ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಮನೆ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ನಗರದ ವಾತಾವರಣ ಈಗ ಹಿಂದಿನಂತೆ ಇಲ್ಲ. ನಗರೀಕರಣ, ಕಾಂಕ್ರೀಟ್‌ ಕಟ್ಟಡಗಳ ಭರಾಟೆ, ಕೆರೆಗಳ ನಾಶ, ಮರಗಳ ಹನನದ ಪರಿಣಾಮ ಇಲ್ಲಿನ ಹವಾನಿಯಂತ್ರಿತ ವ್ಯವಸ್ಥೆ ಹಾಳಾಗಿದೆ. ಬಿಸಿಲ ಝಳ, ವಾತಾವರಣದ ಉಷ್ಣತೆಯಲ್ಲಿ ಏರಿಕೆ. ಇದಕ್ಕೆಲ್ಲ ಪರಿಹಾರವಾಗಿ ಮತ್ತೆ ಪರಿಸರಸ್ನೇಹಿ ಮನೆಗಳತ್ತ ನಗರದ ಜನ ಮುಖ ಮಾಡಿದ್ದಾರೆಯೇ?

ಹೌದು. ನಗರದಲ್ಲಿ ನಿರ್ಮಾಣವಾಗುತ್ತಿರುವ ಕೆಲವು ಮನೆಗಳನ್ನು ಗಮನಿಸಿದರೆ ಹಾಗನ್ನಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಂಡುಬರುವ ಮಣ್ಣಿನ ಇಟ್ಟಿಗೆ, ಮರ ಮತ್ತಿತರ ಸ್ಥಳೀಯವಾಗಿ ಸಿಗುವ ವಸ್ತುಗಳನ್ನೇ ಬಳಸಿ ಕಟ್ಟಿದ ಮನೆಗಳ ಮಾದರಿಯಲ್ಲಿಯೇ, ಅದೇ ಪರಿಕರಗಳು ಮತ್ತು ಹೊಸ ತಂತ್ರಜ್ಞಾನ ಬಳಸಿ ಆಕರ್ಷಕ ಮನೆ ಕಟ್ಟುವ ಟ್ರೆಂಡ್‌ ನಗರದಲ್ಲಿ ಹೆಚ್ಚುತ್ತಿದೆ.

ಪರಿಸರಸ್ನೇಹಿ ಮನೆಗಳನ್ನು ಮಣ್ಣಿನ ಇಟ್ಟಿಗೆ, ಮಣ್ಣಿನ ಬ್ಲಾಕ್‌, ಕಲ್ಲು, ತೆರೆದ ಇಟ್ಟಿಗೆಗಳಿಂದ ನಿರ್ಮಿಸಲಾಗುತ್ತದೆ. ಮಳೆ ನೀರು ಕೊಯ್ಲು, ತ್ಯಾಜ್ಯ ನೀರನ್ನು ಪುನರ್‌ ಬಳಕೆ ಮಾಡುವ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಸ್ಥಳೀಯವಾಗಿಯೇ ಸಿಗುವ ವಸ್ತುಗಳನ್ನು ಬಳಕೆ ಮಾಡುವುದರಿಂದ ಸಾಗಾಣಿಕೆ ವೆಚ್ಚವೂ ಉಳಿಯುತ್ತದೆ.

ಪರಿಸರಸ್ನೇಹಿ ಪ್ರಜ್ಞೆಯ ಜೊತೆಗೆ ಕಡಿಮೆ ವೆಚ್ಚದ ಮನೆಗಳನ್ನು ಕಟ್ಟಲು ಬಯಸುವವರಿಗಾಗಿಯೇ, ನಮ್ಮ ಹಿರಿಯರ ಕಾಲದ ಮಣ್ಣಿನ ಮನೆಗಳನ್ನೇ ಮತ್ತೆ ಹೊಸ ರೂಪದಲ್ಲಿ ಸೃಷ್ಟಿಸಲಾಗುತ್ತಿವೆ. ಕಡಿಮೆ ಸಿಮೆಂಟು ಬಳಸಿ, ಮಣ್ಣಿನ ಇಟ್ಟಿಗೆಗಳಿಂದ ಮನೆ ಕಟ್ಟಿಸುವವರ ಸಂಖ್ಯೆ ನಗರ ಸೇರಿದಂತೆ ಎಲ್ಲ ಕಡೆಯೂ ಹೆಚ್ಚಿದೆ. ಕಬ್ಬಿಣ ಬಳಸದೇ, ಗೋಡೆಗಳಿಗೆ ಗಾರೆ ಮಾಡದೇ, ನೆಲಕ್ಕೆ  ಮಾರ್ಬಲ್‌, ಟೈಲ್ಸ್‌ ಬಳಸದೇ, ಕಡೆಗೆ ಗೋಡೆಗಳಿಗೆ ಬಣ್ಣವನ್ನೂ ಬಳಿಯದಂಥ ಅಪ್ಪಟ ಪರಿಸರಸ್ನೇಹಿ ಮನೆ ನಿರ್ಮಾಣ ಮಾಡಿಕೊಡುವವರು ನಗರದಲ್ಲಿದ್ದಾರೆ. 

‘ಏರುತ್ತಿರುವ ಕಟ್ಟಡ ಪರಿಕರಗಳ ಬೆಲೆ ಮತ್ತು ಪರಿಸರ ಸ್ನೇಹಿಯಾಗಬೇಕು ಎಂಬ ತುಡಿತ ನಗರದ ಜನರನ್ನು ಮತ್ತೆ ಹಳ್ಳಿಮನೆಗಳತ್ತ ಮುಖ ಮಾಡುವಂತೆ ಮಾಡಿದೆ. ಪರಿಸರ ಸ್ನೇಹಿ ಮನೆ ನಿರ್ಮಾಣ ನಗರದಲ್ಲಿ ಫ್ಯಾಷನ್‌ ಆಗಿದೆ’ ಎಂದು ಇಪ್ಪತ್ತು ವರ್ಷಗಳಿಂದ ಕಡಿಮೆ ವೆಚ್ಚದ, ಪರಿಸರಸ್ನೇಹಿ ಮನೆಗಳ ನಿರ್ಮಾಣ ಮಾಡುತ್ತಿರುವ ನಾಗರಾಜ ಶೆಟ್ಟಿಗಾರ್‌ ಹೇಳುತ್ತಾರೆ.

ಪರಿಸರ ಸ್ನೇಹಿ ಎಂದ ಕೂಡಲೇ ಕಡಿಮೆ ವೆಚ್ಚದ ಮನೆಗಳು ಎಂಬ ಭಾವನೆ ಬರುತ್ತದೆ. ಆದರೆ ಪರಿಸರಸ್ನೇಹಿ ಮನೆಗಳಲ್ಲಿ ಎರಡು ವಿಧವಿದೆ. ಕಡಿಮೆ ವೆಚ್ಚದ ಮನೆಗಳು ಒಂದು ಬಗೆಯಾದರೆ, ಭಾರಿ ವೆಚ್ಚದ ಮನೆಗಳಿಗೆ ಹೇರಳವಾಗಿ ಮರ ಬಳಸಿ ಅಂದಗಾಣಿಸುವುದು ಇನ್ನೊಂದು ಬಗೆ. ಮರ ಬಳಸಿ ಮನೆ ಕಟ್ಟಿದರೆ ತಂಪಾಗಿಡಬಹುದು, ಆದರೆ ಅವು ಪರಿಸರಸ್ನೇಹಿಯಾಗುವುದಿಲ್ಲ. ‌ಕಡಿಮೆ ವೆಚ್ಚದಲ್ಲಿ ಮನೆ ಕಟ್ಪಬೇಕು ಎಂದು ಬಯಸುವವರಿಗಾಗಿ ಅಪ್ಪಟ ಪರಿಸರಸ್ನೇಹಿ ಮನೆಗಳನ್ನು ಕಟ್ಟಬಹುದು ಎನ್ನುವುದು ನಾಗರಾಜ್ ಅವರ ಸಲಹೆ.

ಸ್ಥಳೀಯ ಪರಿಕರಗಳ ಬಳಕೆ: ‘ನಾವು ಶೇ 7.5ರಷ್ಟು ಸಿಮೆಂಟು ಬಳಸಿ ಮಣ್ಣಿನ ಇಟ್ಟಿಗೆಗಳನ್ನು ತಯಾರಿಸುತ್ತೇವೆ. ಅದಕ್ಕಾಗಿ ಹೆಚ್ಚು ಮರಳಿನ ಅಂಶವಿರುವ ಸ್ಥಳೀಯ ಮಣ್ಣನ್ನೇ ಬಳಸುತ್ತೇವೆ. ಪ್ಲಾಸ್ಟರಿಂಗ್‌ ಮಾಡುವುದಿಲ್ಲ. ಪೇಯಿಂಟ್‌ (ಬಣ್ಣ) ಕೂಡಾ ಬಳಸುವುದಿಲ್ಲ. ಬಾಗಿಲುಗಳಿಗೆ ಮಾತ್ರ ಮರ ಬಳಸುತ್ತೇವೆ. ಹಾಗೆ ಮಾಡಿದರೆ ಮಾತ್ರ ಅದು ಸಂಪೂರ್ಣವಾಗಿ ಪರಿಸರ ಸ್ನೇಹಿ ಮನೆ ಎನಿಸುತ್ತದೆ. ಈ ಮನೆಗಳು ವರ್ಷವಿಡೀ ತಂಪಾಗಿರುತ್ತವೆ.

ಹೊರಗಿನ ಉಷ್ಣತೆ ಮನೆಯೊಳಗೆ ಬರುವುದಿಲ್ಲ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಇಂಥ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಒಂದು ಶಾಲೆಯನ್ನೂ ಕಟ್ಟಿದ್ದೇವೆ. ಕನಿಷ್ಠ ಚದರಡಿಗೆ 350 ರೂಪಾಯಿಗೆ ಮನೆ ಕಟ್ಟಿದ್ದೇವೆ. ಇಲ್ಲಿ ಗೋಡೆಗಳಿಗೆ ಬಳಸುವ ಇಟ್ಟಿಗೆ ಮಾತ್ರ ಸ್ವಲ್ಪ ದುಬಾರಿ ಆಗುತ್ತದೆ’ ಎನ್ನುತ್ತಾರೆ ಅವರು.

ಪರಿಸರಸ್ನೇಹಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ನಿರ್ಮಾಣ ಕಂಪೆನಿಗಳೂ ಹೆಚ್ಚುತ್ತಿದೆ. ಇಕೋ ಫ್ರೆಂಡ್ಲಿ ಹೌಸಸ್‌ ಬೆಂಗಳೂರು ಇವರು ಇಂಥ ಮನೆಗಳನ್ನು ನಿರ್ಮಾಣ ಮಾಡುತ್ತಾರೆ.

‘ಸುಟ್ಟ ಇಟ್ಟಿಗೆ ಬಳಸಿ ನಾವು ಪರಿಸರಸ್ನೇಹಿ  ಮನೆ ನಿರ್ಮಾಣ ಮಾಡುತ್ತೇವೆ. ನೆಲಕ್ಕೆ ರೆಡ್‌ ಆಕ್ಸೈಡ್‌, ಚಾವಣಿಗೆ ಹೆಂಚು ಬಳಕೆ ಮಾಡುತ್ತೇವೆ. ಚದರಡಿಗೆ 1,300 ರೂಪಾಯಿಯಿಂದ 1,500ರವರೆಗೆ ದರವಿದೆ’ ಎನ್ನುತ್ತಾರೆ ಇಕೋ ಫ್ರೆಂಡ್ಲಿ ಹೌಸಸ್‌ನ ಮನೋಜ್‌ ರಾಕೇಶ್‌. ಸಂಪರ್ಕ ಸಂಖ್ಯೆ– 8553723750

***

ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾದ ಮನೆಗಳನ್ನು ಕಟ್ಟುತ್ತೇವೆ. ಕೆಲವರು ಪರಿಸರ ಸ್ನೇಹಿಯ ಜೊತೆಗೆ ಅದ್ಧೂರಿತನವನ್ನೂ ಬಯಸುತ್ತಾರೆ. ತಂಪಾಗಿರಬೇಕು ಎಂದು ನೆಲಗಳಿಗೆ ಮರದ ಹಾಸು, ಚಾವಣಿಗೂ ಮರ ಮಟ್ಟುಗಳನ್ನು ಬಳಸುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT