ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಡಿಪಿ ಇಳಿಕೆಗೆ ನೋಟು ರದ್ದತಿ ಕಾರಣ

Last Updated 2 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ನೋಟು ರದ್ದತಿ ನಿರ್ಧಾರವು ಭಾರತದ ಆರ್ಥಿಕತೆಗೆ ದೊಡ್ಡ ಆಘಾತ ನೀಡಿದೆ. ದೇಶವು ಭಾರಿ ಬೆಲೆ ತೆರಬೇಕಾಗಿ ಬರಲಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಆರ್ಥಿಕ ಪ್ರಗತಿ ಇಳಿಮುಖವಾಗಿರುವುದು ಅತ್ಯಂತ ಕಳವಳಕಾರಿ ವಿದ್ಯಮಾನವಾಗಿದೆ’ ಎಂದು ವಿಶ್ವಬ್ಯಾಂಕ್‌ನ ಮಾಜಿ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ಅಭಿಪ್ರಾಯಪಟ್ಟಿದ್ದಾರೆ.

ನೋಟು ರದ್ದತಿಯ ಪರಿಣಾಮ ಮತ್ತು ತಯಾರಿಕಾ ವಲಯದ ಮಂದಗತಿಯ ಬೆಳವಣಿಗೆಯಿಂದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ಮೂರು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.7ಕ್ಕೆ ಕುಸಿತ ಕಂಡಿದೆ. ಈ ಬೆಳವಣಿಗೆಯ ಬಗ್ಗೆ ಕೌಶಿಕ್‌ ಬಸು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

‘ನೋಟು ರದ್ದತಿಯಿಂದಾಗಿಯೇ ಜಿಡಿಪಿ ಪ್ರಗತಿ ಶೇ 2.3 ರಷ್ಟು ಇಳಿಕೆ ಕಂಡಿದೆ. ಇದಕ್ಕೆ ಮುಂದೆಯೂ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದಿದ್ದಾರೆ.

‘ನೋಟು ರದ್ದತಿಯಿಂದ ಜಿಡಿಪಿ ಶೇ 6ಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಇರಲಿದೆ ಎನ್ನುವ ಅಂದಾಜು ಇತ್ತು. ಆದರೆ, ಶೇ 5.7 ರಷ್ಟು ಕಡಿಮೆ ಆಗಲಿದೆ ಎನ್ನುವ ನಿರೀಕ್ಷೆ ಇರಲಿಲ್ಲ’ ಎಂದಿದ್ದಾರೆ.

2003 ರಿಂದ 2011ರ ಅವಧಿಯಲ್ಲಿ ಆರ್ಥಿಕತೆಯ ಬೆಳವಣಿಗೆಯು ವಾರ್ಷಿಕವಾಗಿ ಶೇ 8ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. 2008ರಲ್ಲಿ ಜಾಗತಿಕ ಬಿಕ್ಕಟ್ಟಿನ ಪರಿಣಾಮದಿಂದ ಶೇ 6.8ಕ್ಕೆ ತಗ್ಗಿತು.

ಸದ್ಯ, ಕಚ್ಚಾ ತೈಲ ಬೆಲೆ ಇಳಿಕೆ ಕಂಡಿದೆ. ಚೀನಾದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಇದೆ. ಈ ಕಾರಣಗಳಿಂದ ನಮ್ಮ ಆರ್ಥಿಕತೆ ಮತ್ತೆ ಶೇ 8ರಂತೆ ಬೆಳವಣಿಗೆ ಕಾಣಬೇಕಾಗಿದೆ.

‘₹500, ₹1,000 ಮುಖಬೆಲೆಯ ಶೇ 99 ರಷ್ಟು ನೋಟುಗಳು ಬ್ಯಾಂಕಿಂಗ್‌ ವ್ಯವಸ್ಥೆಗೆ ಮರಳಿವೆ. ಇದನ್ನು ಗಮನಿಸಿದರೆ ನೋಟು ರದ್ದತಿಯ ಮೂಲ ಉದ್ದೇಶವೇ ಈಡೇರಿದಂತೆ ಕಾಣುತ್ತಿಲ್ಲ. ಸಣ್ಣ ವರ್ತಕರು, ಅಸಂಘಟಿತ ವಲಯ ಮತ್ತು ಬಡವರ್ಗದವರು ಬಹಳಷ್ಟು ಸಮಸ್ಯೆ ಎದುರಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಮುಂದಿನ ಎರಡೂ ತ್ರೈಮಾಸಿಕಗಳಲ್ಲಿ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿಯೇ ಸಾಗಲಿದೆ. ಅಕ್ಟೋಬರ್‌–ಡಿಸೆಂಬರ್‌ನಲ್ಲಿ ಇನ್ನಷ್ಟು ಇಳಿಕೆ ಕಾಣಲಿದೆ. ನೋಟು ರದ್ದತಿಯಿಂದ ಜನಸಾಮಾನ್ಯರ ಖರೀದಿ ಸಾಮರ್ಥ್ಯಕ್ಕೆ ಕಡಿವಾಣ ಬಿದ್ದಿತ್ತು. ಇದರಿಂದ ಉತ್ಪಾದನೆ ಆಗಿರುವ ವಸ್ತುಗಳು ಮಾರಾಟವಾಗಿಲ್ಲ. ಅದರ ಪ್ರತಿಕೂಲ ಪರಿಣಾಮವನ್ನು ಈ ವರ್ಷವೂ ಎದುರಿಸಲೇಬೇಕು’ ಎಂದಿದ್ದಾರೆ.

‘ನಗದು ಬಳಕೆ ಬಿಟ್ಟು ಅತ್ಯಂತ ವೇಗವಾಗಿ ಡಿಜಿಟಲ್‌ ವ್ಯವಸ್ಥೆ ಅಳವಡಿಸಿಕೊಳ್ಳಲು ಹೊರಟರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ‘ಭಾರತದಲ್ಲಿ ಅರ್ಧದಷ್ಟು ಜನರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ. ಹೀಗಿರುವಾಗ ದಿಢೀರ್‌ ಎಂಬಂತೆ ನಗದು ರಹಿತ ವಹಿವಾಟಿನ ಬಳಕೆಗೆ ನಿರ್ಧಾರ ಕೈಗೊಳ್ಳುವುದು ವಿವೇಚನೆ ರಹಿತವಾದುದು. ಇದು ಬಡವರ ವಿರೋಧಿ ನೀತಿಯಾಗುತ್ತದೆ’ ಎಂದು ತಿಳಿಸಿದ್ದಾರೆ.

ಪೂರಕ ಅಂಶಗಳು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಹಾಗೂ ದಿವಾಳಿ ಸಂಹಿತೆ ಜಾರಿ ನಿರ್ಧಾರಗಳು ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ನಿರ್ಧಾರಗಳಾಗಿವೆ ಎಂದು ಸರ್ಕಾರದ ಬಗ್ಗೆ ಅವರು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

ಪ್ರಗತಿಗೆ ಎರಡು ಯೋಜನೆಗಳು ಅಗತ್ಯ: ಮೊದಲನೇಯದು, ಹಣದ ಹರಿವು ಹೆಚ್ಚಾಗಬೇಕು. ಆಗ ಜನರ ಖರೀದಿ ಸಾಮರ್ಥ್ಯ ಹೆಚ್ಚಾಗುತ್ತದೆ. ಅದರಿಂದ ಬೇಡಿಕೆ ಸೃಷ್ಟಿಯಾಗಿ ಆರ್ಥಿಕ ಪ್ರಗತಿಗೆ ಸಾಧ್ಯವಾಗುತ್ತದೆ.

ಎರಡನೇಯದು,ರಫ್ತು ಉತ್ತೇಜಕ್ಕಾಗಿ ಆರ್ಥಿಕ ಮತ್ತು ಯೋಜನೆಯ ಅಗತ್ಯವಿದೆ. ಜನರ ಖರೀದಿ ಸಾಮರ್ಥ್ಯ ತಗ್ಗಿರುವುದರಿಂದ ತಯಾರಿಕಾ ವಲಯ ಸಂಕಷ್ಟಕ್ಕೆ ಸಿಲುಕಿದೆ. ರಫ್ತು ಉತ್ತೇಜನಕ್ಕಾಗಿ ವ್ಯಾಪಾರ–ವಹಿವಾಟು ಸುಗಮಗೊಳಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT