ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಪಾಠ ಹೇಳುವ ಸರ್ಕಾರಿ ಶಾಲೆ

Last Updated 5 ಸೆಪ್ಟೆಂಬರ್ 2017, 5:31 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲ್ಲೂಕಿನ ತಾವರಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುತ್ತಲಿನ 6 ಗ್ರಾಮಗಳ 124 ಗ್ರಾಮೀಣ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಟ್ಟು–ನಿಟ್ಟಿಗೆ ಹೆಸರಾಗಿರುವ ಈ ಶಾಲೆಯು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ. ಇದರ ಹಿಂದೆ ಮುಖ್ಯ ಶಿಕ್ಷಕ ಜಿ.ಕೆ.ಸುಳಗನ್ನಿ ಹಾಗೂ ಅವರ ಸಹ ಶಿಕ್ಷಕರ ಶ್ರಮವಿದೆ.

‘ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಹಾಜರಾಗಲೇಬೇಕು. ಅನುಮತಿ ಪಡೆದು ರಜೆ ಹಾಕಬೇಕು. ತಪ್ಪಿದಲ್ಲಿ ವಿದ್ಯಾರ್ಥಿಯ ಮನೆಗೆ ಕೂಡಲೆ ಫೋನ್, ಇಲ್ಲವೇ ಖುದ್ದು ಭೇಟಿಯ ಮೂಲಕ ವಿಚಾರಿಸಲಾಗುತ್ತದೆ’ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

‘ತರಗತಿಯಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ತಜ್ಞರಿಂದ ತಯಾರಿಸಲಾದ ವಿಷಯಕ್ಕೆ ಸಂಬಂಧಿಸಿದ ಸಿ.ಡಿ.ಗಳನ್ನು ಪ್ರೊಜೆಕ್ಟರ್‌ನಲ್ಲಿ ಅಳವಡಿಸಿ ಚಿತ್ರ ಸಹಿತವಾಗಿ ಹಾಗೂ ಪ್ರಯೋಗಗಳು, ಪ್ರಾತ್ಯಕ್ಷಿಕೆಗಳ ಮೂಲಕ ಕಲಿಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.

ತರಗತಿಯಲ್ಲಿ  ಮಕ್ಕಳ ಕಲಿಕಾ ಮಟ್ಟ ಗುರುತಿಸಿ ಗುಂಪು ರಚಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ಚಟುವಟಿಕೆ ಕೊಟ್ಟು ಕನಿಷ್ಠ ಕಲಿಕಾ ಅಂಶಗಳನ್ನು ಬೆಳೆಸಲು ಇಲ್ಲಿ ಯತ್ನಗಳು ನಡೆದಿವೆ.

‘ಶಾಲಾ ಆರಂಭಕ್ಕೂ ಮೊದಲು ಹಾಗೂ ನಂತರದಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಿ ಶಿಕ್ಷಣ ನೀಡಲಾಗುತ್ತಿದೆ. ಇದರಿಂದ ಪ್ರೌಢ ಶಾಲೆ ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ100ರಷ್ಟು ಫಲಿತಾಂಶವನ್ನು ಪಡೆದಿದೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಜಿ. ಕೆ. ಸುಳಗನ್ನಿ ಹೇಳುತ್ತಾರೆ.

ಹಸುರಿನ ಕೋಟೆ: ಪ್ರೌಢ ಶಾಲೆಗೆ 1 ಎಕರೆ 20 ಗುಂಟೆ ದೇವಸ್ಥಾನದ ಜಾಗ ದೊರೆತಿದ್ದು, ಅದರಲ್ಲಿ ಹಸುರಿನ ಕೋಟೆ ನಿರ್ಮಿಸಲಾಗಿದೆ. ಶಾಲೆಯ ನಾಲ್ಕೂ ದಿಕ್ಕಿನಲ್ಲಿ ಸಾಲು–ಸಾಲಾಗಿ ಸಾಗವಾನಿ, ಹೊಂಗೆ, ಅಶೋಕ ವೃಕ್ಷ, ಬೇವು, ಮಾವು, ನೇರಳೆ, ಪೇರಲ, ಹಲಸು, ಬಾಳೆ, ಪಪ್ಪಾಯಿ, ನುಗ್ಗೆ, ಹುಣಸೆ, ಬಾದಾಮಿ ಮರಗಳನ್ನು ನೆಡಲಾಗಿದೆ. ಸಂಪಿಗೆ, ಮಲ್ಲಿಗೆ, ದಾಸವಾಳ ಹಾಗೂ ಔಷಧಿಯ ಸಸ್ಯಗಳೂ ಅಲ್ಲಿವೆ.

‘ವಿವಿಧ ಬಗೆಯ 650 ಗಿಡ–ಮರ ಬಳ್ಳಿಗಳಿವೆ. ಗಿಡಗಳ ಎಲೆ ಮತ್ತು ಅನುಪಯುಕ್ತ ಕಸವನ್ನು ಒಂದು ಸ್ಥಳದಲ್ಲಿ ಶೇಖರಿಸಿ ತಿಪ್ಪೆ ಮಾಡಲಾಗುತ್ತದೆ. ಅದರಿಂದ ಸಾವಯವ ಗೊಬ್ಬರ ತಯಾರಿಸಿ, ಗಿಡಗಳಿಗೆ, ಶಾಲಾಕೈದೋಟಕ್ಕೆ ಬಳಸಲಾಗುತ್ತದೆ’ ಎನ್ನುತ್ತಾರೆ ಸುಳಗನ್ನಿ. ಇದೆಲ್ಲವುದರ ಪರಿಣಾಮ ಈ ಶಾಲೆಗೆ ಜಿಲ್ಲಾಮಟ್ಟದ ಕಿತ್ತಳೆ ಶಾಲೆ, ಹಸಿರು ಶಾಲೆ ಪ್ರಶಸ್ತಿಗಳು ಸಂದಿವೆ.

‘ಐದು ಗುಂಟೆ ಜಾಗದಲ್ಲಿರುವ ಕೈಗೋಟ, ಗಿಡ–ಮರಗಳ ನಿರ್ವಹಣೆಯನ್ನು ಮಕ್ಕಳೇ ಮಾಡುತ್ತಾರೆ. ಬಹು ಆಸಕ್ತಿಯಿಂದ ರಂಟೆ ಹೊಡೆಯುವ, ಹರಗುವ, ಕಳೆ ಕೀಳುವ, ಗೊಬ್ಬರ ಹಾಕುವ, ನೀರು ಹರಿಸುವ ಮತ್ತು ಔಷಧಿ ಸಿಂಪಡಿಸುವ ಕೆಲಸ ಮಾಡುತ್ತಿರುವುದರಿಂದ ಅವರು ಕೃಷಿ ಪಾಠದ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಸಂಪಾದಿಸುತ್ತಿದ್ದಾರೆ’ ಎಂದು ಶಿಕ್ಷಕ ಜಗದೀಶ ಗೋಣಗೇರಿ ತಿಳಿಸಿದರು.

ರಾಜ್ಯಮಟ್ಟದ ಪ್ರಶಸ್ತಿ...
ಬೆಂಗಳೂರು: ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಹಂಸಭಾವಿಯ ದುರ್ಗದ ಪ್ರೌಢಶಾಲೆಯ ಶಿಕ್ಷಕ ಡಿ.ಎಚ್. ದಯಾನಂದ ಅವರು ರಾಜ್ಯ ಸರ್ಕಾರ ನೀಡುವ ರಾಜ್ಯ ಮಟ್ಟದ ವೈಜ್ಞಾನಿಕ ಕ್ಷೇತ್ರದ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT