ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ತಿಂಗಳಲ್ಲಿ ಶೇ 21 ಅಧಿಕ ಮಳೆ:ಕೃಷಿ ಚಟುವಟಿಕೆ ಚುರುಕು

Last Updated 22 ಮೇ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಸತತ ಬರಗಾಲಕ್ಕೆ ಸಿಲುಕಿ ನಲುಗಿದ್ದ ರೈತರ ಬದುಕಿನಲ್ಲಿ ಮುಂಗಾರು ಹೊಸ ಭರವಸೆ ಮೂಡಿಸಿದೆ.  ಉತ್ತಮವಾಗಿ ಬೀಳುತ್ತಿರುವ ಮಳೆಯಿಂದಾಗಿ ಹರ್ಷಚಿತ್ತರಾಗಿರುವ ಕೃಷಿಕರು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ.
 
ಕೆಲವು ಜಿಲ್ಲೆಗಳಲ್ಲಿ ನಿರೀಕ್ಷೆ ಮೀರಿ ಮಳೆಯಾಗಿದೆ. ಕೆರೆ– ಕಟ್ಟೆಗಳಿಗೂ ನೀರು ಬರುತ್ತಿದೆ. ಕೆಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆ ಬಿದ್ದಿದೆ. 
ಮೇ ತಿಂಗಳಲ್ಲಿ ರಾಜ್ಯದಲ್ಲಿ ಸರಾಸರಿ 53 ಮಿ.ಮೀ ಮಳೆ ಆಗಬೇಕಿತ್ತು. 61 ಮೀ.ಮೀ ಮಳೆ ಬಿದ್ದಿದೆ.
 
ಒಂದನೇ ತಾರೀಖಿನಿಂದ ಈವರೆಗೆ ವಾಡಿಕೆಯಂತೆ ಸರಾಸರಿ 53 ಮಿಲಿ ಮೀಟರ್‌ ಮಳೆಯಾಗಬೇಕಿದ್ದು, 61 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ 31ರಷ್ಟು ಅಧಿಕ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಶೇ 3ರಷ್ಟು ಮಾತ್ರ ಹೆಚ್ಚಳವಾಗಿದೆ. ಮಲೆನಾಡಿನಲ್ಲಿ ಶೇ 15ರಷ್ಟು ಹೆಚ್ಚು ಮಳೆ ಬಿದ್ದಿದೆ.  ಕರಾವಳಿಯಲ್ಲಿ ಮಾತ್ರ ಶೇ4ರಷ್ಟು ಕಡಿಮೆ ಮಳೆಯಾಗಿದೆ.
 
 
 ಬಿತ್ತನೆ ಚುರುಕು: ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಜೋಳ, ಮೆಕ್ಕೆಜೋಳ, ಹೆಸರು, ಉದ್ದು, ಅಲಸಂದೆ, ಎಳ್ಳು, ಸೂರ್ಯಕಾಂತಿ, ಹತ್ತಿ,  ಆಲೂಗಡ್ಡೆ, ತಂಬಾಕು ಬಿತ್ತನೆ ಕಾರ್ಯ ಚುರುಕುಗೊಂಡಿದೆ.
 
ಮುಂಗಾರಿನಲ್ಲಿ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಇದ್ದು, 1.97 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಕಳೆದ ವರ್ಷ ಈ ಅವಧಿಯಲ್ಲಿ 97 ಸಾವಿರ ಹೆಕ್ಟೇರ್‌ನಲ್ಲಿ  ಮಾತ್ರ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
 
10.58 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆ ಇದ್ದು, 3,413 ಕ್ವಿಂಟಲ್‌ ಬಿತ್ತನೆ ಬೀಜ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. 4.47 ಲಕ್ಷ ಟನ್‌  ರಸಗೊಬ್ಬರ ದಾಸ್ತಾನಿದ್ದು, 2.13 ಲಕ್ಷ  ಟನ್‌ ವಿತರಣೆಯಾಗಿದೆ. ಯಾವುದಕ್ಕೂ ಕೊರತೆ ಇಲ್ಲ ಎಂದು ಅವರು ವಿವರಿಸಿದರು.
 
ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಈ ವರ್ಷ ಕೃಷಿ ಚಟುವಟಿಕೆ ಉತ್ತಮವಾಗಿ ನಡೆಯಬಹುದು ಎಂಬ ನಿರೀಕ್ಷೆ ಇದೆ ಎಂದರು.
****
ಮುಂಗಾರಿನ ಆರಂಭ ಉತ್ತಮವಾಗಿದೆ. ದಕ್ಷಿಣ ಒಳನಾಡಿನಲ್ಲಿ ಬಿತ್ತನೆ ಪ್ರಾರಂಭವಾಗಿದೆ. ಉತ್ತರ ಒಳನಾಡಿನಲ್ಲಿ ಬಿತ್ತನೆಗೆ ಸಿದ್ಧತೆ ನಡೆದಿದೆ
ಬಿ.ವೈ. ಶ್ರೀನಿವಾಸ್, ಕೃಷಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT