ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡಿ, ಮಾಡುತ್ತಿರಿ...

Last Updated 9 ಜೂನ್ 2017, 19:30 IST
ಅಕ್ಷರ ಗಾತ್ರ

‘ಸರ್, ಐ. ಸಿ. ಯು.ನಲ್ಲಿ ಅಡ್ಮಿಟ್ ಆಗಿರುವ ನನ್ನ ತಮ್ಮನಿಗೆ ಎರಡು ಯುನಿಟ್ ರಕ್ತ ಬೇಕೇ ಬೇಕು ಎಂದಿದ್ದಾರೆ ಡಾಕ್ಟ್ರು... ದಯವಿಟ್ಟು ಅರೇಂಜ್ ಮಾಡಿಕೊಡಿ ಸರ್... ದುಡ್ಡು ಎಷ್ಟು ಬೇಕಾದ್ರೂ ಕೊಡ್ತೀವಿ, ಆದರೆ ನಮ್ಮ ಕಡೆಯವರು ಯಾರೂ ರಕ್ತ ಕೊಡ್ಲಿಕ್ಕಾಗಲ್ಲ...’ ಇವು ಇತ್ತೀಚೆಗೆ ನಮ್ಮ ರಕ್ತನಿಧಿಗೆ ಬಂದ ರೋಗಿಯ ಕಡೆಯವರೊಬ್ಬರ ಮಾತುಗಳು.

ಹೌದು, ಇಂದಿಗೂ ಬಹುತೇಕ ಜನರಲ್ಲಿ ರಕ್ತದಾನದ ಬಗ್ಗೆ ಭಯ ಹಾಗೂ ತಪ್ಪು ಕಲ್ಪನೆಗಳೇ ಹೆಚ್ಚು. ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗುವವರು ಈ ದಿನಗಳಲ್ಲಿಯೂ ಕಡಿಮೆಯೇ.

ಅಪಘಾತಗಳು ಸಂಭವಿಸಿದಾಗ, ಶಸ್ತ್ರಚಿಕಿತ್ಸೆಯ ಸಂದರ್ಭಗಳಲ್ಲಿ, ಹೆರಿಗೆಯ ನಂತರ, ರಕ್ತಹೀನತೆಯ ಚಿಕಿತ್ಸೆಯಲ್ಲಿ, ಕುಸುಮರೋಗ ಹಾಗೂ ಮತ್ತಿತರ ರಕ್ತಸ್ರಾವದ ದೋಷವಿರುವ ಕಾಯಿಲೆಗಳ ಚಿಕಿತ್ಸೆಯಲ್ಲಿ ರೋಗಿಗೆ ರಕ್ತವನ್ನು ಕೊಡುವುದು ಅತ್ಯವಶ್ಯಕ. ಆದರೆ, ರಕ್ತವನ್ನು ಕೃತಕವಾಗಿ ತಯಾರಿಸಲಾಗುವುದಿಲ್ಲ. ಹಾಗಾದರೆ ಚಿಕಿತ್ಸೆಗೆ ಬೇಕಾದ ರಕ್ತವನ್ನು ಪೂರೈಸುವುದಾದರೂ ಹೇಗೆ? ರಕ್ತವನ್ನು ರಕ್ತದಾನಿಗಳಿಂದ ಮಾತ್ರ ಪಡೆಯಲು ಸಾಧ್ಯ. ಆದ್ದರಿಂದಲೇ ಹೆಚ್ಚು ಹೆಚ್ಚು ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಕ್ತದಾನ ಮಾಡಬೇಕು. ಹಾಗಾದಾಗ ಮಾತ್ರ ರಕ್ತನಿಧಿಗಳಲ್ಲಿ ಎಲ್ಲ ಗುಂಪಿನ ರಕ್ತವನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಟ್ಟು, ಅವಶ್ಯವಿರುವ ರೋಗಿಗೆ ಸರಿಯಾದ ಸಮಯಕ್ಕೆ ಒದಗಿಸಲು ಸಾಧ್ಯ.

ಈ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲೆಂದೇ ವಿಶ್ವದಾದ್ಯಂತ ಪ್ರತಿ ವರ್ಷವೂ ಜೂನ್ 14 ರಂದು ‘ವಿಶ್ವ ರಕ್ತದಾನಿಗಳ ದಿನ’ ವನ್ನು ಆಚರಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ 2004ರಲ್ಲಿ ಈ ಆಚರಣೆ ಆರಂಭವಾಯಿತು. ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೀನರ್‌ನ ಜನ್ಮದಿನದ ನೆನಪಿಗಾಗಿ ಈ ಆಚರಣೆಯನ್ನು ಆರಂಭಿಸಲಾಯಿತು. ರಕ್ತವನ್ನು ಎ, ಬಿ, ಎಬಿ ಹಾಗೂ ಒ – ಎಂಬ ಗುಂಪುಗಳನ್ನಾಗಿ ವಿಂಗಡಿಸುವುದನ್ನು ಕಂಡುಹಿಡಿದವರು ಈ ವಿಜ್ಞಾನಿಯೇ. ಇಂದಿಗೂ ರಕ್ತವನ್ನು ಈ ಬಗೆಯಲ್ಲಿಯೇ ವಿಂಗಡಿಸಲಾಗುತ್ತದೆ.

ಈ ಆಚರಣೆಯ ಮುಖ್ಯ ಉದ್ದೇಶಗಳೇನು?

* ಸ್ವಯಂಪ್ರೇರಿತ ರಕ್ತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು.

* ರಕ್ತದಾನಿಗಳನ್ನು ಗುರುತಿಸಿ, ಗೌರವಿಸುವುದು.

* ಎಲ್ಲ ಆರೋಗ್ಯವಂತರನ್ನೂ ಸ್ವಯಂಪ್ರೇರಿತ ರಕ್ತದಾನಕ್ಕೆ ಪ್ರೋತ್ಸಾಹಿಸುವುದು.

ರಕ್ತದಾನ ಸುರಕ್ಷಿತ

ರಕ್ತದಾನ ಮಾಡುವುದರಿಂದ ದಾನಿಗೆ ಯಾವುದೇ ಹಾನಿಯಿಲ್ಲ.  ಒಬ್ಬ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5ರಿಂದ 6 ಲೀಟರ್‌ಗಳಷ್ಟು ರಕ್ತ ಹರಿಯುತ್ತಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿಲಿ ಲೀಟರ್‌ನಷ್ಟೇ ರಕ್ತವನ್ನು ದಾನಿಯಿಂದ ಸ್ವೀಕರಿಸುವುದರಿಂದ ದಾನಿಗೆ ಯಾವುದೇ ಅಪಾಯವಾಗದು. ಆದ್ದರಿಂದ 18 ರಿಂದ 60 ವರ್ಷದೊಳಗಿನ, 45 ಕೆ. ಜಿ.ಗಿಂತಲೂ ಹೆಚ್ಚು ತೂಕವಿರುವ, 12.5 ಗ್ರ್ಯಾಮ್‌ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲ ಆರೋಗ್ಯವಂತ ಪುರುಷರು ಹಾಗೂ ಮಹಿಳೆಯರು ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ನಿರಾತಂಕವಾಗಿ ರಕ್ತದಾನವನ್ನು ಮಾಡಬಹುದು.

ರಕ್ತದಾನ ಪ್ರಕ್ರಿಯೆ ಹಾಗೂ ನಂತರ

ವ್ಯಕ್ತಿಯು ರಕ್ತದಾನದ ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇದ್ದರೆ, ಉಪವಾಸ ಮಾಡಿದ್ದರೆ ಅಥವಾ ಕಾರಣಾಂತರಗಳಿಂದ ಆಯಾಸಗೊಂಡಿದ್ದರೆ ರಕ್ತದಾನ ಪ್ರಕ್ರಿಯೆಯನ್ನು ಮುಂದಿನ ದಿನಕ್ಕೆ ಮುಂದೂಡಿದರೆ ಒಳಿತು. ರಕ್ತದಾನದ ದಿನದಂದು ವ್ಯಕ್ತಿಯು ಸಮರ್ಪಕವಾದ ಆಹಾರವನ್ನು ಸೇವಿಸಿರಬೇಕು ಮತ್ತು ಸಾಕಷ್ಟು ನಿದ್ದೆ ಹಾಗೂ ವಿಶ್ರಾಂತಿ ಪಡೆದಿರಬೇಕು. ರಕ್ತದಾನ ಮಾಡಿ  ಎರಡು ಗಂಟೆಗಳ ನಂತರ ದಾನಿಯು ತನ್ನ ದೈನಂದಿನ ಚಟುವಟಿಕೆಗಳನ್ನು ಪ್ರಾರಂಭಿಸಬಹುದು. ಆ ದಿನ ಮಾತ್ರ ಆತ ಹೆಚ್ಚು ನೀರನ್ನು ಕುಡಿಯಬೇಕಾಗಬಹುದು. ನಂತರದ ದಿನಗಳಲ್ಲಿ ಆತನಿಗೆ ಯಾವುದೇ ಬಗೆಯ ಔಷಧವಾಗಲೀ, ಹೆಚ್ಚಿನ ವಿಶ್ರಾಂತಿಯಾಗಲೀ ಅಗತ್ಯವಿರುವುದಿಲ್ಲ.

ಹೆಚ್ಚು ದಿನ ಶೇಖರಿಸಲಾಗುವುದಿಲ್ಲ

ದಾನಿಯಿಂದ ಸ್ವೀಕರಿಸಿದ ರಕ್ತವನ್ನು ರಕ್ತನಿಧಿಯಲ್ಲಿ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಸುರಕ್ಷಿತವಾದ ರಕ್ತವನ್ನು ವಿಶೇಷವಾದ ರೆಫ್ರಿಜರೇಟರ್‌ಗಳಲ್ಲಿ ಸೂಕ್ತ ಉಷ್ಣತೆಯಲ್ಲಿ ಇರಿಸಲಾಗುತ್ತದೆ. ಬಹುತೇಕ ರಕ್ತನಿಧಿಗಳಲ್ಲಿ ಒಬ್ಬ ವ್ಯಕ್ತಿಯಿಂದ ಪಡೆದ ರಕ್ತವನ್ನು ವಿಶೇಷ ಉಪಕರಣಗಳ ನೆರವಿನಿಂದ ಮೂರು ಅಥವಾ ನಾಲ್ಕು ಘಟಕಗಳಾಗಿ ವಿಂಗಡಿಸಿ ಇಡಲಾಗುತ್ತದೆ. ಸಾಮಾನ್ಯವಾಗಿ ರಕ್ತವನ್ನು ಕೆಂಪು ರಕ್ತಕಣಗಳು, ಕಿರುಬಿಲ್ಲೆಗಳು ಮತ್ತು  ರಕ್ತದ ದ್ರವಾಂಶ ಎಂಬ ಮೂರು ಭಾಗಗಳಾಗಿ ವಿಂಗಡಿಸಿ ಇಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕೆಂಪು ರಕ್ತಕಣಗಳನ್ನು  35 ದಿನಗಳ ಒಳಗೆ ಹಾಗೂ ಕಿರುಬಿಲ್ಲೆಗಳನ್ನು ಐದಿ ದಿನಗಳ ಒಳಗೆ ಮಾತ್ರವೇ ಉಪಯೋಗಿಸಬಹುದು.

ರಕ್ತಕ್ಕೆ ಬೇಡಿಕೆ ಇದೆ

ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತಕ್ಕೆ ಸಾಕಷ್ಟು ಬೇಡಿಕೆ ಇರುತ್ತದೆ. ನೆನಪಿಡಿ, ರಕ್ತಕ್ಕೆ ಪರ್ಯಾಯವಾದ ವಸ್ತು ಮತ್ತೊಂದಿಲ್ಲ. ಕೆಲವೊಮ್ಮೆ ಸರಿಯಾದ ಗುಂಪಿನ ರಕ್ತ ದೊರಕದೇ ಹೋದಾಗ, ರೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತದೆ. ಹಾಗಾಗಿಯೇ ಹೇಳುವುದು, ರಕ್ತಕ್ಕೆ ಜೀವದಾನದ ಶಕ್ತಿಯಿದೆ; ರೋಗಿಯೊಬ್ಬನನ್ನು ಬದುಕಿಸುವ ಸಾಮರ್ಥ್ಯವಿದೆ. ಆದ್ದರಿಂದಲೇ ಪ್ರತಿಯೊಬ್ಬರೂ ರಕ್ತದಾನಕ್ಕೆ ಮನಸ್ಸು ಮಾಡಬೇಕು. ಇನ್ನೊಂದು ಜೀವಕ್ಕೂ ಬದುಕುವ ಅವಕಾಶ ಮಾಡಿಕೊಡಬೇಕು.

ರಕ್ತದಾನದ ಸಂಕಲ್ಪ ಮಾಡಿ

ವಿಶ್ವ ರಕ್ತದಾನಿಗಳ ದಿನದ ಆಚರಣೆಯು ಅರ್ಥಪೂರ್ಣವಾಗಲು ಪ್ರತಿಯೊಬ್ಬರೂ ರಕ್ತದಾನದ ಸಂಕಲ್ಪ ಮಾಡಬೇಕು. ಕನಿಷ್ಠ ವರ್ಷಕ್ಕೊಮ್ಮೆಯಾದರೂ ರಕ್ತದಾನ ಮಾಡಲು ಮುಂದಾಗಬೇಕು. ನಿಮ್ಮ ಹುಟ್ಟು ಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವವನ್ನು, ಅಂದು ರಕ್ತದಾನವನ್ನು ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಳ್ಳುವುದರ ಬಗ್ಗೆ ವಿಚಾರ ಮಾಡಬೇಕು. ಹಾಗಾದರೆ ತಡವೇಕೆ? ಬನ್ನಿ! ನಿಮ್ಮ ಹತ್ತಿರದ ರಕ್ತ ನಿಧಿಯಲ್ಲಿ ಸ್ವಯಂಪ್ರೇರಿತ ರಕ್ತದಾನಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಂದೇ ನೊಂದಾಯಿಸಿ.

**

ಧ್ಯೇಯವಾಕ್ಯ
ನೀವೇನು ಮಾಡಬಲ್ಲಿರಿ? ‘ರಕ್ತದಾನ ಮಾಡಿ, ಈಗಲೇ ಮಾಡಿ, ಆಗಾಗ ಮಾಡುತ್ತಿರಿ’ – ಇದು ಈ ಬಾರಿಯ ಧ್ಯೇಯವಾಕ್ಯ. ಒಬ್ಬ ವ್ಯಕ್ತಿಯು ಒಂದಕ್ಕಿಂತಲೂ ಹೆಚ್ಚು ಬಾರಿ ರಕ್ತದಾನವನ್ನು ಮಾಡಬಹುದು ಎಂಬುದನ್ನು ಈ ವರ್ಷದ ಧ್ಯೇಯವಾಕ್ಯವು ಒತ್ತಿ ಹೇಳುತ್ತದೆ. ಹೌದು, ಒಬ್ಬ ಆರೋಗ್ಯವಂತ ವ್ಯಕ್ತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಯಾವುದೇ ಅಪಾಯವಿಲ್ಲದೆ ರಕ್ತದಾನ ಮಾಡಬಹುದು.

**

ರಕ್ತದಾನಕ್ಕೆ ಯಾರು ಅನರ್ಹರು?
* ಯಕೃತ್ತು, ಮೂತ್ರಪಿಂಡ ಮತ್ತು ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು.
* ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು
* ನಿಯಂತ್ರಣವಿಲ್ಲದ ಮಧುಮೇಹದಿಂದ ಬಳಲುತ್ತಿರುವವರು
* ಕ್ಯಾನ್ಸ್‌ರ್ ಕಾಯಿಲೆ ಇರುವವರು
* ಋತುಸ್ರಾವದಲ್ಲಿರುವ ಮಹಿಳೆಯರು
* ಗರ್ಭಿಣಿ ಸ್ತ್ರೀಯರು
* ಮಗುವಿಗೆ ಎದೆ ಹಾಲುಣಿಸುವ ತಾಯಂದಿರು
* ರಕ್ತಹೀನತೆಯಿರುವವರು
* ಅಸಾಮಾನ್ಯ ರಕ್ತಸ್ರಾವದಿಂದ ಬಳಲುವವರು
* ರಕ್ತದಾನ ಮಾಡಿದ ವ್ಯಕ್ತಿಯು ಮುಂದಿನ ಮೂರು ತಿಂಗಳವರೆಗೂ
* ರಕ್ತ ವರ್ಗಾವಣೆ ಮಾಡಿಸಿಕೊಂಡವರು ಮುಂದಿನ ಆರು ತಿಂಗಳವರೆಗೂ
* ಶಸ್ತ್ರಚಿಕಿತ್ಸೆಗೆ ಒಳಗಾದವರು ಮುಂದಿನ ಒಂದು ವರ್ಷದವರೆಗೂ
* ಮಲೇರಿಯಾ, ಟೈಫಾಯ್ಡ್ ಹಾಗೂ ಜಾಂಡೀಸ್ ಕಾಯಿಲೆಯಿಂದ ಬಳಲಿದವರು ಮುಂದಿನ ಆರು ತಿಂಗಳವರೆಗೂ
* ಯಾವುದೇ ಸೋಂಕಿನ ಕಾಯಿಲೆಗಳ ವಿರುದ್ಧ ಲಸಿಕೆಗಳನ್ನು ಹಾಕಿಸಿಕೊಂಡವರು ವೈದ್ಯರ ಮಾರ್ಗದರ್ಶನದಂತೆ ಸ್ವಲ್ಪ ಕಾಲ ರಕ್ತದಾನವನ್ನು ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT