ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಮುನಿರತ್ನ ಬೆಂಬಲಿಗರು ನನ್ನ ಜಡೆ, ಸೀರೆ ಎಳೆದಾಡಿದರು: ಬಿಬಿಎಂಪಿ ಸದಸ್ಯೆ ಮಂಜುಳಾ ಆರೋಪ

Last Updated 19 ಮೇ 2017, 12:12 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ನಗರದ ಲಗ್ಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಅವರ ನಗರೋತ್ಥಾನ ಯೋಜನೆ ಅನುದಾನದಡಿ ಬೃಹತ್‌ ನೀರುಗಾಲುವೆ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೆಲವು ಕಿಡಿಗೇಡಿಗಳು ಸ್ಥಳೀಯ ವಾರ್ಡ್‌ ಸದಸ್ಯೆ ಮಂಜುಳ ನಾರಾಯಣಸ್ವಾಮಿ ಅವರ ಜಡೆ, ಸೀರೆ ಎಳೆದಾಡಿದ ಪ್ರಸಂಗ ನಡೆಯಿತು.

‘ಇದು ಶಾಸಕ ಮುನಿರತ್ನ ಅವರ ಬೆಂಬಲಿಗರ ಕೃತ್ಯ’ ಎಂದು ಬಿಬಿಎಂಪಿಯ ಜೆಡಿಎಸ್‌ ಸದಸ್ಯೆ ಮಂಜುಳಾ ಆರೋಪಿಸಿದರು.

‘ನನಗೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿಲ್ಲ. ಮುಖ್ಯಮಂತ್ರಿ ಬರುವ ಮಾಹಿತಿಯೂ ನನಗಿರಲಿಲ್ಲ. ಅವರಿಗೆ ಗೌರವ ನೀಡುವ ಉದ್ದೇಶದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ವೇದಿಕೆ ಮೇಲೆ ನಾನೂ ಮಾತನಾಡಬೇಕು. ಅವಕಾಶ ಮಾಡಿಕೊಡಿ ಎಂದು ಮುಖ್ಯಮಂತ್ರಿ, ಮೇಯರ್‌ ಅವರ ಬಳಿ ಕೇಳಿಕೊಂಡೆ. ಆದರೆ, ಅವರು ನನ್ನನ್ನು ಸುಮ್ಮನಿರಿಸಲು ಪ್ರಯತ್ನಿಸಿದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ನಾಮ ನಿರ್ದೇಶಿತ ಸದಸ್ಯೆ ಸುನಂದಮ್ಮ ಅವರು ನನ್ನ ಮೇಲೆ ಹಲ್ಲೆ ನಡೆಸಿದವರು. ಈ ಕೃತ್ಯಕ್ಕೆ ನಾಮನಿರ್ದೇಶಿತ ಸದಸ್ಯ ಎಚ್‌.ಎಸ್‌. ಸಿದ್ದೇಗೌಡ ಕಾರಣ’ ಎಂದು ದೂರಿದರು.

‘ಮುನಿರತ್ನ ಅವರು ನನ್ನನ್ನು ಕಡೆಗಣಿಸುತ್ತಿದ್ದಾರೆ. ಅಲ್ಲದೆ, ಅವರು ಹಾಗೂ ಅವರ ಬೆಂಬಲಿಗರು ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

‘ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ಜತೆಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮುನಿರತ್ನ ಅವರು, ‘ಮಂಜುಳಾ ಅವರ ಜಡೆ ಎಳೆದವರು ನನ್ನ ಬೆಂಬಲಿಗರಲ್ಲ. ಯಾರೋ ಮಾಡಿದ ಕೃತ್ಯಕ್ಕೆ ನಾನು ಜವಾಬ್ದಾರನಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT