ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಕೈಯಲ್ಲಿ ಕಸವೂ ರಸ!

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹಾಲಿನ ಪ್ಯಾಕೆಟ್, ಹರಿದ ಜೀನ್ಸ್, ಐಸ್ ಕ್ರೀಂ ಕಪ್, ನೀರಿನ ಬಾಟಲಿ, ಪಾಲಿಥೀನ್ ಕವರ್ ಹೀಗೆ ಅನುಪಯುಕ್ತ ವಸ್ತು ಯಾವುದೇ ಇರಲಿ ಅವು ಗೃಹಿಣಿ ದಾಕ್ಷಾಯಣಿ ರಾಮಚಂದ್ರನ್ ಅವರ ಕೈಗೆ ಸಿಕ್ಕರೆ ಸಾಕು ಅವು ಸುಂದರ ಕರಕುಶಲ ವಸ್ತುವಾಗಿ ರೂಪುಗೊಳ್ಳುತ್ತವೆ.

ಆರೇಳು ವರ್ಷಗಳಿಂದ ಇದೇ ಹವ್ಯಾಸವನ್ನು ವೃತ್ತಿಯಾಗಿಸಿಕೊಂಡಿದ್ದಾರೆ ದಾಕ್ಷಾಯಣಿ. ಪರಿಸರಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಇಂಥ ಹವ್ಯಾಸಗಳನ್ನು ರೂಢಿಸಿಕೊಂಡಿರುವ ಅವರು ಸುತ್ತಮುತ್ತಲಿನವರೂ ಈ ಬಗ್ಗೆ ತರಬೇತಿ ನೀಡಿ, ಜಾಗೃತಿ ಮೂಡಿಸುತ್ತಿದ್ದಾರೆ.

ಬಿ.ಕಾಂ ಪದವೀಧರೆಯಾಗಿರುವ ದಾಕ್ಷಾಯಣಿ ಅವರಿಗೆ ಬಾಲ್ಯದಿಂದಲೇ ಅನುಪಯುಕ್ತ ವಸ್ತುಗಳಿಂದ ಏನಾದರೂ ಉಪಯೋಗವಾಗುವಂಥ ವಸ್ತುಗಳನ್ನು ಮಾಡುವ ಬಗ್ಗೆ ಆಸಕ್ತಿ ಇತ್ತು. ಮದುವೆಯ ನಂತರವೂ ಈ ಹವ್ಯಾಸದ ಬಗ್ಗೆ ಆಸಕ್ತಿ ಕಳೆದುಕೊಳ್ಳದ ದಾಕ್ಷಾಯಣಿ, ಅದನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಿದ್ದಾರೆ.

ಆಯಾ ಹಬ್ಬಗಳಿಗಳಿಗೆ ಅನುಗುಣವಾಗಿ ಮನೆಯನ್ನು ಅಲಂಕರಿಸಲು ಬೇಕಾಗುವ ಸಾಮಾಗ್ರಿಗಳನ್ನು ಅನುಪಯುಕ್ತ ವಸ್ತುಗಳಿಂದಲೇ ತಯಾರಿಸಬಹುದು. ತರಕಾರಿ ಮತ್ತು ರೇಷನ್ ತರಲು ಕೈಚೀಲಗಳನ್ನು ಮನೆಯಲ್ಲಿ ತಯಾರಿಸಿಕೊಳ್ಳಬಹುದು. ಇದರಿಂದ ಪರಿಸರ ಸಂರಕ್ಷಣೆಯ ಜತೆಗೆ ದುಡ್ಡನ್ನೂ ಉಳಿಸಬಹುದು ಎನ್ನುತ್ತಾರೆ ಅವರು.

ಹರಿದು ಹೋಗಿರುವ ಜೀನ್ಸ್‌ನಿಂದ ವ್ಯಾನಿಟಿ ಬ್ಯಾಗ್, ಹಾಲಿನ ಪ್ಯಾಕೆಟಿನಿಂದ ಪರ್ಸ್, ಹಳೇ ಸೀರೆಗಳಿಂದ ರಜಾಯಿ, ಕುಡಿದು ಬಿಸಾಡುವ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಂದ ಸುಂದರ ಬೊಂಬೆ, ಪ್ಲಾಸ್ಟಿಕ್ ಬ್ಯಾಗ್‌ಗಳಿಂದ ಡೋರ್ ಮ್ಯಾಟ್, ಬ್ಯಾಗ್‌ಗಳನ್ನು, ಸಣ್ಣಪುಟ್ಟ ಅನುಪಯುಕ್ತ ವಸ್ತುಗಳಿಂದ ಸುಂದರ ಕಿವಿಯೋಲೆ, ಸರಗಳನ್ನು ಮಾಡುತ್ತಾರೆ ದಾಕ್ಷಾಯಣಿ.

ಬಾಡಿ ಲಾಂಗೇಜ್ವ್, ವ್ಯಕ್ತಿತ್ವ ವಿಕಸನ, ಬಿಡುವಿನ ವೇಳೆಯ ಸದುಪಯೋಗ, ಪರಿಸರ ಸಂರಕ್ಷಣೆ ಕುರಿತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ದಾಕ್ಷಾಯಣಿ ಮಾಡುತ್ತಿದ್ದಾರೆ.

ಕಾರ್ಪೋರೇಟ್ ಕಂಪೆನಿಗಳ ಸಿಬ್ಬಂದಿ, ಶಿಕ್ಷಕರು, ನೆರೆಹೊರೆಯವರಿಗೂ ತಮ್ಮ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಪರಿಸರ ಸಂರಕ್ಷಣೆಯತ್ತ ಆಸಕ್ತಿ ಮೂಡಿಸುತ್ತಿದ್ದಾರೆ. ಆರ್‌.ಎಂ.ವಿ. ಎರಡನೇ ಹಂತದ ನಿವಾಸಿಯಾಗಿರುವ ದಾಕ್ಷಾಯಣಿ ಅವರು ತಮ್ಮ ಬಡಾವಣೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಸಲುವಾಗಿಯೇ ಗುಂಪೊಂದನ್ನು ರಚಿಸಿಕೊಂಡಿದ್ದಾರೆ.

ಆಗಾಗ ಫ್ಯಾಷನ್ ಡಿಸೈನ್ ಇನ್‌ಸ್ಟಿಟ್ಯೂಟ್, ಕಾರ್ಪೋರೇಟ್ ಕಂಪೆನಿಗಳು, ಬಿಬಿಎಂಪಿ, ಲಾಲ್‌ಬಾಗ್ ಹೀಗೆ ವಿವಿಧೆಡೆ ಕಸದಿಂದ ರಸ ಮಾಡುವ ಕಲೆಯ ಕುರಿತು ಮಾಹಿತಿ ಕಾರ್ಯಾಗಾರಗಳನ್ನೂ ನಡೆಸಿಕೊಟ್ಟಿದ್ದಾರೆ.

ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಕಸವನ್ನು ರಸವಾಗಿಸುವತ್ತ ಚಿತ್ತ ಹರಿಸಿದರೆ ಪರಿಸರ ಸಂರಕ್ಷಣೆ ಮಾಡಿದಂತಾಗುತ್ತದೆ. ಮನೆಯ ಅಲಂಕಾರಕ್ಕೆ ಬೇಕಾಗುವ ವಸ್ತುಗಳನ್ನು ಹೊರಗಡೆ ಕೊಂಡುಕೊಳ್ಳುವುದಕ್ಕಿಂತ ಗೃಹಿಣಿಯರು ಬಿಡುವಿನ ವೇಳೆಯಲ್ಲಿ ಅನುಪಯುಕ್ತ ವಸ್ತುಗಳಿಂದ ತಯಾರಿಸಿಕೊಳ್ಳಬಹುದು. ಗೃಹಿಣಿಯರು ಟಿ.ವಿ., ಮೊಬೈಲ್ ನೋಡಿ ಸಮಯ ಹಾಳು ಮಾಡುವುದಕ್ಕಿಂತ ಬಿಡುವಿನ ವೇಳೆಯಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ಅವರು.

‘ನೀವು ಯಾವುದೇ ವಸ್ತು ನೀಡಿ ಅದನ್ನು ಕಲಾತ್ಮಕವಾಗಿ ಉಪಯುಕ್ತ ವಸ್ತುವನ್ನಾಗಿ ಮಾಡಿಕೊಡುವೆ’ ಎಂದು ನಗುತ್ತಾರೆ ದಾಕ್ಷಾಯಣಿ.

*


ದಾಕ್ಷಾಯಣಿ ರಾಮಚಂದ್ರನ್‌
ಸಂಪರ್ಕ ಸಂಖ್ಯೆ: 89714 78298.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT