ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕುಲದ ಆತ್ಮಾವಲೋಕನ ಅಗತ್ಯ

Last Updated 21 ಜೂನ್ 2017, 19:30 IST
ಅಕ್ಷರ ಗಾತ್ರ

ಖಾಸಗಿ ವೈದ್ಯಕೀಯ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ–2017’ ವಿಚಾರದಲ್ಲಿ ದೊಡ್ಡ ಗದ್ದಲ ಎದ್ದಿರುವುದು ನಿರೀಕ್ಷಿತ. ಇತಿಹಾಸದಲ್ಲಿ ಎಂದೂ ಯಾರೂ ನಿಯಂತ್ರಿಸಲಾಗದ ವೈದ್ಯಕುಲವನ್ನು ಒಂದು ಚೌಕಟ್ಟಿಗೆ ತರುವ ಪ್ರಯತ್ನವು ಸುಲಭಕ್ಕೆ ಯಶಸ್ವಿಯಾಗುವುದು ಅನುಮಾನ.

ನಮ್ಮನ್ನು ನಿಯಂತ್ರಿಸಲು ನೀವ್ಯಾರು? ಎಂದು ವೈದ್ಯರಲ್ಲಿನ ಒಂದು ಗುಂಪು ಕೇಳುತ್ತಿದೆ. ವಾಸ್ತವದಲ್ಲಿ ವೈದ್ಯಲೋಕದ ಅಹಂನ ಮಟ್ಟ ಇನ್ನೂ ಹೆಚ್ಚೇ ಇದೆ. ವ್ಯಕ್ತಿಯೊಬ್ಬರ ದೇಹದ ಕುರಿತು, ಆ ವ್ಯಕ್ತಿಗಿಂತ ಇನ್ನೊಬ್ಬರಿಗೆ ಹೆಚ್ಚು ತಿಳಿದಿರುತ್ತದೆ ಎಂಬುದೇ ತಿಳಿದಿರುವ ವ್ಯಕ್ತಿಯನ್ನು ಸರ್ವಜ್ಞನನ್ನಾಗಿಸಿಬಿಡುತ್ತದೆ. ಅದು ವೈದ್ಯರುಗಳಿಗೆ ತಂದುಕೊಟ್ಟಿರುವ ಸೊಕ್ಕು (Arrogance) ಅಷ್ಟಿಷ್ಟಲ್ಲ. ಮಿಕ್ಕವರೆಲ್ಲರನ್ನೂ ಕ್ಷುಲ್ಲಕ ಜನರೆಂಬಂತೆ ವೈದ್ಯ ಸಮುದಾಯ ನೋಡುವುದು ಸರ್ವೇ ಸಾಮಾನ್ಯ. ಈ ಸಂದರ್ಭದಲ್ಲೂ ಅದು ಒಂದು ಮಟ್ಟದಲ್ಲಿ ಕಂಡುಬರುತ್ತಿದೆ.

ಪ್ರಸ್ತಾಪಿತ ಮಸೂದೆ ಕುರಿತ ಇತರ ಚರ್ಚೆಗಳೇನೇ ಇದ್ದರೂ, ಪ್ರಧಾನವಾಗಿ ಕೇಳಿ ಬರುತ್ತಿರುವ ಒಂದು ವಾದವೇನೆಂದರೆ, ‘ನೀವು ಸರ್ಕಾರಿ ಆಸ್ಪತ್ರೆಗಳನ್ನು ಬಲಗೊಳಿಸಿದರೆ ಸಾಕಲ್ಲವೇ?, ಖಾಸಗಿಯವರನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸರ್ಕಸ್‌ ಏಕೆ’ ಎಂಬುದು.

ಮೇಲ್ನೋಟಕ್ಕೆ ಇದು ಹೌದಲ್ಲವೇ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ, ಅಸಲಿ ಸಂಗತಿ ಇರುವುದು ಇಲ್ಲಿಯೇ. ಶಿಕ್ಷಣದ ವಿಚಾರದಲ್ಲೂ ಇದೇ ಅನ್ವಯಿಸುತ್ತದೆ. ಜಗತ್ತಿನಲ್ಲಿ ಖಾಸಗಿ ಕ್ಷೇತ್ರ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡೂ ಗಣನೀಯ ಪ್ರಮಾಣದಲ್ಲಿದ್ದೂ, ಶಿಕ್ಷಣದ ಸಾರ್ವತ್ರೀಕರಣವನ್ನು ಸಾಧಿಸಿರುವ ಒಂದೇ ಒಂದು ದೇಶವೂ ಇಲ್ಲ. ಏಕೆಂದರೆ, ಸಾರ್ವಜನಿಕ ಕ್ಷೇತ್ರವು ದುರ್ಬಲವಾಗಿದ್ದರೇನೇ ಶಿಕ್ಷಣದ ವ್ಯಾಪಾರೀಕರಣ ಸಾಧ್ಯ. ಆಗ ಮಾತ್ರವೇ ಖಾಸಗಿ ಕ್ಷೇತ್ರದ ಗಣನೀಯ ಅಸ್ತಿತ್ವ (significant presence) ಸಾಧ್ಯ.

ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಉದಾಹರಣೆಯ ಮೂಲಕ ಇದನ್ನು ನೋಡಬಹುದು. ನಮ್ಮ ವೈದ್ಯಕೀಯ ಕ್ಷೇತ್ರವು ವೈದ್ಯ ಕೇಂದ್ರಿತವಾಗಿದೆ (ಇದನ್ನು ಕಡಿಮೆ ಮಾಡುವುದೂ ಅಗತ್ಯ). ವೈದ್ಯರಿಲ್ಲದೇ ಆಸ್ಪತ್ರೆ ಇರುವುದು ಸಾಧ್ಯವಿಲ್ಲ. ಆದರೆ, ಸರ್ಕಾರಿ ಕ್ಷೇತ್ರದಲ್ಲಿ ಯಾವಾಗಲೂ ವೈದ್ಯರುಗಳ ಕೊರತೆ. ಅದರಲ್ಲೂ ತಜ್ಞ ವೈದ್ಯರುಗಳ ಸಂಖ್ಯೆ ಇನ್ನೂ ಕಡಿಮೆ. ಇದನ್ನು ಸರಿ ಮಾಡಿಕೊಳ್ಳಲು ಸರ್ಕಾರವು ವೈದ್ಯರುಗಳ ಸಂಬಳವನ್ನು ಎರಡು-ಮೂರು ಪಟ್ಟು ಹೆಚ್ಚಿಸಿತು. ಆದರೆ, ಖಾಸಗಿ ಪ್ರಾಕ್ಟೀಸ್‌ನಲ್ಲಿ ತಿಂಗಳೊಂದಕ್ಕೆ ₹ 3–4 ಲಕ್ಷ ದುಡಿಯುವ ಸಾಧ್ಯತೆ ಇರುವವರು ಸರ್ಕಾರಿ ಕ್ಷೇತ್ರಕ್ಕೆ ಬರುವುದಿಲ್ಲ. ದಿನವೊಂದಕ್ಕೆ ₹1–2 ಲಕ್ಷ ದುಡಿಯುವ ವೈದ್ಯರೂ ಇದ್ದಾರೆ. ಇದನ್ನು ನಿಯಂತ್ರಿಸದೇ ಇದ್ದರೆ, ಸರ್ಕಾರಿ ವ್ಯವಸ್ಥೆಗೆ ವೈದ್ಯರು ಎಲ್ಲಿಂದ ಬಂದಾರು?   ಹೀಗಿರುವಾಗ ಸರ್ಕಾರಿ ಸೇವೆಯ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್ ಮಾಡಬೇಡಿ ಎಂಬ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ, ಸರ್ಕಾರಿ ವ್ಯವಸ್ಥೆಯನ್ನು ವೈದ್ಯರಿಲ್ಲದೇ ನಡೆಸಬೇಕಾದೀತು!

ಸರ್ಕಾರಿ ಆಸ್ಪತ್ರೆಗಳು ಹಾಳಾಗಿರುವುದಕ್ಕೆ ಇದೊಂದೇ ಕಾರಣವಲ್ಲ. ಅದಕ್ಕೆ ಪ್ರಧಾನ ಕಾರಣ, ನಮ್ಮ ಸರ್ಕಾರದ ನೀತಿಗಳೇ ಆಗಿವೆ. ಅದನ್ನು ಸರಿಪಡಿಸಿಕೊಂಡು, ಅತ್ಯಂತ ಸುಭದ್ರ ಸರ್ಕಾರಿ ವೈದ್ಯಕೀಯ ಕ್ಷೇತ್ರವನ್ನು ಕಟ್ಟುವುದು ಅಗತ್ಯ. ಆದರೆ, ಜೊತೆ ಜೊತೆಯಲ್ಲೇ ಪ್ರಬಲ ಖಾಸಗಿ ಕ್ಷೇತ್ರವೂ ಉಳಿದುಕೊಂಡು, ಇದನ್ನು ಸಾಧಿಸಬಹುದೆನ್ನುವುದು ಅಸಾಧ್ಯದ ಮಾತು. ಖಾಸಗಿ ಕ್ಷೇತ್ರದ ನಿಯಂತ್ರಣ ಮತ್ತು ಸರ್ಕಾರಿ ವ್ಯವಸ್ಥೆಯ ಸಬಲೀಕರಣ ಎರಡೂ ಜೊತೆ ಜೊತೆಯಾಗಿಯೇ ಸಾಗಬೇಕು. ನಿಯಂತ್ರಣ ಮಾಡ್ತೀವಿ, ಸರ್ಕಾರಿ ಆಸ್ಪತ್ರೆಗಳನ್ನು ಹಾಗೆಯೇ ಇಟ್ಟುಕೊಳ್ಳುತ್ತೇವೆ ಎಂದು ಸರ್ಕಾರ ಹೇಳುವುದಾದರೆ, ಅದರ ಉದ್ದೇಶ ಪ್ರಶ್ನಾರ್ಹ.

ಖಾಸಗಿ ವೈದ್ಯಕೀಯ ಕ್ಷೇತ್ರವನ್ನು ನಿಯಂತ್ರಿಸುವುದು ಸಂವಿಧಾನಕ್ಕೆ ವಿರುದ್ಧವಾದುದು ಎಂದು ಕೆಲವರು ಹೇಳುತ್ತಿದ್ದಾರೆ. ಸಂವಿಧಾನದ ವಿಧಿ 47 ‘ಸಾರ್ವಜನಿಕ ಆರೋಗ್ಯವನ್ನು ಉತ್ತಮಗೊಳಿಸುವುದು ಸರ್ಕಾರದ ಕರ್ತವ್ಯ’ ಎನ್ನುತ್ತದೆ. ವಿಧಿ 21 ಘನತೆಯಿಂದ ಬದುಕುವ ಹಕ್ಕನ್ನು ಖಾತರಿಗೊಳಿಸುವುದನ್ನು ಮೂಲಭೂತ ಕರ್ತವ್ಯವಾಗಿಸಿದೆ. ಈ ರೀತಿ ಯಾವುದು ಸರ್ಕಾರದ ಕರ್ತವ್ಯವೋ, ಅದನ್ನು ಖಾತರಿಗೊಳಿಸುವುದು ದೇಶದ ಪ್ರತಿಯೊಬ್ಬ ಪ್ರಜೆ ಮತ್ತು ಖಾಸಗಿ ಸಂಸ್ಥೆಗಳ ಸಮಾನಾಂತರ ಜವಾಬ್ದಾರಿಯೂ ಆಗಿರುತ್ತದೆ. ಅದಕ್ಕಾಗಿ ಸರ್ಕಾರವು ಈ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಪ್ರಭುತ್ವದ ಉಪಕರಣಗಳ (as instruments of state) ರೀತಿ ಬಳಸಿಕೊಳ್ಳಬಹುದು. ಈ ಮಾತು ಸಂವಿಧಾನವನ್ನು ಜಾರಿ ಮಾಡುವ ಮತ್ತು ವ್ಯಾಖ್ಯಾನ ಮಾಡುವ ಅಧಿಕಾರ ಹೊಂದಿದ ಸುಪ್ರೀಂ ಕೋರ್ಟಿನದ್ದು (ರಾಜಸ್ತಾನ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಮೊಕದ್ದಮೆಯಲ್ಲಿ).

ಎಲ್ಲ ವೈದ್ಯರೂ ಡಕಾಯಿತರು, ಕಳ್ಳರು ಎಂದು ಹೇಳುವುದು ಅಸಂಬದ್ಧ. ಕೆಲವು ವೈದ್ಯರು ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ನಿಜ. ಮಾನವೀಯತೆ ಕೇಂದ್ರವಾಗಬೇಕಿದ್ದ ವೃತ್ತಿಯು ಹಂತ ಹಂತವಾಗಿ ವೈದ್ಯ ಕೇಂದ್ರಿತ, ಲಾಭ ಕೇಂದ್ರಿತ ಉದ್ದಿಮೆಯಾಗಿ ಬದಲಾದಂತೆ ವೈದ್ಯರು ಸಹ ಬದಲಾದರು   ಎಂಬುದನ್ನು ಮರೆಯಬಾರದು. ಇದೇ ಮಾತು ಸರ್ಕಾರಿ ವ್ಯವಸ್ಥೆಗೂ ಅನ್ವಯಿಸುತ್ತದೆ. ಖಾಸಗಿ ವೈದ್ಯರಿಗಿಲ್ಲದ ನೂರು ಬಗೆಯ ಜವಾಬ್ದಾರಿಗಳನ್ನು ಹೊತ್ತ ಸರ್ಕಾರಿ ವ್ಯವಸ್ಥೆಯನ್ನೂ ತಳ್ಳಿ ಹಾಕದೇ, ಅದನ್ನು ಬಲಗೊಳಿಸುವ ಕೆಲಸ ಆಗಬೇಕು.

ಅಂತಹ ಒಂದು ಪರಿಪೂರ್ಣ ವ್ಯವಸ್ಥೆ ಬರುವ ದಾರಿಯಲ್ಲಿ ಈ ರೀತಿಯದ್ದೊಂದು ಮಸೂದೆ ಮುಂದೆ ಬಂದಿದೆ. ಒಂದೆಡೆ ಬಲಾಢ್ಯ ಕಾರ್ಪೋರೇಟ್ ವ್ಯವಸ್ಥೆ ಮತ್ತಷ್ಟು ಬಲಾಢ್ಯವಾಗಿ ಬೆಳೆಯುತ್ತಿರುವಾಗ ತರಲಾಗುವ ನಿಯಮಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಆಸ್ಪತ್ರೆಗಳನ್ನು ಇಲ್ಲವಾಗಿಸುತ್ತವೆ ಎಂಬ ಆತಂಕ ಕೆಲವರದ್ದು. ಈ ಮಸೂದೆಯು ತನ್ನಂತೆ ತಾನೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಆಸ್ಪತ್ರೆಗಳ ವಿರುದ್ಧ ಇಲ್ಲ. ಆದರೆ, ಈ ರೀತಿಯ ಕನಿಷ್ಠ ಸವಲತ್ತುಗಳು ಇರಲೇಬೇಕು ಎಂದು ಮಾಡುವ ನಿಯಮ ಹಾಗೂ ಸಣ್ಣ ಆಸ್ಪತ್ರೆಗಳಿಗೆ ತೀರಾ ಕಡಿಮೆ ಮತ್ತು ದೊಡ್ಡ ಆಸ್ಪತ್ರೆಗಳಿಗೆ ಭಾರೀ ಹೆಚ್ಚು ಶುಲ್ಕ ನಿಗದಿ ಆದರೆ, ಅದರ ಪರಿಣಾಮ ನಕಾರಾತ್ಮಕವಾಗಿರುತ್ತದೆ ಎಂಬುದು ಆತಂಕದ ಮೂಲ. ಈ ಆತಂಕಕ್ಕೆ ಕಾರಣಗಳಿವೆ. ನಿಯಮಗಳನ್ನು ರೂಪಿಸುವಾಗ, ಸಣ್ಣ ಆಸ್ಪತ್ರೆಗಳು ಹಾಗೂ ಸ್ವತಂತ್ರ ವೈದ್ಯರನ್ನು ಗಮನದಲ್ಲಿಟ್ಟುಕೊಂಡೇ ಮುಂದುವರೆಯಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದೆ.

ಖಾಸಗಿ ವಲಯವನ್ನು ಬೃಹತ್ತಾಗಿ ಬೆಳೆಯಲು ಬಿಟ್ಟ ನಂತರ ಅದನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ಎರಡು ಕಾಲಿನ ನಡಿಗೆಯನ್ನು ಮರೆಯದೇ, ಸಣ್ಣ ಆಸ್ಪತ್ರೆಗಳ ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಂಡು ಮುಂದಡಿಯಿಡುವುದಾದರೆ ಪ್ರಸ್ತಾಪಿತ ಮಸೂದೆಯು ಸ್ವಾಗತಾರ್ಹವಾದುದು. ರೋಗಿಗಳ ಬಿಲ್‌ನಲ್ಲಿ ಕಮಿಷನ್‌, ಔಷಧಿಗಳು ಮತ್ತು ರೋಗ ಪರೀಕ್ಷೆಗಳಲ್ಲಿ ಕಮಿಷನ್‌ಗಳು ವ್ಯಾಪಕವಾಗಿರುವ ಮತ್ತು ಇಂತಿಷ್ಟು ಆಪರೇಷನ್‌ಗಳನ್ನು ಮಾಡಲೇಬೇಕೆಂಬ ಟಾರ್ಗೆಟ್ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ವೈದ್ಯಕುಲ ಆತ್ಮಾವಲೋಕನ ಮಾಡಿಕೊಳ್ಳದೇ ಇದ್ದಲ್ಲಿ, ಅವರ ವಿಶ್ವಾಸಾರ್ಹತೆ ಮತ್ತಷ್ಟು ಕುಸಿಯುವುದರಲ್ಲಿ  ಸಂಶಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT