ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಪೃಶ್ಯತಾ ನಿವಾರಣೆಯ ಕಾರ್ಯಸೂಚಿಗೆ ಶ್ಲಾಘನೆ

Last Updated 22 ಮೇ 2017, 6:33 IST
ಅಕ್ಷರ ಗಾತ್ರ

ಮೈಸೂರು: ಅಸ್ಪೃಶ್ಯತಾ ನಿವಾರಣೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಈ ವರ್ಷದ ನಿರ್ದಿಷ್ಟ ಕಾರ್ಯ ಸೂಚಿಯಾಗಿರುವುದು ಅತ್ಯುತ್ತಮ ವಿಚಾರ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಶ್ಲಾಘಿಸಿದರು.

ಇಲ್ಲಿನ ಅವಧೂತ ದತ್ತಪೀಠದಲ್ಲಿ ಭಾನುವಾರ ನಡೆದ ಸ್ವಾಮೀಜಿಯ 75ನೇ ಜನ್ಮ ದಿನೋತ್ಸವದ ‘ವಜ್ರೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಸ್ವಾಮೀಜಿ ದೇಶದ ಬಹುದೊಡ್ಡ ಆಸ್ತಿ ಎಂದರೆ ತಪ್ಪಾಗಲಾರದು. ಇವರು ಕೇವಲ ಆಧ್ಯಾತ್ಮಿಕ ವಿಚಾರಗಳಿಗಷ್ಟೇ ಸೀಮಿತ ವಾಗದೆ ಸಮಾಜ ಸುಧಾರಣೆಗೂ ಮುಂದಡಿ ಇಟ್ಟಿರುವುದು ಆಶಾದಾಯಕ ವಿಚಾರ. ರಾಜಕಾರಣಿಗಳಿಗೆ ಒಳ್ಳೆಯ ಮಾರ್ಗದರ್ಶಕರೂ ಆಗಿದ್ದಾರೆ ಎಂದು ಹೇಳಿದರು.

ವೇದಗಳ ಕಾಲದಲ್ಲಿ ಇದ್ದ ‘ಸಂಗೀತ ಚಿಕಿತ್ಸೆ’ಗೆ ಮರುಜೀವ ನೀಡಿ, ಅದನ್ನು ಆಧುನಿಕ ಕಾಲದಲ್ಲಿ ಯಶಸ್ವಿಯಾಗಿ  ಕಾರ್ಯಗತಗೊಳಿಸಿದರು. ಇದರ ಜತೆಗೆ, ‘ರಾಗರಾಗಿಣಿ ನಾದಚಿಕಿತ್ಸಾ ಯೋಗ’ ಎಂಬ ಒಂದು ಹೊಸ ಪ್ರಕಾರವನ್ನೇ ದೇಶದ ಅಧ್ಯಾತ್ಮರಂಗದಲ್ಲಿ ಹುಟ್ಟು ಹಾಕಿದ್ದು ಇವರ ಬಹುದೊಡ್ಡ ಸಾಧನೆ ಎಂದು ಹೊಗಳಿದರು.

ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ‘ಮಾಗಿದ ಜೀವನವೊಂದರ ಜನ್ಮದಿನ ಆಚರಿಸುತ್ತಿದ್ದೇವೆ’ ಎಂದರು.
ಅಸ್ಪೃಶ್ಯತಾ ನಿವಾರಣೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡಿರುವ ಸ್ವಾಮೀಜಿ ಅವರ ಮನೋಭಾವ ಎಲ್ಲರೂ ಒಪ್ಪುವಂತದ್ದು. ಬ್ರಾಹ್ಮಣರನ್ನು ದ್ವೇಷಿಸುವುದಿಲ್ಲ, ಬ್ರಾಹ್ಮಿಣಿಸಂನ್ನು ದ್ವೇಷಿಸಬೇಕು ಎಂದು ಹೇಳಿದರು.

ಕುಟೀರದಿಂದ 75 ದೇಶಗಳವರೆಗೆ: 1966ರಲ್ಲಿ ಇಲ್ಲಿ ಒಂದು ಸಣ್ಣ ಕುಟೀರ ಕಟ್ಟಿಕೊಂಡ ಸ್ವಾಮೀಜಿ, ಇಂದು ತಮ್ಮ ಆಶ್ರಮದ ಶಾಖೆಗಳನ್ನು 75ಕ್ಕೂ ಹೆಚ್ಚು ದೇಶಗಳವರೆಗೆ ವಿಸ್ತರಿಸಿರುವುದು ಶ್ಲಾಘನೀಯ ಎಂದು ಭಾರಿ ಕೈಗಾರಿಕೆಗಳ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಸ್ವಾಮೀಜಿ ಜಾತ್ಯಾತೀತವಾದಿ. ಯಾವುದೇ ಜಾತಿ ಧರ್ಮದವರಾದರೂ ಈ ಮಠಕ್ಕೆ ಬರಬಹುದು. ಈಗಿನ ಕಾಲದಲ್ಲಿ ಇದು ಮಹತ್ವದ ವಿಚಾರ. ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮತ್ತೆ ಮೌಲ್ಯಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ ಎಂದು ಹೇಳಿದರು.

ಎಲ್ಲ ಧರ್ಮದಲ್ಲೂ ಅಸಮಾನತೆ ಇದೆ: ಕೇವಲ ಹಿಂದೂ ಧರ್ಮದಲ್ಲಷ್ಟೇ ಅಲ್ಲ, ಎಲ್ಲ ಧರ್ಮದಲ್ಲೂ ಅಸಮಾನತೆ ಇದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗಳಲ್ಲಿ ಅವರದೇ ಆದ ಅನೇಕ ಒಳ ಪಂಗಡಗಳಿವೆ. ಅಲ್ಲೂ ಮೇಲು, ಕೀಳು ಭಾವನೆಗಳಿವೆ. ಆದರೆ, ಹಿಂದೂ ಧರ್ಮದಲ್ಲಿ ಮಾತ್ರ ಅಸಮಾನತೆ ಇದೆ ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಬೇರೆ ಯಾವ ಧರ್ಮದಲ್ಲೂ ಸುಧಾರಣಾ ಕಾರ್ಯ ನಡೆಯುತ್ತಿಲ್ಲ. ಹಿಂದೂ ಧರ್ಮದಲ್ಲಿ ಮಾತ್ರ ಸುಧಾರಣೆಗಳು ನಡೆಯುತ್ತಿವೆ ಎಂದು ಹೇಳಿದರು.

ಇಷ್ಟೊತ್ತಿಗೆ ಆಯೋಜಕರೊಬ್ಬರು ಕಿವಿಯಲ್ಲಿ ಏನನ್ನೋ ಉಸುರಿದರು. ತಮ್ಮ ಭಾಷಣವನ್ನು ಪ್ರತಾಪಸಿಂಹ ಮೊಟಕುಗೊಳಿಸಿ ತಮ್ಮ ಸ್ಥಾನದಲ್ಲಿ ಆಸೀನರಾದರು. ಸ್ವಲ್ಪ ಸಮಯದಲ್ಲೇ ವೆಂಕಯ್ಯನಾಯ್ಡು ವಿಮಾನ ನಿಲ್ದಾಣಕ್ಕೆ ತೆರಳಿದರು. ಅವರನ್ನು ಬೀಳ್ಕೊಡಲು ಪ್ರತಾಪಸಿಂಹ ಸಹ ಹೊರಟರು.
ತೆಲುಗು ಭಾಷೆ ಹೆಚ್ಚು ಬಳಸಿದ ವೆಂಕಯ್ಯನಾಯ್ಡು: ವೆಂಕಯ್ಯ ನಾಯ್ಡು ಅವರು ಕಾರ್ಯಕ್ರಮದಲ್ಲಿ ತೆಲುಗು ಭಾಷೆಯಲ್ಲಿ ಹೆಚ್ಚಾಗಿ ಮಾತನಾಡಿದರು.

‘ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ. ಆದರೆ, ಆರ್ಥವಾಗುತ್ತದೆ’ ಎಂದು ಆರಂಭದಲ್ಲಿ ತಿಳಿಸಿದರು. ನಂತರ ಇಂಗ್ಲಿಷ್, ಹಿಂದಿ ಭಾಷೆಯಲ್ಲೂ ಮಾತನಾಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಅವಧೂತ ದತ್ತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಜಿ.ಟಿ. ದೇವೇಗೌಡ, ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT