ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಷಿ ಕಣಾದರಿಂದ ಕೈಗಾವರೆಗೆ

ಭಾರತದ ಪರಮಾಣು ಪ್ರಣಯ
Last Updated 26 ಮೇ 2017, 19:30 IST
ಅಕ್ಷರ ಗಾತ್ರ

ಮೇ 17 ರಂದು ಕೇಂದ್ರ ಸಚಿವ ಸಂಪುಟವು 7000 ಮೆಗಾವಾಟ್‌ ವಿದ್ಯುತ್ ಉತ್ಪಾದಿಸಬಲ್ಲ 10 ಸ್ವದೇಶಿ ಭಾರ ಜಲ  ಪರಮಾಣು ರಿಯಾಕ್ಟರ್‌ಗಳ ಸ್ಥಾಪನೆಗೆ ಅನುಮತಿ ನೀಡಿದೆ. ಈ ಸಂಗತಿ ಭಾರತೀಯ ಪರಮಾಣು ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳಲ್ಲದೇ ಭಾರತೀಯ ಉದ್ಯಮ ವಲಯದಲ್ಲೂ ಅಪರಿಮಿತ ಉತ್ಸಾಹದ ಸಂಚಲನಕ್ಕೆ ಕಾರಣವಾಗಿದೆ.

ಹಿರಿಯ ವಿಜ್ಞಾನಿಗಳಾದ ಡಾ.ಎಂ.ಆರ್‌. ಶ್ರೀನಿವಾಸನ್‌, ಡಾ. ಅನಿಲ್‌ ಕಾಕೋಡ್ಕರ್‌, ಡಾ.ಬಲದೇವರಾಜ್‌ ಮುಂತಾದವರು ಸಚಿವ ಸಂಪುಟದ ನಿರ್ಣಯವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ ಮೋದಿ ನೇತೃತ್ವದ ಸರ್ಕಾರದ ಹಲವು ಕ್ರಮಗಳು ಮತ್ತು ನೀತಿಗಳನ್ನು  ಸೈದ್ಧಾಂತಿಕವಾಗಿ ಟೀಕಿಸುತ್ತಲೇ ಬಂದಿರುವ ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರೂ ನಿರ್ಣಯವನ್ನು ಕೊಂಡಾಡಿದ್ದಾರೆ. ಯಶವಂತ ಸಿನ್ಹಾ ಅವರು ಭಾರತ–ಅಮೆರಿಕ ಪರಮಾಣು ಒಪ್ಪಂದ ವಿರೋಧಿ ಎಂಬುದನ್ನು ಮರೆಯಬಾರದು.

‘ಈವರೆಗೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ  ರಿಯಾಕ್ಟರ್‌ಗಳನ್ನು ಒಟ್ಟಿಗೆ ನಿರ್ಮಿಸಲು ಎಂದೂ ಅವಕಾಶ ದೊರಕಿರಲಿಲ್ಲ. ಇದು ಭಾರತೀಯ ಉದ್ಯಮ, ಪರಮಾಣು ವಿಜ್ಞಾನಿಗಳು ಮತ್ತು  ಪರಮಾಣು ಕೇಂದ್ರಗಳಲ್ಲಿ ವಿಕಿರಣ ಸುರಕ್ಷೆಯ ಮೇಲೆ ಸದಾ ಕಾಳಜಿ ವಹಿಸುತ್ತಿರುವ ಪರಮಾಣು ಇಂಧನ ನಿಯಂತ್ರಣ ಮಂಡಳಿಗೆ (AERB)ಒಂದು ಸದವಕಾಶ’ ಎಂಬುದು ನಿಯಾಸ್‌ ನಿರ್ದೇಶಕ ಮತ್ತು ಕಲ್ಪಾಕಂ ಫಾಸ್ಟ್‌ ಬ್ರೀಡರ್‌ ರಿಯಾಕ್ಟರ್‌ ಕೇಂದ್ರದ (IGICAR) ಮಾಜಿ ನಿರ್ದೇಶಕ ಡಾ. ಬಲದೇವರಾಜ್ ಅವರ ಅಭಿಪ್ರಾಯ.

ಅರವತ್ತು– ಎಪ್ಪತ್ತರ ದಶಕಗಳಲ್ಲಿ ಕೆನಡಾದಿಂದ ಪಡೆದುಕೊಂಡ ಪರಮಾಣು ರಿಯಾಕ್ಟರ್‌ ತಂತ್ರಜ್ಞಾನವನ್ನು  ಭಾರತೀಯ ವಿಜ್ಞಾನಿಗಳು  ಪರಿಪೂರ್ಣವಾಗಿ ಕರಗತ ಮಾಡಿಕೊಂಡರು. ಇದರ ಆಳವಾದ ಜ್ಞಾನದಿಂದಲೇ 1974ರಲ್ಲಿ ಭಾರತ ಪ್ರಥಮ ಅಣುಬಾಂಬ್ ಪರೀಕ್ಷೆ ನಡೆಸಿತು. ಇದರ ಬಳಿಕ ಕೆನಡಾ ಮಾತ್ರವಲ್ಲದೇ, ಅಂತರರಾಷ್ಟ್ರೀಯ ಸಮುದಾಯದಿಂದ ಭಾರತ  ಎಲ್ಲ ಬಗೆಯ ದಿಗ್ಬಂಧನಕ್ಕೆ ಒಳಗಾಯಿತು.



ಅಂತಿಮವಾಗಿ ಭಾರತಕ್ಕೆ ಈ ಅಗ್ನಿ ಪರೀಕ್ಷೆಯಲ್ಲಿ ಜಯ ಸಿಕ್ಕಿತು. ಕೆನಡಾ ಹಸ್ತಾಂತರಿಸಿದ್ದ 220 ಮೆ.ವಾ. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ರಿಯಾಕ್ಟರ್‌   ನಿರ್ಮಾಣದ ಜ್ಞಾನವನ್ನು ನಮ್ಮ ವಿಜ್ಞಾನಿಗಳು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದರು. ಅದರಲ್ಲಿದ್ದ ಸಣ್ಣ ಪುಟ್ಟ ಕುಂದುಕೊರತೆಗಳನ್ನು ನಿವಾರಿಸಿ, ದೇಶೀಯವಾಗಿಯೇ ವಿನ್ಯಾಸಗೊಳಿಸಿ ರಿಯಾಕ್ಟರ್‌ ನಿರ್ಮಿಸಿದರು. ಇದರ ಫಲವಾಗಿ ಕರ್ನಾಟಕದ ಕೈಗಾದಲ್ಲಿ 4, ರಾಜಸ್ತಾನದ ಕೋಟಾದಲ್ಲಿ 4, ಉತ್ತರ ಪ್ರದೇಶ ನರೋರಾದಲ್ಲಿ 2, ತಮಿಳುನಾಡಿನ ಕಲ್ಪಾಕಂನಲ್ಲಿ 2 ಮತ್ತು ಗುಜರಾತಿನ ಕಾಕ್ರಪಾರಾದಲ್ಲಿ 2 ರಿಯಾಕ್ಟರ್‌ಗಳು ಸ್ಥಾಪನೆಗೊಂಡವು.

ಈ ರಿಯಾಕ್ಟರ್‌ಗಳು ಅನೇಕ ದಶಕಗಳಿಂದ ಯಾವುದೇ ತೊಂದರೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಒಂದು ಸಣ್ಣ ಅಪಘಾತವೂ ಸಂಭವಿಸಿಲ್ಲ. ಗುಣಮಟ್ಟದ ವಿದ್ಯುತ್‌ ಪೂರೈಸುತ್ತಿವೆ. ಅಲ್ಲದೆ, ಭಾರತ ತನ್ನದೇ ಆದ 540 ಮೆ.ವಾ. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ರಿಯಾಕ್ಟರ್‌ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಮೂಲಕ ಈ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಿದೆ. ಈ ಅಪ್ರತಿಮ ಸಾಧನೆ ಮೂಲಕ ಭಾರತವು ಪರಮಾಣು ರಿಯಾಕ್ಟರ್‌  ವಿನ್ಯಾಸ ಮತ್ತು  ನಿರ್ಮಾಣ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರಿದೆ. ಈ ವಿನ್ಯಾಸದ 2 ರಿಯಾಕ್ಟರ್‌ಗಳು ಈಗಾಗಲೇ ಮಹಾರಾಷ್ಟ್ರದ ತಾರಾಪುರ್‌ನಲ್ಲಿವೆ. ಹತ್ತು ವರ್ಷಕ್ಕೂ  ಹೆಚ್ಚು ಅವಧಿಯಿಂದ ವಿದ್ಯುತ್‌ ಉತ್ಪಾದಿಸುತ್ತಿವೆ.

ವಿದ್ಯುತ್‌ ಉತ್ಪಾದನೆ ವ್ಯವಹಾರದಲ್ಲಿ ಇಮುನ್ನೋಟವಿದ್ದರೆ ಒಳಿತು. ಒಂದೇ ಯಂತ್ರದ ಮೂಲಕ ಹೆಚ್ಚು ಮೆ.ವಾ. ವಿದ್ಯುತ್‌ ಉತ್ಪಾದಿಸುವುದರಿಂದ ಹಲವು ಲಾಭಗಳಿವೆ.  ಆದ್ದರಿಂದ, ಭಾರತೀಯ ವಿಜ್ಞಾನಿಗಳು 540 ಮೆ.ವಾ. ರಿಯಾಕ್ಟರ್‌ನ ಶಾಖ ವರ್ಗಾವಣೆ (heat transfer) ವಿಭಾಗದಲ್ಲಿ ಹಲವು ಸುಧಾರಣೆಗಳನ್ನು ಮಾಡಿದ್ದಾರೆ. 700 ಮೆ.ವಾ. ಉತ್ಪಾದಿಸುವ ರಿಯಾಕ್ಟರನ್ನು ನಿರ್ಮಿಸಿದ್ದಾರೆ. ಈಗಾಗಲೇ ಈ ತರಹದ ನಾಲ್ಕು ರಿಯಾಕ್ಟರುಗಳು ಕೋಟಾದಲ್ಲಿ ಮತ್ತು ಕಾಕ್ರಪಾರಾದಲ್ಲಿ ನಿರ್ಮಾಣಗೊಳ್ಳುತ್ತಿವೆ. ಹರಿಯಾಣದ ಗೋರಖಪುರದಲ್ಲಿ ಇನ್ನೆರಡು 700ಮೆ.ವಾ. ರಿಯಾಕ್ಟರ್‌ ಸ್ಥಾಪಿಸಲೂ ಅನುಮತಿ ದೊರಕಿದೆ.

ಕಳೆದ ಹತ್ತು ವರ್ಷಗಳಲ್ಲಿ ವಿದೇಶಿ ಕಂಪೆನಿಗಳೊಡನೆ ಮಾಡಿಕೊಂಡ ಒಪ್ಪಂದಗಳು ಫಲ ನೀಡಿರಲಿಲ್ಲ. ವಿಜ್ಞಾನಿಗಳು  ಇಂತಹ ನಿರುತ್ಸಾಹದ ಸಂದರ್ಭವನ್ನು ಎದುರಿಸುತ್ತಿರುವಾಗಲೇ ಒಂದೇ ಸಲಕ್ಕೆ  ತಲಾ 700ಮೆ.ವಾ. ಸಾಮರ್ಥ್ಯದ ಹತ್ತು ರಿಯಾಕ್ಟರುಗಳ ನಿರ್ಮಾಣಕ್ಕೆ ನೀಡಿದ ಅನುಮತಿ ವಿಜ್ಞಾನಿಗಳ ವಲಯದಲ್ಲಿ ಆಶ್ಚರ್ಯ ಮತ್ತು ಸಂಭ್ರಮಕ್ಕೂ ಕಾರಣವಾಗಿದೆ.

ಒಮ್ಮೆ ಪರಮಾಣು ವಿಜ್ಞಾನಿ ಡಾ. ಅನಿಲ್‌ ಕಾಕೋಡ್ಕರ್‌ ಜತೆ ಮಾತನಾಡುವಾಗ, ‘ಇತರ ದೇಶಗಳ ರೀತಿಯಲ್ಲಿ ಭಾರತ 1000 ಮೆ.ವಾ. ರಿಯಾಕ್ಟರ್‌ಗಳನ್ನು ಏಕೆ ನಿರ್ಮಿಸಬಾರದು’ ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ನೀಡಿದ ಉತ್ತರ ಹೀಗಿತ್ತು: ‘ಈಗಾಗಲೇ ನಮ್ಮ ದೇಶದಲ್ಲಿ 700 ಮೆ.ವಾ. ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ರಿಯಾಕ್ಟರ್‌ ವಿನ್ಯಾಸ ತಯಾರಾಗಿದೆ. ಅದಕ್ಕೆ ಬೇಕಾಗುವ ಬಿಡಿ ಭಾಗಗಳು ಮತ್ತು ಉಪಕರಣಗಳನ್ನು ತಯಾರಿಸಲು ಅನೇಕ ಸಣ್ಣ ಮತ್ತು ದೊಡ್ಡ ಉದ್ಯಮಗಳಿಗೆ ಅವಕಾಶಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, 700 ಮೆ.ವಾ..ನಿಂದ 1000 ಮೆ.ವಾ. ಸಾಮರ್ಥ್ಯಕ್ಕೆ ಹೆಚ್ಚಿಸುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ’.

ಕಾಕೋಡ್ಕರ್‌ ವಾದವನ್ನು ಒಪ್ಪುವ ಡಾ. ಬಲದೇವರಾಜ್‌ ಅವರು ಹೇಳುವುದು ಹೀಗೆ, ‘ಪಿಎಸ್‌ಎಲ್‌ವಿ ರಾಕೆಟ್‌ ಅನ್ನು  ಉಡಾವಣೆಗೆ ನಮ್ಮ  ಇಸ್ರೊ ಹೇಗೆ ಬಳಸಿಕೊಳ್ಳುತ್ತದೆಯೋ ಹಾಗೇ 700 ಮೆ.ವಾ. ರಿಯಾಕ್ಟರನ್ನು ದುಡಿಸಿಕೊಳ್ಳಬಹುದಾಗಿದೆ’.

ಪರಮಾಣು ಇಂಧನದ ವಿಚಾರಕ್ಕೆ ಬಂದಾಗ ಸಾಮಾನ್ಯವಾಗಿ ಕಾಡುವುದು ಅದರ ಸುರಕ್ಷತೆ. ಎಲ್ಲರಿಗೂ ನೆನಪಿರಬಹುದು. 13 ವರ್ಷಗಳ ಹಿಂದೆ ಅಂದರೆ 2004ರಲ್ಲಿ ಕಲ್ಪಾಕಂನಲ್ಲಿ  ಬಲದೇವರಾಜ್‌ ನಿರ್ದೇಶಕರಾಗಿದ್ದರು. ಆಗ ಸಂಭವಿಸಿದ ಭಯಾನಕ ಸುನಾಮಿ ದುರಂತದಿಂದ ಅಪಾರ ಪ್ರಾಣ ಹಾನಿ ಮತ್ತು ಸ್ವತ್ತುಗಳು ನಾಶಗೊಂಡವು. ಆ ಸಂದರ್ಭದಲ್ಲಿ  ರಿಯಾಕ್ಟರುಗಳ ಸುರಕ್ಷತೆಗೆ ಕೈಗೊಂಡ ಕ್ರಮಗಳು ಅವಿಸ್ಮರಣೀಯ ಮತ್ತು ಅನುಸರಣೀಯ.

ಜಪಾನಿನ ಫುಕುಶಿಮಾದಲ್ಲಿ 2011ರ  ಸುನಾಮಿ ಮತ್ತು ಆ ಬಳಿಕ ಸಂಭವಿಸಿದ ವಿಕಿರಣದ ದುರಂತ ಹಾಗೂ ನಮ್ಮ ಪರಮಾಣು ವಿದ್ಯುತ್‌ ಯೋಜನೆ ಮೇಲೆ ಅದರ ಪರಿಣಾಮಗಳ ಬಗ್ಗೆ ಬಲದೇವರಾಜ್‌ ಅವರನ್ನು ಪ್ರಶ್ನಿಸಿದೆ. ಅದಕ್ಕೆ ಅವರ ಉತ್ತರ ಹೀಗಿತ್ತು, ‘ಫುಕುಶಿಮಾದಲ್ಲಿದ್ದ  ರಿಯಾಕ್ಟರ್‌ಗಳು ಅತಿ ಹಳೆಯ ತಂತ್ರಜ್ಞಾನವನ್ನು ಅಬಲಂಬಿಸಿದ್ದವು. ಅಪಘಾತ ಮತ್ತು ಆಕಸ್ಮಿಕ ಸಂಭವಿಸಿದಾಗ ಅನುಸರಿಸಬೇಕಾದ ಸುರಕ್ಷತೆ ಉಪಾಯಗಳು ಕಡಿಮೆ ಇದ್ದವು. ಭಾರತೀಯ ರಿಯಾಕ್ಟರ್‌ಗಳ ತಂತ್ರಜ್ಞಾನ ಅಲ್ಲಿನ ತಂತ್ರಜ್ಞಾನಕ್ಕಿಂತ ಸಾಕಷ್ಟು ಮುಂದುವರಿದಿದೆ. ಅಲ್ಲದೆ, ನಮ್ಮಲ್ಲಿ ಬಂದ 2004ರ ಸುನಾಮಿ ಬಳಿಕ  ಇನ್ನೂ ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ಥಳದ ಆಯ್ಕೆ ಮತ್ತು ಕಟ್ಟಡ ವಿನ್ಯಾಸದಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಾಗುತ್ತಿದೆ. ನಾವು ವಿಜ್ಞಾನಿಗಳೂ ನಮ್ಮ ಕುಟುಂಬದೊಂದಿಗೆ ರಿಯಾಕ್ಟರುಗಳ ಸಮೀಪದಲ್ಲೇ ವಾಸಿಸುತ್ತೇವೆ’ ಎಂದರು.

ಜಗತ್ತಿಗೆ ಪರಮಾಣುವಿನ ಕಲ್ಪನೆ ಕೊಟ್ಟು ಅದನ್ನು ಆಧರಿಸಿದ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ವೈಶೇಷಿಕ ಸೂತ್ರ ರಚಿಸಿದ ಮಹರ್ಷಿ ಕಣಾದ ಮತ್ತು ಜೈನ,  ಅಜೀವಿಕ ಸೈದ್ಧಾಂತಿಕರ ಪಾತ್ರ ಪ್ರಮುಖವಾದುದು. ಬಹುಶಃ ಇದೇ ಕಾರಣಕ್ಕಾಗಿ 20ನೇ ಶತಮಾನದ ಆದಿ ಭಾಗದಲ್ಲಿ ಆಧುನಿಕ ಭೌತವಿಜ್ಞಾನವು ಅಣು- ಪರಮಾಣುಗಳ ಸಿದ್ಧಾಂತವನ್ನೂ, ಕ್ವಾಂಟಂ ಸಿದ್ಧಾಂತವನ್ನೂ ಮುಂದಿಟ್ಟಾಗ ಸಿ.ವಿ. ರಾಮನ್, ಸತ್ಯೇಂದ್ರನಾಥ ಬೋಸ್, ಮೇಘನಾದ ಸಹಾ, ಸುಬ್ರಹ್ಮಣ್ಯ ಚಂದ್ರಶೇಖರ, ಹೋಮಿ ಭಾಭಾ ಅವರಂತಹ ಭಾರತೀಯ ವಿಜ್ಞಾನಿಗಳು ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದರು.

ಅಲ್ಲದೆ, 1930–40ರಲ್ಲಿ ಪರಮಾಣು ವಿಜ್ಞಾನದಲ್ಲಾದ ಬೆಳವಣಿಗೆಗಳನ್ನು ಕೂಲಂಕಷವಾಗಿ ಗುರುತಿಸಿದ ಹೋಮಿ ಭಾಭಾ ಅವರು ಸ್ವಾತಂತ್ರ್ಯಪೂರ್ವ, 1944 ರಲ್ಲೇ ಜೆ.ಆರ್.ಡಿ. ಟಾಟಾ ಮತ್ತು ಜವಾಹರಲಾಲ್ ನೆಹರೂ ಅವರನ್ನು ಸಂಪರ್ಕಿಸಿ, ‘ಭಾರತವೂ ಪರಮಾಣು ವಿಜ್ಞಾನದಲ್ಲಿ ಉನ್ನತ ಅನುಸಂಧಾನ ನಡೆಸಬೇಕು ಮತ್ತು ಹೊಸ ತಂತ್ರಜ್ಞಾನವನ್ನು ಅರಗಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು. ಇದರ ಫಲವಾಗಿ 1944ರಲ್ಲಿ ಮುಂಬೈಯಲ್ಲಿ ಟಿಐಎಫ್‌ಆರ್‌ ಸಂಶೋಧನಾ ಸಂಸ್ಥೆ ಮತ್ತು  1948ರಲ್ಲಿ ಭಾಭಾರವರ ನೇತೃತ್ವದಲ್ಲಿ ಭಾರತೀಯ ಪರಮಾಣು ಊರ್ಜಾ ಆಯೋಗ ಸ್ಥಾಪನೆಯಾಯಿತು. 1948ರಲ್ಲಿ  ಡಾ. ವಾಡಿಯಾ  ನೇತೃತ್ವದಲ್ಲಿ ಭಾರತದಲ್ಲಿರುವ ಯುರೇನಿಯಮ್, ಥೋರಿಯಮ್ ಇತ್ಯಾದಿ ಖನಿಜಗಳ  ಭೂಗರ್ಭಶಾಸ್ತ್ರೀಯ ಸರ್ವೇಕ್ಷಣೆ ನಡೆಸಲಾಯಿತು.ಹೋಮಿ ಭಾಭಾ ಅವರು ಸಮಾಜಕ್ಕಾಗಿ ಶಾಂತಿಯುತ ಪರಮಾಣು ತಂತ್ರಜ್ಞಾನದ ಕನಸು ಕಂಡಿದ್ದರು. ಅವರ ಕನಸು 70 ವರ್ಷಗಳ ಬಳಿಕ ಈಗ ನನಸಾಗುತ್ತಿದೆ. ಸಾವಿರಾರು ವಿಜ್ಞಾನಿ, ತಂತ್ರಜ್ಞಾನಿಗಳ ಪರಿಶ್ರಮ ಫಲ ನೀಡುವ ಸಮಯ ಬಂದಿದೆ.

60 ವರ್ಷಗಳ ಹಿಂದೆ 1957ರ ಜನವರಿ 20ರಂದು ಟ್ರಾಂಬೆಯಲ್ಲಿ ಭಾರತದ ಪ್ರಥಮ ಸಂಶೋಧನಾ ರಿಯಾಕ್ಟರ್‌ ‘ಅಪ್ಸರಾ’ವನ್ನು ಉದ್ಘಾಟಿಸುವಾಗ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ ಆಡಿದ ಮಾತು ನೆನಪಿಸಿಕೊಳ್ಳಬೇಕು. ಅವು ವಿಜ್ಞಾನಿಗಳಿಗೆ ಸದಾ ಮಾರ್ಗದರ್ಶಕವಾಗಿವೆ.
ನೆಹರೂ ಹೇಳಿದ್ದು, ‘ಡಾ. ಭಾಭಾ ಮತ್ತು ಡಾ. ಕೃಷ್ಣನ್  ಪ್ರಯತ್ನದಿಂದಾಗಿ ಭಾರತದಲ್ಲಿ ಪರಮಾಣು ರಿಯಾಕ್ಟರ್‌ ಸ್ಥಾಪನೆಗೊಂಡಿದೆ.  ಆದರೆ, ನನಗೆ ಅಣು ವಿಜ್ಞಾನವಾಗಲೀ, ರಿಯಾಕ್ಟರ್‌ಗಳ ರಹಸ್ಯವಾಗಲೀ ಎಳ್ಳಷ್ಟೂ ಗೊತ್ತಿಲ್ಲ. ಇವುಗಳಿಂದ ಹೊರಬರುವ ಅಪಾರ ‘ಶಕ್ತಿ ’ ಮತ್ತು ಇಂದಿನ ವಿಶ್ವದಲ್ಲಿ ಅದರ ಮಹತ್ವದ ಬಗ್ಗೆ ತಿಳಿವಳಿಕೆ ಇದೆ.  ಪ್ರಾಚೀನ ಗ್ರೀಕ್‌ ನಾಗರಿಕತೆಯಲ್ಲಿ ಕೆಲ ವಿದ್ವಾಂಸರು ಅಪಾರ ಶಕ್ತಿಯುಳ್ಳ ಕೆಲ ರಹಸ್ಯ ಸಿದ್ಧಿಗಳ ಬಗ್ಗೆ ಹೇಳುತ್ತಿದ್ದರು.

ಅದು ಅಂದಿನ ಜನಸಾಮಾನ್ಯರಲ್ಲಿ ಬೆರಗನ್ನೂ, ಭಯವನ್ನೂ ಉಂಟುಮಾಡುತ್ತಿತ್ತು. ನಮ್ಮ ನಾಗರಿಕತೆಯಲ್ಲೂ ಪ್ರಾಚೀನಕಾಲದಲ್ಲಿ ಅದೇ ತರಹ ನಿಗೂಢ ಸಿದ್ಧಿಗಳ ಬಗೆಗೆ ಮಾತನಾಡುವ ಯೋಗಿಗಳು  ಇದ್ದರು. ಈಗ ಪರಮಾಣುವಿನ ರಹಸ್ಯ ಶಕ್ತಿಯ ಬಗೆಗೆ ಇಂದಿನ ವಿಜ್ಞಾನಿಗಳು ನಮ್ಮನ್ನು ಬೆರಗುಗೊಳಿಸುತ್ತಾರೆ ಮತ್ತು ಭಯ ಹುಟ್ಟಿಸುತ್ತಾರೆ. ಈ ಸಿದ್ಧಿಗಳನ್ನು ನಾವು ಸಾಧಿಸಲೇ ಬೇಕು. ಆದರೆ, ಅದು ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತಿದೆ ಎಂದು ನಾನು ಖಚಿತವಾಗಿ ಹೇಳಲಾರೆ’.

ಆದ್ದರಿಂದ ನಮ್ಮ ವಿಜ್ಞಾನಿಗಳ ಕೆಲಸ ಕೇವಲ ಪರಮಾಣುವಿನ ಸಂಶೋಧನೆ ಮತ್ತು ಅದರಲ್ಲಿರುವ ಶಕ್ತಿಯನ್ನು ತಂತ್ರಜ್ಞಾನದ ಮೂಲಕ ಪ್ರಕಟಿಸುವುದಕ್ಕೆ ಸೀಮಿತ ಅಲ್ಲ. ಅದರ ರಹಸ್ಯಗಳನ್ನೂ, ಲಾಭಗಳನ್ನೂ, ದುಷ್ಪರಿಣಾಮಗಳನ್ನೂ ಜನತೆಗೆ ತಿಳಿಸುತ್ತ  ಅವರನ್ನೂ ತಮ್ಮ ವೈಜ್ಞಾನಿಕ ಪಯಣದ ಜೊತೆಗಾರರನ್ನಾಗಿ ಮಾಡಿಕೊಳ್ಳುವುದು ಅವಶ್ಯಕವಾಗಿದೆ.

ನಿರೂಪಣೆ: ಎಸ್‌. ರವಿಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT