಾಳ, ದ್ರುಪದ ಮತ್ತು ಝಪ್‌ ತಾಳದಲ್ಲಿ ಸಂಯೋಜನೆ ಮಾಡಲಾಗಿದೆ. ಸಂಗೀತದ ಈ ಪಟ್ಟುಗಳನ್ನೆಲ್ಲ ಶಾಸ್ತ್ರೀಯವಾಗಿ ಕಂಠಗತ ಮಾಡಿಕೊಳ್ಳಲು ವರ್ಷಗಳೇ ಬೇಕು. ಆದರೆ, ತಿಪ್ಪೇಸ್ವಾಮಿ ಅವರು ಅದೇನು ಮೋಡಿ ಮಾಡಿದರೋ, ಒಂದೂವರೆ ತಿಂಗಳಲ್ಲಿ ಮಕ್ಕಳೆಲ್ಲ ತಾಳಕ್ಕೆ ತಕ್ಕಂತೆ ಹಾಡಲು ಕಲಿತುಬಿಟ್ಟರು. ನಾ ಒಲ್ಲೆ, ನೀ ಒಲ್ಲೆ ಅನ್ನುತ್ತಿದ್ದವರು ಸಹ ನನಗೂ ಒಂದು ಪಾತ್ರ ಬೇಕು ಎಂದು ದುಂಬಾಲು ಬೀಳಲು ಆರಂಭಿಸಿದರು.
 
ಸುಭದ್ರೆಯ ಪಾತ್ರವನ್ನು ಪವಿತ್ರಾ ವಹಿಸಿಕೊಂಡರೆ, ದ್ರೌಪದಿಯ ಪಾತ್ರದಿಂದ ಅಫ್ಸಾನಾ ಖುಷಿಪಟ್ಟಳು. ಹುಡುಗರಾದ ಕಿಶೋರ್‌, ವಿಶ್ವನಾಥ್‌, ರಾಹುಲ್‌, ವೆಂಕಟೇಶ್‌, ಕಾರ್ತಿಕ್‌ ಅವರಿಗೆಲ್ಲ ತಮ್ಮ ಡೈಲಾಗ್‌ ಹೇಳಲು ಅದೆಷ್ಟೊಂದು ಆತುರ. ಅಂದಹಾಗೆ ಇವರೆಲ್ಲರೂ ಹೈಸ್ಕೂಲು ಮಕ್ಕಳು.
*****
ಮಕ್ಕಳ ಈ ಬಯಲಾಟವನ್ನು ರಂಗ ಮಂಚಕ್ಕೆ ತರಬೇಕಲ್ಲ? ಅದಕ್ಕೂ ತಯಾರಿಗಳು ಶುರುವಾದವು. ಮೊದಲು ರಂಗ ಪರಿಕರಗಳು –ಅದೇ ಕಿರೀಟ, ಮುಖವರ್ಣಿಕೆ, ವೇಷಭೂಷಣ– ತಯಾರು ಆಗಬೇಕಿತ್ತು. ತಾಲೀಮು ನಡೆಯುತ್ತಿದ್ದ ಬಿಡಾರದ ಮೂಲೆಯಲ್ಲಿ ಕುಳಿತು ಮಹಮ್ಮದ್‌ ಯೂನಿಸ್‌ ರಂಗಪರಿಕರ ಸಿದ್ಧಪಡಿಸುತ್ತಿದ್ದರು.
 
ಅರ್ಜುನನ ಪಾತ್ರಧಾರಿ ಸೌಹಾರ್ದ, ‘ಜಡಜಾಕ್ಷನೆ ಕೇಳೆನ್ನ, ಒಡಲೊಳು ಶೋಕಾಗ್ನಿಯನು, ಬಿಡದೇಳಲು ಕಾರಣವೇನು’ ಎಂದು ಸುಶ್ರಾವ್ಯವಾಗಿ ಪಾಠ ಒಪ್ಪಿಸಿದವನೇ ಸೀದಾ ಹೋಗಿ ಮಹಮ್ಮದ್‌ ಅವರ ಮುಂದೆ ನಿಲ್ಲುತ್ತಿದ್ದ. ಅವನ ಕಿರೀಟ ಎಲ್ಲಿಯವರೆಗೆ ಬಂತು ಎನ್ನುವ ಕುತೂಹಲವನ್ನು ಅದುಮಿಡಲು ಅವನಿಗೆ ಸಾಧ್ಯವೇ ಇರಲಿಲ್ಲ. ಗದೆ ಸಿದ್ಧವಾದಾಗ ಭೀಮನ ಪಾತ್ರಧಾರಿ ಸುದೀಪ್‌ ಅದನ್ನು ಯಾರಿಗೂ ಮುಟ್ಟಿನೋಡಲು ಬಿಡುತ್ತಿರಲಿಲ್ಲ.
 
 
ಬಯಲಾಟದ ಕಲಾವಿದರ ಬಹುತೇಕ ರಂಗಪರಿಕರಗಳನ್ನು ಕಟ್ಟಿಗೆಯಲ್ಲಿ ಸಿದ್ಧಪಡಿಸುವುದರಿಂದ ಅವುಗಳು 7–8 ಕೆ.ಜಿಯಷ್ಟು ಭಾರ. ಅಷ್ಟೊಂದು ಭಾರವಾದ ಪರಿಕರ ಕಟ್ಟಿಕೊಂಡು ಕುಣಿಯುವುದು ಮಕ್ಕಳಿಗೆ ಆಗದ ಕೆಲಸ. ಆದ್ದರಿಂದಲೇ ಥರ್ಮಾಪೋಮ್‌ನಲ್ಲಿ ಪರಿಕರಗಳನ್ನು ಸಿದ್ಧಪಡಿಸಲಾಗಿತ್ತು. ಗುಜರಿಗೆ ಎಸೆಯಲಾಗಿದ್ದ ಸಾಮಾನು ಸರಂಜಾಮು ತಂದ ಮಹಮ್ಮದ್‌, ಅದರಲ್ಲೇ ಚೆಂದದ ಪರಿಕರವನ್ನು ತಯಾರಿ ಮಾಡಿಬಿಡುತ್ತಿದ್ದರು.
 
ಟೈರ್‌ ಮತ್ತು ಟ್ಯೂಬ್‌ ನಡುವೆ ಹಾಕುವಂತಹ ಸೆಟೆದುನಿಲ್ಲುವ ರಬ್ಬರ್‌ ಹಾಳೆ, ರಟ್ಟಿನ ಡಬ್ಬಿ, ಲಾಳಿಕೆ, ಸಿ.ಡಿ, ಊಟದ ಪ್ಲೇಟ್‌ಗಳು, ಎಲೆಕ್ಟ್ರಿಕ್‌ ಪೈಪ್‌ಗಳು... ಹೀಗೆ ಅವರು ಹುಡುಕಿ ತರುತ್ತಿದ್ದ ಸಾಮಾನುಗಳಿಗೆ ಲೆಕ್ಕವಿಲ್ಲ. ಊಟಕ್ಕೆ ಬರುವುದನ್ನೂ ಮರೆತು ಪಾತ್ರಧಾರಿಗಳೆಲ್ಲ ಪರಿಕರಗಳ ತಯಾರಿಕಾ ಕಾರ್ಯಾಗಾರದ ಮುಂದೆಯೇ ಠಿಕಾಣಿ ಹೂಡಿಬಿಡುತ್ತಿದ್ದರು.
*****
ಬಯಲಾಟದ ಪ್ರದರ್ಶನಕ್ಕೆ ರಂಗಮಂಚ ಕೂಡ ಸಿದ್ಧವಾಯಿತು. ಕೊನೆಗೆ ಪ್ರದರ್ಶನದ ಆ ದಿನ ಬಂದೇ ಬಿಟ್ಟಿತು. ನಮಗೋ ಪರೀಕ್ಷೆ ಬರೆದ ವಿದ್ಯಾರ್ಥಿ ಫಲಿತಾಂಶಕ್ಕೆ ಕಾಯುತ್ತಿರುವಂಥ ತವಕ. ಇಷ್ಟೆಲ್ಲ ಶ್ರಮ ಹಾಕಿದ್ದಾಗಿದೆ, ಮಕ್ಕಳು ಈ ಕೈಂಕರ್ಯವನ್ನು ಯಶಸ್ವಿಗೊಳಿಸುವರೇ ಎಂಬ ಪ್ರಶ್ನೆ ತಲೆಯಲ್ಲಿ ಬಿಟ್ಟೂಬಿಡದಂತೆ ಗಿರಿಕಿ ಹೊಡೆಯುತ್ತಿತ್ತು. ತಿಪ್ಪೇಸ್ವಾಮಿ ಅವರೇನೋ ‘ಶ್ರೀ ವಿಘ್ನೇಶ ದಯಾಪಯೋನಿಧಿ...’ ಎಂದು ನಾಂದಿ ಗೀತೆಯನ್ನು ಆರಂಭಿಸಿಯೇಬಿಟ್ಟರು.
 
ನಮಗೆ ಎದೆಯಲ್ಲಿ ಢವ ಢವ. ಬಯಲು ತುಂಬಾ ಜನ ಸೇರಿದ್ದಾರೆ, ಏನಾದರೂ ಎಡವಟ್ಟಾದರೆ ಹೇಗೆ ಎಂಬ ಆತಂಕ. ಆದರೆ, ದೇವರ ದಯೆಯಿಂದ ಹಾಗೇನೂ ಆಗಲಿಲ್ಲ. ಪಾತ್ರಧಾರಿಗಳು ಒಬ್ಬರಿಗೊಬ್ಬರು ಪೈಪೋಟಿಗೆ ಬಿದ್ದಂತೆ ಸಂಭಾಷಣೆ ಹೇಳಿದರು. ಸಿಳ್ಳು–ಚಪ್ಪಾಳೆ ಸದ್ದೇ ಸದ್ದು. ಅಭಿಮನ್ಯುವಿನಿಂದ ಕಾವ್ಯಧಾರೆ ಹರಿದಾಗ ನಮ್ಮ ಕಣ್ಣಲ್ಲಿ ಹರ್ಷಧಾರೆ!
*****
ಬಳ್ಳಾರಿ ಜಿಲ್ಲೆಯ ಯಾವ ಹಳ್ಳಿಗೆ ಹೋದರೂ ಬಯಲಾಟದ ಸೊಗಡು ಸಿಕ್ಕೇ ಸಿಗುತ್ತದೆ. ಬಯಲಾಟದ ತವರೂರು ಈ ಜಿಲ್ಲೆ. ಅಕ್ಷರ ಕಲಿಯದವರೇ ಸಂರಕ್ಷಿಸಿ, ಬೆಳೆಸಿ, ಪೊರೆದ ಕಲೆಯಿದು. ಬಾಲ್ಯದಿಂದಲೇ ಬಯಲಾಟದ ತಾಲೀಮುಗಳನ್ನು ನೋಡುತ್ತಾ ಸಾವಿರಾರು ಪದಗಳನ್ನು ಕರಗತ ಮಾಡಿಕೊಳ್ಳುತ್ತಾ ಬರುವ ಸಂಪ್ರದಾಯ ಇಲ್ಲಿದೆ. ಎಷ್ಟೋ ಪ್ರಸಂಗಗಳ ಹಸ್ತಪ್ರತಿಗಳು ಇಲ್ಲದಿದ್ದರೂ ಪೀಳಿಗೆಯಿಂದ ಪೀಳಿಗೆಗೆ ಅವುಗಳು ದಾಟಿಕೊಂಡು ಬಂದಿರುವ ಪರಿ ಅನನ್ಯ.
 
ಯಕ್ಷಗಾನವನ್ನು ಅಗಾಧವಾಗಿ ಬೆಳೆಸಲು ಸಾಹಿತ್ಯದಿಗ್ಗಜ ಶಿವರಾಮ ಕಾರಂತರು ಟೊಂಕಕಟ್ಟಿ ನಿಂತಂತೆ ಬಯಲಾಟದ ಸಹಾಯಕ್ಕೆ ಯಾರೂ ಬರಲಿಲ್ಲ. ಪ್ರೋತ್ಸಾಹವಿಲ್ಲದೆ, ಪೋಷಣೆಯಿಲ್ಲದೆ ಈ ಕಲೆ ಎಲ್ಲಿ ನಶಿಸಿಹೋಗುವುದೋ ಎನ್ನುವ ಆತಂಕ ಕಾಡುತ್ತಿರುವುದು ಸುಳ್ಳಲ್ಲ. ಉತ್ತರ ಕರ್ನಾಟಕದ ಹಳ್ಳಿ–ಹಳ್ಳಿಗಳ ಜಾತ್ರೆಗಳಲ್ಲಿ ಈ ಹಿಂದೆ ಬಯಲಾಟವನ್ನು ತಪ್ಪದೇ ಆಡಿಸಲಾಗುತ್ತಿತ್ತು. ಆದರೆ, ಈಗ ಆ ಪರಂಪರೆ ಬಹುತೇಕ ನಿಂತುಹೋಗಿದೆ. ಇಂತಹ ಪಾರಂಪರಿಕ ಕಲೆಗೆ ಮತ್ತೆ ಶಕ್ತಿ ತುಂಬಬೇಕು ಎನ್ನುವುದು ನಮ್ಮ ಆಸೆ. 
 
‘ನಾವು ಆಡಿಸಿದ ಪ್ರಸಂಗದಲ್ಲಿ ಎಲ್ಲ ಮಕ್ಕಳು ಅಮೋಘವಾಗಿ ಅಭಿನಯಿಸಿದರು, ಚಾಚೂತಪ್ಪದೆ ಸಂಭಾಷಣೆಯನ್ನು ಒಪ್ಪಿಸಿದರು, ಯಾವ ದೋಷಗಳೂ ಇರಲಿಲ್ಲ’ ಎಂದೆಲ್ಲ ಹೇಳಿದರೆ ಆತ್ಮ ವಂಚನೆ ಆಗುತ್ತದೆ. ಖಂಡಿತವಾಗಿಯೂ ದೋಷಗಳು ಇದ್ದವು. ಆ ಕೊರತೆಗಳೇ ಮಕ್ಕಳ ಬಯಲಾಟದ ಮೆರುಗನ್ನು ಹೆಚ್ಚಿಸಿದ್ದವು. ಆದರೆ, ಕೊಳೆಗೇರಿಯಲ್ಲಿ ಅರಳಿದ ಈ ಬಯಲಾಟ ಶಿಕ್ಷಣತಜ್ಞರನ್ನು ಹೊಸ ಚಿಂತನೆಗೆ ಹಚ್ಚಿಸುವಂತಿದೆ. ಪಾರಂಪರಿಕ ಕಲೆಗಳಿಂದ ಶಾಲೆಗಳಲ್ಲಿ ವಿಷಯಗಳನ್ನು ಎಷ್ಟೊಂದು ಪರಿಣಾಮಕಾರಿಯಾಗಿ ಕಲಿಸಬಹುದು ಎನ್ನುವುದಕ್ಕೂ ಒಂದು ಪಾಠದಂತಿದೆ.
 
ಎಲ್ಲಕ್ಕಿಂತ ಹೆಚ್ಚಾಗಿ ಈ ಅಪರೂಪದ ಕಲೆ ಉಳಿದು ಬೆಳೆಯುವಲ್ಲಿ ಸಂಶಯವಿಲ್ಲ ಎಂಬ ಆಶಾಭಾವ ಈ ಪ್ರಸಂಗದಿಂದ ಚಿಗುರಿದೆ. ಹಿಂದೆ ಒಲ್ಲೆ ಎಂದು ಹಟ ಹಿಡಿದಿದ್ದ ಮಕ್ಕಳು ಈಗ ಹೊಸ ಪ್ರಸಂಗ ಯಾವುದು ಎಂದು ಕೇಳುತ್ತಿದ್ದಾರೆ. ಆದ್ದರಿಂದಲೇ ಸಾಫಲ್ಯದ ವಿನೀತಭಾವ ನಮ್ಮ ಮನವನ್ನು ತುಂಬಿಕೊಂಡಿದೆ. 
ಬಯಲಾಟ ಅಕಾಡೆಮಿಯ ಅಧ್ಯಕ್ಷರು ಸೇರಿದಂತೆ ಹಲವರ ಸಹಕಾರದಿಂದ ಹಣತೆಯೊಂದು ಬೆಳಗಿದೆ. ಇಂತಹ ಹಣತೆ ಬೆಳಗಿಸುವ ಕೈಗಳು ಇನ್ನೂ ಹೆಚ್ಚಬೇಕಿದೆ. ಹೀಗೆ ಹಣತೆಯಿಂದ ಹಣತೆ ಬೆಳಗಿ, ಅವುಗಳೇ ಸಾಲು ದೀಪಗಳಾಗಿ ಬಯಲಾಟವನ್ನು ಎತ್ತರೆತ್ತರಕ್ಕೆ ಬೆಳೆಯುವ ಹಾದಿಯಲ್ಲಿ ಮುನ್ನಡೆಸಬೇಕು ಎಂಬ ಅಪೇಕ್ಷೆ ನಮ್ಮದಾಗಿದೆ.
 
ಅಭಿಮನ್ಯುವಿನ ‘ಶಕ್ರಾದ್ಯಖಿಳನ್ನುಪಕ್ರಮಿಸಿ ಮಿಕ್ಕಿಮೀರಿರುವ...’ ಎಂಬ ಮಾತು ಇನ್ನೂ, ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ.
ನಿರೂಪಣೆ: ಪಿ.ಕೆ.
ಚಿತ್ರಗಳು: ತಾಜುದ್ದೀನ್‌ ಆಜಾದ್‌
(ಲೇಖಕರು: ಮಕ್ಕಳ ಬಯಲಾಟದ ಹೊಣೆಹೊತ್ತು 
ಶಿಬಿರವನ್ನು ಸಂಘಟಿಸಿದವರು)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT