ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ರೇಬೈಲಿನ ಬಾಗಿಲು

Last Updated 22 ಜುಲೈ 2017, 19:30 IST
ಅಕ್ಷರ ಗಾತ್ರ

ನನ್ನ ಜತೆಗೇ ಕೆರೆಯಂಗಳದಲ್ಲಿ ಬೆಳೆದವಳು. ರಾಬಿಯಾ ಬಸ್ರಿಯಾ ಎಂಬ ಪ್ರಾಸಬದ್ಧ ಹೆಸರು ಅವಳದು. ಸಕ್ರೇಬೈಲಿನ ಆನೆಕ್ಯಾಂಪ್‌ನ ಕವಾಡಿ ಮುನ್ನಾನಿಗೆ ಮದುವೆಯಾದ ಮೇಲೆ ಅವಳನ್ನು ನಮ್ಮ ಕೆರೆಯಂಗಳದ ಮುಸಲ್ಮಾನರು ಹೀಗೆ ಪ್ರೀತಿಯಿಂದ, ತಮಾಷೆಯಿಂದ ಕರೆಯತೊಡಗಿದ್ದರು.

ಗೌರಕ್ಕ, ಸರೋಜಕ್ಕ, ಚಿಂತಾಯಕ್ಕರಂಥವರಿಗೂ ಈ ಮುಸಲ್ಮಾನ ಭಾಷೆ ಅರ್ಥವಾಗುತ್ತಿದ್ದುದರಿಂದ ನಾಲಿಗೆ ಹೊರಳುವುದು ಕಷ್ಟವಾಗಿಯೋ ಏನೋ ಅವಳು ಬಂದಾಗಲೆಲ್ಲಾ ತಪ್ಪು ತರ್ಜುಮೆ ಮಾಡಿಕೊಂಡು ‘ಆನೆ ಬಸ್ರಿ ಅಂತ ಹೆಸರು ಕೂಗುತ್ತಿದ್ದುದು ವಿಚಿತ್ರವೂ ಹಾಸ್ಯಾಸ್ಪದವೂ ಆಗಿರುತ್ತಿತ್ತು.

ರಾಬಿಯಾ ಬಸ್ರಿಯಾ ಎಂಬ ಸುಂದರವಾದ ಹೆಸರು ಅವಳು ಸಕ್ರೇಬೈಲಿಗೆ ಶಿಫ್ಟಾದ ಮೇಲೆ ಮುಸಲ್ಮಾನರ ಬಾಯಲ್ಲಿ ಹತ್ಯಾವಾಲಿ ಬಸ್ರಿಯಾ ಎಂತಲೂ ಉಳಿದವರ ಬಾಯಲ್ಲಿ ಆನೆಬಸ್ರಿ ಎಂತಲೂ ಬದಲಾದುದಕ್ಕೆ ಸ್ವತಃ ರಾಬಿಯಾಳಿಗೂ ಬೇಸರವೇನಿರಲಿಲ್ಲ. ನನಗಂತೂ ಅವಳನ್ನು ‘ರಾಬಿ’ ಎಂದು ಕರೆದೇ ಅಭ್ಯಾಸ. ಅವಳ ಗಂಡ ಮುನ್ನಾನನ್ನು ಮಾತ್ರ ‘ಹತ್ತೀಕ ಭೈ (ಆನೆಯ ತಮ್ಮ) ಎಂದೇ ಛೇಡಿಸುತ್ತಿದ್ದೆ. ಹಾಗಿದ್ದ ಅವನು, ಡೊಳ್ಳು ಹೊಟ್ಟೆಯ ಭೀಮನಂತೆ.

ಅಚಾನಕ್ಕಾಗಿ ಗಂಡ ಹೆಂಡತಿ ಗಾಂಧಿಬಜಾರಿನ ರಸ್ತೆಯಲ್ಲಿ ಸಿಕ್ಕರು. ಅದೂ ಇದೂ ಮಾತಾದ ಮೇಲೆ ಪ್ರೀತಿಯಿಂದಲೇ ಸಕ್ರೇಬೈಲಿಗೆ ಆಹ್ವಾನಿಸಿ ತಮ್ಮ ದಾರಿ ಹಿಡಿದರು. ಅದೆಷ್ಟು ಸಾರಿ ಹೋಗಿದ್ದೀನೋ ಆನೆ ಬಿಡಾರಕ್ಕೆ, ಆನೆ ಬಿಡಾರವಿರೋ ಸಕ್ರೇಬೈಲಿಗೆ. ಒಂದ್ಸಾರಿಯೂ ಈ ರಾಬಿ ಮನೆಗೆ ಹೋಗಲೇ ಇಲ್ವಲ್ಲಾ ಅಂತ ಆಶ್ಚರ‍್ಯವಾಯ್ತು. ನನಗೀ ಪರಿಚಯದೋರ ಮನೆಗಳಿಗೆ ಹೋಗೋದು, ಮಾತಾಡೋದು ಅಂದ್ರೆ ಅಲರ್ಜಿ.

ಕರೆದಿದ್ದಕ್ಕೋ ಅಚಾನಕ್ಕಾಗಿಯೋ ಮನೆಗಳಿಗೆ ಹೋಗಿ ಮಾತಾಡಿಸೋದು, ಉಂಡು, ನೀವು ನಮ್ಮನೇಗೆ ಬನ್ನಿ ಅಂತ ಹೇಳಿಬರೋದು ಅಭ್ಯಾಸವೇ ಇಲ್ಲ. ಅದೊಂದು ರೀತಿಯ ಮಾನಸಿಕ ಕಿರಿಕಿರಿ ನನಗೆ. ರಾಬಿ ಮತ್ತು ಮುನ್ನಾ ಕೂಡ ಹೀಗೆ ಅದೆಷ್ಟು ಸಾರಿ ಕರೆದಿಲ್ಲ. ಆನೆ ಕ್ಯಾಂಪಿಗೆ ಹೋದರೂ ಅವರ ಮನೆಗೆ ಕಾಲಿಟ್ಟವನಲ್ಲ.

ಅದೊಂದು ದಿನ ಮೊಬೈಲು ರಿಂಗಣಿಸಿತು. ರಾಬಿಯ ಫೋನು. ಯಾವತ್ತೂ ಅವಳು ಫೋನು ಮಾಡಿದವಳಲ್ಲ. ಇದ್ದಕ್ಕಿದ್ದ ಹಾಗೆ ಹೀಗೆ ರಿಸೀವ್ ಮಾಡಿದೆ; ’ಹಲೋ ಇನಾಯತ್ತಾ? ಕೂಡ್ಲೇ ಮನೇಗ್ ಬಾ ಯಾಕೆ ಏನೂಂತ ಕೇಳ್ಬೇಡ. ಬಂದ್ಮೇಲೆ ಹೇಳ್ತೀನಿ. ಬೇಗ ಬಾರೋ. ನನ್ನ ಉತ್ತರಕ್ಕೂ ಕಾಯದೇ ತಾನು ಹೇಳುವುದನ್ನೆಲ್ಲ ಹೇಳಿ ಫೋನ್ ಕಟ್ ಮಾಡಿದ್ದಳು. ಏನಾದರೂ ಸಮಸ್ಯೆಯಿರಬಹುದಾ? ನನ್ನೊಳಗೆ ಆತಂಕ ಶುರುವಾಯಿತು. ಸಿಟಿಯಿಂದ 12 ಕಿ.ಮೀ. ದೂರವಿರೋ ಸಕ್ರೇಬೈಲಿಗೆ ಹೋಗಬೇಕಂದ್ರೆ ಕನಿಷ್ಠ ಅರ್ಧ ಗಂಟೆಯಾದ್ರೂ ಬೇಕಿತ್ತು. ಇದ್ದ ಕೆಲಸಬಿಟ್ಟು ಹೊರಟೆ. ಕವಾಡಿ ಮುನ್ನಾನ ಮನೆ ಹುಡುಕುವುದೇನೂ ಕಷ್ಟವಾಗಲಿಲ್ಲ.

ಪಾತ್ರೆ ತೊಳೀತಾ ಅಂಗಳದಲ್ಲೇ ಕುಳಿತಿದ್ದಳು ರಾಬಿ. ನೋಡಿದವಳೇ ಗೊಂದಲ, ಆಶ್ಚರ‍್ಯಕ್ಕೆ ಬಿದ್ದು, ಕೈಗಳನ್ನು ನೀರಲ್ಲಿ ಅದ್ದಿ, ಹೊರಗಿಣುಕುತ್ತಿದ್ದ ಲಂಗಕ್ಕೆ ಒರೆಸಿಕೊಂಡು, ಸೊಂಟಕ್ಕೆ ಸಿಗಿಸಿಕೊಂಡಿದ್ದ ಸೀರೆಯ ಕುಚ್ಚನ್ನು ತೆಗೆದು ಕೆಳಬಿಟ್ಟು, ನನ್ನ ಕೈಹಿಡಿದು ಒಳಕ್ಕೆ ಎಳೆದೊಯ್ದಳು. ಇನ್ನೂ ಬಿಸಿಯಾಗಿದ್ದ ಕೋಳಿಸಾರಿಳಿಸಿ ಅನ್ನಕ್ಕೆ ಹೊಯ್ದು ‘ಮೊದ್ಲು ತಿನ್ನು ಎಂದಳು. ನನಗೆ ರಾಬಿಯ ಅತಿ ಆತ್ಮೀಯತೆ ಮುಜುಗರಕ್ಕೆ ತಳ್ಳುತ್ತಿತ್ತು. ತಟ್ಟೆ ಕೈಗಿಕ್ಕಿದ ಮೇಲೆ ಮುಗುಳ್ನಗುತ್ತಾ ನನ್ನನ್ನೇ ನೋಡುತ್ತಾ ನಿಂತುಬಿಟ್ಟಳು ಬೇರೆ. ಯಾಕೋ ಸಣ್ಣಗೆ ಮೈ ಕಂಪಿಸುತ್ತಿತ್ತು.

ಮುನ್ನಾ ಎಲ್ಲಿ? ಎಂಬಂತೆ ಅತ್ತಿತ್ತ ನೋಡಿದೆ. ಅವಳಿಗದು ಅರ್ಥವಾಗಿ ‘ಮೂಡ್ಗೆರೆಗೆ ಹೋಗಿದಾರೆ, ಕಾಡಾನೆ ಹಿಡಿಯೋಕೆ’ ಎಂದಾಗ ಮುಜುಗರದ ಸಿಕ್ಕುಗಳು ಗಂಟುಬಿಚ್ಚಿಕೊಳ್ಳುತ್ತಿರುವಂತೆ ಭಾಸವಾಯಿತು. ರಾಬಿ ಫೋನು ಮಾಡಿದ ರೀತಿಯಲ್ಲಿ ಏನೋ ಸಮಸ್ಯೆಯಿದೆ ಎಂದು ಭಾವಿಸಿದ್ದ ನನಗೆ, ಹಾಗೆ ತಲೆತುಂಬಾ ಆತಂಕವಿಟ್ಟುಕೊಂಡು ಬಂದಿದ್ದ ನನಗೆ ಇಲ್ಲಿ ಅಂಥದ್ದೇನೂ ಸಮಸ್ಯೆ ಕಾಣಲಿಲ್ಲ.

ಅವಳ ಮುಖದ ಮೇಲಂತೂ ಸಮಸ್ಯೆಯ ಒಂದೇ ಒಂದು ಲಕೀರೂ ಸಿಗಲಿಲ್ಲ. ಮುನ್ನಾ ಊರಲ್ಲಿಲ್ಲದ ಹೊತ್ತಲ್ಲಿ ನಾನು ಹೀಗೆ, ರಾಬಿ ಒಬ್ಬಳೇ ಮನೆಗಿದ್ದಾಗ ಎಂದೂ ಬಾರದವನು ಬಂದು ಹೋಗಿದ್ದೇನೆಂದರೆ ಮುನ್ನಾ ಏನಂತ ಯೋಚಿಸಬಹುದು? ಇನ್ನೂ ಒಂದು ವರ್ಷವೂ ದಾಟಿರದ ಸಂಸಾರಕ್ಕೆ ನಾನೇ ತಾಪತ್ರಯ ಉಂಟು ಮಾಡುತ್ತಿದ್ದೇನಾ?- ಮನಸ್ಸಿನ ತುಂಬಾ ಪ್ರಶ್ನೆಗಳ ಸಮರ, ಒಂದೊಂದು ತುತ್ತಿಗೂ ಸಂದೇಹಗಳ ಸರಮಾಲೆ ಸುತ್ತಿಕೊಳ್ಳತೊಡಗಿತು.

ಊಟ ಮುಗಿದಾಗ ತಾನೇ ಕೈ ತೊಳೆದು, ಮುಖಕ್ಕೆ ನೀರು ಚಿಮುಕಿಸಿ, ತನ್ನ ಸೆರಗಿನಿಂದಲೇ ಒರೆಸಿದಾಗಲಂತೂ ಬೆದೆಗೆ ಬಂದ ಒಂಟಿಸಲಗದ ಮುಂದೆ ನಿಂತುಬಿಟ್ಟಂತೆ ಭಾಸವಾಯಿತು. ತೊಡೆಗಳು, ಹೃದಯ ಸ್ಪರ್ಧೆಗೆ ಬಿದ್ದಂತೆ ಕಂಪಿಸುತ್ತಿದ್ದವು. ‘ಯಾಕೆ ಫೋನು ಮಾಡಿ ಕರೆದಿದ್ದು? ಏನು ಸಮಸ್ಯೆ?’ ಎಂದು ಬಾಯಿಬಿಟ್ಟು ಕೇಳಬೇಕು ಎಂದು ಪ್ರಯತ್ನಿಸಿದೆ. ಒಣಗಿದ್ದ ತುಟಿಗಳು ಅಂಟಿಕೊಂಡು, ನಾಲಗೆ ಸತ್ತಂತಾಗಿ ಮಾತಿಗೆ ತಡವರಿಸುತ್ತಿತ್ತು. ರಾಬಿ ನನ್ನ ಸ್ಥಿತಿ ನೋಡಿಯೋ ಏನೋ ಸುಮ್ಮನೆ ಮುಗುಳ್ನಗುತ್ತಿದ್ದಳು.

ಅವಳ ಮುಗುಳ್ನಗುವಿನಲ್ಲಿ ಪ್ರೇಮದ ಅಮಲಿತ್ತೋ? ಕಾಮದ ಘಮಲಿತ್ತೋ? ತಕ್ಷಣಕ್ಕೆ ಅರ್ಥವಾಗದೇ ನನ್ನೊಳಗೆ ನಾನೇ ಬೇಯುತ್ತಿದ್ದೆ. ಆ ಬೇಯುವಿಕೆಗೆ ಮೈತುಂಬಾ ಬೆವರು ಜಿನುಜಿನುಗಿ ಹರಿಯುತ್ತಿತ್ತು. ಕಣ್ಣುಗಳ ಮೇಲೆ ಹೆಬ್ಬಂಡೆಗಳನ್ನಿಟ್ಟ ಅನುಭವಕ್ಕೆ ನೋಡುತ್ತಿದ್ದ ನೋಟ ಕೂಡ ಮೇಲಕ್ಕೆ-ಕೆಳಕ್ಕೆ ಹೊರಳಾಡುತ್ತಾ ದಿಕ್ಕುದೆಸೆ ಕಾಣದೆ ಕಂಗಾಲಾಗುತ್ತಿತ್ತು. ನರಭಕ್ಷಕ ಚಿರತೆ ಇರೋ ಬೋನೊಳಗೆ ನಾನೇ ಬಂದು ಬಂಧಿಯಾದಂತೆ ಚಿತ್ರ-ವಿಚಿತ್ರ ಅನುಭವ. ಅವಳ ಮುಗುಳ್ನಗು ಮಾತ್ರ ಮುಂದುವರೆದೇ ಇತ್ತು, ಸ್ವಲ್ಪವೂ ಬದಲಾವಣೆ ಕಾಣದೆ. ಕಾಮದ ತುತ್ತತುದಿಯಲ್ಲಿ ನಿಂತ ಹೆಣ್ಣು ತನ್ನ ಭಾವವನ್ನೂ ಅಲುಗಾಡಿಸಲು ಬಿಡದೆ ಹೀಗೆ ಶಿಲೆಯಾಗಲಾದರೂ ಸಾಧ್ಯವೇ? ನನ್ನ ಯೋಚನೆಯ ಲಹರಿ ನನಗೇ ಕೈಕೊಡುತ್ತಿತ್ತು.

ಸ್ವಲ್ಪ ಹೊತ್ತು ಕಳೆಯಿತು. ಸ್ವಲ್ಪ ಸುಧಾರಿಸಿಕೊಂಡೆ.

‘ಮುನ್ನಾ ಇದ್ದಾಗ್ಲೇ ನನ್ನ ಕರೀಬೇಕಿತ್ತು ರಾಬಿ ಇದೆಲ್ಲ ಒಗ್ಗಿಸಿಕೊಳ್ಳೋಕಾಗ್ತಿಲ್ಲ’ ಎಂದೆ.

ನಾನಾ ಎಂಬುದು ನಾನಲ್ಲಾ ಈ

ಮಾನುಷ ಜನ್ಮವು ನಾನಲ್ಲಾ

ನಾರಾಯಣ ಪರಬ್ರಹ್ಮ ಸದಾಶಿವ

ನೀ ಎನಿಸುವ ಗುಣ ನಾನಲ್ಲಾ

ಮೂಲೆಗೆ ಸಿಗಿಸಿದ್ದ ರೇಡಿಯೋ ಶಿಶುನಾಳ ಷರೀಫರ ಪದ ಹಾಡುತ್ತಿತ್ತು. ನಾನು ಮತ್ತು ರಾಬಿ ಇದ್ದ ಸಂದರ್ಭಕ್ಕೆ ತದ್ವಿರುದ್ಧವಾದ ಹಾಡು. ನಾನೋ ಸಾಹಿತ್ಯದ ವಿದ್ಯಾರ್ಥಿ. ಅರ್ಥಮಾಡಿಕೊಳ್ಳಬಲ್ಲೆ. ರಾಬಿಗೇನು ಅರ್ಥವಾದೀತು? ಆನೆಗಳ ಜೊತೆ ಬದುಕುತ್ತಿರೋಳಿಗೆ ಷರೀಫ, ಕುವೆಂಪು, ಬೇಂದ್ರೆ ಏನಾಗಬೇಕು!? ಆದರೆ, ಆದರೆ ರಾಬಿಯ ಭಾವ ನನ್ನೊಳಗೆ ‘ಅನುಭಾವ ಹುಟ್ಟುಹಾಕುತ್ತಿದೆಯಲ್ಲ. ಓದಿಕೊಂಡ ಸಾಹಿತ್ಯ, ಈ ಕ್ಷಣಕ್ಕೆ ಹುಟ್ಟಿಕೊಳ್ಳುತ್ತಿರುವ ಕಾಮದ ಭಾವ ಮನಸ್ಸಿನ ದಡಕ್ಕೆ ಸುನಾಮಿ ಅಲೆಗಳಾಗಿ ಅಪ್ಪಳಿಸುತ್ತಲೇ ಹೋಗುತ್ತಿವೆ.

‘ಮುನ್ನಾ ಇದ್ದಾಗ್ಲೇ ಯಾಕೋ ಕರೀಬೇಕಿತ್ತು ಇನಾಯತ್? ಅವರಿಲ್ಲವೆಂದೇ ಕರೆದೆ. ಬಯಸಿದ ಹಾಗೆ ಬದುಕೆಲ್ಲಿ ಸಿಗುತ್ತೋ? ಸಿಕ್ಕಾಗ ಬದುಕಿ ಬಿಡ್ಬೇಕೋ’

ರಾಬಿ ಯಾವತ್ತೂ ಹೀಗೆ ಅರ್ಥವಾಗದ ಕಾವ್ಯದಂತೆ ಮಾತಾಡಿದವಳಲ್ಲ. ನಾನು ಅವಳನ್ನೊಮ್ಮೆ, ಹೊಸದಾಗಿ ನಿರ್ಮಿತಗೊಂಡಿದ್ದ ಗೋಡೆಗಳನ್ನೊಮ್ಮೆ ನೋಡತೊಡಗಿದೆ. ಗೋಡೆಗಳ ಹಸಿಹಸಿ ಮಣ್ಣಿನ ವಾಸನೆ ಉಸಿರಾಟದ ಮೂಲಕ ದೇಹದೊಳಕ್ಕೆ ತಲುಪಿ ಮನೋತೀತ ಅನುಭವ ನೀಡುತ್ತಿತ್ತು. ಅಲ್ಲೂ ಹತ್ತಿರದಲ್ಲೇ ನಿಂತಿದ್ದ ರಾಬಿ ಮೈಯ ವಾಸನೆ ಮೋಹಕವಾಗಿ ಸ್ಪರ್ಧೆಗಿಳಿದಿತ್ತು. ಯಾವುದನ್ನು ಆಸ್ವಾದಿಸುವುದು? ಯಾವುದನ್ನು ತಳ್ಳುವುದು? ಆತ್ಮದ ಮಾತು ಮತ್ತು ದೇಹದ ಮಾತು ಚುಚ್ಚಾಡಿಕೊಂಡು ಸಾಯುತ್ತಿರುವಾಗ!

‘ನಿನ್ನ ಮಾತುಗಳೇ ಅರ್ಥವಾಗುತ್ತಿಲ್ಲ ರಾಬಿ’

- ಮಾತುಗಳಲ್ಲಿ ಧೈರ‍್ಯ ಇಣುಕಿದಂತಾಯ್ತು. ಅದೇ ಕ್ಷಣದಲ್ಲಿ ಅಂಗಾಂಗಗಳು ಚಾರಣ ಹೊರಡುವ ತಯಾರಿ ನಡೆಸುತ್ತಿದ್ದವಲ್ಲ, ಕಾಮದ ಚಾರಣಕ್ಕಾ? ಭ್ರಮೆಗಳಿಗೆ ನೂರಾರು ರೆಕ್ಕೆಪುಕ್ಕ ಮೂಡುತ್ತಿದ್ದುದಾದರೂ ಸುಳ್ಳೆ?

‘ಅರ್ಥವೇ ಆಗದ ಮಾತೆಲ್ಲಿ ಆಡಿದ್ನೋ?’ ಎಂದವಳೇ ತಾನಾಡಿದ್ದ ಮಾತುಗಳನ್ನು ಅರ್ಥಮಾಡಿಸುವವಳಂತೆ ನನ್ನೆರಡೂ ಭುಜಗಳ ಮೇಲೆ ಕೈಗಳನ್ನಿಟ್ಟು ನಯವಾಗಿ ಎಬ್ಬಿಸಿದಳು. ಅವಳು ಆಡಿಸಿದಂತೆ ಆಡುವ ಗೊಂಬೆಯಂತೆ ನಾನೂ ನಿಂತುಬಿಟ್ಟೆನಲ್ಲ. ಕಾಮಕ್ಕೆ ನಾನೇನೂ ಹೊಸಬನಲ್ಲ. ಸೂಕ್ಷ್ಮಾತಿಸೂಕ್ಷ್ಮ ಮನಸಿನ ಪರದೆಗಳನ್ನೆಲ್ಲ ಸರಿಸಿ, ಆ ಹೊತ್ತಿನ ಚಾರಣ ಸುಖಗಳನ್ನು ಅನುಭವಿಸುತ್ತಿರುವವನು. ಅದೂ ದಾಂಪತ್ಯದ ಚೌಕಟ್ಟಿನೊಳಗೆ! ಈಗ ಈ ರಾಬಿಯ ಜೊತೆ ಅದ್ಯಾವ ಚೌಕಟ್ಟಿದೆ? ಜವಾಬ್ದಾರಿಯಿದೆ? ಕಾಮದ ಉದ್ದೇಶ ಬರೀ ಮನರಂಜನೆಯಾ? ನಿಷ್ಪ್ರಯೋಜಕ ರಸೋತ್ಪತ್ತಿಯಾ? ಮುಳುಗುವುದು- ಮುಳುಗಿಸುವುದಾ? ಸಾಧನೆ ಏನಿದೆ? ಸಂಪಾದನೆ ಏನಿದೆ? ರಾಬಿಯ ಮುಂದೆ ನಿಂತ ನನ್ನೊಳಗೆ ಸಾವಿರ ಸಾವಿರ ಪ್ರಶ್ನೆಗಳು.

‘ನಿನ್ನೊಳಗೇನು ನಡೀತಿದೆ? ನಿನ್ನ ನಿರ್ಧಾರವಾದ್ರೂ ಏನು?- ಅವಳ ಮುಂದೆಯೂ ಪ್ರಶ್ನೆಗಳನ್ನಿಟ್ಟಿದ್ದೆ. ರಾಬಿ ಒಳಗೇನು ನಡೀತಿದೆ ಮತ್ತು ಅವಳ ನಿರ್ಧಾರವೇನು ಎಂಬುದನ್ನು ಸ್ಪಷ್ಟವಾಗಿ ತಿಳಿದಿದ್ದರೂ ನಾನಿದ್ದ ಸ್ಥಿತಿಯಲ್ಲಿ ಆ ಪ್ರಶ್ನೆಗಳನ್ನು ಕೇಳಲೇಬೇಕಿತ್ತು. ಯಾವ ರಕ್ಷಣೆಯೂ ಇಲ್ಲದೆ ಅನಾಥವಾಗಿ ನಿಂತಿದ್ದ ನನ್ನ ಸುತ್ತ ಈ ಪ್ರಶ್ನೆಗಳು ರಕ್ಷಣೆಯ ಕೋಟೆ ಕಟ್ಟಬಹುದೆಂಬ ಸಣ್ಣದೊಂದು ಆಸೆ ಮೂಡಿತ್ತು. ರಾಬಿ ಆ ರಕ್ಷಣೆಯ ಕೋಟೆಯನ್ನೂ ಕ್ಷಣಮಾತ್ರದಲ್ಲಿ ಛಿದ್ರಛದ್ರಗೊಳಿಸಿಬಿಟ್ಟಳು. ಅದೂ ಒಂದೇ ಒಂದು ಮಾತಿನಿಂದ.

‘ನಾನಿಷ್ಟವೆಂದ್ರೆ ಅನುಭವ್ಸು ಇಲ್ಲಾ ಹೊರ‍್ಟು ಹೋಗು.’

ಕಾಮದ ಕೋಮಲ ಮಲ್ಲಿಗೆ ಹಾಸಿನ ಮೇಲೆ ನಿಂತಂತಿದ್ದ ರಾಬಿ ನೇರವಾಗಿ, ವಾಚ್ಯವಾಗಿ ಆಡುತ್ತಿದ್ದ ಮಾತು ರಸಸ್ಪರ್ಶಿಯಾಗಲು ಹೊರಟಿದ್ದ ನನ್ನಲ್ಲಿ ಕ್ರೂರ ಮೃಗದ ಮುಂದೆ ನಿಂತು ಜೀವಭಿಕ್ಷೆ ಬೇಡುತ್ತಿರುವವನ ರೀತಿಯ ಭಾವನೆ ಜನ್ಮತಾಳಲು ಕಾರಣವಾಗುತ್ತಿತ್ತು. ನಾನು ಮೌನವಾಗಿ ನಿಂತು ರಾಬಿಯ ಆಕ್ರಮಣಕ್ಕೆ ಒಳಗಾಗಲು ಸಿದ್ಧನಿರಲಿಲ್ಲ.

‘ನಾನು ಹೊರಟು ಹೋಗ್ತೇನೆ.. ಬಾಗ್ಲು ತಗೀ’ ಅಂದೆ. ರಾಬಿ ಅಷ್ಟು ಸುಲಭವಾಗಿ ನನ್ನನ್ನು ಬಿಟ್ಟುಬಿಡಲು ತಯಾರಿರಲಿಲ್ಲ. ತನ್ನ ಮೈಮೇಲಿದ್ದ ಸೀರೆಯನ್ನು ಕಣ್ಣುಮುಚ್ಚಿಬಿಡುವಷ್ಟರಲ್ಲಿ ಪರಪರನೆ ಬಿಚ್ಚೆಸೆದು, ಅರೆನಗ್ನ ಸ್ಥಿತಿಯೊಳಗೆ ನನ್ನ ತಬ್ಬಿ ನಿಂತುಬಿಟ್ಟಳು. ಪ್ರಶ್ನೆಗಳ ರಾಶಿಯಲ್ಲಿ ಮುಳುಗೇಳುತ್ತಿದ್ದ ನನ್ನೊಳಗೆ ಅಷ್ಟೇ ವೇಗದಲ್ಲಿ ಮಹಾಶೂನ್ಯವೊಂದು ಆವರಿಸಿಕೊಂಡಿತು.

‘ಒಂಭತ್ತು ದ್ವಾರಮಂ ಕಳೆದು, ಹತ್ತನೆಯ ದ್ವಾರದಲ್ಲಿ ನಿಲಬಲ್ಲಡೆ

ಆತನೆ ಗುರು ಕಾಣಾ ಗುಹೇಶ್ವರಾ’

ರೇಡಿಯೋ ಅಲ್ಲಮ ಪ್ರಭುವಿನ ಮೂಲಕ ನನ್ನನ್ನು ಕಾಪಾಡಲು ಪ್ರಯತ್ನಿಸುತ್ತಿತ್ತೇನೋ? ಕಾಮಿಸಲು ಬೇಕಾದ ಮೈ ಮುಂದಿತ್ತು. ಅರಳಿಕೊಂಡ ಮೊಲೆಗಳು, ಹಪಹಪಿಸಿ ಕಂಪಿಸುತ್ತಿದ್ದ ಹೊಕ್ಕಳು, ಲಿಂಗಸಂಗವ ಮಾಡಲೇಬೇಕಾದ ವಾತಾವರಣ, ಕಾಮಕ್ಕೆ ಮುನ್ನುಡಿ ಬರೆಯಲು ಸಿದ್ಧವಾಗಿದ್ದ ತುಟಿಗಳು, ನೋಡುತ್ತಾ ನೋಡುತ್ತಾ ನಿಬ್ಬೆರಗಾಗಬೇಕು, ಹಾಗಿದ್ದಳು ರಾಬಿ, ಹಾಗೆ ಪರಿವರ್ತಿತಳಾಗಿದ್ದಳು ರಾಬಿ. ಆದರೆ ನಾನು? ದ್ವಾರಗಳೊಂಬತ್ತು ಮುಚ್ಚಿ ಧ್ಯಾನ ಭ್ರೂಮಧ್ಯದಿ ನಿಂತುಬಿಟ್ಟಿದ್ದೆ. ಕಾಲೇಜು ದಿನಗಳಲ್ಲಿ ಕೇಳಿದ ಪುರಂದರ ದಾಸರ ಪದ್ಯ ಈ ಸ್ಥಿತಿಯಲ್ಲಿ ನನ್ನನ್ನು ಗಟ್ಟಿಮಾಡುತ್ತಿತ್ತು. ಯಾವಾಗಲೋ ಕೇಳಿದ್ದು, ಅಭ್ಯಸಿಸಿದ್ದು ಎಂತಹ ಘಳಿಗೆಯಲ್ಲಿ ಸಹಾಯಕ್ಕೆ ಬಂದುಬಿಡುತ್ತದಲ್ಲಾ!

‘ಈ ಕ್ಷಣದಲ್ಲಿ ಅನುಭವಿಸಿಬಿಡೋಣ ರಾಬಿ, ಮುಂದಿನ ಕ್ಷಣದಲ್ಲಿ ಎಲ್ಲದೂ ಮುಗಿದಾದ ಮೇಲೆ ಎದುರಾಗೋ ಪ್ರಶ್ನೆಗಳಿಗೆ ಏನುತ್ತರಿಸೋಣ ರಾಬಿ?’

ಸಾಹಿತ್ಯದ ಭಾಷೆಯಲ್ಲೇ ಮಾತು ಹೊರಹೊಮ್ಮುತ್ತಿದ್ದವು. ರಾಬಿ ಯಾವುದನ್ನೂ ಕೇಳಿಸಿಕೊಳ್ಳಲಾರದ ಸ್ಥಿತಿಯಲ್ಲಿದ್ದಳು. ಅವಳಿಗೆ ಬೇಕಿದ್ದುದು ಒಂದೇ- ಪುರುಷದೇಹ. ಅದೂ ನನ್ನದೇ ಶರೀರ.

ನಾನು ಅಲ್ಲಿಂದ ಸುಲಭವಾಗಿ ಹೊರಟುಬಿಡಬಹುದಿತ್ತು. ಅತಿ ಸೂಕ್ಷ್ಮ ಸ್ಥಿತಿಯಲ್ಲಿದ್ದ ರಾಬಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದಿತ್ತು, ಆತ್ಮಹತ್ಯೆಯದೂ! ನಾನು ಕ್ಷಣ ಕ್ಷಣಕ್ಕೂ ಗಟ್ಟಿಯಾಗುತ್ತಿದ್ದೆ. ರಾಬಿ ಕಾಮದ ಪಾತ್ರೆಯೊಳಗೆ ಬೆಂದು ಆವಿಯಾಗುತ್ತಲೇ ಇದ್ದಳು. ರಾಬಿಯ ತಲೆಸವರಿದೆ. ಸ್ವಲ್ಪ ಹೊತ್ತು ಸವರುತ್ತಲೇ ಇದ್ದೆ. ಅವಳ ಮುಖವನ್ನು ಎರಡೂ ಕೈಗಳಲ್ಲಿ ಕಮಲದ ಹೂವಂತೆ ಹಿಡಿದು ಹಣೆಗೆ, ಕಣ್ಣುಗಳಿಗೆ ಚುಂಬಿಸಿದೆ. ಹಿಂಡು ತಪ್ಪಿಸಿಕೊಂಡ ಮುದ್ದಾದ ಆನೆಮರಿಯಂತೆ ಕಂಡಳು. ಮೆಲ್ಲಗೆ ತೆರೆದುಕೊಂಡ ಅವಳ ಕಣ್ಣುಗಳಲ್ಲಿ ನಾನೇನು ಕೊಟ್ಟರೂ ಪಡೆದುಕೊಳ್ಳಬಲ್ಲ ನವಿರಾದ ಆಹ್ವಾನವಿತ್ತು. ಅವಳ ಹಣೆ, ಕಣ್ಣು, ಮುಖದಿಂದ ಕಾಮದ ತೀವ್ರಜ್ವರ ಇಳಿಯುತ್ತಿರುವುದು ಕಾಣತೊಡಗಿತು.

‘ನೀ ಉಣಬಡಿಸಿದ ಊಟ ಚೆನ್ನಾಗಿತ್ತು’ ಎಂದೆ.

ಅಲ್ಲೇ ಗೋಡೆಯ ಮೇಲೆ ನೇತುಹಾಕಿದ್ದ ಫಲಕದ ಕಡೆ ಗಮನ ಹೋಯ್ತು. ಕುರಾನಿನ ವಾಕ್ಯವೊಂದು ಅರಬ್ಬಿ ಭಾಷೆಯಲ್ಲಿ ಬರೆದಿತ್ತು- ‘ನಾ ನಿನ್ನಾತ್ಮದಲ್ಲೇ ಇದ್ದೇನೆ. ನೀನೇನೆ ನೋಡಲಾರೆ’ ರಾಬಿಯ ಕಿವಿಯಲ್ಲಿ ಅದನ್ನು ಸಣ್ಣಗೆ ಗುನುಗಿದೆ.

‘ನಿನ್ನ ಊಟದ ರುಚಿಗೆ ಮತ್ತೆ ಹಸಿವಾಗ್ತಿದೆ ರಾಬಿ’

-ನಾಚಿಕೆ ಬಿಟ್ಟಂತೆ ನಟಿಸಿ ಮುಗುಳ್ನಕ್ಕು ಹೇಳಿದೆ. ಈಗವಳು ಕೇಳಿಸಿಕೊಳ್ಳುವ ಸ್ಥಿತಿಗೆ ಮರಳಿದ್ದಳು. ಅರ್ಧ ಬೆತ್ತಲಾಗಿದ್ದ ಮೈ ಮುಚ್ಚಿಕೊಂಡಿತು. ಕತ್ತಲು ಆವರಿಸಿದಂತಿದ್ದ ಮನೆ ಬಾಗಿಲು ತೆರೆದುಕೊಂಡಿತು. ಸಕ್ರೆಬೈಲಿನ ಸಕಲವೂ ಕಾಮದ ಕಠೋರತೆಯನ್ನು ಎದುರಿಸಿದ ನಮ್ಮಿಬ್ಬರಿಗೂ ಸಲಾಂ ಹೇಳುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT