ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯಗಳ ಅಪೂರ್ವ ಸಂಗ್ರಹ ತಾಣ ಫಾಲ್ಕನ್ ಗ್ಯಾಲರಿ

Last Updated 1 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶ ಸದಾ ಜನನಿಬಿಡ. ಇಲ್ಲಿ ವ್ಯಾಪಾರಿ ವಹಿವಾಟುಗಳಿಗೆ ಹೆಚ್ಚಿನ ಆದ್ಯತೆ. ಬಸ್ ನಿಲ್ದಾಣಕ್ಕೆ ಬಂದು ಹೋಗುವವರ ಜೊತೆಗೆ ಗ್ರಾಹಕರ ಸಂಖ್ಯೆ ಹೆಚ್ಚಿರುವ ಈ ಪ್ರದೇಶದಲ್ಲೊಂದು ವ್ಯಾಪಾರಿ ತಾಣವಿದೆ. ಇದನ್ನು ವ್ಯಾಪಾರಿ ಸ್ಥಳವೆನ್ನುವುದಕ್ಕಿಂತ ಜ್ಞಾನ ಕೇಂದ್ರವೆಂದು ಕರೆಯುವುದು ಸೂಕ್ತ.
ಫಾಲ್ಕನ್ ಕಾಯಿನ್ಸ್ ಗ್ಯಾಲರಿ- ಇದೇ ಆ ಅಂಗಡಿಯ ಹೆಸರು. ಇಲ್ಲಿಗೆ ಬರುವವರಲ್ಲಿ ಗ್ರಾಹಕರಿಗಿಂತ ನಾಣ್ಯಾಸಕ್ತರು ಹಾಗೂ ಸಂಶೋಧಕರೇ ಹೆಚ್ಚು.

ನಾಣ್ಯ ಹಾಗೂ ನೋಟುಗಳ ಪ್ರದರ್ಶನ-ಮಾರಾಟಕ್ಕಾಗಿಯೇ ಇರುವ ಭಾರತದ ಕೆಲವೇ ಮಳಿಗೆಗಳಲ್ಲಿ ಬೆಂಗಳೂರಿನ ಫಾಲ್ಕನ್ ಗ್ಯಾಲರಿಗೆ ಮೊದಲ ಸ್ಥಾನ ಇದೆ.ಬೆಂಗಳೂರಿನ ಹಳೆಯ ಗೀತಾ ಟಾಕೀಸ್ ಬದಿಯಲ್ಲಿ ಕೇವಲ ಹದಿನೈದು ಚದರಡಿ ಅಂಗಡಿಯಲ್ಲಿ ಐದು ಸಾವಿರ ಮೌಲ್ಯದ ನೋಟು- ನಾಣ್ಯಗಳೊಂದಿಗೆ 1969ರಲ್ಲಿ ಸ್ಥಾಪನೆಗೊಂಡ ಮಿನಿ ಸ್ಟೋರ್ಸ್, ಇಂದು ರಾಷ್ಟ್ರದ ನಾಣ್ಯ-ನೋಟು ಸಂಶೋಧಕರ ಹಾಗೂ ಸಂಗ್ರಾಹಕರ ಜನಪ್ರಿಯ ತಾಣ ಫಾಲ್ಕನ್ ಕಾಯಿನ್ ಗ್ಯಾಲರಿಯಾಗಿ ಬೆಳೆದು ನಿಂತಿದೆ. ಇಂದು ಎರಡು ಅಂತಸ್ತಿನ ವಿಶಾಲ ಕಟ್ಟಡದಲ್ಲಿ ವಹಿವಾಟು ನಡೆಸುತ್ತಿದೆ.

ಭಾರತೀಯ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದಿರುವ ಗ್ಯಾಲರಿಯನ್ನು ಮೊದಲಿಗೆ ಆರಂಭಿಸಿದ್ದು ಮನುಬಾಯ್ ಪರೇಖ್, ಇದೀಗ ವ್ಯವಸ್ಥಿತ ರೀತಿಯಲ್ಲಿ ಗ್ಯಾಲರಿ ಅಭಿವೃದ್ಧಿಪಡಿಸಿ ದೇಶದ ಗಮನ ಸೆಳೆಯಲು  ಎಂ. ಪರೇಖ್ ಅವರು ಕಾರಣರಾಗಿದ್ದಾರೆ.

ಕೊಡು-ಕೊಳ್ಳುವಿಕೆಯ ವ್ಯವಹಾರ ಪದಾರ್ಥ-ವಸ್ತು ವಿನಿಮಯದಿಂದ ಪ್ರಾರಂಭವಾಗಿ ಕಾಲಕ್ರಮೇಣ ಇದರಲ್ಲಿನ ನ್ಯೂನತೆಗಳನ್ನು ಹೋಗಲಾಡಿಸಲು ಹುಟ್ಟಿಕೊಂಡ ಲೋಹದ ತುಂಡುಗಳ ವಿನಿಮಯ ಪದ್ಧತಿ ಇಂದು ನಾಣ್ಯ-ನೋಟುಗಳಿಗೆ ರೂಪಾಂತರವಾಗಿರು ವುದು ಚರಿತ್ರೆಯ ಭಾಗವಾಗಿದೆ.

ಸುಮಾರು ಒಂದು ಸಾವಿರ ವರ್ಷಗಳಿಗೂ ಹಿಂದಿನಿಂದ ರೂಢಿಯಲ್ಲಿರುವ ಲೋಹದ ನಾಣ್ಯಗಳ ದೊಡ್ಡ ಸಂಗ್ರಹವನೇ ತನ್ನಲ್ಲಿ ಇಟ್ಟುಕೊಂಡ ಫಾಲ್ಕನ್ ಗ್ಯಾಲರಿಯು ನಾಣ್ ಯಪದ್ಧತಿ ನಡೆದು ಬಂದ ದಾರಿಯನ್ನು ವಿವರಿಸುವ ಆಕರ್ಷಕ ಪ್ರದರ್ಶನಗಳನ್ನು ಹೊಂದಿರುವುದು ವಿಶೇಷ.

ದೇಶ ವಿದೇಶಗಳ ವಿವಿಧ ಕಾಲ ಘಟ್ಟಗಳಿಗೆ ಸೇರಿದ ಬಗೆ ಬಗೆಯ ನಾಣ್ಯಗಳನ್ನು ನಿಖರ ಮಾಹಿತಿಯೊಂದಿಗೆ ಜೋಡಿಸಿಡಲಾದ ಚಿನ್ನ-ಬೆಳ್ಳಿ, ತಾಮ್ರ, ಸೀಸ ಹಾಗೂ ಮಿಶ್ರಲೋಹದ ಅಸಂಖ್ಯ ನಾಣ್ಯಗಳು ಇಲ್ಲಿವೆ.

ವಿದೇಶಿ ನಾಣ್ಯಗಳಿದ್ದರೂ ಭಾರತೀಯ ಪುರಾತನ ನಾಣ್ಯಗಳಿಗೆ ಈ ಮಳಿಗೆಯಲ್ಲಿ ಮೊದಲ ಆದ್ಯತೆ. ಚಾಲುಕ್ಯ, ವಿಜಯನಗರ, ಸಾತವಾಹನ, ಗುಪ್ತ, ಮೈಸೂರು ಅರಸರು ಹಾಗೂ ಹೈದರ್ – ಟಿಪ್ಪು ಕಾಲದ ವೈವಿಧ್ಯಮಯ ನಾಣ್ಯಗಳ ರಾಶಿಯೂ ಇಲ್ಲುಂಟು.

ಕುತೂಹಲಕರ ಇತಿಹಾಸ
ಬ್ರಾಹ್ಮಿಲಿಪಿಯಿಂದ ಮೊದಲ್ಗೊಂಡು ಸಂಸ್ಕೃತ, ಪ್ರಾಕೃತ, ಕನ್ನಡ, ಪಾರಸೀ, ತೆಲುಗು, ರೋಮನ್, ಆಂಗ್ಲ ಭಾಷೆ ಇರುವ ನಾಣ್ಯಗಳ ಇತಿಹಾಸವೂ ಕುತೂಹಲಕರ. ವಿವಿಧ ರಾಜ-ಮಹಾರಾಜರ ಹೆಸರು, ಲಾಂಛನ, ಚಿಹ್ನೆ, ಪ್ರಾಣಿ-ಪಕ್ಷಿ, ದೇವಾನು ದೇವತೆಗಳೂ ಕಾಣಸಿಗುವ ನಾಣ್ಯಗಳು ತೂಕ-ಅಳತೆಗಳಲ್ಲೂ ಸಾಕಷ್ಟು ವೈವಿಧ್ಯಮಯವಾಗಿವೆ.

ಲೋಹದ ಚೂರುಗಳಿಂದ ಶುರುವಾಗಿ ನಿರ್ದಿಷ್ಟ ಆಕಾರಗಳನ್ನೂ ಪಡೆಯುತ್ತ ಬಂದ ನಾಣ್ಯಗಳಲ್ಲಿ ಚಚೌಕ, ದುಂಡನೆಯ ಆಕಾರ, ವೃತ್ತಾಕಾರದ ನಾಣ್ಯಗಳೂ ಸೇರಿವೆ. ಮೊದ ಮೊದಲಿಗೆ ಸೂರ್ಯ-ಚಂದ್ರರು ಕಾಣಿಸಿಕೊಂಡ ನಾಣ್ಯಗಳಲ್ಲಿ ಕುದುರೆ-ಆನೆಗಳು ನಂತರ ರಾಜನ ಹೆಸರು-ಜೀವಿತ ಕಾಲಗಳೂ ಸೇರಿಕೊಂಡವು.

ಮಾಹಿತಿ ಪರಿಚಯಿಸುವ ಗ್ರಂಥಾಲಯ
ಆಯಾ ದೇಶದ-ಆಯಾ ಪ್ರದೇಶಗಳ ಇತಿಹಾಸವನ್ನು ಅರಿಯಲು ಸಹಾಯಕವಾಗುವ ನಾಣ್ಯಗಳ ಮಾಹಿತಿಯನ್ನು ಪರಿಚಯಿಸುವ ಗ್ರಂಥಾಲಯ ಹೊಂದಿರುವ ಫಾಲ್ಕನ್ ಗ್ಯಾಲರಿಯಲ್ಲಿ ಅಂದಾಜು 200ಕ್ಕೂ ಹೆಚ್ಚು ಪ್ರಕಟಣೆಗಳೂ ಇವೆ.

ಹೊಸ ಪೀಳಿಗೆಗೆ ನಾಣ್ಯಗಳ ಮುಖೇನ ನಾಡಿನ ಚರಿತ್ರೆಯ ಪರಿಚಯಿಸುವ ಕಾರ್ಯ ಮಾಡುತ್ತಿರುವ ಕನ್ನಡ ನಾಡು ನಾಣ್ಯ ಸಂಘದ ಅಧ್ಯಕ್ಷರೂ ಆಗಿರುವ ಕೀರ್ತಿ ಪರೇಖ್, ನಾಣ್ಯಗಳ ಚರಿತ್ರೆ ಜೊತೆಗೆ ಕರ್ನಾಟಕದ ಇತಿಹಾಸ- ಕನ್ನಡನಾಡಿನ ನಾಣ್ಯಗಳ ಮಾಹಿತಿಯನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ.

ಕರ್ನಾಟಕದ ನಾಣ್ಯಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿರುವ ಕೃತಿಗಳ ಪ್ರಕಟಣೆ ಹಾಗೂ ಮಾರಾಟಕ್ಕೂ ನೆರವಾಗುತ್ತಿರುವ ಫಾಲ್ಕನ್ ಗ್ಯಾಲರಿಗೆ ಸುಂದರ, ಕಲಾತ್ಮಕ ಹಾಗೂ ವೈವಿಧ್ಯಪೂರ್ಣ ನಮೂನೆಗಳ ನಾಣ್ಯಗಳನ್ನು ಸೇರಿಸಲು   ಮುಂದಾಗಿರುವ ಕೀರ್ತಿ ಅವರ ಮಗ ಹಾರ್ದಿಕ್ ಪರೇಖ್ ಕರ್ನಾಟಕದ ಪುರಾತನ ನಾಣ್ಯಗಳ ಪರಿಣತರಾಗಿದ್ದಾರೆ.

ವಿಶ್ವದಾದ್ಯಂತ ಚಲಾವಣೆಯಲ್ಲಿರುವ ವಿವಿಧ ಶ್ರೇಣಿ ಹಾಗೂ ವಿವಿಧ ದೇಶಗಳ ಕರೆನ್ಸಿಗಳನ್ನು ಸಂಗ್ರಹಕಾರರಿಗೆ ಒದಗಿಸುತ್ತಿರುವ ಫಾಲ್ಕನ್ ಗ್ಯಾಲರಿ ಇದೀಗ 50 ವರ್ಷಗಳ ಹೊಸ್ತಿಲಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT