ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ಗೆ ಇದು ಸಕಾಲ

Last Updated 31 ಜುಲೈ 2017, 4:26 IST
ಅಕ್ಷರ ಗಾತ್ರ

‘ಮಹಿಳಾ ಕ್ರಿಕೆಟ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಈ ಅವಕಾಶವನ್ನು ಬಿಸಿಸಿಐ ಬಳಸಿಕೊಂಡು ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ನಾಂದಿ ಹಾಡಬೇಕು’– ಹಿರಿಯ ಕ್ರಿಕೆಟ್ ಆಟಗಾರ್ತಿ ಶಾಂತಾ ರಂಗಸ್ವಾಮಿ ಅವರ ಅಭಿಪ್ರಾಯ ಇದು. ದಶಕಗಳಿಂದ ಮಹಿಳಾ ಕ್ರಿಕೆಟಿಗರ ಸೌಲಭ್ಯಗಳಿಗಾಗಿ ಧ್ವನಿಯೆತ್ತುತ್ತಿರುವ ಶಾಂತಾ ಅವರು ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಸಾಧನೆಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸಾಧನೆಯು ಈ ದೇಶದ ಮಹಿಳಾ ಕ್ರಿಕೆಟ್‌ಗೆ ಮಹತ್ವದ ತಿರುವು ನೀಡುವುದೇ?
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸದ್ಯ ತಂಡದಲ್ಲಿ ಉತ್ತಮ ಆಟಗಾರ್ತಿಯರು ಇದ್ದಾರೆ. ಅವರ ಜನಪ್ರಿಯತೆಯು ಮತ್ತಷ್ಟು ಹೆಣ್ಣುಮಕ್ಕಳು ಕ್ರಿಕೆಟ್ ಆಡಲು ಪ್ರೇರಣೆಯಾಗಲಿದೆ. ಈ ಹಂತದಲ್ಲಿ ಉತ್ತಮ ಯೋಜನೆಗಳನ್ನು ಬೇರುಮಟ್ಟದಲ್ಲಿ ಆರಂಭಿಸಬೇಕು.

ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಂತರ ಶಾಲಾಮಟ್ಟದ ಟೂರ್ನಿಗಳನ್ನು ಆಯೋಜಿಸಬೇಕು. ಆದರೆ ತಂಡಗಳು ಇಲ್ಲ ಎಂಬ ಕೂಗು ಇದೆ. ಶಾಲೆಗಳಲ್ಲಿ ತಂಡ ರಚಿಸಲು ಕ್ರಿಕೆಟ್ ಸಂಸ್ಥೆಗಳೇ ಮುಂದಡಿ ಇಡಬೇಕು. ಶಾಲೆ, ಕಾಲೇಜು ಮಟ್ಟದಲ್ಲಿ ಕ್ರಿಕೆಟ್‌ ಬೆಳೆಯದಿದ್ದರೆ ಭವಿಷ್ಯ ರೂಪುಗೊಳ್ಳುವುದಿಲ್ಲ. ಅಡಿಪಾಯ ವಿಸ್ತಾರವಾಗಬೇಕು ಮತ್ತು ಗಟ್ಟಿಯಾಗಬೇಕು.

* ಮಿಥಾಲಿ ರಾಜ್ ಬಳಗದ ಈ ಯಶಸ್ಸು ಬಾಲಕಿಯರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು?
ಈಗ ಆರಂಭದಲ್ಲಿ ಎಲ್ಲರ ಕಣ್ಣು ಇರುತ್ತದೆ. ಕಾಲಕ್ರಮೇಣ ಜನಪ್ರಿಯತೆ ಕಡಿಮೆಯಾಗುತ್ತದೆ. ಈಗಿನ ಯಶಸ್ಸಿನಿಂದ ಪ್ರೇರಣೆಗೊಂಡು ಕ್ರಿಕೆಟ್‌ ಆಡಲು ಶುರು ಮಾಡುವ ಮಕ್ಕಳಿಗೆ ಭವಿಷ್ಯದ ಸ್ಪಷ್ಟ ಚಿತ್ರಣ ಸಿಗುವಂತೆ ಮಾಡಬೇಕು. ಅದಕ್ಕಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. 2006ರಲ್ಲಿ ಬಿಸಿಸಿಐ ನಿಂದ ಮಾನ್ಯತೆ ಲಭಿಸಿದ ಮೇಲೆ ಸಾಕಷ್ಟು ಬದಲಾವಣೆಗಳು ಮಹಿಳಾ ಕ್ರಿಕೆಟ್‌ನಲ್ಲಿ ಆಗಿವೆ. ಆದರೆ ಅಷ್ಟು ಸಾಲದು. ಹಣಕಾಸು ನೆರವು, ಸಂಭಾವನೆ, ಉದ್ಯೋಗ, ಪ್ರೋತ್ಸಾಹಕ ಯೋಜನೆಗಳು ಇನ್ನಷ್ಟು ಸಿಗಬೇಕು. ಅದು ಜೂನಿಯರ್ ಕ್ರಿಕೆಟ್ ಹಂತದಿಂದಲೇ ಆರಂಭವಾಗಬೇಕು.

* ಆಟಗಾರ್ತಿಯರಿಗೆ ಸಿಗುತ್ತಿರುವ ನಗದು ಪುರಸ್ಕಾರ, ಸಂಭಾವನೆಗಳು ತೃಪ್ತಿದಾಯಕವೇ?
ಮಹಿಳಾ ಕ್ರಿಕೆಟ್ ಅನ್ನು ಜನಪ್ರಿಯಗೊಳಿಸಲು ನಗದು ಪುರಸ್ಕಾರ, ಸಂಭಾವನೆಗಳು ಪ್ರಮುಖವಾಗುತ್ತವೆ. ಅವುಗಳ ಆಕರ್ಷಣೆ ಇಲ್ಲದಿದ್ದರೆ ಆಟಗಾರರು ಬೆಳೆಯುವುದು ಹೇಗೆ. ಆದರೆ, ಮಹಿಳೆಯರ ದೇಶಿ ಕ್ರಿಕೆಟ್‌ನಲ್ಲಿ ಆಟಗಾರ್ತಿಯರಿಗೆ ನೀಡುತ್ತಿರುವ ಸಂಭಾವನೆಯೂ ತೀರಾ ಕಡಿಮೆ. ಅದನ್ನು ಹೆಚ್ಚಿಸಬೇಕು. ಇತ್ತೀಚೆಗೆ ಬಿಸಿಸಿಐ ವಾರ್ಷಿಕ ಪ್ರಶಸ್ತಿ, ಒಂದು ಬಾರಿ ಪಾವತಿಸಿದ ಗೌರವಧನಗಳನ್ನು ನೀಡುತ್ತಿರುವುದು ಉತ್ತಮ ಬೆಳವಣಿಗೆ.

* ಪ್ರಚಾರ ಮತ್ತು ಜನಪ್ರಿಯತೆಯ ಬಗ್ಗೆ ನಿಮ್ಮ ಅನಿಸಿಕೆ ಏನು?
ಮಹಿಳೆಯರ ಕ್ರಿಕೆಟ್‌ಗೆ ಈ ಬಾರಿ ಜನರಿಂದ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ನನಗೆ ಅಚ್ಚರಿಯಾಗಿದೆ. ಬಹಳ ಹಿಂದೆಯೇ ಈ ರೀತಿಯಾಗಬೇಕಿತ್ತು. ಆದರೆ ಈ ಬಾರಿ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ನೀಡಿದ ವ್ಯಾಪಕ ಪ್ರಚಾರದಿಂದ ಅಪಾರ ಪ್ರಮಾಣದಲ್ಲಿ ಜನಪ್ರಿಯತೆ ಹುಟ್ಟಿದೆ. ಇದು ಹೀಗೆ ಮುಂದುವರಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT