ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕುಚಿತ ದೃಷ್ಟಿಕೋನ ಮೀರೋಣ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

-ವೆಂಕಟೇಶ್ ಬಿ.ಎಂ.

ಕಾಲೇಜು ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಎರಡು ವಿವಾದಗಳೆದ್ದಿವೆ. ಸಭ್ಯ ಹಾಗೂ ಅಸಭ್ಯ ಉಡುಪುಗಳ ಚರ್ಚೆ ಮತ್ತು ಪಠ್ಯಕ್ರಮದಲ್ಲಿ ಸೈನಿಕರನ್ನು ಅವಹೇಳನ ಮಾಡಲಾಗಿದೆ ಎನ್ನುವ ಗುಲ್ಲು. ಈ ಎರಡೂ ವಿವಾದಗಳಲ್ಲಿ ಸಾಮಾನ್ಯ ಅಂಶವೊಂದನ್ನು ಗುರುತಿಸಬಹುದು. ಅದೆಂದರೆ, ಶಿಕ್ಷಣದ ಜೀವನಾಡಿಯಾದ ವಿದ್ಯಾರ್ಥಿಗಳನ್ನು ಕೇವಲ ಗ್ರಾಹಕರಂತೆ ಪರಿಗಣಿಸುವ ಹಾಗೂ ಸ್ವಚಿಂತನಾಶಕ್ತಿ ಸಾಧ್ಯವಿಲ್ಲದ ಪರತಂತ್ರ ಜೀವಿಗಳಂತೆ ಕಾಣಲು ಬಯಸುವ ಸಂಕುಚಿತ ಮನೋಭಾವ.

ಮೊದಲನೆಯದಾಗಿ, ಸಭ್ಯ ಉಡುಪುಗಳನ್ನು ಧರಿಸಿ ಕಾಲೇಜಿಗೆ ಬರುವಂತೆ ಉಪನ್ಯಾಸಕರಿಗೆ ಶಿಕ್ಷಣ ಇಲಾಖೆಯೇ ಇರಲಿ ಅಥವಾ ತಮ್ಮನ್ನು ತಾವೇ ಸಭ್ಯತೆಯ ಪ್ರತಿಪಾದಕರು ಎಂದು ಭಾವಿಸಿಕೊಂಡಿರುವ ಕೆಲವು ಹಿರಿಯ ಉಪನ್ಯಾಸಕರೇ ಇರಲಿ ಬುದ್ಧಿವಾದ ಹೇಳುವುದು ವಿಚಿತ್ರ ಅನ್ನಿಸುತ್ತದೆ.

ಏಕೆಂದರೆ ಮಕ್ಕಳ ಎದುರು ನಿಂತು ಪಾಠ ಮಾಡುವ ಯುವ ಉಪನ್ಯಾಸಕರು, ತಾವು ಯಾವ ಬಟ್ಟೆ ಧರಿಸಬೇಕು ಎನ್ನುವುದರ ಬಗ್ಗೆ ಗೊಂದಲದಲ್ಲಿರುವುದಿಲ್ಲ. ತಮಗೆ ಸೂಕ್ತ ಎನಿಸುವ ಬಟ್ಟೆಯನ್ನು, ತಮ್ಮ ವೃತ್ತಿಗೆ ಅನುಗುಣವಾಗಿ ಧರಿಸುವ ಪ್ರಬುದ್ಧತೆಯನ್ನು ಬಹುತೇಕ ಯುವ ಉಪನ್ಯಾಸಕ ಹಾಗೂ ಉಪನ್ಯಾಸಕಿಯರು ಹೊಂದಿರುತ್ತಾರೆ.

ನಾನು ಡಿಗ್ರಿ ಓದುತ್ತಿದ್ದಾಗ, ಆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಉಪನ್ಯಾಸಕ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಕೆಲವು ಉಪನ್ಯಾಸಕಿಯರು ಪಾಠ ಮಾಡುತ್ತಿದ್ದರು. ಅವರ ಬೋಧನಾ ಶೈಲಿ, ವಿಷಯದ ಮೇಲಿನ ಹಿಡಿತ, ಹೆಚ್ಚಿನದನ್ನು ತಿಳಿದುಕೊಳ್ಳುವ ಹಂಬಲ ಮುಂತಾದ ಸಕಾರಾತ್ಮಕ ಸಂಗತಿಗಳು ನನ್ನ ಗಮನವನ್ನು ಸೆಳೆಯುತ್ತಿದ್ದವೇ ಹೊರತು, ಅವರು ಧರಿಸುತ್ತಿದ್ದ ಉಡುಪೇ ಗಮನಿಸಬೇಕಾದ ಮುಖ್ಯ ಸಂಗತಿಯೆಂದಾಗಲೀ ಅಥವಾ ಕಲಿಕೆಯ ಮೇಲೆ ಪರಿಣಾಮ ಬೀರಬಹುದಾದ ಅಂಶವೆಂದಾಗಲೀ ನನಗೆ ಎಂದೂ ಅನ್ನಿಸಿರಲಿಲ್ಲ.

ತಮ್ಮ ಪೂರ್ವಗ್ರಹದ ಮೂಲಕ ತಾವೇ ನಿಗದಿಪಡಿಸಿಕೊಂಡ ಸಭ್ಯತೆಯ ಮಾನದಂಡಗಳ ಆಧಾರದ ಮೇಲೆ ಯೋಚಿಸುವ ಕೆಲವು ಹಿರಿಯ ಉಪನ್ಯಾಸಕರು, ಸೀರೆ ಧರಿಸಿ ಪಾಠ ಮಾಡದ ಉಪನ್ಯಾಸಕಿಯರನ್ನು ವಿದ್ಯಾರ್ಥಿಗಳು ‘ಗುರು’ಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುವ ಸಂಕುಚಿತ ನಿರ್ಧಾರಕ್ಕೆ ಹೇಗೆ ಬಂದರು? ವಿದ್ಯಾರ್ಥಿಗಳಲ್ಲೇ ಇಲ್ಲದ ಸಂಕುಚಿತ ಮನೋಭಾವವನ್ನು ಶಿಕ್ಷಣ ಇಲಾಖೆ ಹಾಗೂ ಕೆಲವು ಹಿರಿಯ ಉಪನ್ಯಾಸಕರು ಪ್ರದರ್ಶಿಸುವುದು ಎಷ್ಟರಮಟ್ಟಿಗೆ ಸಮಂಜಸ?

ಈ ಬಗೆಯ ಮನೋಭಾವವನ್ನು ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಇತರ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡಿದಾಗ ಕೆಲವು ಒಳನೋಟಗಳು ಸಿಗಬಹುದು. ಮಹಿಳೆಯರನ್ನು ಚುಡಾಯಿಸುವ ಅಥವಾ ಅತ್ಯಾಚಾರದ ಘಟನೆ ನಡೆದಾಗ ಉನ್ನತ ಹುದ್ದೆಗಳಲ್ಲಿ ಇರುವ ರಾಜಕಾರಣಿಗಳು ಎಲ್ಲಾ ಬಗೆಯ ಸೂಕ್ಷ್ಮತೆಗಳನ್ನೂ ಮೀರಿ ಮಾತನಾಡುತ್ತಾರೆ. ಪಕ್ಕಾ ಅಪಾಪೋಲಿಯೊಬ್ಬನ ಮಾತುಗಳಂತೆ ಧ್ವನಿಸುವ ಈ ಮಾತುಗಳು ಅತ್ಯಾಚಾರಕ್ಕೆ ಹಾಗೂ ಅಸಭ್ಯ ವರ್ತನೆಗಳಿಗೆ ಪ್ರಚೋದನೆ ನೀಡಬಹುದೇ ಹೊರತು, ಮಹಿಳೆಯರು ಧರಿಸುವ ಉಡುಪಲ್ಲ ಎನ್ನುವುದು ಸರಳ ಸತ್ಯ.

ಶೋಷಿತರನ್ನೇ ಶೋಷಣೆಗೆ ಸಂಪೂರ್ಣ ಜವಾಬ್ದಾರರು ಎನ್ನುವಂತೆ ಬಿಂಬಿಸುವ ಹಾಗೂ ನಂಬಿಸಲು ಪ್ರಯತ್ನಿಸುವ ಈ ಮಾನಸಿಕ ಭಯೋತ್ಪಾದನೆ ಅತ್ಯಂತ ಅಪಾಯಕಾರಿ. ಶಿಕ್ಷಣ ಕ್ಷೇತ್ರದ ನೈಜ ಸಮಸ್ಯೆಗಳನ್ನು ಅಲಕ್ಷಿಸಿ, ಉಪನ್ಯಾಸಕಿಯರಿಗೆ ಉಡುಪಿನ ಬಗ್ಗೆ ಪಾಠ ಹೇಳುವ ಮನಸ್ಥಿತಿಯ ಹಿಂದೆ ಕಾಣುತ್ತಿರುವುದು ಅದೇ ಅಸೂಕ್ಷ್ಮ ನಡವಳಿಕೆ ಅಲ್ಲವೇ?

ಆದರೆ, ಇಂದಿನ ಬಹುತೇಕ ವಿದ್ಯಾರ್ಥಿಗಳು ಉಪನ್ಯಾಸಕರ ಉಡುಪಿನ ಬಗ್ಗೆ ಹಿರಿಯರೆನಿಸಿಕೊಂಡವರ ಮಾತಿಗೆ ಮರುಳಾಗದೆ, ಸ್ವಂತವಾಗಿ ಆಲೋಚಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂಬುದನ್ನು ಈ ವಿವಾದಗಳ ಸೃಷ್ಟಿಕರ್ತರು ಅರ್ಥಮಾಡಿಕೊಂಡರೆ ಒಳ್ಳೆಯದು.

ಇನ್ನು ಬಿ.ಸಿ.ಎ. ಕೋರ್ಸಿನ ಪಠ್ಯಕ್ರಮದ ಲೇಖನವೊಂದರಲ್ಲಿ ಸೈನಿಕರ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಡಿಯಂಚಿನ ಗ್ರಾಮಗಳ ಮಹಿಳೆಯರ ಮೇಲೆ ಕೆಲವು ಸೈನಿಕರು ನಡೆಸಿದೆರನ್ನಲಾದ ಅತ್ಯಾಚಾರಗಳ ಬಗ್ಗೆ ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಈ ಲೇಖನ, ಒಟ್ಟಾರೆ ಯುದ್ಧದ ಭೀಕರತೆ ಹಾಗೂ ನಿರರ್ಥಕತೆಯ ಕುರಿತು ಬೆಳಕು ಚೆಲ್ಲುತ್ತದೆ. ಸಾರಾಸಗಟಾಗಿ ಎಲ್ಲಾ ಸೈನಿಕರೂ ಅತ್ಯಾಚಾರಿಗಳೆಂದು ಲೇಖನದಲ್ಲಿ ಎಲ್ಲೂ ಹೇಳಲಾಗಿಲ್ಲ. ನನಗೆ, ಪದವಿಯಲ್ಲಿ ಕೃಪಾಕರ ಹಾಗೂ ಸೇನಾನಿ ಬರೆದಿರುವ ‘ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’ ಎನ್ನುವ ಪುಸ್ತಕದ ಪುಟ್ಟ ಭಾಗವೊಂದು ಪಠ್ಯವಾಗಿತ್ತು. ಕೃಪಾಕರ ಹಾಗೂ ಸೇನಾನಿಯವರನ್ನು ವೀರಪ್ಪನ್ ಅಪಹರಿಸಿರುತ್ತಾನೆ. ಕಾಡಿನಲ್ಲಿ ಮಾತನಾಡುತ್ತಿರಬೇಕಾದರೆ, ಕಾಡಾನೆಗಳ ಬಗ್ಗೆ ಬಹಳ ಪ್ರೀತಿ ಹಾಗೂ ಆತ್ಮೀಯತೆಯಿಂದ ವೀರಪ್ಪನ್ ಮಾತನಾಡುತ್ತಿರುತ್ತಾನೆ. ಅಲ್ಲದೆ, ವೀರಪ್ಪನ್‌ಗೆ ಪ್ರಕೃತಿಯ ಬಗ್ಗೆ ಇದ್ದ ಆಳವಾದ ಒಳನೋಟಗಳ ಬಗ್ಗೆ, ಸಹಜ ಪ್ರತಿಭೆಯ ಬಗ್ಗೆ ಬರೆಯುತ್ತಾರೆ ಪುಸ್ತಕದ ಲೇಖಕರು. ಆದರೆ ಅದನ್ನು ಓದುವ ವಿದ್ಯಾರ್ಥಿಗಳೇನೂ ವೀರಪ್ಪನ್ ಅಭಿಮಾನಿಗಳಾಗುವುದಿಲ್ಲ! ವೀರಪ್ಪನ್ ಬಹಳ ಸಾಚಾ ಎನ್ನುವ ನಿರ್ಧಾರಕ್ಕೆ ಬರುವುದಿಲ್ಲ.

ಈ ಪುಸ್ತಕದ ಪುಟ್ಟ ಭಾಗವನ್ನು ಓದಿದ ವಿದ್ಯಾರ್ಥಿಗಳಿಗೆ, ಪೂರ್ಣ ಪುಸ್ತಕ ಓದುವ ಹಂಬಲ ಉಂಟಾಗುತ್ತದೆ. ಒಬ್ಬ ವೀರಪ್ಪನ್ ಬೆಳೆಯುವುದಕ್ಕೆ ಕಾರಣವಾದ ಬಡತನ, ಅನಕ್ಷರತೆ, ವ್ಯವಸ್ಥೆಯ ಭ್ರಷ್ಟತೆ ಹೀಗೆ ಅನೇಕ ವಿಷಯಗಳ ಬಗ್ಗೆ ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚುತ್ತದೆ ಈ ಪುಸ್ತಕ.
ವಿಚಾರಗಳನ್ನು ಅದರ ಪೂರ್ಣ ರೂಪದಲ್ಲಿ ಗ್ರಹಿಸಲು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಡುವುದೇ ಶಿಕ್ಷಣದ ಉದ್ದೇಶವಲ್ಲವೇ? ನಮ್ಮ ದೇಶದ ಗಡಿಯನ್ನು ಹಗಲಿರುಳೂ ಕಾಯುವ ಸೈನಿಕರ ಕರ್ತವ್ಯನಿಷ್ಠೆಯ ಬಗ್ಗೆ ಅಭಿಮಾನ ಇರುವಂತೆಯೇ, ಕೆಲವು ಸೈನಿಕರಿಂದ ಅತ್ಯಾಚಾರಕ್ಕೊಳಗಾಗಿ ಮನೆ, ಮಾರು ಹೀಗೆ ಸರ್ವಸ್ವವನ್ನೂ ಕಳೆದುಕೊಂಡ ಗಡಿಯಂಚಿನ ಗ್ರಾಮಗಳ ಮುಗ್ಧ ಮಹಿಳೆಯರ ಮೇಲೆ ಅನುಕಂಪ ತೋರುವುದನ್ನು, ನ್ಯಾಯಕ್ಕಾಗಿ ಆಗ್ರಹಿಸುವುದನ್ನು ತಪ್ಪೆನ್ನಲು ಹೇಗೆ ಸಾಧ್ಯ?

ಮಣಿಪುರದಲ್ಲಿ ಸೈನ್ಯಕ್ಕೆ ನೀಡಿದ್ದ ಪರಮಾಧಿಕಾರವನ್ನು ವಿರೋಧಿಸಿ ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಇರೋಮ್ ಶರ್ಮಿಳಾರಂಥ ಅನೇಕ ಮಹಿಳೆಯರ ನೋವನ್ನು ಕಡೆಗಣಿಸಿ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುವುದು ದೇಶಭಕ್ತಿಯಾಗುವುದಿಲ್ಲ.
ಪಠ್ಯಪುಸ್ತಕದಲ್ಲಿ ಇರುವ ಸಕಲ ವಿಚಾರಗಳನ್ನೂ ವಿದ್ಯಾರ್ಥಿಗಳು ಕುರುಡಾಗಿ ನಂಬಿ ಅನುಸರಿಸುತ್ತಾರೆ ಎನ್ನುವ ನಂಬಿಕೆಯೇ ಹುಸಿ. ಆದ್ದರಿಂದ ಇಂಥ ಕೆಲವು ಸಂವೇದನೆ, ಸ್ಥಳೀಯ ರಾಜಕೀಯ ಪಕ್ಷಗಳ ನಿಲುವಿಗೆ ವಿರುದ್ಧವಾಗಿದೆ ಎನ್ನುವ ಕಾರಣ ನೀಡಿ ಅದನ್ನು ವಿರೋಧಿಸುವುದು ಮೂರ್ಖತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT