ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗಳ ಸಂಗ್ರಹಕ್ಕೆ ಆನ್‌ ಲೈನ್ ಆಲ್ಬಮ್‌

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಫೋಟೊ ತೆಗೆಯುವುದು ಹಿಂದೆ ಕೆಲವರ ವೃತ್ತಿಯಷ್ಟೇ ಆಗಿತ್ತು. ತಂತ್ರಜ್ಞಾನ ಮುಂದುವರಿದು ಗ್ಯಾಜೆಟ್‌ಗಳು ಸಾಮಾನ್ಯರ ಕೈಗೂ ಎಟಕುವಂತಾದ ಮೇಲೆ ಫೋಟೊ ತೆಗೆಯುವುದು ಹಲವರ ಅಭ್ಯಾಸವೂ ಆಗಿ ಹೋಗಿದೆ. ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳು ಮಾತ್ರವಲ್ಲ ಈಗ ಸ್ಮಾರ್ಟ್‌ಫೋನ್‌ಗಳಿಂದಲೂ ಉತ್ತಮ ಗುಣ ಮಟ್ಟದ ಫೋಟೊಗಳನ್ನು ಸೆರೆಹಿಡಿಯಬಹುದು. ಸ್ಮಾರ್ಟ್‌ ಫೋನ್‌ಗಳ ಬಳಕೆ ಹೆಚ್ಚಾದ ಮೇಲಂತೂ ಹೋಗಿ ಬಂದಲ್ಲೆಲ್ಲಾ ಫೋಟೊ ಕ್ಲಿಕ್ಕಿಸುವುದು ಹಲವರ ರೂಢಿ. ಅದರಲ್ಲೂ ಸೆಲ್ಫಿ ಹುಚ್ಚು ಇರುವವರಿಗೆ ಎಷ್ಟು ಫೋಟೊ ಕ್ಲಿಕ್ಕಿಸಿಕೊಂಡರೂ ಅದು ಕಡಿಮೆಯೇ.

ತೆಗೆದ ಫೋಟೊಗಳನ್ನು ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ ಸ್ಟಾಗ್ರಾಮ್‌ ಇಲ್ಲವೇ ಇನ್ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಖುಷಿಪಡುವವರೇ ಹೆಚ್ಚು. ತೆಗೆದ ಉತ್ತಮ ಫೋಟೊಗಳನ್ನು ಒಂದೆಡೆ ಉಳಿಸಿಕೊಳ್ಳಬೇಕೆಂಬ ಬಯಕೆ ಕೆಲವರಿಗಷ್ಟೇ ಇರುತ್ತದೆ. ಫೋನ್‌ನಲ್ಲಿ ಮೆಮೊರಿ ಕಡಿಮೆ ಇದ್ದಾಗಲಂತೂ ಹಳೆ ಫೋಟೊ, ವಿಡಿಯೊಗಳನ್ನು ಹಲವರು ನಿಷ್ಕರುಣೆಯಿಂದ ಡಿಲೀಟ್‌ ಮಾಡಿಬಿಡುತ್ತಾರೆ. ಆದರೆ, ಫೋಟೊಗಳ ಸಂಗ್ರಹಕ್ಕೆ ಆನ್‌ಲೈನ್‌ನಲ್ಲಿ ಹಲವು ಆಯ್ಕೆಗಳಿವೆ.

ಫೇಸ್‌ಬುಕ್‌ ಆಲ್ಬಮ್‌: ತೆಗೆದ ಫೋಟೊಗಳ ಪೈಕಿ ಒಂದೋ ಎರಡೋ ಫೋಟೊಗಳನ್ನು ಫೇಸ್‌ಬುಕ್‌ಗೆ ಅಪ್‌ಲೋಡ್‌ ಮಾಡಿ ಉಳಿದ ಫೋಟೊಗಳನ್ನು ಹಲವರು ಡಿಲೀಟ್‌ ಮಾಡಿಬಿಡುತ್ತಾರೆ. ಆದರೆ, ಫೇಸ್‌ಬುಕ್‌ನಲ್ಲಿ ಫೋಟೊ ಆಲ್ಬಂ ಕ್ರಿಯೇಟ್‌ ಮಾಡಿ ಅಲ್ಲಿ ಸಾಕಷ್ಟು ಫೋಟೊಗಳನ್ನು ಉಳಿಸಿಕೊಳ್ಳಬಹುದು. ಫೇಸ್‌ಬುಕ್‌ನಲ್ಲಿ ಕ್ರಿಯೇಟ್‌ ಮಾಡಿದ ಆಲ್ಬಂಗೆ ಮತ್ತೆ ಮತ್ತೆ ಫೋಟೊಗಳನ್ನು ಸೇರಿಸಲು ಅವಕಾಶವಿದೆ.

ಗೂಗಲ್‌ ಫೋಟೊಸ್‌: ಆನ್‌ಲೈನ್‌ ಆಲ್ಬಂನ ಮತ್ತೊಂದು ಆಯ್ಕೆ ಗೂಗಲ್‌ ಫೋಟೊಸ್‌. ಗೂಗಲ್ ಫೋಟೊಸ್‌ನಲ್ಲಿ ಕೂಡ ನಿಮಗೆ ಬೇಕಾದಂತೆ ಫೋಟೊಗಳನ್ನು ಅಲೈನ್‌ ಮಾಡಿಕೊಳ್ಳಬಹುದು. ಅಪ್‌ಲೋಡ್‌ ಆದ ಫೋಟೊಗಳನ್ನು ಸ್ಲೈಡ್‌ ಷೊ, ಆನಿಮೇಷನ್‌ ಇಲ್ಲವೇ ಫೋಟೊ ವಿಡಿಯೊ ತಯಾರಿಸಲು ಗೂಗಲ್‌ ಫೋಟೊಸ್‌ ನಲ್ಲಿ ಅವಕಾಶವಿದೆ. ನಿಮ್ಮಲ್ಲಿ ಸಮಯ, ತಾಳ್ಮೆಯ ಜತೆಗೆ ಸ್ವಲ್ಪ ಆಸಕ್ತಿ ಇದ್ದರೆ ಗೂಗಲ್‌ ಫೋಟೊಸ್‌ನಲ್ಲಿ ಫೋಟೊಗಳ ಜತೆಗೆ ಸಾಕಷ್ಟು ಪ್ರಯೋಗ ಮಾಡಬಹುದು.

ಡ್ರೈವ್‌: ಫೋಟೊಗಳನ್ನು ಡ್ರೈವ್‌ಗೆ ಅಪ್‌ಲೋಡ್‌ ಮಾಡಿಕೊಳ್ಳ ಬಹುದು. ಡ್ರೈವ್‌ನಲ್ಲಿ ಫೈಲ್‌ ನೇಮ್‌ ಅಥವಾ ದಿನಾಂಕದ ಫೈಲುಗಳಲ್ಲಿ ನಿಮ್ಮ ಫೋಟೊಗಳನ್ನು ಉಳಿಸಿಕೊಳ್ಳಬಹುದು. ಹೈ ರೆಸೊಲ್ಯೂಷನ್‌ ಫೋಟೊಗಳು ನಿಮ್ಮಲ್ಲಿದ್ದರೆ ಅವುಗಳನ್ನು ಉಳಿಸಿಕೊಳ್ಳಲು ಡ್ರೈವ್‌ ಒಂದು ಉತ್ತಮ ಆಯ್ಕೆಯಾಗಬಲ್ಲದು.

ಹೀಗೆ ಹಲವು ಆಯ್ಕೆಗಳ ಮೂಲಕ ನೀವು ಆನ್‌ಲೈನ್‌ ಆಲ್ಬಂ ರಚಿಸಿ ಫೋಟೊಗಳನ್ನು ಉಳಿಸಿಕೊಳ್ಳಬಹುದು. ಆದರೆ, ಗುಣಮಟ್ಟದ, ಆಯ್ದ ಫೋಟೊಗಳನ್ನು ಮಾತ್ರ ಅಪ್‌ಲೋಡ್‌ ಮಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ತೆಗೆದ ಫೋಟೊಗಳನ್ನೆಲ್ಲಾ ಅಪ್‌ಲೋಡ್‌ ಮಾಡಿ ಸಾವಿರಾರು ಫೋಟೊಗಳ ಮಧ್ಯೆ ನೀವೇ ತೆಗೆದ ಉತ್ತಮ ಫೋಟೊ ಆರಿಸುವುದು ಕಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT